ಮ್ಯೂಲ್ ಖಾತೆಗಳು- ಅಕ್ರಮ ಹಣಕಾಸು ವಹಿವಾಟುಗಳ ಜಾಲ

Upayuktha
0


ಮ್ಯೂಲ್ (ಹೇಸರಗತ್ತೆ) ಖಾತೆಯು ಅಕ್ರಮ ಹಣವನ್ನು ಸ್ವೀಕರಿಸಲು, ವರ್ಗಾಯಿಸಲು ಅಥವಾ ಇತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುವ ಬ್ಯಾಂಕ್ ಖಾತೆಯಾಗಿದೆ. ಈ ಖಾತೆಗಳನ್ನು ಸಾಮಾನ್ಯವಾಗಿ ವಂಚಕರು ಅಕ್ರಮವಾಗಿ ಪಡೆದ ಹಣದ ಮೂಲವನ್ನು ಮರೆಮಾಚಲು ಬಳಸಿಕೊಳ್ಳುತ್ತಾರೆ. ಈ ಖಾತೆಗಳ ಬಳಕೆಯಿಂದಾಗಿ ಹಣದ ನಿಜವಾದ ಮೂಲವನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಇದಕ್ಕೆ ಖಾತೆದಾರರನ್ನು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೂ ನೇಮಕ ಮಾಡಿಕೊಳ್ಳಬಹುದು. ಆರ್ಥಿಕ ಅಪರಾಧಿಗಳು ಫಿಶಿಂಗ್ ಇಮೇಲ್‌ಗಳು ಅಥವಾ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಕಳುಹಿಸಿ ಮುಗ್ಧ ಜನರ ಬ್ಯಾಂಕ್ ವಿವರಗಳನ್ನು ಪಡೆದು ಅವರ ಖಾತೆಗಳ ಮೂಲಕ ಅಕ್ರಮ ವಹಿವಾಟುಗಳನ್ನು ಸೀಮಿತ ಅವಧಿಯವರೆಗೆ ನಡೆಸುತ್ತಾರೆ.

ಡಿಜಿಟಲ್ ವಂಚನೆಯ ಬೆಳೆಯುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಮ್ಯೂಲ್ ಖಾತೆಗಳು ಜನಸಾಮಾನ್ಯರಿಗೆ ಒಂದು ದೊಡ್ದ ತಲೆನೋವಾಗಿ ಪರಿಣಮಿಸಿದೆ.  ಈ ಖಾತೆಗಳು ಆನ್‌ಲೈನ್ ವಂಚನೆ, ಮಾನವ ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವಂತಹ ಅಪರಾಧಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. 


ಮ್ಯೂಲ್ ಖಾತೆಗಳು ಹಣಕಾಸಿನ ಅಪರಾಧಗಳನ್ನು ಹೇಗೆ ಸುಗಮಗೊಳಿಸುತ್ತವೆ?

ವಿವಿಧ ರೀತಿಯ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವ ಅಪರಾಧಿಗಳು ಮ್ಯೂಲ್ ಖಾತೆಗಳ ಮೂಲಕ ತಮಗೆ ಬೇಕಾದ ಸಂದರ್ಭಗಳಲ್ಲಿ ಹಣದ ವರ್ಗಾವಣೆಯನ್ನು ಮಾಡುತ್ತಾರೆ. ಈ ಖಾತೆಗಳು ಕಾನೂನುಬದ್ಧ ಬ್ಯಾಂಕಿಂಗ್ ಚಾನೆಲ್‌ಗಳ ಮೂಲಕ ಅಕ್ರಮ ಹಣ ವರ್ಗಾವಣೆಯನ್ನು ಮಾಡಿಕೊಡುವುದರಿಂದ ಹಣದ ಮೂಲವನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳಿಗೆ ಕಷ್ಟವಾಗುತ್ತದೆ. ಲೇಯರಿಂಗ್ ಎಂದು ಕರೆಯಲ್ಪಡುವ ಈ ತಂತ್ರವು ಮನಿ ಲಾಂಡರಿಂಗ್ ಕಾರ್ಯಾಚರಣೆಗಳಲ್ಲಿ ಸಾಮಾನ್ಯ ಹಂತವಾಗಿದೆ.


ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಅಥವಾ ಅತೀ ಸಾಮಾನ್ಯ ಜನರನ್ನು ಆನ್‌ಲೈನ್ ಜಾಹೀರಾತುಗಳು ಅಥವಾ ಸುಲಭ ಆದಾಯದ ಭರವಸೆ ನೀಡುವ ನಕಲಿ ಉದ್ಯೋಗ ಪೋಸ್ಟಿಂಗ್‌ಗಳೊಂದಿಗೆ ಅವರ ಗಮನಕ್ಕೆ ತರದೆ  ಮ್ಯೂಲ್ ಖಾತೆಗೆ ಮಧ್ಯವರ್ತಿಗಳಾಗಿ ನೇಮಿಸಿಕೊಳ್ಳಲಾಗುತ್ತದೆ. ನಂತರ ಅರ್ಥಿಕ ಅಪರಾಧಿಗಳು ಈ ಖಾತೆಗಳನ್ನು ಕಾನೂನಾತ್ಮಕವಾಗಿ ನಿರ್ವಹಿಸುತ್ತಾರೆ. ಇತರ ಮ್ಯೂಲ್ ಖಾತೆಗಳಿಗೆ ಹಣವನ್ನು ಸ್ವೀಕರಿಸಲು ಮತ್ತು ಫಾರ್ವರ್ಡ್ ಮಾಡಲು ಕೂಡಾ ಇದನ್ನು ಬಳಸಲಾಗುತ್ತದೆ. ಈ ಖಾತೆಯಲ್ಲಿನ ಕ್ಷಿಪ್ರ ವರ್ಗಾವಣೆಗಳಿಂದಾಗಿ  ಹಣದ ಜಾಡು ಕಂಡುಹಿಡಿಯಲು ಅಧಿಕಾರಿಗಳಿಗೆ ಕಷ್ಟವಾಗುತ್ತದೆ. ಕೆಲವೊಂದು ಸಂಧರ್ಭದಲ್ಲಿ ಸ್ಥಳೀಯ ಹಣಕಾಸು ಮೇಲ್ವಿಚಾರಣಾ ವ್ಯವಸ್ಥೆಯು ಈ ಖಾತೆಯ ಅಕ್ರಮ ಹಣ ವರ್ಗಾವಣೆ ಪತ್ತೆಹಚ್ಚುವುದನ್ನು ತಪ್ಪಿಸಲು ಅಪರಾಧಿಗಳು ಬಹು ದೇಶಗಳಾದ್ಯಂತ ಮ್ಯೂಲ್ ಖಾತೆಗಳನ್ನು ಬಳಸುತ್ತಾರೆ.


ಗುರುತಿನ ಕಳ್ಳತನ (Identity theft), ಸೈಬರ್ ವಂಚನೆ, ಹೂಡಿಕೆ ಹಗರಣಗಳು ಮತ್ತು ಇ-ಕಾಮರ್ಸ್ ವಂಚನೆಯಂತಹ ಅಪರಾಧಗಳನ್ನು ನಡೆಸುವಲ್ಲಿ ಮ್ಯೂಲ್ ಖಾತೆಗಳು ಪ್ರಮುಖವಾಗಿವೆ. ಈ ಖಾತೆಗಳನ್ನು ಮೊದಲು ಸರಕುಗಳು ಅಥವಾ ಸೇವೆಗಳನ್ನು ಖರೀದಿಸಲು ಬಳಸಿದ ನಂತರ ಹಣವನ್ನು ಮತ್ತಷ್ಟು ಲಾಂಡರ್ ಮಾಡಲು ಮರುಮಾರಾಟ ಮಾಡಲಾಗುತ್ತದೆ. ಮ್ಯೂಲ್ ಖಾತೆಯ ಬಳಕೆಯು ಆರ್ಥಿಕ ವ್ಯವಸ್ಥೆಯನ್ನು ಹಾನಿಗೊಳಿಸುವುದಲ್ಲದೆ ಮುಗ್ಧ ವ್ಯಕ್ತಿಗಳನ್ನು ಕಾನೂನು ಅಪಾಯಗಳಿಗೆ ಒಡ್ಡುತ್ತದೆ. ಹಾಗಾಗಿ, ಈ ಖಾತೆಗಳ ದುರುಪಯೋಗವು ನಿಯಂತ್ರಕರು ಮತ್ತು ಹಣಕಾಸು ಸಂಸ್ಥೆಗಳಿಗೆ ಗಂಭೀರ ಸವಾಲಾಗಿ ಉಳಿದಿದೆ.


ಮ್ಯೂಲ್ ಖಾತೆ ಚಟುವಟಿಕೆಯ ಸೂಚಕಗಳು

ಪರಿಚಯವಿಲ್ಲದ ಮೂಲಗಳಿಂದ, ವಿಶೇಷವಾಗಿ ವಿವಿಧ ಭೌಗೋಳಿಕ ಸ್ಥಳಗಳಿಂದ ಆಗಾಗ್ಗೆ ದೊಡ್ಡ ಠೇವಣಿ ಮಾಡುವುದು, ಠೇವಣಿ ಮಾಡಿದ ಕೂಡಲೇ ಹಣವನ್ನು ನಿಯಮಿತವಾಗಿ ತೆಗೆದುಕೊಳ್ಳುವುದು, ಖಾತೆಯ ಪ್ರೊಫೈಲ್ ಮತ್ತು ವಹಿವಾಟಿನ ನಡುವೆ ಹೊಂದಾಣಿಕೆಯಿಲ್ಲದಿರುವಿಕೆ; ಉದಾಹರಣೆಗೆ ವಿದ್ಯಾರ್ಥಿ ಅಥವಾ ನಿರುದ್ಯೋಗಿ ವ್ಯಕ್ತಿಯ ಖಾತೆಗಳು ದೊಡ್ಡ ಮಟ್ಟದ ವಹಿವಾಟು ನಡೆಸುವುದು, ಬಹು  ಖಾತೆಗಳಲ್ಲಿ ಒಂದೇ ಸಂಪರ್ಕ ಮಾಹಿತಿ, ವಿಳಾಸ ಅಥವಾ ಗುರುತು, ಖಾತೆದಾರರು ತಮ್ಮ ಖಾತೆಯನ್ನು ನಿರ್ವಹಿಸಲು ಅಥವಾ ಲಾಗಿನ್ ರುಜುವಾತುಗಳನ್ನು ಹಂಚಿಕೊಳ್ಳಲು ಬೇರೆಯವರಿಗೆ ಅನುಮತಿಸುವುದು, ಹಣವನ್ನು ಸ್ವೀಕರಿಸುವ ಮತ್ತು ಕಳುಹಿಸುವ ಅಗತ್ಯವಿರುವ ಕಾನೂನುಬದ್ಧ ಕಾರ್ಯಗಳಿಗಾಗಿ ವ್ಯಕ್ತಿಗಳು ತ್ವರಿತ ಹಣವನ್ನು ನೀಡುವುದು, ಖಾತೆದಾರರು ನಿಧಿಯ ಮೂಲ ಅಥವಾ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗದೇ ಇರುವುದು, ನಿಷ್ಕ್ರಿಯ ಖಾತೆಯು ಇದ್ದಕ್ಕಿದ್ದಂತೆ ಹೆಚ್ಚಿನ ಪ್ರಮಾಣದ ಚಟುವಟಿಕೆಯನ್ನು ನಡೆಸುವುದು, ಅನಿರೀಕ್ಷಿತ ಅಥವಾ ಅಂತಾರಾಷ್ಟ್ರೀಯ ಸ್ಥಳಗಳಿಂದ ಲಾಗ್ ಇನ್ ಮಾಡುವುದು ಇತ್ಯಾದಿ ಮ್ಯೂಲ್ ಖಾತೆಗಳ ಪ್ರಮುಖ ಸೂಚಕಗಳಾಗಿವೆ.


ಭಾರತದಲ್ಲಿ ಸಮಸ್ಯೆಯ ವ್ಯಾಪ್ತಿ

ಸುಮಾರು 19 ಲಕ್ಷಕ್ಕೂ ಹೆಚ್ಚು ಮ್ಯೂಲ್ ಖಾತೆಗಳನ್ನು ಪತ್ತೆಹಚ್ಚಲಾಗಿದೆ ಮತ್ತು ₹ 2,038 ಕೋಟಿ ಮೌಲ್ಯದ ವಹಿವಾಟುಗಳನ್ನು ತಡೆಯಲಾಗಿದೆ ಎಂದು ನಮ್ಮ ಗೃಹ ಸಚಿವಾಲಯವು ಫೆಬ್ರವರಿ 2025 ರಲ್ಲಿ ವರದಿ ಮಾಡಿದೆ. 2023–24ರಲ್ಲಿಯೇ ಸುಮಾರು 4.5–4.6 ಲಕ್ಷ ಶಂಕಿತ ಮ್ಯೂಲ್  ಖಾತೆಗಳನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ದತ್ತಾಂಶದ ಪ್ರಕಾರ, ಸೈಬರ್ ಅಪರಾಧಿಗಳು 2024 ರಲ್ಲಿ ಅಕ್ರಮವಾಗಿ ಗಳಿಸಿದ ಹಣವನ್ನು ವರ್ಗಾಯಿಸಲು ಕರ್ನಾಟಕದಿಂದ 65,000 ಕ್ಕೂ ಹೆಚ್ಚು ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಬಳಸಿದ್ದಾರೆ.


ಮೊದಲ ಹಂತದ ಮ್ಯೂಲ್ ಖಾತೆಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶಗಳ ನಂತರ  ಕರ್ನಾಟಕ ಐದನೇ ಸ್ಥಾನದಲ್ಲಿದೆ. 2024 ರಲ್ಲಿ 50,000 ಕ್ಕೂ ಹೆಚ್ಚು ಮೊದಲ ಹಂತದ ಮ್ಯೂಲ್ ಖಾತೆಗಳನ್ನು ತೆರೆದ ದಕ್ಷಿಣದ ಏಕೈಕ ರಾಜ್ಯ ಕರ್ನಾಟಕವಾಗಿದೆ.  ದಕ್ಷಿಣದ ಇತರ ನಾಲ್ಕು ರಾಜ್ಯಗಳಲ್ಲಿ ಸರಾಸರಿ 25,000 ಖಾತೆಗಳನ್ನು ತೆರೆಯಲಾಗಿದೆ. ಸೈಬರ್ ಕ್ರೈಮ್ ವರದಿಯ ಪ್ರಕಾರ ಇತ್ತೀಚೆಗೆ  ಕೇರಳದ ಕೊಚ್ಚಿಯಲ್ಲಿ ಸುಮಾರು 2,000 ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಲಾಗಿದೆ. ಇದರ ಇನ್ನೊಂದು ವಿಶೇಷವೇನೆಂದರೆ, ಹೆಚ್ಚಿನ ಖಾತೆಗಳನ್ನು ನಿರ್ದಿಷ್ಟ ಬ್ಯಾಂಕಿನ ಶಾಖೆಗಳಲ್ಲಿ ತೆರೆಯಲಾಗಿದೆ ಎಂದು ವರದಿಯಾಗಿದೆ.


ಸರ್ಕಾರ ತೆಗೆದುಕೊಂಡ ಕ್ರಮಗಳು

ಸರ್ಕಾರವು ವಿವಿಧ ಪಾಲುದಾರರ ಸಹಯೋಗದೊಂದಿಗೆ ಮ್ಯೂಲ್ ಖಾತೆಗಳ ಸಮಸ್ಯೆಯನ್ನು ಸಕ್ರಿಯವಾಗಿ ಪರಿಹರಿಸುತ್ತಿದೆ. ಡಿಜಿಟಲ್ ಹಣಕಾಸು ವಂಚನೆಯನ್ನು ಎದುರಿಸುವ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಹಣಕಾಸು ಸೇವೆಗಳ ಇಲಾಖೆ (DFS) RBI, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C), NABARD ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ಅಧಿಕಾರಿಗಳನ್ನು ಭೇಟಿ ಮಾಡಿ ಅವರ ಸಲಹೆಗಳನ್ನು ತೆಗೆದುಕೊಂಡಿದೆ. ಅಲ್ಲದೆ, ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಜ ಸಮಯದಲ್ಲಿ ಮ್ಯೂಲ್ ಖಾತೆಗಳನ್ನು ಪತ್ತೆಹಚ್ಚಲು ಬ್ಯಾಂಕುಗಳಿಗೆ ಸಲಹೆ ನೀಡಲಾಗಿದೆ. ವಂಚನೆಯನ್ನು ಹೇಗೆ ಪತ್ತೆಹಚ್ಚುವುದು ಮತ್ತು ತಡೆಯುವುದು ಎಂಬುದರ ಕುರಿತು ತಮ್ಮ ಉದ್ಯೋಗಿಗಳಿಗೆ ತರಬೇತಿ ನೀಡಲು ಸಹ ಅವರನ್ನು ಪ್ರೋತ್ಸಾಹಿಸಲಾಗುತ್ತದೆ. 


ಗ್ರಾಹಕರು ಅನುಸರಿಸಬೇಕಾದ ಅಗತ್ಯ ಕ್ರಮಗಳು

ವಿವರಗಳನ್ನು ಹಂಚಿಕೊಳ್ಳಬೇಡಿ: ನಿಮ್ಮ ಬ್ಯಾಂಕ್ ಖಾತೆ ಅಥವಾ ಲಾಗಿನ್ ವಿವರಗಳನ್ನು ಅವರು ಉದ್ಯೋಗದಾತರು, ಗ್ರಾಹಕರು ಅಥವಾ ಅಧಿಕಾರಿಗಳು ಎಂದು ಹೇಳಿಕೊಂಡರೂ ಸಹ ಹಂಚಿಕೊಳ್ಳಬೇಡಿ.


ಉದ್ಯೋಗದ ಕೊಡುಗೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ: ಕನಿಷ್ಠ ಕೆಲಸಕ್ಕಾಗಿ ಹೆಚ್ಚಿನ ಗಳಿಕೆಯ ಭರವಸೆ ನೀಡುವ ಉದ್ಯೋಗದ ಪೋಸ್ಟಿಂಗ್‌ಗಳ ಬಗ್ಗೆ ಜಾಗರೂಕರಾಗಿರಿ. ಈ ರೀತಿಯ ಕೊಡುಗೆಗಳು ನಿಧಿ ವರ್ಗಾವಣೆ ಅಥವಾ ಹಣ ನಿರ್ವಹಣೆಯನ್ನು ಒಳಗೊಂಡಿರುತ್ತದೆ.


ಖಾತೆ ಚಟುವಟಿಕೆಯನ್ನು ನಿಯಮಿತವಾಗಿ ಪರಿಶೀಲಿಸಿ: 

ಯಾವುದೇ ಅನಧಿಕೃತ ಅಥವಾ ಅನುಮಾನಾಸ್ಪದ ವಹಿವಾಟುಗಳನ್ನು ಗುರುತಿಸಲು ನಿಮ್ಮ ಬ್ಯಾಂಕ್ ಹೇಳಿಕೆಗಳು ಮತ್ತು ಎಚ್ಚರಿಕೆಗಳನ್ನು ಪರಿಶೀಲಿಸಿ.


ವಂಚನೆ ವಿನಂತಿಗಳನ್ನು ತಕ್ಷಣವೇ ವರದಿ ಮಾಡಿ: ನಿಮ್ಮ ಖಾತೆಯನ್ನು ಬಳಸಿಕೊಂಡು ಹಣವನ್ನು ಸ್ವೀಕರಿಸಲು ಅಥವಾ ಫಾರ್ವರ್ಡ್ ಮಾಡಲು ಯಾರಾದರೂ ನಿಮ್ಮನ್ನು ಕೇಳಿದರೆ, ನಿಮ್ಮ ಬ್ಯಾಂಕ್ ಮತ್ತು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿ.


ತಿಳಿಯಿರಿ ಮತ್ತು ತಿಳಿಸಿರಿ: ಅರಿವಿನ ಅಭಿಯಾನಗಳು ಮತ್ತು ಆರ್ಥಿಕ ಸಾಕ್ಷರತೆಯ ಪ್ರಯತ್ನಗಳು ವ್ಯಕ್ತಿಗಳು ಮ್ಯೂಲ್ ಖಾತೆಗಳನ್ನು ಬಳಸುವುದರಿಂದಾಗುವ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು.


ಅಂತಿಮವಾಗಿ, ಮ್ಯೂಲ್ ಖಾತೆಯ ಚಟುವಟಿಕೆಯನ್ನು ತಡೆಗಟ್ಟಲು ವ್ಯಕ್ತಿಗಳು, ಹಣಕಾಸು ಸಂಸ್ಥೆಗಳು ಮತ್ತು ಸರಕಾರದಿಂದ ಜಾಗೃತಿ, ತಂತ್ರಜ್ಞಾನ ಮತ್ತು ನಿಯಂತ್ರಕ ಜಾಗರೂಕತೆಯನ್ನು ಸಂಯೋಜಿಸುವ ಏಕೀಕೃತ ಪ್ರಯತ್ನದ ಅಗತ್ಯವಿದೆ.




- ಗಣರಾಜ ಕೆ,

ಅರ್ಥಶಾಸ್ತ್ರ ಉಪನ್ಯಾಸಕರು,

ಎಸ್. ಡಿ. ಎಂ. ಕಾಲೇಜು, ಉಜಿರೆ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top