ಬೆಂಗಳೂರು: ಕುಟುಂಬದಲ್ಲಿ ಎಲ್ಲ ಹಿರಿಯರು ಸಂಗೀತ ಪ್ರಿಯರು. ತಂದೆ- ತಾಯಿ ಮನೆಯ ವಂಶದಲ್ಲಿ ಬಹುತೇಕರು ಕಲಾವಿದರು. ಅದೇ ಪರಿಸರದಲ್ಲಿ ಬೆಳೆದ ಪಾಲಕರಿಗೂ ತಮ್ಮ ಮಗಳು ನಮ್ಮ ಪರಂಪರೆಯ ಪ್ರತೀಕವಾಗಬೇಕು ಎಂಬ ಹೆಬ್ಬಯಕೆ.
ಸರಿ. ಪೂರ್ವ ಪ್ರಾಥಮಿಕ ಹಂತದಲ್ಲೇ ಮಗುವನ್ನು ನೃತ್ಯ ಶಾಲೆಗೆ ಸೇರಿಸಿದರು. ದಶಕಗಳು ಉರುಳಿದ್ದೇ ತಿಳಿಯಲಿಲ್ಲ. ಉತ್ತಮ ಗುರುವಿನ ಕಮ್ಮಟದಲ್ಲಿ ತರಬೇತಿ ಸಾಗಿತು. ಶೈಕ್ಷಣಿಕ ರಂಗದಲ್ಲೂ ಅಗ್ರ ಪಂಕ್ತಿಯನ್ನೇ ಕಾಪಾಡಿಕೊಂಡು ಬಂದ ಬಾಲಕಿ ಇಂದು ಭರತನಾಟ್ಯ ಕ್ಷೇತ್ರದಲ್ಲೂ ಒಂದು ಹಂತಕ್ಕೆ ಬಂದಿದ್ದಾಳೆ. ನೂರಾರು ಕಲಾ ರಸಿಕರ ಮುಂದೆ ‘ರಂಗಪ್ರವೇಶ’ ಮಾಡುವ ಮೂಲಕ ತನ್ನ ಪ್ರೌಢಿಮೆ ಪ್ರದರ್ಶಿಸಲು ಗೆಜ್ಜೆ ಕಟ್ಟಿ ನಿಂತಿದ್ದಾಳೆ. ಪಾಲಕರಿಗೆ ಇದಕ್ಕಿಂತ ಹೆಮ್ಮೆ ಬೇಕೇ?
ಚಿಕ್ಕಮಗಳೂರು ಜಿಲ್ಲೆ ಸಖರಾಯ ಪಟ್ಟಣ ಮೂಲದ, ಬೆಂಗಳೂರಿನಲ್ಲಿ ವೃತ್ತಿ ಬದುಕು ಕಟ್ಟಿಕೊಂಡ ಶ್ರೀವತ್ಸ- ಕವಿತಾ ದಂಪತಿ ಪುತ್ರಿ ರಾಧಾ ಅವರ ರಂಗಾರೋಹಣ ಅ. 25ರಂದು ಸಂಜೆ 5ಕ್ಕೆ ಸಂಪನ್ನಗೊಳ್ಳಲಿದೆ. ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನವೇ ವೇದಿಕೆ.
ಹಿರಿಯ ಸಂಸ್ಕೃತ -ವೇದ ವಿದ್ವಾಂಸರು ಮತ್ತು ಶ್ರೀವತ್ಸ ಅವರ ಗುರುಗಳೂ ಆಗಿರುವ ಮತ್ತೂರು ಚಂದ್ರಶೇಖರ ಅವಧಾನಿಗಳೇ ಕೇಂದ್ರಬಿಂದು. ಚಿತ್ರನಟಿ ಮಾಳವಿಕಾ ಅವಿನಾಶ್, ನಟ ನೆ.ಲ. ನರೇಂದ್ರ ಬಾಬು ಅವರೇ ತಾರಾ ಆಕರ್ಷಣೆ.
ನರ್ತಕಿಯ ನಡೆಗಳನ್ನು, ಅವಧಾನಿಗಳ ನುಡು ಮುತ್ತುಗಳನ್ನು, ಕಲಾ ಕೋವಿದರ ಸಂಗಮವನ್ನೂ ಸೂಕ್ಷ್ಮವಾಗಿ ಅವಲೋಕಿಸಲು, ತಮ್ಮದೇ ಆದ ಅಭಿಮತ ಮಂಡಿಸಲು ಸಾಕ್ಷಿಯಾಗಲಿರುವವರೇ ಹಿರಿಯ ನೃತ್ಯ ವಿದುಷಿ ಕಲಾಮಂಡಲಂ ಉಷಾ ದಾತಾರ್.
ಹಿರಿಯ- ಕಿರಿಯ ಕಲಾವಿದರಿಗೆ ವೇದಿಕೆಯಾದಿಯಾಗಿ ಕಾರ್ಯಕ್ರಮದ ಸಕಲ ವ್ಯವಸ್ಥೆಗಳನ್ನೂ ನಿರ್ವಹಿಸುವ ಕಲಾ ಪೋಷಕ ಸಾಯಿ ವೆಂಕಟೇಶ್, ರಾಧಾ ಅವರ ಮಾತಾ- ಪಿತೃಗಳಾದ ಕವಿತಾ- ಶ್ರೀವತ್ಸ ಸೇರಿದಂತೆ ವಂಶದ ಎಲ್ಲ ಸದಸ್ಯರ ಸಮ್ಮುಖದಲ್ಲಿ, ಗುರುವಿನದ್ದೇ ಆದ ನಟುವಾಂಗ ಸಾರಥ್ಯದಲ್ಲಿ ಕಲಾ ಪ್ರೌಢಿಮೆ ಮೆರೆಯಲಿರುವ ರಾಧಾಗೆ ಈ ಕಾರ್ಯಕ್ರಮ ಒಂದು ಸುಕೃತವೇ ಆಗಿದೆ.
ಅಂದಹಾಗೆ ಇದಕ್ಕೊಂದು ಹಿಮ್ಮೇಳ ಬೇಕೇಬೇಕು ಅಲ್ಲವೇ? ಅಲ್ಲಿ ಗಾಯನ- ರೋಹಿತ ಭಟ್, ಮೃದಂಗ- ಗುರುಮೂರ್ತಿ, ಕೊಳಲು- ನಿತೀಶ್ ಅಮ್ಮಣ್ಣಾಯ, ವೀಣೆ- ಗೋಪಾಲ್ ಮತ್ತು ರಿದಂ ಪ್ಯಾಡ್- ಪವನ್ ದತ್ತ ಪಕ್ಕವಾದ್ಯ ಸಹಕಾರವಿದೆ. ಕಲಾಭಿಮಾನಿಗಳು ಸಂಗಮಗೊಳ್ಳಬೇಕು, ಸಂಭ್ರಮಿಸಬೇಕು, ರಾಧಾಗೆ ಹರಸಬೇಕು ಎಂಬುದೇ ಪಾಲಕರ ಆಶಯ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

