ಕನ್ನಡ ಮಾಧ್ಯಮ ಲೋಕದ ಪತ್ರಕರ್ತರಾದ ಖಾದ್ರಿ ಶಾಮಣ್ಣನವರ 100ನೇ ವರ್ಷದ ಹುಟ್ಟು ಹಬ್ಬವನ್ನು ಜೂನ್ ತಿಂಗಳಲ್ಲಿ ಆಚರಿಸಿದ ಅಭಿಮಾನಿಗಳಿಗೆ ಆದ ಸಂತೋಷ ಅಪರಿಮಿತ. ಅವರಿಗೆ ಗೌರವ, ನಮನ ಸಲ್ಲಿಸಿ, ಸ್ವಾತಂತ್ರ್ಯ ಹೋರಾಟಗಾರರಾದ ಶಾಮಣ್ಣನವರನ್ನು ಸ್ಮರಣೆ ಮಾಡಿದ ದಿನ ಮಾಧ್ಯಮ ಲೋಕ ಮರೆಯಲಾರದ ಕ್ಷಣ. ಶಾಮಣ್ಣನವರು ಖಾದ್ರಿ ಶ್ರೀನಿವಾಸ ದೇಶಿಕಾಚಾರ್ ಮತ್ತು ಲಕ್ಷ್ಮಮ್ಮ ಅವರ ಮಗನಾಗಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 6-6-1925 ರಂದು ಜನಿಸಿದರು.
ಪೋಷಕರು ಖಾದ್ರಿ ಶಾಮಣ್ಣನವರನ್ನು ಪ್ರೀತಿಯಿಂದ "ಅಚ್ಚು" ಎಂದು ಸಹ ಕರೆಯುತ್ತಿದ್ದರು. ಮೈಸೂರಿನಲ್ಲಿ ಓದುವಾಗ, ಮಹಾತ್ಮಾ ಗಾಂಧೀಜಿಯವರ ಕರೆಯ ಮೇರೆಗೆ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿ, ಸೆರೆಮನೆವಾಸ ಅನುಭವಿಸಿದರು. ಸೆರೆಮನೆ ವಾಸದ ನಂತರ ಎಚ್ ಸಿ ದಾಸಪ್ಪ ಮತ್ತು ಯಶೋಧರಮ್ಮ ದಾಸಪ್ಪನವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ಕರ್ನಾಟಕದಲ್ಲಿ ಸೋಷಿಯಲಿಸ್ಟ್ ಪಕ್ಷವನ್ನು ಸ್ಥಾಪಿಸಿ ದುಡಿದರು. ಅನೇಕ ತೀಕ್ಷ್ಣವಾದ ವೈಚಾರಿಕ ವಿಷಯಗಳನ್ನು ಮಂಡನೆ, ಖಾರವಾದ ರಾಷ್ಟ್ರೀಯ ಧೋರಣೆ ಅನೇಕ ಪತ್ರಿಕೆಯಲ್ಲಿ ಮಂಡನೆ ಮಾಡಿ, ಲಕ್ಷಾಂತರ ಓದುಗರ ಮೆಚ್ಚುಗೆಗೆ ಪಾತ್ರರಾದ ಅಪರೂಪದ ಪತ್ರಕರ್ತರು. ಸಂಪಾದಕೀಯ, ಮತ್ತು ವಿಶೇಷ ವರದಿಗಳನ್ನು ಪ್ರಕಟಿಸಲು ಯಾವ ಮುಲಾಜಿಗೆ ಒಳಗಾದವರಲ್ಲ.
ಇವರಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಅನುಪಮ ಪರಿಣಿತರಾಗಿ, ಬಹು ಶ್ರುತ ಪಂಡಿತರೆನಿಸಿದ್ದರು. ಪತ್ರಾಕಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಸಹ ಮೂಡಿಸಿದ ಮಹನೀಯರು. ಅನೇಕ ಇವರ ಸಂಪಾದಕೀಯ ಲೇಖನ ರಾಜಕೀಯ ಮತ್ತು ಆಡಳಿತ ವರ್ಗಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು. ಇವರು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಇದ್ದು, ಮಹಾತ್ಮಾ ಗಾಂಧೀಜಿ, ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ, ಆಚಾರ್ಯ ವಿನೋಬಾ ಭಾವೆ ಅವರ ಜೊತೆಗೆ ನಿಕಟ ಸಂಬಂಧ ಹೊಂದಿದ್ದು ವಿಶೇಷ.
ಪ್ರಜಾವಾಣಿ, ಕನ್ನಡ ಪ್ರಭ, ತಾಯಿನಾಡು, ಗೋಕುಲ ಪತ್ರಿಕೆಗಳ ಸಂಪಾದಕ, ಸುದ್ದಿ ಸಂಪಾದಕ, ಜಂಟಿ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಇವರು ತಮ್ಮ ಬರಹದ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಸಂಚಲನವನ್ನು ಮಾಡಿದ ಶ್ರೇಷ್ಠ ಬರಹಗಾರರು. ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ್ದರು. ಇಂದಿರಾ ಗಾಂಧಿಯವರು ಭಾರತ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ, ತಮ್ಮ ಹರಿತವಾದ ಲೇಖನಗಳ ಮೂಲಕ ಚಾಟಿ ಬೀಸಿ, ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಶ್ರೀರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ, ಖಾದ್ರಿ ಶಾಮಣ್ಣನವರು ಕರ್ನಾಟಕ ಪತ್ರಿಕಾ ಅಕಾಡೆಮಿಯ (ಈಗ ಮಾಧ್ಯಮ ಅಕಾಡೆಮಿ) ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಪತ್ರಕರ್ತರಲ್ಲಿ ಕೌಶಲ್ಯ ವೃದ್ಧಿಗೆ ಶ್ರಮ ವಹಿಸಿ, ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಇವರ ಟ್ರಸ್ಟ್ ಹೆಸರಿನಲ್ಲಿ ಪ್ರತಿ ವರ್ಷ ನಾಡಿನ ಪ್ರತಿಭಾವಂತ ಪತ್ರಕರ್ತರನ್ನು ಗುರುತಿಸಿ, ಪ್ರಶಸ್ತಿಯನ್ನು ನೀಡಲಾಗುತ್ತದೆ. ಖಾದ್ರಿ ಶಾಮಣ್ಣನವರು ವಿಧಾನ ಪರಿಷತ್ತಿನ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಅನೇಕ ಪ್ರತಿಭಾವಂತ ಪತ್ರಕರ್ತರನ್ನು, ಲೇಖಕರನ್ನು ಪ್ರೋತ್ಸಾಹಿಸಿ ಕನ್ನಡನಾಡಿನಲ್ಲಿ ಬೆಳಕಿಗೆ ಬರಲು ಅನುವು ಮಾಡಿದ ಖಾದ್ರಿ ಮಹಾನುಭಾವರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆಲವು ಹಿರಿಯ ಪತ್ತಕರ್ತರು ಈಗಲೂ ಇವರನ್ನು ಸ್ಮರಿಸಿ, ಗೌರವವನ್ನು ನೀಡುವ ಪರಿಪಾಠ ಮುಂದುವರಿಸಿದ್ದಾರೆ. ಪತ್ರಿಕಾ ರಂಗಕ್ಕೆ ಇವರ ಕೊಡುಗೆ ಅಪಾರ. ಅನೇಕ ಪ್ರಶಸ್ತಿಗಳಿಗೆ, ಗೌರವಗಳಿಗೆ ಪಾತ್ರರಾದ ಲೇಖಕರು. ಇವರ ವಿಚಾರಧಾರೆ, ನವ ಯುವ ಮಾಧ್ಯಮ ಮಿತ್ರರಿಗೆ ಮಾರ್ಗದರ್ಶನವನ್ನು ತೋರಿಸಿ, ಬದ್ದತೆಯಿಂದ ಕೆಲಸ ಮಾಡಿ, ಸಮಾಜದಿಂದ ಗೌರವ ಪಡೆಯುವ ಪಥ ತೋರಿಸಿದ್ದಾರೆ. ಇವರ ಕೆಲವು ಅತ್ಯುತ್ತಮ ಸಾಹಿತ್ಯ ಕೃತಿಗಳು ನಾಡಿನ ಪ್ರಸಿದ್ಧ ಕೃತಿಗಳಾಗಿವೆ. ಮಹಾತ್ಮರ ಅರ್ಥ ವಿಚಾರ, ಆಚಾರ್ಯ ವಿನೋಬಾ ಅವರ ಭೂದಾನ ಯಜ್ಞ, ಸಮಗ್ರ ದರ್ಶನ (ಅನುವಾದ) ಜಾನ್ ಕೆನಡಿ ಕೃತಿ ಅಮೇರಿಕಾದ ಕಾರ್ಮಿಕ ವರ್ಗದ ಕಥೆ, ವಿನೋಬಾ ಕಂಡ ಗಾಂಧಿ, ಬರೋಡಾ ಡೈನಮೈಟ್ ಸಂಚು, ರಾಮಮನೋಹರ ಲೋಹಿಯಾ ಮುಂತಾದವು.
ಅನೇಕ ಸಂಘ ಸಂಸ್ಥೆಗಳ ಮುಖ್ಯಸ್ಥರಾಗಿ, ಪತ್ರಿಕೆಗಳ ಸಂಪಾದಕರಾಗಿ ಕರ್ನಾಟಕದ ಪ್ರಮುಖ ಪತ್ರಕರ್ತರೆನಿಸಿ, ಹಲವು ಕೌಶಲ್ಯಭರಿತ ಲೇಖನ, ಸಂಪಾದಕೀಯಗಳನ್ನು ಬರೆದ ಖಾದ್ರಿ ಶಾಮಣ್ಣನವರು ಚಿರಸ್ಮರಣೀಯರು. ಮಂದಾಕಿನಿದೇವಿ ಪತ್ನಿಯನ್ನು, ಮತ್ತು ಇಬ್ಬರು ಪುತ್ರರನ್ನು ಅಗಲಿ, ನಾಡಿಗೆ ಕೀರ್ತಿ ತಂದು, ಬೆಂಗಳೂರಿನಲ್ಲಿ ತಾ॥11-5-1990 ರಂದು ನಿಧನರಾದರು.


