RSS ನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿ ಸರಕಾರದ 'ಗಜಬಜಿಸೆ' ನಾಟಕ

Upayuktha
0

ಆಧುನಿಕ ಕರ್ಣಾಟಕ ಮಹಾಭಾರತ ಕಥಾಮಂಜರಿ



"ಯಾವನೋ ಬೆಂಕಿನ ಕಟ್ಟಿ ಹಾಕೋನು? ಬೆಂಕಿಯಲ್ಲೇ ಹುಟ್ಟಿದ್ದು ಎಲ್ಲ ಸಂಕಲೆ" ಎನ್ನುವುದು ಕಾಂತಾರದ ಒಂದು ಜೋಶ್ ಹಾಡಿನ ಸಾಲು.


ಕಟ್ಟಿಹಾಕುತ್ತೇನೆ ಅಂದವರೇ ಕಟ್ಟಿ ಹಾಕಲ್ಪಡುವ ಒಂದು 'ರಣ'ರೋಚಕ ಸನ್ನಿವೇಷ ಮಹಾಭಾರತದ 'ಕೃಷ್ಣ ಸಂಧಾನ' ಪ್ರಸಂಗದಲ್ಲಿ ಬರುತ್ತದೆ.


ಪಾಂಡವರ ಪಕ್ಷದಿಂದ ನಿಯೋಜಿತನಾಗಿ, ಸಂಧಾನದ ಸರಸಂಚಾಲಕನಾಗಿ ಹಸ್ತಿನಾಪುರದ ದುರ್ಯೋಧನನ ರಾಜ ಸಭೆಗೆ ಬಂದ ಕೃಷ್ಣ, ಮಾತುಕತೆ ಪ್ರಾರಂಭಿಸುತ್ತಾನೆ.


ಧರ್ಮದ ಮಾರ್ಗದಲ್ಲಿ, ಸಾಮ-ದಾನಗಳ ಉಪಾಯದಲ್ಲೇ, ಸಮಾಧಾನದಿಂದ 'ಶಾಂತಿ ಸಂಧಾನ'ದ ಮಾತುಗಳನ್ನೇ ಕೃಷ್ಣ ಆಡುತ್ತಿದ್ದರೂ, ಒಂದು ಹಂತದಲ್ಲಿ ಧರ್ಮದ ವಿರುದ್ಧ ನಿಂತ ದುರ್ಯೋಧನ ಸಹನೆ ಕಳೆದುಕೊಳ್ಳುತ್ತಾನೆ. ದೂತನಾಗಿ ಬಂದ ಕೃಷ್ಣನ ಮೇಲೆ, ಕೋಪದಿಂದ, ಉದ್ವೇಗದಿಂದ, ಮತಿ ಹೀನನಾಗಿ ಆಕ್ರಮಣಕಾರಿ ಮನೋಭಾವ ಹೊಂದಿದವನಾಗಿ ಕೃಷ್ಣನನ್ನು ಕಟ್ಟಲು ತನ್ನ ದುಷ್ಟ ಚತುಷ್ಟಯರಿಗೆ ಅಧಿಕಾರ ವಾಣಿಯಲ್ಲಿ ಆದೇಶ ಕೊಡುತ್ತಾನೆ.


ಈ ಸನ್ನಿವೇಶವನ್ನು ಕುಮಾರವ್ಯಾಸನು 


ಮುನಿದು ದುರ್ಯೋಧನನು ದುಶ್ಯಾ

ಸನನು ಕೆಲದರಮನೆಯೊಳಾಲೋ

ಚನೆಯ ಮಾಡಿದರಂದು ಸೌಬಲ ಕರ್ಣರೊಡಗೂಡಿ

ದನುಜ ವೈರಿ ಕುತಂತ್ರದೊಳು ಬೊ

ಪ್ಪನೊಳು ಖಾತಿಯನಿಕ್ಕದನು ಕೈ

ಮನದ ಕಲಿಗಳು ಕಟ್ಟಿ ಕೃಷ್ಣನೆಂದು ಗಜಬಜಿಸೆ (ಕರ್ಣಾಟ ಭಾರತ ಕಥಾಮಂಜರಿ, ಉದ್ಯೋಗ ಪರ್ವ, ಸಂಧಿ 9 ಪದ್ಯ 40)


ತಾತ್ಪರ್ಯ: ಮುನಿದು, ಜೊತೆಗೆ ವಿವೇಕ ಕಳೆದುಕೊಂಡ ದುರ್ಯೋಧನನು, ರಾಜ ಸಭೆಯ ಪಕ್ಕದ ಅರಮನೆಯಲ್ಲಿ, ದುಶ್ಯಾಸನ, ಕರ್ಣ, ಶಕುನಿಗಳೊಡನೆ ಮಂತ್ರಾಲೋಚನೆ ಮಾಡುತ್ತಾ "ಕೃಷ್ಣನು ಕುತಂತ್ರದಿಂದ ನಮ್ಮ ಅಪ್ಪನಿಗೆ ನಮ್ಮ ಮೇಲೆ ಕೋಪಬರುವಂತೆ ಮಾಡಿದ್ದಾನೆ, ಧೀರರೂ ಬಲಶಾಲಿಗಳಾದ ನೀವು ಅವನನ್ನು ಕಟ್ಟಿಹಾಕಿ" ಎಂದು ಕರ್ಣ ಜಯದ್ರತ, ಶಕುನಿ, ದುಶ್ಯಾಸನರಿಗೆ ಸೂಚಿಸುತ್ತಾನೆ.


ಆದರೆ, ಮುಂದುವರೆದ ಸಭೆಯಲ್ಲಿ, ದುರ್ಯೋಧನನ ಪಕ್ಷದವರೇ ಆದ ಭೀಷ್ಮ, ಧೃತರಾಷ್ಟ್ರ, ಗಾಂಧಾರಿ, ಮಾಜಿ ಮಂತ್ರಿ ವಿದುರರೆಲ್ಲ ಧುರ್ಯೋಧನನ್ನು ಖಂಡಿಸುತ್ತ, ಕೃಷ್ಣನನ್ನು ಕಟ್ಟಿ ಹಾಕುವ ದುಷ್ಟ ಕಾರ್ಯವನ್ನು ಹೀಗಳಿಯುತ್ತಾರೆ. ಹೀಗಳೆಯುವ ಮಾತಿನಲ್ಲಿ ತಮ್ಮ ದೊರೆಯನ್ನೇ ಕಟ್ಟುವ ಪ್ರಯತ್ನ ಮಾಡುತ್ತಾರೆ. ವಿವೇಕ ಕಳೆದುಕೊಂಡ ದುರ್ಯೋಧನನಿಗೆ ಹಿರಿಯರ ಕಟ್ಟುಪಾಡಿನ ಮಾತುಗಳು ಹಿಡಿಸುವುದಿಲ್ಲ.


ಕರ್ಣಾದಿಗಳಲ್ಲಿ ಯಾರಿಗೂ ಅಕಳಂಕ ಚರಿತ ಕೃಷ್ಣ ನನ್ನು ಕಟ್ಟಿ ಹಾಕಲು ಸಾಧ್ಯವಾಗುವುದಿಲ್ಲ. ಬದಲಾಗಿ ಕರ್ಣ, ಜಯದ್ರಥ, ಶಕುನಿ, ದುಶ್ಯಾಸನಾದಿ ಸಹೋದರರು ತಮ್ಮ ತಮ್ಮವರನ್ನೇ ಕಟ್ಟಿಹಾಕಿಕೊಳ್ಳುವ ಮಾಯಾ ಪ್ರಕರಣ ಕೌರವನ ಸಭೆಯಲ್ಲಿ ನಿರ್ಮಾಣವಾಗುತ್ತದೆ.  


ಸಭೆಯಲ್ಲಿ ಮಹಾಮಹಿಮ ಕೃಷ್ಣ ತನ್ನ ವಿರಾಟ್ ರೂಪವನ್ನು ತೋರಿಸುತ್ತಾನೆ.  


ಅಂತಿಮವಾಗಿ ದುರ್ಯೋಧನ ಕೃಷ್ಣನಿಗೆ ಯುದ್ಧದ ರಣವಿಳ್ಯವನ್ನು ನೀಡುತ್ತಾನೆ.


ಹಿಂದೆ ನೂರು ತಪ್ಪುಗಳನ್ನು ಎಸಗಿದ ಶಿಶುಪಾಲನ ಹುಟ್ಟನ್ನು ಅಡಗಿಸಿದ್ದ ಕೃಷ್ಣ, ಮಹಾಭಾರತ ಕುರುಕ್ಷೇತ್ರ ಯುದ್ಧದಲ್ಲಿ ನೂರು ಜನ ಸಹೋದರರ ಕೌರವ ಪಡೆಯನ್ನು ಧರ್ಮಿಷ್ಟ ಪಾಂಡವರಿಂದ ನುಚ್ಚುನೂರಾಗಿಸಿ, ದೂಳೀಪಟ ಮಾಡಿ, ಧರ್ಮ ಮರುಸ್ಥಾಪನೆ ಮಾಡುತ್ತಾನೆ.


****


ಮೇಲಿನ ಪದ್ಯದ ಕೊನೆಯಲ್ಲಿ ಕವಿ ಬಳಸಿರುವ ಶಬ್ದ ಗಜಬಜಿಸೆ ಎಂದು. ಈ ಶಬ್ದಕ್ಕೆ ಅರ್ಥ, ನಿರಂತರ ಗೊಂದಲ ಮಾಡುವುದು, ಗೊಂದಲದಲ್ಲಿ ಇರುವುದು, ಗೊಂದಲದಲ್ಲಿ ಇಡುವುದು, ಒಂದು ರೀತಿಯ ಹೆದರಿಕೆಯಿಂದ ಅತಿ ಆತುರದಲ್ಲಿ ಗದ್ದಲ ಸೃಷ್ಟಿಸುವುದು ಎಂದೆಲ್ಲ ಇದೆ. ಇವತ್ತು ಕರ್ನಾಟಕ ರಾಜಕೀಯ ನಾಟಕದಲ್ಲಿ ನೆಡೆಯುತ್ತಿರುವುದು ಇದೇ ಗಜಬಜಿಸೆ ಕಾರ್ಯಕ್ರಮ! ನೂರು ವರ್ಷಗಳನ್ನು ಪೂರೈಸಿದ ಆರ್‌ಎಸ್‌ಎಸ್‌ನ್ನು ಕಟ್ಟಿ ಹಾಕುವ ಪ್ರಯತ್ನದೊಂದಿಗಿನ ಕರ್ಣಾಟಕ ಮಹಾಭಾರತ ಕಥಾಮಂಜರಿಯಲ್ಲಿ ಒಂದು ಗಜಬಜಿಸೆ ಕಾರ್ಯಕ್ರಮ!


*****


ಆರ್‌ಎಸ್‌ಎಸ್‌ನ್ನು ಕಟ್ಟಿ ಹಾಕುವ, ನಿರ್ಬಂಧಿಸುವ ಆದೇಶಗಳು ಹೊರಡುತ್ತಿರುವ ಸಂದರ್ಭದಲ್ಲಿ, ಆರ್‌ಎಸ್‌ಎಸ್ ವಿರುದ್ಧ ಏಳುತ್ತಿರುವ "ನೊಂದಣಿ ಏಕಿಲ್ಲ ಎನ್ನುವ ಪ್ರಶ್ನೆ, ಹೆದರಿಸುವಂತೆ ಪಥ ಸಂಚಲನದಲ್ಲಿ ದೊಣ್ಣೆ ಹಿಡಿಯುತ್ತಾರೆ ಎನ್ನುವ ಪ್ರಶ್ನೆ, ಅನುಮತಿ ಪಡೆಯುವುದಿಲ್ಲ ಯಾಕೆ ಅನ್ನುವ ಪ್ರಶ್ನೆ, ಹಿಂದೆ ರಾಷ್ಟ್ರಧ್ವಜವನ್ನು ಸಂಘ ಯಾಕೆ ಹಾರಿಸುತ್ತಿರಲಿಲ್ಲ... ಇತ್ಯಾದಿ ಹತ್ತಾರು  ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿರುವ, ರಿಪಬ್ಲಿಕ್ ಕನ್ನಡ ಟಿವಿಯಲ್ಲಿ ಮಹಾಭಾರತ ಶೀರ್ಷಿಕೆಯಲ್ಲಿ ನೆಡೆದ ಒಂದು ಸಂವಾದ/ಚರ್ಚೆ ಕಾರ್ಯಕ್ರಮದ ಚಂದದ ವೀಡಿಯೋ ಇಲ್ಲಿದೆ:




ಆಸಕ್ತರು ಈ ಆಧುನಿಕ ಕರ್ಣಾಟಕ ಮಹಾಭಾರತ ಕಥಾಮಂಜರಿ ಯನ್ನು ನೋಡಬಹುದು!!!


****


ಮಹಾಭಾರತದಲ್ಲಿ ಪಾಂಡವರು ತಮ್ಮ 11 ವರ್ಷಗಳ ವನವಾಸ, 1 ವರ್ಷದ ಅಜ್ಞಾತವಾಸವನ್ನು ಮುಗಿಸಿ ಹಸ್ತಿನಾಪುರಕ್ಕೆ ಮರಳಿದ್ದು ದೀಪಾವಳಿಯ ದಿನವಾದ ಕಾರ್ತಿಕ ಅಮಾವಾಸ್ಯೆಯಂದು ಎಂದು ಹೇಳಲಾಗಿದೆ. ಪಾಂಡವರು ಹಿಂತಿರುಗಿದರು ಮತ್ತು ಪ್ರಜೆಗಳು ಅವರನ್ನು ಸ್ವಾಗತಿಸಲು ದೀಪಗಳನ್ನು ಬೆಳಗಿಸಿದರು, ಇದು ವಂಚನೆಯ ಮೇಲೆ ಸದಾಚಾರದ ವಿಜಯವನ್ನು ಸಂಕೇತಿಸುತ್ತದೆ. ಎಂದೂ ಕಷ್ಟಗಳ ಅಂತ್ಯ ಮತ್ತು ನ್ಯಾಯದ ಪುನಃಸ್ಥಾಪನೆಯನ್ನು ಸೂಚಿಸುತ್ತದೆ ಎಂದೂ ಹೇಳಲಾಗುತ್ತದೆ.


ಎಲ್ಲರ ಕಷ್ಟಗಳು, ಕತ್ತಲೆಗಳು ನಾಶವಾಗಲಿ. ಸುಖ, ಸಮೃದ್ಧಿ, ನೆಮ್ಮದಿಗಳ ಬೆಳಕು ವಿಸ್ತಾರಗೊಳ್ಳಲಿ.  


ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.  


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top