ಭಾರತ ಇತಿಹಾಸದಲ್ಲಿ ಮರೆಯಲಾಗದ ಸಂಸ್ಕೃತಿ ಪಾಂಡಿತ್ಯಗಳನ್ನು ಲೇಶತ: ಪ್ರದರ್ಶಿಸಿ ಭಾರತದ ಉದ್ದಗಲಕ್ಕೂ ಸಂಚರಿಸಿ ಅನೇಕ ಸಂಸ್ಕೃತ ಪಂಡಿತರನ್ನು ತಯಾರು ಮಾಡಿದ ತತ್ವಜ್ಞಾನಿ ಶ್ರೀ ಸತ್ಯ ಪ್ರಮೋದತೀರ್ಥರು.
ದೈತ ವೇದಾಂತ ಪ್ರತಿಪಾದಕ ಜಗದ್ಗುರು ಶ್ರೀ ಮನ್ ಮಧ್ವಾಚಾರ್ಯರ ತತ್ವಜ್ಞಾನ ಜಗತ್ತಿನ ಉದ್ದಗಲಕ್ಕೂ ಪಸರಿಸಿ ಅನೇಕ ಮುಮುಕ್ಷುಗಳಿಗೆ ಜ್ಞಾನದ ರಸದೌತಣ ಉಣಬಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸತತ ಐವತ್ತು ವರ್ಷಗಳ ಕಾಲ ಶ್ರೀ ಮೂಲರಾಮ ದೇವರ ಪೂಜೆಗೈದು ಅತಿ ಹಿಂದುಳಿದ ಗ್ರಾಮೀಣ ಭಾಗದಲ್ಲಿ ಸಂಚರಿಸಿ ವೈದಿಕ ತತ್ವಜ್ಞಾನ ಪ್ರಸಾರ ಮಾಡಿ ಧರ್ಮದ ಗಂಧವನ್ನೇ ಗೊತ್ತಿಲ್ಲದ ಅನೇಕ ಜನರಿಗೆ ಸಾಮಾಜಿಕ- ಆಧ್ಯಾತ್ಮಿಕ, ಧರ್ಮದ ಗುರುಗಳ ಮತ್ತು ದೇವರ ಬಗ್ಗೆತಿಳಿ ಹೇಳಿ ಸನ್ಮಾರ್ಗಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಜನಿಸಿದ್ದು ಈಗಿನ ವಿದ್ಯಾಕಾಶಿ ಎಂದೇ ಪ್ರಸಿದ್ಧವಾದ ಧಾರವಾಡದಲ್ಲಿ -1918 ರಲ್ಲಿ.
ಮೂಲಸ್ಥಳ ಈಗಿನ ಹಾವೇರಿ ಜಿಲ್ಲೆಯ ವರದಾತೀರದ ಕರ್ಜಗಿ, ತಂದೆ ರಂಗಾಚಾರ್ಯರು. ತಾಯಿ ಕಮಲಾಬಾಯಿ. ಪೂರ್ವಾ ಶ್ರಮದ ಹುಟ್ಟಿದ ನಾಮ ಗುರುರಾಜಾಚಾರ್ಯರು.
ಇವರು ಚಿಕ್ಕವರಿದ್ದಾಗಲೇ ತಂದೆಯವರಿಂದ ಶಾಸ್ತ್ರದ ಅಭ್ಯಾಸ ಪ್ರಾರಂಭವಾಯಿತು. ಮುಂದೆ ಮೈಸೂರಿನ ಧಾರಾಪುರಂ ಶ್ರೀ ಕೃಷ್ಣಮೂರ್ತ್ಯಾಚಾರ್ಯರಲ್ಲಿ ಹಾಗೂ ಉತ್ತರಾದಿ ಮಠದ ಜ್ಞಾನಕೇಸರಿ ಶ್ರೀ ಶ್ರೀ ಶ್ರೀ 1008 ಸತ್ಯಧ್ಯಾನ-ತೀರ್ಥರ ಶಿಷ್ಯರಾದ ಶ್ರೀ ಉತ್ತರಾದಿ ಮಠದ ಪೀಠದಲ್ಲಿ ವೀರಾಜಮಾನರಾಗಿದ್ದ ಶ್ರೀ ಸತ್ಯಪ್ರಜ್ಞತೀರ್ಥರಲ್ಲಿ ಮುಂದುವರೆಯಿತು.
ಮುಂದೆ ಶ್ರೀ ಹಂಸನಾಮಕ ಪರಮಾತ್ಮನ ಮೂಲ ಪೀಠವಾದ ಶ್ರೀಮದ್ ಉತ್ತರಾದಿ ಮಠದ ಶ್ರೀಸತ್ಯಬಿಜ್ಜ ತೀರ್ಥರಿಂದ 1948ರಲ್ಲಿ ಆಶ್ರಮ ಸ್ವಿಕರಿಸಿ "ಶ್ರೀ ಸತ್ಯಪ್ರಮೋದತೀರ್ಥ" ರೆಂದು ಅಭಿಧಾನವನ್ನು ಪಡೆದರು. ಆಶ್ರಮ ಪಡೆದ ಹೊಸತರಲ್ಲಿ ಅನೇಕ ಸವಾಲುಗಳು ಶ್ರೀಮಠದ ಜವಾಬ್ದಾರಿ, ಪಂಡಿತರ ಸಂರಕ್ಷಣೆ, ನಿತ್ಯ ಸುದಾದಿ ಶಾಸ್ತ್ರಗಳ, ಪಾಠ, ಪ್ರವಚನ, ಪೂಜೆ ಹೀಗೆ ಅನೇಕ ಸವಾಲುಗಳನ್ನು ಎದುರಿಸುತ್ತಾ ಪರಮ ಗುರುಗಳಾದ ಶ್ರೀ ಮತ್ ಸತ್ಯಧ್ಯಾನತೀರ್ಥರಿಂದ ಅನುಗ್ರಹೀತರಾಗಿ ಮೊಟ್ಟ ಮೊದಲ ಶ್ರೀಸುಧಾ ಮಂಗಳವನ್ನು ಶ್ರೀ ಮತ್ ಜಯತೀರ್ಥರ ಮೂಲ ವೃಂದಾವನದ ಸನ್ನಿಧಾನಕಾಗಿಣಾ-ತೀರದ ಮಳಖೇಡದಲ್ಲಿ ಅತ್ಯಂತ ವಿಜೃಂಭಣೆಯಿಂದ ನೇರವೇರಿಸಿ ಶ್ರೀ ಮತ್ ಜಯತೀರ್ಥರ ಅನುಗ್ರಹಕ್ಕೆ ಪಾತ್ರರಾದರು.
ಆಸೇತು ಹಿಮಾಚಲ ಭಾರತವನ್ನು ಸಂಚರಿಸಿ ಸನಾತನ ಧರ್ಮದ ಜಾಗೃತಿ ಮಾಡಿದರು, ಬರದ ಭೂಮಿಗೆ ಮಳೆತರಿಸಿ ಅನುಗ್ರಹಿಸಿದರು, ಮಳೆ ಸುರಿಸಿದ ಸ್ವಾಮಿಗಳೆಂದೇ ಪ್ರಸಿದ್ದರಾದರು ಅನೇಕ ಅಪ್ರಕಟಿತ ಆಚಾರ್ಯ ಶ್ರೀಮಧ್ವರ, ಟೀಕಾರಾಯರ ಗ್ರಂಥಗಳನ್ನು ಪ್ರಕಟಿಸಿದ ಕೀರ್ತಿ ಇವರದ್ದು. ಗ್ರಂಥರಚನೆಯಲ್ಲಿಯು ಎತ್ತಿದ ಕೈ, ಸುಧಾ ಮಂಡನ, ವಿಜಯಿಂದ ವಿಜಯವೈಭವ, ವಾದಿರಾಜರ "ಯುಕ್ತಮಲ್ಲಿಕಾಟಿಪ್ಪಣಿ" ವಾಯುಸ್ತುತಿ ಮಂಡನ ಹೀಗೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ.
ಒಂದು ದಿನವೂ ಬೀಡದೆ ಐವತ್ತು ವರ್ಷಗಳಕಾಲ ಶ್ರೀಮೂಲರಾಮನ ಪೂಜೆ ಮಾಡಿದರು. ಗುತ್ತಲ ಸರ್ವಜ್ಞಾಚಾರ್ಯರಿಗೆ ಆಶ್ರಮವನ್ನು ನೀಡಿ "ಶ್ರೀ ಸತ್ಯಾತ್ಮತೀರ್ಥ'ರೆಂದು ಅಭಿಧಾನವನ್ನು ನೀಡಿ, ಉತ್ತಮ ಉತ್ತರಾಧಿಕಾರಿಗಳನ್ನು ವೇದಾಂತ ಸಾಮ್ರಾಜ್ಯದ ಸಿಂಹಾಸನಕ್ಕೆ ಕುಳ್ಳಿರಿಸಿದರು.
ಶಿಷ್ಯ ಪ್ರಶಿಷ್ಯರ ಪರಂಪರೆಯನ್ನೆ ಬೆಳಸಿದ, ಭಾವಬೋಧಕಾರರೆಂದೆ ಪ್ರಸಿದ್ದರಾದ ಶ್ರೀ ರಥೋತ್ತಮತೀರ್ಥರ ಮೂಲ ವೃಂದಾವನ ಸನ್ನಿಧಾನ, ಬ್ರಹ್ಮದೇವರಿಂದ ಪೂಜಿಸಲಪಟ್ಟ ತ್ರಿವಿಕ್ರಮದೇವರ ದಿವ್ಯ ಸನ್ನಿಧಾನೋಪೆತವಾದ ತಮಿಳುನಾಡಿನ ತಿರುಕೊಯಿಲೂರಿನಲ್ಲಿ ಈಶ್ವರನಾಮ ಸಂವತ್ಸರ ಕಾರ್ತಿಕ ಶುದ್ಧ ತೃತೀಯಾದಂದು (1997) ರಲ್ಲಿ ವೃಂದಾವನ ಪ್ರವೇಶಿಸಿ ಇಂದಿಗೂ ಸಜ್ಜನ ಭಕ್ತ ವೃಂದಕ್ಕೆ ಅನುಗ್ರಹಿಸುತ್ತಿದ್ದಾರೆ.
ಅನಂತ ಚೇತನಕ್ಕೆ ಅನಂತಾನಂತ ಸಾಸ್ಟಾಂಗ ಪೂರ್ವಕ ನಮಸ್ಕಾರಗಳು.
- ಪವನ ದೇಸಾಯಿ, ಹುಬ್ಬಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


