ನಮ್ಮ ಕನ್ನಡ ಸಾಹಿತ್ಯ ಲೋಕಕ್ಕೆ ಹರಿದಾಸ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಈ ಹರಿದಾಸ ಪರಂಪರೆಯಲ್ಲಿ ಬರುವ ಹಲವಾರು ದಾಸರಲ್ಲಿ ಶ್ರೀ ಪ್ರಾಣೇಶದಾಸರ ಪಾತ್ರವೂ ಕೂಡ ಮಹತ್ವದ್ದು, ಪ್ರಾಣೇಶದಾಸರು ದಾಸಸಾಹಿತ್ಯದ ಆಡುಂಬೋಲವೆಂದು ಹೆಸರಾದ ರಾಯಚೂರು ಜಿಲ್ಲೆಗೆ ಸೇರಿದವರು. ರಾಯಚೂರಿನಿಂದ ಸುಮಾರು ಎಪ್ಪತ್ತು ಮೈಲಿ ದೂರದಲ್ಲಿರುವ ಲಿಂಗಸುಗೂರ ಗ್ರಾಮದ ತಿರುಕಪ್ಪನವರ ಮೂರು ಪುತ್ರರಲ್ಲಿ ಎರಡನೆಯವರಾಗಿ ಜನಿಸುತ್ತಾರೆ.
ಕ್ರಿ.ಶ.1736ರಲ್ಲಿ ಶಾನುಭೋಗರಾಗಿದ್ದ ಸದ್ವೈಷ್ಣವ ಮನೆತನದ ತಿರುಕಪ್ಪನವರ ಎರಡನೆಯ ಮಗ ಯೋಗಪ್ಪ ಎಂಬ ಹೆಸರಿನಿಂದ ಹುಟ್ಟಿದ ಮಗು ತುಂಬ ಮುದ್ದಾಗಿ, ಧೃಡಕಾಯವಿದ್ದರೂ ಅದರ ಮೈಮೇಲೆ ಬಿಳುಪುಕಲೆಗಳು ವ್ಯಾಪಿಸಿರುತ್ತದೆ. ಇದರಿಂದ ಚಿಂತಿತರಾದ ತಂದೆ- ತಾಯಿಗಳು ಮಂತ್ರಾಲಯದ ಪ್ರಭುಗಳು ಶ್ರೀ ರಾಘವೇಂದ್ರರರನ್ನು ಮೊರೆಹೋಗುತ್ತಾರೆ. ಗುರುಗಳ ಅನುಗ್ರಹದಿಂದ ಮಗುವಿನ ಮೈಮೇಲಿನ ಬಿಳುಪು ನಿವಾರಣೆಯಾದರೂ ಅಂಗಾಲಿನಲ್ಲಿ ಮಾತ್ರ ಸ್ವಲ್ಪ ಭಾಗ ಹಾಗೇ ಉಳಿಯುತ್ತದೆ. ಗುರುಗಳು ಸ್ವಪ್ನದಲ್ಲಿ ಕಾಣಿಸಿಕೊಂಡು' ಮೂಲ ಸ್ವರೂಪಕ್ಕೆ ಸೇರಿದ ಕಾರಣ ಸಂಪೂರ್ಣ ಹೋಗುವುದಿಲ್ಲ, ಚಿಂತಿಸಬೇಡಿ. ಮಗುವಿಗೆ ಯಾವ ತೊಂದರೆ ಆಗುವುದಿಲ್ಲ' ಎಂದು ಹೇಳಿದರಂತೆ. ಹಾಗಾಗಿ ಪ್ರಾಣೇಶದಾಸರು ಪಾಂಡುರಾಜನ ಅಂಶದವರು ಎಂಬ ನಂಬಿಕೆ ಭಕ್ತವೃಂದದಲ್ಲಿದೆ.
ಯೋಗಪ್ಪ ಬೆಳೆದು ಎಂಟು ವರ್ಷ ತುಂಬುತ್ತಲೇ ಅವನಿಗೆ ಉಪನಯನವಾಗಿ ಯೋಗ್ಯ ಗುರುಗಳ ಬಳಿ ಶಾಸ್ತ್ರಾಧ್ಯಯನವೂ ಸಾಗುತ್ತದೆ. ಆ ಸಮಯದಲ್ಲಿ ಅಗತ್ಯವಿದ್ದ ಫಾರ್ಸಿ ಭಾಷೆಯಲ್ಲಿಯೂ ಸಹ ಸಾಕಷ್ಟು ಪರಿಣಿತಿಯನ್ನು ಗಳಿಸಿಕೊಂಡರು. ಸಕಾಲದಲ್ಲಿ ಯೋಗ್ಯ ಕನ್ಯೆಯೊಂದಿಗೆ ವಿವಾಹವೂ ಆಗಿ ತಂದೆಯವರ ವೃತ್ತಿಯಲ್ಲಿಯೇ ಗೃಹಸ್ಥ ಧರ್ಮವನ್ನು ನಡೆಸುತ್ತಿರುವಾಗ ಅಪರೋಕ್ಷ ಜ್ಞಾನಿಗಳೆನಿಸಿದ ಮಾನವೀಯ ಶ್ರೀ ಜಗನ್ನಾಥದಾಸರು ಲಿಂಗಸುಗೂರಿಗೆ ಬರುತ್ತಾರೆ. ಅವರ ಬೋಧೆಯಿಂದ ಪ್ರಭಾವಿತನಾದ ಯೋಗಪ್ಪ ಹರಿದಾಸನಾಗಲು ತೀರ್ಮಾನಿಸಿದ. ಜಗನ್ನಾಥದಾಸರು ಸಂತೋಷದಿಂದ ಅವನಿಗೆ " ಶ್ರೀ ಪ್ರಾಣೇಶ ವಿಠಲದಾಸ" ಎಂಬ ಅಂಕಿತೋಪದೇಶವನ್ನಿತ್ತು ಅನುಗ್ರಹಿಸಿದರು. ತಮ್ಮ ಗುರುಗಳ ಮೇಲೆ ಅಪಾರವಾದ ಭಕ್ತಿಯನ್ನು ಹೊಂದಿದ್ದ ಪ್ರಾಣೇಶದಾಸರು ತಮ್ಮ ಜೀವಿತದ ಕಡೆಯವರೆಗೂ ಗುರುಸೇವೆ ಮಾಡಿದರು. ಅವರ ಶ್ರದ್ಧಾಭಕ್ತಿಯನ್ನು ಕಂಡು ಆನಂದಿಸಿದ ಜಗನ್ನಾಥದಾಸರು ತಾವು ಪೂಜಿಸುವ ಪಟ್ಟಾಭಿರಾಮ, ತಾಂಡವಕೃಷ್ಣ, ಶ್ರೀನಿವಾಸ ದೇವರು ಮುಂತಾದ ಮೂರ್ತಿಗಳನ್ನು ಕೊಟ್ಟು ಆಶೀರ್ವದಿಸುತ್ತಾರೆ.
ಹಾಗೆಯೇ ಪ್ರಾಣೇಶದಾಸರ ಜೀವನದಲ್ಲಿ ನಡೆದ ಮತ್ತೊಂದು ಘಟನೆ ಇಲ್ಲಿ ಉಲ್ಲೇಖನಾರ್ಹವಾಗಿದೆ. ಒಂದು ಬಾರಿ ಲಿಂಗಸುಗೂರಿಗೆ ಶ್ರೀ ರಾಘವೇಂದ್ರ ಮಠದ ಮಠಾಧೀಶರಾಗಿದ್ದ ಶ್ರೀ ವರದೇಂದ್ರತೀರ್ಥರ ಆಗಮನವಾಗುತ್ತದೆ. ಶ್ರೀ ವರದೇಂದ್ರತೀರ್ಥರು ಪ್ರಸಿದ್ಧ ಪಂಡಿತರು, ಮಹಾ ತಪಸ್ವಿಗಳು ಅಲ್ಲದೇ ಸ್ವತಃ ರಾಯರೇ 'ನನ್ನಿಂದ ಏಳನೆಯ ಯತಿಗಳು ನನ್ನಂತೆ ಇರುತ್ತಾರೆ' ಎಂದು ಮೊದಲೆ ಹೇಳಿದ ಯತಿಗಳು. ಶ್ರೀಗಳು ಪ್ರಾಣೇಶದಾಸರ ಆಹ್ವಾನವನ್ನು ಸ್ವೀಕರಿಸಿ ಅವರ ಮನೆಯಲ್ಲಿ ಇದ್ದುಕೊಂಡು ಮೂಲ ರಾಮದೇವರ ಪೂಜೆಯನ್ನು ನೆರವೇರಿಸುತ್ತಾರೆ. ದಾಸರು ಶ್ರೀಗಳಿಗೆ ಕಾಣಿಕೆಯೊಂದಿಗೆ ತಮ್ಮ ಮನೆಯ ಹಿತ್ತಲಿನಲ್ಲಿದ್ದ ಸ್ವಲ್ಪ ಭೂಭಾಗವನ್ನು ಸಹ ಸಮರ್ಪಿಸುತ್ತಾರೆ. ಆಗ ಶ್ರೀಗಳು ಬಹಳ ಸಂತುಷ್ಟರಾಗಿ 'ಸದ್ಯ ನಿಮ್ಮ ವಶದಲ್ಲಿರಲಿ, ನಾನು ಸಂದರ್ಭ ಬಂದಾಗ ತಮ್ಮಿಂದ ಪಡೆಯುವೆ' ಎಂದು ಹೇಳಿ ಪುಣೆಗೆ ತಮ್ಮ ಪ್ರಯಾಣ ಬೆಳೆಸುತ್ತಾರೆ.
ಆದರೆ ಮುಂದೆ ಸ್ವಲ್ಪ ದಿವಸಗಳಲ್ಲೇ ಶ್ರೀಗಳವರು ಪುಣೆಯಲ್ಲಿ ವೃಂದಾವನಸ್ಥರಾದ ವಿಷಯ ತಿಳಿದು ದಾಸರಿಗೆ ಬಹಳ ದುಃಖವಾಗುತ್ತದೆ. ಹೀಗಿದ್ದಾಗ ಒಂದು ರಾತ್ರಿ ಶ್ರೀಗಳು ದಾಸರ ಕನಸಿನಲ್ಲಿ ಬಂದು 'ನಾನು ನಿಮ್ಮ ಊರಿಗೆ ಬರಲು ಬಯಸಿದ್ದೇನೆ, ನೀವು ನನಗೆ ಕೊಟ್ಟ ಸ್ಥಳದಲ್ಲಿ ಈಗ ದೊಡ್ಡ ಪ್ರಮಾಣದ ತುಳಸೀಗಿಡವೊಂದು ಬೆಳೆದಿದೆ. ಅಲ್ಲಿ ನಮಗಾಗಿ ಒಂದು ವೃಂದಾವನವನ್ನು ಕಟ್ಟಿಸಿ' ಎಂದು ಆದೇಶಿಸಿದರಂತೆ. ಸ್ವಾಮಿಗಳವರ ಆಜ್ಞೆಯಂತೆ ಆನಂದಭರಿತರಾದ ದಾಸರು ಅಲ್ಲಿದ್ದ ತುಳಸೀಗಿಡದ ಪಕ್ಕದಲ್ಲಿ ವೃಂದಾವನವನ್ನು ಕಟ್ಟಿಸಿದರು, ಅದೇ ಸಮಯಕ್ಕೆ ಅಚ್ಚರಿಯೆಂಬಂತೆ ಪುಣೆಯಿಂದ ಗುರುಗಳ ಮಂತ್ರಾಕ್ಷತೆಯ ಸಮೇತ ಮೂಲ ಪಾದುಕೆಗಳೂ ಕೂಡ ಭಕ್ತರೊಬ್ಬರ ಮೂಲಕ ಬರುತ್ತವೆ. ಹೀಗೆ ವರದೇಂದ್ರ ತೀರ್ಥರು ಪ್ರಾಣೇಶದಾಸರಿಗೆ ಒಲಿದು ಭಕ್ತವರದರಾಗಿ ಲಿಂಗಸುಗೂರಿನಲ್ಲಿ ನೆಲೆಸಿದರು. ಗುರುಗಳ ಆಗಮನದಿಂದ ಅಲ್ಲಿ ದಾಸಸಾಹಿತ್ಯದ ಹೆಬ್ಬಾಗಿಲೇ ತೆರೆದಂತಾಯಿತು. ತನ್ಮೂಲಕ ದಾಸಸಾಹಿತ್ಯ ಸಂಗ್ರಹ & ಸಂಶೋಧನೆಗೆ ಸುಭದ್ರವಾದ ಸೋಪಾನವೊಂದು ನಿರ್ಮಾಣವಾಗುತ್ತದೆ.
ಪ್ರಾಣೇಶದಾಸರು ಸುಮಾರು 250 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪದ, ಪದ್ಯ, ಸುಳಾದಿ, ಉಗಾಭೋಗಗಳಲ್ಲದೇ ಗಾಲವ ಚರಿತ್ರೆ, ಭ್ರಮರಗೀತಾ, ಹನುಮದ್ವಿಲಾಸ, ವೀರಭದ್ರ ವಿಲಾಸ, ಸೀತಾ ಸ್ವಯಂವರ ಮುಂತಾದ ಸುಮಾರು 17 ದೀರ್ಘಕೃತಿಗಳಿವೆ. ಅವರ ರಚನೆಗಳಿಂದ ಭಾಷೆಯ ಮೇಲೆ ದಾಸರಿಗಿದ್ದ ಹಿಡಿತ & ವೈವಿಧ್ಯಮಯ ಕಥಾಹಂದರ ಸ್ಪಷ್ಟವಾಗಿ ಗೋಚರವಾಗುತ್ತದೆ.
ಒಮ್ಮೆ ಪ್ರಾಣೇಶದಾಸರು ತಮ್ಮ ಗುರುಗಳಾದ ಜಗನ್ನಾಥದಾಸರ ಅಪ್ಪಣೆಯಂತೆ ಕರ್ಜಗಿಗೆ ಹೋಗಿ ಅಲ್ಲಿ ಒಂದು ಮನೆಯಲ್ಲಿ ನಡೆದ ಭಜನಾಕಾರ್ಯಕ್ರಮದಲ್ಲಿ 'ಆದದ್ದಾಯ್ತಿನ್ನಾದರೂ ಒಳ್ಳೆ ಹಾದಿ ಹಿಡಿಯೋ ಪ್ರಾಣಿ' ಎಂಬ ಪದವನ್ನು ಹೇಳುತ್ತಾರೆ. ಆ ಮನೆ ದುರ್ಮಾರ್ಗಿಯಾಗಿದ್ದ ದಾಸಪ್ಪ ಎಂಬುವವರ ಮನೆಯಾಗಿತ್ತು ಮತ್ತು ಪ್ರಾಣೇಶದಾಸರ ಈ ಹಾಡು ದಾಸಪ್ಪನ ಮೇಲೆ ಗಾಢವಾದ ಪರಿಣಾಮ ಬೀರಿದ ಕಾರಣ ತತ್ ಕ್ಷಣ ಆತ ದಾಸರಿಗೆ ಶರಣಾಗಿ ಅವರಿಂದ 'ಶ್ರೀದವಿಠಲ' ಎಂಬ ಅಂಕಿತ ಪಡೆದು ಹರಿದಾಸರಾಗಿ ಮುಂದೆ ಹಲವಾರು ಪ್ರಸಿದ್ಧ ರಚನೆಗಳನ್ನು ಮಾಡುತ್ತಾರೆ. ಈ ರೀತಿಯಾಗಿ ತಮ್ಮ ಗುರುಗಳ ಆಜ್ಞೆಯಂತೆ ಹಲವಾರು ಸುಜೀವಿಗಳಿಗೆ ಅಂಕಿತ ದೀಕ್ಷೆಯನ್ನು ನೀಡಿ ದಾಸ ಪರಂಪರೆಯನ್ನು ಮುಂದುವರಿಸಿದ ಪ್ರಾಣೇಶದಾಸರು ಕ್ರಿ.ಶ 1822 ರ ಚಿತ್ರಭಾನು ಸಂವತ್ಸರ ಆಶ್ವೀಜ ಶುದ್ಧ ಸಪ್ತಮಿಯಂದು ದೇಹತ್ಯಾಗ ಮಾಡುತ್ತಾರೆ.
- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ
(ಸಂಸ್ಕೃತ ಭಾರತಿ'ಯ ಉತ್ತರ ಕರ್ನಾಟಕದ ಪ್ರಚಾರ ಗಣ ಸದಸ್ಯೆ)
99805 45433
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ