ಆತ್ಮಜ್ಯೋತಿಗಿಂತ ಉಜ್ಜ್ವಲ ದೀಪ ಇನ್ನೊಂದಿಲ್ಲ!

Upayuktha
0



ಕಿಂ ಜ್ಯೋತಿಸ್ತವ ಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ 

ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ|

ಚಕ್ಷುಸ್ತಸ್ಯ ನಿಮೀಲನಾದಿ ಸಮಯೇ ಕಿಂ ಧೀರ್ಧಿಯೋದರ್ಶನೇ 

ಕಿಂ ತತ್ರಾಹಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ|      



ಶ್ರೀಶಂಕರಾಚಾರ್ಯರ ರಚನೆಗಳಲ್ಲಿ ‘ಏಕಶ್ಲೋಕೀ’ ಎಂದೇ ಪ್ರಸಿದ್ಧವಾದ ಶ್ಲೋಕವಿದು.  


ಆಚಾರ್ಯರು  ಶಿಷ್ಯನನ್ನು ಪ್ರಶ್ನಿಸುತ್ತಾರೆ: “ಕಿಂ ಜ್ಯೋತಿಸ್ತವ?" (ನಿನಗೆ ಯಾವುದು ಬೆಳಕು?) 


ಶಿಷ್ಯ ಚೆನ್ನಾಗಿ ಯೋಚಿಸಿ ಉತ್ತರ ಕೊಡುತ್ತಾನೆ:  “ಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ" (ಗುರುಗಳೇ,  ಹಗಲಿನಲ್ಲಿ ನನಗೆ ಸೂರ್ಯನೇ ಬೆಳಕು, ರಾತ್ರಿಯ ಹೊತ್ತು ಚಂದ್ರ, ದೀಪ ಇತ್ಯಾದಿ).


ಆಚಾರ್ಯರಿಗೆ ಶಿಷ್ಯನನ್ನು ತತ್ತ್ವಮಾರ್ಗದಲ್ಲಿ ಇನ್ನೂ ಮೇಲೇರಿಸಬೇಕಿತ್ತು. ಆದ್ದರಿಂದ ಪುನಃ ಕೇಳುತ್ತಾರೆ: “ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ?" (ಸೂರ್ಯ, ಚಂದ್ರ, ದೀಪಗಳನ್ನು ನೋಡಲು ಯಾವುದು ಬೆಳಕು ಹೇಳು ನೋಡೋಣ?) 


ಶಿಷ್ಯನೆನ್ನುತ್ತಾನೆ:  “ಚಕ್ಷುಃ" (ಅವುಗಳನ್ನು ನೋಡಲು ಕಣ್ಣೇ ನನಗೆ ಬೆಳಕು).


ಆಚಾರ್ಯರು ಬಿಡಲಿಲ್ಲ. ಮತ್ತೆ “ತಸ್ಯ ನಿಮೀಲನಾದಿ ಸಮಯೇ ಕಿಂ?" (ಕಣ್ಣು ಮುಚ್ಚಿದಾಗ ಬೆಳಕಾವುದು?) ಎಂದು ಕೇಳುತ್ತಾರೆ.


ಶಿಷ್ಯ ಯೋಚಿಸಿ ಉತ್ತರ ಕೊಡುತ್ತಾನೆ:  “ಧೀಃ" (ಆಗ, ಮನಸ್ಸೇ ಬೆಳಕು).


ಆಚಾರ್ಯರೆನ್ನುತ್ತಾರೆ:  “ಧಿಯೋದರ್ಶನೇ ಕಿಂ?"  (ಮನಸ್ಸೆಂಬುದು ಅರಿಯಲು ಇರುವ ಒಂದು ಸಾಧನ, ಹಾಗೆ ಅರಿಯಲು ಮನಸ್ಸಿಗೆ ಯಾವುದು ಬೆಳಕು?)


ಶಿಷ್ಯ ಉತ್ತರಿಸಲಾರನಾಗಲು ಆಚಾರ್ಯರೇ ಹೇಳುತ್ತಾರೆ: “ತತ್ರಾಹಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ" (ಮನಸ್ಸಿನಿಂದ ಅರಿಯುತ್ತಿರುವಾಗ ಸ್ವಯಂಜ್ಯೋತಿಯಾದ ಆತ್ಮದಲ್ಲಿ ಬೆಳಗುವವನು ನಾನು. ಆದ್ದರಿಂದ ಎಲ್ಲ ಬೆಳಕುಗಳಿಗೂ ಬೆಳಕು ನಾನೇ).


ಎಲ್ಲರ ಹೃದಯದಲ್ಲಿ ಬೆಳಗುವ ಆತ್ಮಜ್ಯೋತಿಯನ್ನು ಶ್ರೀ ಶಂಕರಾಚಾರ್ಯರು ಒಂದು ಪ್ರಶ್ನೆಯ ಮೂಲಕ ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ. ಸಕಲ ಶಾಸ್ತ್ರಗಳ, ಸಕಲ ಉಪನಿಷತ್ತುಗಳ ರಹಸ್ಯವನ್ನೊಳಗೊಂಡ, ಏಕಶ್ಲೋಕೀ ಎಂದೇ ಪ್ರಸಿದ್ಧವಾದ ಈ ರಚನೆಯು- ಶಂಕರರೆಂದರೆ ಯಾರು, ಅವರ ವಿದ್ವತ್ತೇನು, ಸಾಧನೆಯೇನು, ಔನ್ನತ್ಯವೇನು ಎಂದು ಒಂದೇ ಶ್ಲೋಕದಲ್ಲಿ ಬಿತ್ತರಿಸುತ್ತದೆ!


-ಶ್ರೀವತ್ಸ ಜೋಷಿ, ವಾಷಿಂಗ್ಟನ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top