ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯುಎಸಿ ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ ಇವರ ಆಶ್ರಯದಲ್ಲಿ ಅಧ್ಯಾಪನ ಕೌಶಲ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಗೋವಾ ವಿವಿಯ ಶ್ರೀನಿವಾಸ್ ಸಿನಾಯ್ ಡೆಂಪೋ ಕಾಲೇಜಿನ ಪ್ರಾಧ್ಯಾಪಕ ಡಾ. ರವೀಂದ್ರನಾಥ್ ನಾಯಕ್ ಬದಲಾದ ಅಧ್ಯಯ ವಿಧಾನ ಮತ್ತು ಉನ್ನತ ಶಿಕ್ಷಣ ಎಂಬ ವಿಷಯದ ಕುರಿತು ಕಾಲೇಜಿನ ಬೋಧಕ ವೃಂದದವರಿಗೆ ಮಾಹಿತಿ ನೀಡುತ್ತಾ ಸಾಂಪ್ರದಾಯಿಕ ಉಪನ್ಯಾಸ ವಿಧಾನದಲ್ಲಿ ಇಂದಿನ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಆಧುನಿಕ ಕಲಿಕಾ ಸಾಮಗ್ರಿಗಳತ್ತ ವಿದ್ಯಾರ್ಥಿಗಳು ಹೆಚ್ಚು ಆಸಕ್ತರಾಗುತ್ತಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ತಮ್ಮನ್ನು ಬದಲಾಗುತ್ತಿರುವ ಸನ್ನಿವೇಶಕ್ಕೆ ಹೊಂದಿಕೊಂಡು ತಂತ್ರಜ್ಞಾನದ ಬಳಕೆ ಹೆಚ್ಚಿಸಿಕೊಂಡು ವಿಡಿಯೋ ಲೆಕ್ಚರ್ ಗಳನ್ನು ನೀಡಿ ತರಗತಿಯಲ್ಲಿ ಗುಂಪು ಚರ್ಚೆ , ಸೆಮಿನಾರ್, ಪ್ರಶ್ನೋತ್ತರ ಮತ್ತು ಇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಿದಾಗ ವಿದ್ಯಾರ್ಥಿಗಳ ಕಲಿಕೆ ವಿಷಯ ಕೇಂದ್ರಿತವಾಗಲು ಸಾಧ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವ್ಕರ್ ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು ವಿದ್ಯಾರ್ಥಿ ಕೇಂದ್ರಿತ ಅಧ್ಯಯನಕ್ಕೆ ಪೂರಕವಾಗುವ ಕೌಶಲಗಳನ್ನು ಬೋಧಕರು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರ ಪ್ರೊ. ಶ್ರೀಧರ್ ಭಟ್, ಐಕ್ಯೂಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸಂದೇಶ ಮತ್ತು ರಾಜಕುಮಾರ್, ಗ್ರಂಥಪಾಲಕ ಕೃಷ್ಣ ಸಾಸ್ತಾನ ಹಾಗೂ ಎಲ್ಲಾ ಬೋಧಕ ವೃಂದದವರು ಭಾಗಿಯಾದರು.
ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರೆ, ಬಾಲರಾಜ್ ಡಿ ಬಿ ಸ್ವಾಗತಿಸಿದರು ಹಾಗೂ ಡಾ.ವಿಷ್ಣುಮೂರ್ತಿ ಪ್ರಭು ವಂದನಾರ್ಪಣೆಗೈದರು. ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಸಂಚಾಲಕ ಡಾ.ದತ್ತ ಕುಮಾರ್ ಕಾರ್ಯಕ್ರಮ ಆಯೋಜಿಸಿ ನಿರ್ವಹಿಸಿದರು.


 
 
 
 
 
 
 
 
 
 
 
 

 
