ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ರಸರಾಗ ಚಕ್ರವರ್ತಿ ಎಂದೇ ಬಿರುದಾಂಕಿತರಾಗಿದ್ದ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ (65) ಇಂದು ಬೆಳಿಗ್ಗೆ ನಿಧನರಾದರು.
ಅವರು ಕೆಲವು ಸಮಯದಿಂದ ಅನಾರೋಗ್ಯ ಪೀಡಿತರಾಗಿ ಚಿಕಿತ್ಸೆಯಲ್ಲಿದ್ದರು. ಬೆಳ್ತಂಗಡಿ ತಾಲೂಕಿನ ಅರಸಿನ ಮಕ್ಕಿಯ ಸ್ವಗೃಹದಲ್ಲಿ ಬೆಳಿಗ್ಗೆ ವಿಧಿವಶರಾದರು. ಈ ಮೂಲಕ ತೆಂಕುತಿಟ್ಟು ಯಕ್ಷಗಾನದ ಭಾವರಸ ಗಾಂಭೀರ್ಯದ ಭಾಗವತಿಕೆಯ ಕೊಂಡಿಯೊಂದು ಕಳಚಿದೆ.
ದಾಮೋದರ ಮಂಡೆಚ್ಚರ ಶಿಷ್ಯನಾಗಿ ಪುತ್ತೂರು ಮೇಳದ ಮೂಲಕ ಕಲಾ ಸೇವೆ ಆರಂಭಿಸಿ, ಮಂಡೆಚ್ಚರ ಜತೆಯಲ್ಲೇ ಕರ್ನಾಟಕ ಮೇಳದಲ್ಲಿ ಮೆರೆದ ಅವರು ಅನೇಕ ತುಳು, ಕನ್ನಡ ಪ್ರಸಂಗವನ್ನು ತನ್ನ ಭಾಗವತಿಕೆಯ ಮಾಧುರ್ಯದಿಂದ ಮೆರೆಸಿ ಜನ ಹೃದಯ ಗೆದ್ದಿದ್ದರು. ಇತ್ತೀಚಿನ ದಶಕದಲ್ಲಿ ಎಡನೀರು ಮೇಳ ಆರಂಭವಾದಾಗಿನಿಂದ ಎಡನೀರು ಮೇಳದ ಪ್ರಧಾನ ಭಾಗವತರಾಗಿ ಕನ್ನಡ ಪೌರಾಣಿಕ ಪ್ರಸಂಗಗಳನ್ನು ಮೆರೆಸಿದ್ದ ಅವರು ಕಳೆದ ಎರಡು ವರ್ಷಗಳಿಂದ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಇತ್ತೀಚೆಗೆ ಎಡನೀರು ಮಠದಲ್ಲಿ ಕಡಬ ಸಂಸ್ಮರಣಾ ಪ್ರಶಸ್ತಿ ಸ್ವೀಕರಿಸಿದ್ದ ಅವರು ತನಗೆ ಮತ್ತೆ ರಂಗದಲ್ಲಿ ಹಾಡುವ ಶಕ್ತಿ ಕರುಣಿಸಲೆಂದು ಪ್ರಾರ್ಥಿಸುವಂತೆ ಅಭಿಮಾನಿಗಳಲ್ಲಿ, ದೇವರಲ್ಲಿ ವಿನಂತಿಸಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಹೆಣ್ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ