ಪುತ್ತೂರು: ಆದರ್ಶ ವ್ಯಕ್ತಿತ್ವವುಳ್ಳ, ಇಂದಿಗೂ ಮನ್ನಣೆಯನ್ನು ಹೊಂದಿದ ಸ್ವಾಮಿ ವಿವೇಕಾನಂದರ ಬಗ್ಗೆ ನಾವು ಚಿಂತನೆ ನಡೆಸಬೇಕು. ಕ್ರಾಂತಿಕಾರಿಗಳು, ಮಂದಗಾಮಿತನವುಳ್ಳವರು ಹಾಗೂ ಎಲ್ಲಾ ಸಿದ್ಧಾಂತದವರಿಗೂ ಪ್ರೇರಣೆಯಾಗಿದ್ದವರು ವಿವೇಕಾನಂದರು. ಭಾರತದ ಗಡಿ ದಾಟಿ ಧರ್ಮಪ್ರಸಾರ ಮಾಡಿದವರು. ಅಂತೆಯೇ ಪಾಶ್ಚಾತ್ಯ ಸಂಸ್ಕೃತಿಯನ್ನೂ ದೇಶೀಯತೆಯನ್ನೂ ಬೆಸೆದವರು. ವಿವೇಕಾನಂದರ ಬಗ್ಗೆ ತಿಳಿದಾಗ ದೇಶವನ್ನು ಅರಿಯಬಹುದು ಎಂದು ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ ಹಾಗೂ ಭಾರತೀಯ ಸಂಸ್ಕೃತಿ ಹಾಗೂ ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ 'ವಿವೇಕ ಸ್ಮೃತಿ' ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಭಾರತದಲ್ಲಿ ವೈಜ್ಞಾನಿಕವಾದ ಅಭಿವೃದ್ಧಿಗೂ ಪ್ರೇರಣೆ ವಿವೇಕಾನಂದರು. ಜಗತ್ತು ಪ್ರಾರಂಭವಾಗುವುದು ಚೈತನ್ಯಶೀಲತೆಯಿಂದ. ನಮಗೆ ಅಭದ್ರತೆ ಕಾಡಿದಾಗಲೆಲ್ಲಾ ವಿವೇಕಾನಂದರ ಸಂದೇಶಗಳು ನಮ್ಮನ್ನು ಚೈತನ್ಯಶೀಲರನ್ನಾಗಿಸುತ್ತದೆ. ನಮ್ಮ ಸಂಸ್ಕೃತಿಯ ವಿರುದ್ಧ ನಡೆಯುವ ಆಕ್ರಮಗಳಿಗೆ ನಾವು ಸುಮ್ಮನಿರಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ ವಿವೇಕಾನಂದರ ಬದುಕಿನ ಬಗ್ಗೆ ನಾವು ಅರಿತುಕೊಳ್ಳಬೇಕು. ಅವರ ಜೀವನದ ಒಳ್ಳೆಯ ಗುಣನಡತೆಗಳನ್ನು ನಾವೂ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್, ಪ್ರಾಂಶುಪಾಲ ಡಾ. ಶ್ರೀಧರ ನಾಯಕ್ ಬಿ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿಜಯ ಸರಸ್ವತಿ, ಭಾರತೀಯ ಸಂಸ್ಕೃತಿ ಹಾಗೂ ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಸೂರ್ಯನಾರಾಯಣ ಪಿ. ಎಸ್. ಸ್ವಾಗತಿಸಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿನುತಾ. ಕೆ ವಂದಿಸಿದರು. ತೃತೀಯ ಕಲಾ ವಿಭಾಗದ ವಿದ್ಯಾರ್ಥಿನಿ ಪ್ರತೀಕ್ಷಾ ಬಿ. ಎಲ್. ಕಾರ್ಯಕ್ರಮವನ್ನು ನಿರ್ವಹಿಸಿದರು.