ಅಹಿಯ ನಂಜು ಮನದಿ ತುಂಬಿ
ಜನರು ಬಹಳ ನರಳುತಿರುವರು|
ಕಹಿಯ ಭಾವ ತೊರೆಯದಿರುತ
ಈರ್ಷ್ಯೆಯಿಂದ ಉರಿಯುತಿರುವರು||
ಉರಿದುಕೊಳ್ವ ಮನುಜರೆಲ್ಲ
ಶಾಂತಿ ಸಿಗದೆ ಕೊರಗಿಬಿಡುವರು|
ಮುರಿದ ಚಿತ್ತದಲ್ಲಿ ಬೆಂದು
ತಾಪದಿಂದ ನೋವು ಪಡುವರು||
ತಮ್ಮ ಎಲೆಯ ಮೇಲೆ ಬಿದ್ದ
ಕತ್ತೆಯನ್ನು ನೋಡದಿರುವರು|
ಸುಮ್ಮನಿರದೆ ಪಕ್ಕದವರ
ಎಲೆಯ ನೊಣಕೆ ನಗುತಲಿರುವರು||
ಚೆಂದವಾಗಿ ಬದುಕುವವರ
ಕಂಡು ಜನರು ಸಹಿಸದಿರುವರು|
ಮಂದಬುದ್ಧಿ ತೋರಿಕೊಂಡು
ಮಂಕುದಿಣ್ಣೆಯಾಗುತಿರುವರು||
ಮನದಿ ಬರುವ ಕೆಟ್ಟಕೋಪ
ಸುಟ್ಟುಬಿಡುವುದರಿಯದಿರುವರು|
ಕನಲಿಕನಲಿ ಕೆಂಡವಾಗಿ
ಕಿಚ್ಚಿನಿಂದ ಬಳಲುತಿರುವರು||
ತನ್ನ ತಪ್ಪು ತಿಳಿಯದಿರುವ
ಮನುಜ ಹೆಚ್ಚು ಮೆರೆಯುತಿರುವನು|
ಭಿನ್ನರಾಗ ಹಾಡಿಕೊಂಡು
ವ್ಯಗ್ರಮನದಿ ಕುದಿಯುತಿರುವನು||
- ಅಶ್ವತ್ಥನಾರಾಯಣ, ಮೈಸೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


