ನಾವಿಂದು ಬದುಕುತ್ತಿರುವುದು ಅತಿರಂಜಿತವಾದ ಮಾಧ್ಯಮ ಯುಗದಲ್ಲಿ. ಡಿಜಿಟಲ್ ಮಾಧ್ಯಮಗಳು ತಮ್ಮ ಕದಂಬ ಬಾಹುಗಳನ್ನು ವಿಸ್ತರಿಸಿದ ರೀತಿಯನ್ನು ನೋಡಿದರೆ ಸಾಕು; ಅವು ಒಕ್ಟೋಪಸ್ ಮಾದರಿಯಲ್ಲಿ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿ ಬಿಟ್ಟಿವೆ. ಎಲೆಕ್ಟ್ರಾನಿಕ್ ತಂತ್ರಜ್ಞಾನವು ಮುದ್ರಣ ಮಾಧ್ಯಮಗಳನ್ನು ಹಿಂದಿಕ್ಕಿ ವೇಗವಾಗಿ ಬೆಳೆಯುತ್ತಿರುವುದು ಅನುಕೂಲಕರ ಅನಿಸಿದರೂ, ಅಷ್ಟೇ ಆತಂಕ ಹುಟ್ಟಿಸುತ್ತಿರುವುದು ಸುಳ್ಳಲ್ಲ. ದಿನ ಬೆಳಗಾದರೆ ಜಾಗತಿಕ ರಂಗದ ಸೂಕ್ಷ್ಮಾತಿ ಸೂಕ್ಷ್ಮ ವಿದ್ಯಮಾನಗಳು ಮಾಧ್ಯಮಗಳಲ್ಲಿ ಬಟಾ ಬಯಲಾಗುತ್ತವೆ. ಭಾಷೆ, ಸಂಸ್ಕೃತಿ–ಸಂಪ್ರದಾಯಗಳನ್ನು ಉಳಿಸುವ ಅಥವಾ ಅಳಿಸುವ ದಾಯಭಾಗಿತ್ವವೂ ಈ ಮಾಧ್ಯಮಗಳ ಮೇಲಿವೆ. ಇಂತಹ ಒಂದು ಸಂಕ್ರಮಣ ಕಾಲಘಟ್ಟದಲ್ಲಿ ತುಳುನಾಡಿಗರ ಆಶಾಕಿರಣವಾಗಿ ಮಂಗಳೂರಿನಲ್ಲಿ ಹುಟ್ಟುಪಡೆದ ತುಳುಭಾಷೆಯ ಪ್ರಪ್ರಥಮ ಟಿ.ವಿ.ವಾರ್ತಾವಾಹಿನಿ 'ನಮ್ಮಕುಡ್ಲ'. ತುಳುಭಾಷೆ ಅಳಿವಿನಂಚಿಗೆ ಹೋಗುತ್ತಿದೆ ಎಂಬ ಬೇಜವಾಬ್ದಾರಿಯ ಹೇಳಿಕೆಗಳ ನಡುವೆಯೇ ತುಳು ಭಾಷೆಯಲ್ಲಿ ಮತ್ತು ಅದು ಆಡುನುಡಿಯಾಗಿರುವ ಈ ನಾಡಿನಲ್ಲಿ ಏನಿದೆ ಎಂಬುದನ್ನು ನಮ್ಮಕುಡ್ಲ ಹೇಳುತ್ತಾ ಬಂದಿದೆ. ಮುಂಬಯಿಯಲ್ಲಿ ಉದ್ಯಮಿಯಾಗಿದ್ದ ಬಿ.ಪಿ.ಕರ್ಕೇರ ಮತ್ತು ಲಕ್ಷ್ಮೀ ಕರ್ಕೇರ ದಂಪತಿಯ ಮಕ್ಕಳು- ಹರೀಶ್, ಸುರೇಶ್, ಮೋಹನ್, ಲೀಲಾಕ್ಷ ಮತ್ತು ಸಂತೋಷ್– ಈ ಪಂಚಪಾಂಡವರ ಹೊಸತೊಂದು ಸಾಹಸವೆಂಬಂತೆ 'ನಮ್ಮಕುಡ್ಲ' ಮೈತಳೆದು ಬಂದಿದೆ.
ಪ್ರಥಮ ತುಳು ಸುದ್ದಿವಾಹಿನಿ:
'ನಮ್ಮಕುಡ್ಲ' ದೊಂದಿಗೆ ನನಗಾದ ನಂಟು ತೀರಾ ಆಕಸ್ಮಿಕ. ತೊಂಭತ್ತರ ದಶಕದಲ್ಲಿ ನಾನು ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಂಗಳೂರಿನ ವಿವಿಧ ಸಂಘ ಸಂಸ್ಥೆಗಳ ನಿಕಟ ಸಂಪರ್ಕವನ್ನು ಹೊಂದಿದ್ದೆ. ದಿ.ಎಸ್.ಆರ್.ಹೆಗ್ಡೆಯವರ ಮೂಲಕ ತುಳುಕೂಟ ಕುಡ್ಲ, ದಿ.ಕೀಕಾನ ರಾಮಚಂದ್ರರ ಆಹ್ವಾನದ ಮೇರೆಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೀರ್ತಿ ಶೇಷರಾದ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಮತ್ತು ಪಂಜಿಕಲ್ ಶ್ಯಾಮರಾಯ ಆಚಾರ್ಯರ ಕರೆಯಂತೆ ಯಕ್ಷಗಾನ ಪರಿಷತ್ ನಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದೆ. ದಿ.ಕುಲ್ಯಾಡಿ ಮಾಧವ ಪೈ ಅವರು ಮಂಗಳೂರು ಕನ್ನಡ ಸಂಘದ ಅಧ್ಯಕ್ಷರಾಗಿದ್ದಾಗ ಐದಾರು ವರ್ಷ ನಾನದರ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಆಗಲೇ ಮಂಗಳೂರು ಪರಿಸರದ ವಿವಿಧ ಯಕ್ಷಗಾನ ಸಂಘಟನೆಗಳ ಜೊತೆಗೆ ಯಕ್ಷಗಾನ ಆಟ-ಕೂಟಗಳಲ್ಲಿಯೂ ಭಾಗವಹಿಸತೊಡಗಿದೆ. ಅಲ್ಲದೆ ಆಕಾಶವಾಣಿ-ದೂರದರ್ಶನ ಕಾರ್ಯ ಕ್ರಮಗಳಲ್ಲಿ ಸಾಂದರ್ಭಿಕ ಕಾರ್ಯಕ್ರಮಗಳನ್ನು ನೀಡುವುದಕ್ಕೆ ಸಾಧ್ಯವಾಯಿತು. ಇದೇ ಹಂತದಲ್ಲಿ ನಗರದಲ್ಲಿ ನಡೆಯುವ ಹಲವು ಸರಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿರೂಪಣೆಯ ಅವಕಾಶಗಳು ದೊರೆತವು. ಆಗೆಲ್ಲ ನಿರೂಪಣೆಯ ಕ್ಷೇತ್ರದಲ್ಲಿ ಈಗಿನಂತೆ ಹೊಸ ಹುಡುಗರು ಬಂದಿರಲಿಲ್ಲ. ಹಾಗಾಗಿ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಅಥವಾ ಪತ್ರಕರ್ತ ಮನೋಹರ ಪ್ರಸಾದ್ ಅನಿವಾರ್ಯವಾಗುತ್ತಿದ್ದೆವು. ಇದೇ ಹಿನ್ನಲೆಯಲ್ಲಿ ಅನ್ನು ಮಂಗಳೂರು ಅವರ ಸಿಟಿ ಕೇಬಲ್ ಎಂಬ ಕೇಬಲ್ ವಾಹಿನಿಯಲ್ಲಿ ನಾನು ವಾರ್ತಾವಾಚಕನಾಗಿಯೂ ಕಾರ್ಯನಿರ್ವಹಿಸತೊಡಗಿದೆ.
ಅದು 1999ರ ಒಂದು ಶುಭದಿನ. ನಾನು ಅಂಚೆ ಇಲಾಖೆಗೆ ರಾಜೀನಾಮೆ ನೀಡಿ ಪೆರ್ಮನ್ನೂರು (ಬಬ್ಬುಕಟ್ಟೆ) ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಸೇರಿದ್ದ ಸಂದರ್ಭ. ಕರ್ಕೇರ ಕುಟುಂಬದ ಮೋಹನ ಕರ್ಕೇರರು, ಛಾಯಾಗ್ರಾಹಕ ಜಯಂತ ಉಳ್ಳಾಲ್ ಜೊತೆ ಶಾಲೆಗೆ ಬಂದಿದ್ದರು. ನೇರವಾಗಿ ನಾನು ಪಾಠ ಮಾಡುತ್ತಿದ್ದ ತರಗತಿ ಕೋಣೆಯ ಬಾಗಿಲಲ್ಲೇ ಬಂದು ನಿಂತ ಅಪರಿಚಿತರನ್ನು ಕಂಡು ಹೊರಬಂದ ನಾನು ಮಾತನಾಡಿದಾಗ ಹೊಸ ತುಳುವಾರ್ತಾವಾಹಿನಿಯ ಸ್ಥಾಪನೆಯ ಅವರ ನಿರ್ಧಾರವನ್ನು ವಿವರಿಸಿದರು. ಹಾಗೆಯೇ ಅದರಲ್ಲಿ ಪ್ರತಿದಿನ ಅರ್ಧಗಂಟೆಯ ವಾರ್ತೆಯನ್ನು ಓದಬೇಕೆಂದು ವಿನಂತಿಸಿದರು. ನನಗೂ ಅದರಲ್ಲಿ ಆಸಕ್ತಿಯಿದ್ದುದರಿಂದ ಸಕಾರಾತ್ಮಕವಾಗಿ ಸ್ಪಂದಿಸಿದ್ದೆ. ಮುಂದೆ ನಡೆದದ್ದೆಲ್ಲಾ ಇತಿಹಾಸ.
ಆ ವರ್ಷ ಗಣೇಶ ಚತುರ್ಥಿಯ ಪುಣ್ಯದಿನ. ಶರವು ಶ್ರೀ ಮಹಾಗಣಪತಿಯ ಸನ್ನಿಧಿಯಲ್ಲಿ ಪ್ರಪ್ರಥಮವಾಗಿ ‘ನಮ್ಮಕುಡ್ಲ’ದ ಕ್ಯಾಮರಾ ಎದುರಿಸಿದ ನಾನು ಮಾತೃಭಾಷೆ ತುಳುವಿನಲ್ಲಿ ಹೊಸ ಮಾಧ್ಯಮ ಆರಂಭಿಸುವ ನಮ್ಮ ಆಶಯಗಳನ್ನು ತಿಳಿಸಿದ್ದೆ. ವಿಘ್ನೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆ,ಪೂಜೆ ಹಾಗೂ ಶರವು ಶ್ರೀ ರಾಘವೇಂದ್ರ ಶಾಸ್ತ್ರಿಗಳ ಶುಭ ಸಂದೇಶದೊಂದಿಗೆ ‘ಕಡೀರ್ದ ತುಳು ಸುದ್ದಿವಾಹಿನಿ-ನಮ್ಮಕುಡ್ಲ’ ವಿಧ್ಯುಕ್ತವಾಗಿ ಅಂದು ಉದ್ಘಾಟನೆಗೊಂಡಿತು. ಇಡಿಯ ನಮ್ಮಕುಡ್ಲ ಕೂಟ ಅದನ್ನು ಸಂಭ್ರಮಿಸಿತು. ಆ ದಿನ ರಾತ್ರಿ 8 ಗಂಟೆಗೆ ನಗರದ ಸಿ.ಸಿ. ಇಂಡಿಯಾ ಕೇಬಲ್ ಜಾಲದಲ್ಲಿ ‘ನಮ್ಮಕುಡ್ಲ’ ಮೊದಲ ವಾರ್ತಾಸಂಚಿಕೆ ಪ್ರಸಾರವಾಯಿತು.
ನಮ್ಮಕುಡ್ಲ ತುಳುವಾರ್ತೆ:
ಚೌತಿಹಬ್ಬದ ಆ ದಿನ ಮಂಗಳೂರಿನ ಸುತ್ತಮುತ್ತಲ ಗಣೇಶೋತ್ಸವಗಳ ಸುಂದರ ದೃಶ್ಯಾವಳಿಗಳನ್ನು ನಮ್ಮ ಛಾಯಾಚಿತ್ರಗ್ರಾಹಕರು ಸೆರೆಹಿಡಿದು ತಂದರು. ಅದನ್ನು ಆಧರಿಸಿ ಮೊದಲ ಒಂದೆರಡು ಸುದ್ದಿಗಳಿಗೆ ನಾನೇ ತುಳುವಿನಲ್ಲಿ ಸ್ಕ್ರಿಪ್ಟ್ ಬರೆದಿರುವುದು ಈಗಲೂ ಹಚ್ಚಹಸುರಾಗಿದೆ. ಆ ವಾರ್ತೆಯನ್ನು ಅಂದು ನಾನೇ ಓದಬೇಕಾಗಿತ್ತು. ಸಂಜೆ ಸಿಸಿಇಂಡಿಯಾ ಸ್ಟುಡಿಯೋದಲ್ಲಿ ಅದಕ್ಕೆ ಸಿದ್ದತೆಯೂ ನಡೆದಿತ್ತು. ಆದರೆ ಪ್ರತಿವರ್ಷದಂತೆ ಫರಂಗಿಪೇಟೆ ಗಣೇಶೋತ್ಸವದ ತಾಳಮದ್ದಳೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲೇ ಬೇಕಾಗಿದ್ದರಿಂದ ಮೊದಲ ದಿನದ ವಾರ್ತಾವಾಚನ ಮಾಡಲು ನನ್ನಿಂದಾಗಲಿಲ್ಲ. ಅದರ ಮರುದಿನದಿಂದ ಪ್ರತಿದಿನ ಸಂಜೆ ಶಾಲೆ ಬಿಟ್ಟ ಮೇಲೆ ಮೊದಲು ಸಿಸಿ ಇಂಡಿಯಾ, ಆಮೇಲೆ ಬೆಸೆಂಟ್ ಕಾಂಪ್ಲೆಕ್ಸ್ ನ ವಿಜ್ಹಾರ್ಡ್ ಗ್ರಾಫಿಕ್ಸ್ ಸ್ಟುಡಿಯೋದಲ್ಲಿ ವಾರ್ತೆ ಓದುವುದು ನನ್ನ ದಿನಚರಿಯಾಯಿತು.
ಮುಂದಿನ ದಿನಗಳಲ್ಲಿ ವಾರ್ತಾವಾಚಕರಾಗಿ ನಾನು ಹಾಗೂ ಕದ್ರಿ ನವನೀತ ಶೆಟ್ಟರು ಜೊತೆ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದುಂಟು. ಅದಾದ ಬಳಿಕ ಪ್ರೊ.ಎಂ.ಎಸ್.ಕೋಟ್ಯಾನ್, ಸುರೇಶ್ ಪಂಜ, ಶೀಲಾ ಕುಂದರ್, ಪ್ರಿಯಾ ಹರೀಶ್, ಪಲ್ಲವಿ ಉಳ್ಳಾಲ್, ಹನಿ ರೈ, ಸುಧಾರಾಣಿ, ಆಶಾ ಮರೋಳಿ, ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ಹೀಗೆ ವಿವಿಧ ವಾಚಕ-ವಾಚಕಿಯರು ನಮ್ಮತಂಡದಲ್ಲಿ ಸೇರಿಕೊಂಡರು. ಶ್ರೀಕಾಂತ್ ರಾವ್, ರಾಜೇಶ್ ಹಳೆಯಂಗಡಿ, ಜಯಂತ್ ಉಳ್ಳಾಲ್, ದಿವಾಕರ ಬೈಕಂಪಾಡಿ, ಲ್ಯಾನ್ಸೀ ಡಿ'ಸೋಜಾ ಅವರ ಕ್ಯಾಮರಾ ಕೈಚಳಕ , ಮೋಹನ್ ಬಿ. ಕರ್ಕೇರಾ ಅವರ ಸಾರಥ್ಯ ಮತ್ತು ಸಂಕಲನದೊಂದಿಗೆ ತುಳು ವಾರ್ತೆ ಜನ ಮನ್ನಣೆ ಗಳಿಸಿತು.
ಭಾರತೀಯ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ತುಳುಕಾರ್ಯಕ್ರಮಗಳಿಗೆ ತೀರಾ ಕಡಿಮೆ ಪ್ರಾಶಸ್ತ್ಯವಿದ್ದ ಕಾಲಘಟ್ಟದಲ್ಲಿ ತುಳುವಾರ್ತೆಯ ಮೂಲಕ ಮೊದಲ ಕ್ರಾಂತಿ ಮಾಡಿರುವುದು ನಮ್ಮಕುಡ್ಲದ ಸಾಹಸ. ಮಂಗಳೂರಿನ ವಿಝ್ಹಾರ್ಡ್ ಗ್ರಾಫಿಕ್ಸ್ ಕೇಬಲ್ ಜಾಲದ ಮೂಲಕ ಕರ್ಕೇರಾ ಸಹೋದರರ ನಿರ್ಮಾಣದಲ್ಲಿ ಆರಂಭಗೊಂಡ ಅರ್ಧ ತಾಸಿನ ‘ನಮ್ಮಕುಡ್ಲ’ತುಳುವಾರ್ತೆ ಮೊದಲು ಸಿಸಿಇಂಡಿಯಾ ಕೇಬಲ್ ವಾಹಿನಿಯಲ್ಲಿ ಪ್ರಸಾರಗೊಂಡು ಬಳಿಕ ವಿ4ಮೀಡಿಯಾದ ಸಂಯೋಜಿತ ಕೇಬಲ್ ನಿರ್ವಾಹಕರ ಸಹಕಾರದೊಂದಿಗೆ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಲಕ್ಷಾಂತರ ವೀಕ್ಷಕರನ್ನು ತಲುಪಿತು. ರಾತ್ರಿ 8ಗಂಟೆಗೆ ಪ್ರಸಾರವಾಗುತ್ತಿದ್ದ ವಾರ್ತೆ ಮಾರನೇದಿನ ಬೆಳಿಗ್ಗೆ 8 ಗಂಟೆಗೆ ಮರುಪ್ರಸಾರವಾಗುತ್ತಿತ್ತು.
ಪ್ರಾದೇಶಿಕ ಮಟ್ಟದಲ್ಲಿ ಉಪಗ್ರಹವಾಹಿನಿಗಳನ್ನು ಸರಿಗಟ್ಟುವ ಶ್ರೇಷ್ಠಗುಣ ಮಟ್ಟದ ಟಿ.ವಿ. ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರೊಂದಿಗೆ ಈ ಜಿಲ್ಲೆಯ ಕೇಬಲ್ ಜಾಲ ದೇಶಕ್ಕೆ ಮಾದರಿಯೆನಿಸಿತು.
ಸುದ್ದಿಯಾನದ ಹೆಜ್ಜೆ ಗುರುತು:
ನಮ್ಮ ಕುಡ್ಲದ ಸುದ್ದಿಯಾನದಲ್ಲಿ ಅಚ್ಚಳಿಯದ ಕೆಲವು ನೆನಪುಗಳಿವೆ. ವೈಯಕ್ತಿಕವಾಗಿ ಕಳೆದ ಎರಡೂವರೆ ದಶಕಗಳಲ್ಲಿ ನಮ್ಮ ಕುಡ್ಲದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ ಬಗೆಗೆ 2- 3 ದೃಷ್ಟಾಂತಗಳನ್ನು ನೀಡಬೇಕೆನಿಸಿದೆ. ಅದು 2000 ಇಸವಿ; ನನ್ನ ತಾಯಿ ಸ್ವರ್ಗಸ್ಥರಾದ ದಿನ. ಮಧ್ಯಾಹ್ನವೇ ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಅವರು ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದಾಗ ನಾನಿಲ್ಲಿ ಶಾಲೆಗೆ ರಜೆ ಹಾಕಿ ಹೊರಡುವ ತರಾತುರಿಯಲ್ಲಿದ್ದೆ. ಆಗ ನಮ್ಮ ಕುಡ್ಲದಿಂದ ಕರೆ ಬಂತು; ಆ ದಿನದ ನ್ಯೂಸ್ ಮಾಡಿ ಓದಲು ಯಾರೂ ಇಲ್ಲವೆಂದು! ಗತ್ಯಂತರವಿಲ್ಲದೆ ಸ್ಟುಡಿಯೋದಲ್ಲಿ ಕುಳಿತು ದಿನದ ಏಳೆಂಟು ಸುದ್ದಿಗಳನ್ನು ಬರೆದು ಓದಿ ಮುಗಿಸಿದಾಗ ಸಾಯಂಕಾಲ 7 ಗಂಟೆಯಾಗಿತ್ತು. ಅದಾಗಿ ನಾನು ಪುತ್ತೂರು ತಲಪುವಾಗ ರಾತ್ರಿ ಎಂಟೂವರೆ. ಅಷ್ಟೊತ್ತಿಗೆ ನನ್ನ ಅಮ್ಮ ಇಹಲೋಕ ತ್ಯಜಿಸಿದ್ದರು. ಕೊನೆಯ ಕ್ಷಣದಲ್ಲಿ ಅವರ ಮುಖ ನೋಡಲಿಕ್ಕಾಗದ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ.
ಇನ್ನೊಂದು ಘಟನೆ ಬಾಬ್ರಿ ಮಸೀದಿ ಗಲಭೆಯ ಸಂದರ್ಭ! ಅವಿಭಜಿತ ದ.ಕ. ಜಿಲ್ಲೆ ಕೋಮು ಗಲಭೆಯ ದಳ್ಳುರಿಯಯಲ್ಲಿ ಬೇಯುತ್ತಿದ್ದ ಕಾಲ. ದಿನಾ ಗಲಭೆ,ಪ್ರಾಣ ಹಾನಿಯಾದ ಸುದ್ದಿಗಳೇ ಬರುತ್ತಿದ್ದವು. ಜಿಲ್ಲೆಯಾದ್ಯಂತ ಹತ್ತಿಪ್ಪತ್ತು ದಿನ ಕರ್ಫ್ಯೂ ಹೇರಲಾಗಿತ್ತು. ಒಂದು ನರಪಿಳ್ಳೆಯೂ ರಸ್ತೆ ಇಳಿಯದಿದ್ದ ತುರ್ತು ಪರಿಸ್ಥಿತಿ! ವಾಹನ ಸಂಚಾರವಿಲ್ಲದ ಕಾರಣ ನಮ್ಮ ಕುಡ್ಲದ ಸುದ್ದಿ ಓದಲು ಯಾರೂ ಇಲ್ಲವೆಂಬಂತಾಗಿತ್ತು. ಆ ಸಮಯದಲ್ಲಿ ನಾನು ಧೈರ್ಯ ತಾಳಿ ಪ್ರತಿದಿನ ಸಂಜೆ ಬೆಸೆಂಟ್ ಕಾಂಪ್ಲೆಕ್ಸ್ ಸ್ಟುಡಿಯೋಗೆ ಹೋಗಿ ಸುದ್ದಿ ಬರೆದು, ಅದನ್ನು ಓದಿ ಆ ಕತ್ತಲಲ್ಲಿ ಪ್ರಾಣ ಕೈಯಲ್ಲಿ ಹಿಡಿದು ನಡೆದುಕೊಂಡೇ ಮನೆಗೆ ಬರುತ್ತಿದ್ದೆ.
ಇನ್ನೊಮ್ಮೆ ಮಳೆಗಾಲದ ಒಂದು ರಾತ್ರಿ ನೇತ್ರಾವತಿ ಸೇತುವೆಯಲ್ಲಿ ಕೇರಳಕ್ಕೆ ಹೋಗುವ ರೈಲು ಬೋಗಿಯೊಂದು ಹಳಿ ತಪ್ಪಿ ಅಪಘಾತಕ್ಕೊಳಗಾಗಿತ್ತು. ಸ್ಥಳೀಯರು ಅಗ್ನಿಶಾಮಕ ದಳದೊಂದಿಗೆ ಪ್ರಯಾಣಿಕರನ್ನು ರಕ್ಷಿಸುತ್ತಿದ್ದ ದೃಶ್ಯಗಳನ್ನು ಚಿತ್ರೀಕರಿಸಿದ್ದ ನಮ್ಮ ಕುಡ್ಲ ವಾರ್ತಾಮಾಣಿ ಲ್ಯಾನ್ಸಿ ಡಿ'ಸೋಜಾ ಮಧ್ಯರಾತ್ರಿ ಕದ್ರಿ ಕಂಬಳದ ನನ್ನ ಮನೆಗೆ ಬಂದು ಬಾಗಿಲು ತಟ್ಟಿದ್ದು ನೆನಪಾಗುತ್ತದೆ! ಆಗ ಗಾಢ ನಿದ್ದೆಯಲ್ಲಿದ್ದವ ಎದ್ದು ಮನೆಯ ಮುಂದಿನ ಸ್ಟ್ರೀಟ್ ಲೈಟ್ (ರಸ್ತೆ ದೀಪ) ಬೆಳಕಿನಲ್ಲಿ ಕ್ಯಾಮರಾಕ್ಕೆ ಮುಖ ಕೊಟ್ಟು ನಾನು ಯಾವುದೇ ಸ್ಕ್ರಿಪ್ಟ್ ಇಲ್ಲದೆ ಆ ಸುದ್ದಿಯನ್ನು ವರದಿ ಮಾಡಿದ್ದೆ ! ಅದು ಮರುದಿನ ಬೆಳಗಿನ ವಾರ್ತೆಯಲ್ಲಿ ಪ್ರಸಾರವಾಗಿದ್ದನ್ನು ನೋಡಿದ ಜನ ದಿಗ್ಭ್ರಾಂತರಾಗಿದ್ದರು. ಇಂತಹ ಅನೇಕ ಘಟನೆಗಳು ನಮ್ಮ ಸುದ್ದಿ ಯಾನದಲ್ಲಿ ದಾಖಲೆಯಾಗದೆ ಉಳಿದ ಸತ್ಯಗಳು! ಅಚ್ಚಳಿಯದ ಹೆಜ್ಜೆ ಗುರುತು.
ಐತಾರೊಡ್ದು ಐತಾರ:
ಇಷ್ಟು ವರ್ಷಗಳಲ್ಲಿ ದೈನಂದಿನ ವಾರ್ತೆಗಳಲ್ಲದೆ, ‘ಐತಾರೊಡ್ದು ಐತಾರ’ ಎಂಬ ಸಾಪ್ತಾಹಿಕ ಸುದ್ದಿಗೊಂಚಲಿನ ಮೂಲಕ ತುಳುಭಾಷೆ - ಸಾಹಿತ್ಯ ಮತ್ತು ಸಂಸ್ಕೃತಿಗೆ ನಮ್ಮಕುಡ್ಲ ನೀಡಿದ ಕೊಡುಗೆ ಅಪಾರ. ಹೊಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಜರಗಿದ ನಮ್ಮ ನಿರ್ಮಾಪಕರು, ತಂತ್ರಜ್ಞರು ಮತ್ತು ಛಾಯಾಗ್ರಾಹಕರ ಅನೌಪಚಾರಿಕ ಸಭೆಯಲ್ಲಿ ವಾರದ ವಾರ್ತಾ ಚಿತ್ರಕ್ಕೆ ಒದಗಿ ಬಂದ ಅಪ್ಯಾಯಮಾನ ತುಳು ಹೆಸರು 'ಐತಾರೊಡ್ದು ಐತಾರ' ಈಗಲೂ ಜನರ ಬಾಯಲ್ಲಿ ನಲಿಯಲು ಕಾರಣವಾಗಿರುವುದು, ದಿನನಿತ್ಯದ ವಾರ್ತೆಗಳಿಗೆ ಭಿನ್ನವಾಗಿ ಅದರೊಳಗೆ ನಾವು ಕಟ್ಟಿಕೊಡುತ್ತಿದ್ದ ವೈವಿಧ್ಯಮಯ ಕಾರ್ಯಕ್ರಮಗಳು.
ದೂರದರ್ಶನದ ಸ್ವತಂತ್ರ ವಾಹಿನಿಯೊಂದು ದಿನವಿಡೀ ನೀಡಬಹುದಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಂದೇ ಸಂಚಿಕೆಯಲ್ಲಿ ಎರಡು-ಎರಡೂವರೆ ಗಂಟೆಗಳ ಅವಧಿಗೆ ಸಂಕಲಿಸಿ ವಾರಕ್ಕೊಂದರಂತೆ ಪ್ರತೀ ಆದಿತ್ಯವಾರ ಮೂಡಿ ಬರುತ್ತಿದ್ದ 'ಐತಾರೊಡ್ದು ಐತಾರ'ವನ್ನು ವೀಕ್ಷಕರು ಕಾತರತೆಯಿಂದ ಕಾಯುತ್ತಿದ್ದುದನ್ನು ಅವರ ಮಾತುಗಳಲ್ಲೇ ಕೇಳಿದ್ದೇವೆ. ನಾನು ಮತ್ತು ನವನೀತ ಶೆಟ್ಟರು ಜೊತೆಯಲ್ಲಿ ಕುಳಿತು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಒಂದು ರಾತ್ರಿಯಿಡೀ ಕರ್ಕೇರರ ಮನೆಯಲ್ಲೇ ಚಿತ್ರೀಕರಣವಾಗುತ್ತಿತ್ತು. ನಮ್ಮತುಳುವೆರ್, ಒಂತೆ ತೆಲಿಪುಗ, ವಾರದ ಕಬಿತೆ, ಸಬಿ ಸವಾಲ್, ಗಾದೆ-ನಂಬೊಳಿಗೆ, ಸುದ್ದಿಗ್ ಗುದ್ದು, ಓಲೆ ನಿಕ್ಲೆನ- ಉದರ್ಮೆ ಎಂಕ್ಲೆನ ಮೊದಲಾದ ವಿಭಾಗಗಳನ್ನು ಸಂಬಂಧಿತ ವಿಡೀಯೋ ಚಿತ್ರಿಕೆಯೊಂದಿಗೆ ಸಂಯೋಜಿಸಿ ಪ್ರಸಾರ ಮಾಡುತ್ತಿದ್ದ ಈ ಕಾರ್ಯಕ್ರದಲ್ಲಿ ವೀಕ್ಷಕರಿಗೆ ನೇರವಾಗಿ ಭಾಗವಹಿಸುವ ಅವಕಾಶಗಳನ್ನೂ ನೀಡಲಾಗುತ್ತಿತ್ತು. ವೀಕ್ಷಕರಿಂದ ತುಳು ಭಾಷೆಗಳಲ್ಲಿ ತುಳು ಕತೆ, ಕವಿತೆ,ಗಾದೆ, ಒಗಟು, ಪತ್ರಗಳು ನಮ್ಮಕುಡ್ಲ ಕಚೇರಿಗೆ ಹರಿದು ಬರತೊಡಗಿದವು. ಅವುಗಳನ್ನು ಪ್ರಸಾರಕ್ಕೆ ಅಳವಡಿಸಿ, ಪತ್ರೋತ್ತರದ ಮೂಲಕ ಸ್ಪಂದಿಸುತ್ತಿದ್ದೆವು. ಆ ಮೂಲಕ ಕರಾವಳಿಯುದ್ದಕ್ಕೂ ವಿವಿಧ ಪ್ರತಿಭೆಗಳನ್ನು ಗುರುತಿಸಿ ಅವರ ಸೃಜನಶೀಲತೆಗೆ ವೇದಿಕೆ ನೀಡಲಾಯಿತು.
ವಾರದಿಂದ ವಾರಕ್ಕೆ ಹೊಸ ಹೊಸ ಪರಿಕಲ್ಪನೆಯ ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ತುಳು ಸಂಸ್ಕೃತಿಯ ಆಳ-ಹರವುಗಳನ್ನಲ್ಲದೆ ಕ್ಷೇತ್ರದರ್ಶನದಲ್ಲಿ ವಿವಿಧ ಪುಣ್ಯಕ್ಷೇತ್ರಗಳನ್ನು ಪರಿಚಯಿಸಿದ್ದು ನಮ್ಮಕುಡ್ಲ ವಾಹಿನಿಯ ಹೆಚ್ಚುಗಾರಿಕೆ ಎನ್ನಬಹುದು. ಆ ನಿಟ್ಟಿನಲ್ಲಿ ಯಕ್ಷಲೋಕ, ರಂಗಸ್ಥಳ, ಕಾವ್ಯವಾಚನ, ಬೊಲ್ಪು, ಕ್ಷೇತ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ವೀಕ್ಷಕರ ಮನಗೆದ್ದಿವೆ. ತಿರುಪತಿ, ಆದಿಚುಂಚನಗಿರಿ, ರಾಮಚಂದ್ರಾಪುರ, ಆನೆಗುಡ್ಡೆ, ಉಡುಪಿ, ಹೊರನಾಡು, ಶೃಂಗೇರಿ,ತಲಕಾವೇರಿ, ಕೊಲ್ಲೂರು, ಕಟೀಲು, ಸುಬ್ರಹ್ಮಣ್ಯ, ಧರ್ಮಸ್ಥಳ, ಸೌತಡ್ಕ,ಕದ್ರಿ, ಮಂಗಳಾದೇವಿ, ಕೋಟೇಶ್ವರ, ಕಡಿಯಾಳಿ, ಉರ್ವ ಬೋಳೂರು, ಕುದ್ರೋಳಿ, ಒಡಿಯೂರು ಇತ್ಯಾದಿ ಪುಣ್ಯಕ್ಷೇತ್ರಗಳ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ದೂರದರ್ಶನದ ವೀಕ್ಷಕರಿಗೆ ಉಣಬಡಿಸಿದುದು ಸ್ಮರಣೀಯ. ಇದರಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಸ್ವತಃ ಸಂದರ್ಶಿಸಿ ಅಲ್ಲಿಯ ವಿಶೇಷತೆಗಳನ್ನು ಸ್ವಯಂ ನಿರೂಪಿಸಿದ ಧನ್ಯತೆ ನನ್ನದು. ಇದರೊಂದಿಗೆ ಹಲವು ಮಹನೀಯರ, ಸಂತರ,ಸಾಹಿತಿ-ಕಲಾವಿದರ ಸಂದರ್ಶನಗಳನ್ನು ನಡೆಸಿರುವುದು ಉಲ್ಲೇಖನಿಯ. ಇದರೊಂದಿಗೆ ಎಲ್ಲಾ ವಯೋಮಾನದ ವೀಕ್ಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ,ಚಿತ್ರೀಕರಿಸಿ,ಪ್ರಾಯೋಜಕರ ಮೂಲಕ ಬಹುಮಾನಗಳನ್ನು ನೀಡಿ ಮಾಧ್ಯಮದ ಹೊಸ ಸಾಧ್ಯತೆಯನ್ನು ಜನತೆಗೆ ಪರಿಚಯಿಸಿದೆ. ಅಲ್ಲದೆ ವಿವಿಧ ಬಗೆಯ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ. ನಮ್ಮಕುಡ್ಲದ ಈ ಮಾದರಿಗಳನ್ನು ಕೆಲವು ಉಪಗ್ರಹವಾಹಿನಿಗಳೂ ಆ ಮೇಲೆ ಅಳವಡಿಸಿಕೊಂಡಿರುವುದನ್ನು ಪ್ರಜ್ಞಾವಂತರು ಗಮಿಸಿದ್ದಾರೆ ಎಂಬುವುದು ನಮ್ಮ ಹೆಮ್ಮೆ.
ನೇರಪ್ರಸಾರ:
ನಮ್ಮಕುಡ್ಲದ ಜನಪ್ರಿಯತೆಯ ಮತ್ತೊಂದು ಮೈಲಿಗಲ್ಲು ಅದರ ನೇರಪ್ರಸಾರ ಕಾರ್ಯಕ್ರಮಗಳು. ಮಂಗಳೂರಿನ ಕೇಂದ್ರ ಮೈದಾನದಲ್ಲಿ ಜರಗುವ ಸ್ವಾತಂತ್ರ್ಯೋತ್ಸವ, ವಿಶ್ವ ಹಿಂದೂ ಪರಿಷತ್ತಿನ ಗಣೇಶೋತ್ಸವ ಮತ್ತು ಕುದ್ರೋಳಿಯ ನವರಾತ್ರಿ ಉತ್ಸವಗಳನ್ನು ಸ್ಥಳದಿಂದಲೇ ಚಿತ್ರೀಕರಿಸಿ ಪ್ರಸಾರ ಮಾಡುವ ಮೂಲಕ ನಮ್ಮಕುಡ್ಲವು ಕೇಬಲ್ ಜಾಲದಲ್ಲಿ ನೇರಪ್ರಸಾರದ ಪರಂಪರೆಯನ್ನು ಆರಂಭಿಸಿತು. ಮೊದಲಿಗೆ ಕೇವಲ ಹಿನ್ನಲೆ ಸಂಗೀತದ ಮೂಲಕ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಕ್ಕೆ ವೀಕ್ಷಕ ವಿವರಣೆ ನೀಡಿದರೆ ಹೇಗೆ..? ಎಂಬ ಆಲೋಚನೆಯನ್ನು ಹರೀಶ್ ಕರ್ಕೇರ ಮತ್ತು ಮೋಹನ್ ಕರ್ಕೇರರೊಂದಿಗೆ ನಾನು ಹಂಚಿಕೊಂಡಾಗ ಅವರಿಗೂ ಹೌದೆನ್ನಿಸಿತು. ಅದರಂತೆ 1999ರಲ್ಲಿ ಮಂಗಳೂರು ಗಣೇಶ ವಿಸರ್ಜನಾ ಮೆರವಣಿಗೆಯ ನೇರಪ್ರಸಾರಕ್ಕೆ ನಾನು ಹಿನ್ನಲೆ ಧ್ವನಿಯಾದೆ. ಸಿ.ಸಿ.ಇಂಡಿಯಾ ಸ್ಟುಡಿಯೋದಲ್ಲಿ ಕುಳಿತು ಟಿ.ವಿ.ಪರದೆಯ ಮೇಲೆ ಕಾಣಿಸುವ ದೃಶ್ಯಾವಳಿಗೆ ತಕ್ಕಂತೆ ಕೇವಲ ಧ್ವನಿ ಮಾತ್ರದಿಂದ ಕೊಡುತ್ತಿದ್ದ ವೀಕ್ಷಕ ವಿವರಣೆಯನ್ನು ಜನ ಸ್ವೀಕರಿಸಿದರು. ಅದೇ ವರ್ಷ ಮಂಗಳೂರು ದಸರಾ ಮತ್ತು ರಥಬೀದಿಯ ಶಾರದೋತ್ಸವದೊಂದಿಗೆ ಅದು ಮುಂದುವರೆಯಿತು. ಪ್ರೊ.ಅಮೃತ ಸೋಮೇಶ್ವರ, ಡಾ.ಬಿ.ಎ.ವಿವೇಕ ರೈ, ಡಾ.ನಾ.ದಾಮೋದರ ಶೆಟ್ಟಿ ಮೊದಲಾದ ಸಾಹಿತಿಗಳು ಅದನ್ನು ಮೆಚ್ಚಿ ನನ್ನನ್ನು ಅಭಿನಂದಿಸಿದರು. ಈ ಬಗ್ಗೆ ಅಮೃತರು ಬರೆದ ಒಂದೆರಡು ಪೋಸ್ಟು ಕಾರ್ಡ್ ಗಳು ಈಗಲೂ ನನ್ನೊಂದಿಗಿವೆ. ಹಾಗೆ ಆರಂಭವಾದ ನೇರಪ್ರಸಾರಗಳು ಆ ಬಳಿಕ ಸುಸಜ್ಜಿತ ಸ್ಟುಡಿಯೋ ಸೆಟ್ಟಿಂಗ್ ನಲ್ಲಿ ಟಿ.ವಿ.ಪರದೆಯ ಮೇಲೆ ನಿರೂಪಕರೂ ಕಾಣಿಸಿಕೊಳ್ಳುವಂತೆ ಬಿತ್ತರಗೊಂಡು ತಡರಾತ್ರಿಯವರೆಗೂ ಮುಂದುವರಿಯುತ್ತಿತ್ತು. ಶೋಭಾಯಾತ್ರೆಯ ಕೊನೆಯಲ್ಲಿ ಮುಂಜಾನೆ ಕ್ಷೇತ್ರ ಪುಷ್ಕರಣಿಯಲ್ಲಿ ನಡೆಯುವ ವಿಸರ್ಜನಾ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳಲು ವೀಕ್ಷಕರು ರಾತ್ರಿಯಿಡೀ ಟಿವಿ ಮುಂಭಾಗದಲ್ಲಿ ಜಾಗರಣೆ ಕುಳಿತುಕೊಳ್ಳುವಂತೆ ಮಾಡಿರುವುದು ಒಂದು ವಿಸ್ಮಯಕಾರೀ ವಿದ್ಯಮಾನ.
ಅವಿಭಜಿತ ದ.ಕ.ಜಿಲ್ಲೆಯ ವಿವಿಧ ಉತ್ಸವಗಳು ಮಾತ್ರವಲ್ಲದೆ ಧರ್ಮಸ್ಥಳ ಮಹಾನಡಾವಳಿ, ಮಹಾಮಸ್ತಾಭಿಷೇಕ, ಮಂಗಳಾದೇವಿ ರಥೋತ್ಸವ, ಕದ್ರಿ ಜಾತ್ರೆ, ಉಡುಪಿಯ ಪರ್ಯಾಯ, ಶ್ರೀಕೃಷ್ಣ ಜನ್ಮೋತ್ಸವ, ವಿಶ್ವ ತುಳು ಸಮ್ಮೇಳನ, ಅ.ಭಾ.ಸಾಹಿತ್ಯ ಸಮ್ಮೇಳನ, ಆಳ್ವಾಸ್ ವಿರಾಸತ್ - ನುಡಿಸಿರಿ, ದೀಪಾವಳಿ, ಜಾಂಬೂರಿ, ವಿವಿಧ ಕ್ಷೇತ್ರಗಳ ಬ್ರಹ್ಮಕಲಶ, ವಾರ್ಷಿಕ ಜಾತ್ರೆ, ಕೋಲ - ನೇಮ, ನಾಗಮಂಡಲ, ಸಭೆ-ಸಮಾರಂಭಗಳು ಹಿಗೆ ಕಾರವಾರದಿಂದ ಕಾಸರಗೋಡಿನವರೆಗೆ ವರ್ಷಂಪ್ರತಿ ನೂರಾರು ಕಾರ್ಯಕ್ರಮಗಳನ್ನು ನೇರಪ್ರಸಾರದ ಮೂಲಕ ಲಕ್ಷಾಂತರ ವೀಕ್ಷಕರು ಟಿವಿ ಪರದೆಯ ಮೇಲೆ ವೀಕ್ಷಿಸುವಂತೆ ಮಾಡಿರುವುದು ನಮ್ಮಕುಡ್ಲ ಹುಟ್ಟುಹಾಕಿದ ಹೊಸ ಸಂಸ್ಕೃತಿ.
ಮುಂದುವರೆದ ತಂತ್ರಜ್ಞಾನ ಸೌಲಭ್ಯದಿಂದಾಗಿ ಹೊರನಾಡುಗಳಲ್ಲಿ, ಬೆಂಗಳೂರು, ಮುಂಬೈ ಮತ್ತು ಗಲ್ಫ್ ರಾಷ್ಟ್ರಗಳಿಂದಲೂ ಯೂಟ್ಯೂಬ್ ವೆಬ್ ಸೈಟ್ ಗಳ ಮೂಲಕ ಅಂತರ್ಜಾಲದಲ್ಲಿ ನೇರಪ್ರಸಾರವನ್ನು ಸಾಧ್ಯವಾಗಿಸಿದುದು ಮಾಧ್ಯಮ ಬೆಳವಣಿಗೆಯ ಮತ್ತೊಂದು ಮಜಲು. ನುರಿತ ಛಾಯಾಗ್ರಾಹಕರ ತಂಡ, ವ್ಯವಸ್ಥಿತ ಸಂಘಟನೆ, ವೃತ್ತಿಪರ ತಾಂತ್ರಿಕ ಕೌಶಲ್ಯ, ವಿದ್ವತ್ಪೂರ್ಣ ನಿರೂಪಣೆ, ಅತ್ಯುತ್ತಮ ಗುಣಮಟ್ಟಗಳಿಂದಾಗಿ ನಮ್ಮಕುಡ್ಲದ ನೇರಪ್ರಸಾರವೆಂದರೆ ಜನ ಮುಗಿ ಬೀಳುತ್ತಾರೆ. ಇದರಿಂದ ಜಿಲ್ಲೆಯ ಕೇಬಲ್ ಜಾಲದ ವಿಸ್ತರಣೆ ಮತ್ತು ಕ್ಷೇತ್ರ ವ್ಯಾಪ್ತಿಯೂ ಸಾಧ್ಯವಾಗಿರುವುದಲ್ಲದೆ ಜಗತ್ತಿನಾದ್ಯಂತ ದೊಡ್ಡದೊಂದು ವೀಕ್ಷಕ ಸಮುದಾಯ ಸೃಷ್ಟಿಯಾದಂತಾಗಿದೆ.
ಗೂಡುದೀಪ ಪಂಥ:
ತುಳುನಾಡಿನಲ್ಲಿ ಮರೆಯಾಗುತ್ತಿರುವ ಪ್ರಾಚೀನ ಪರಂಪರೆ ಮತ್ತು ಸಂಪ್ರದಾಯಗಳಿಗೆ ಮತ್ತೆ ನೀರೆರೆದು ಪೋಷಿಸುವ ಸಾಹಸಕ್ಕೂ ನಮ್ಮ ಕುಡ್ಲ ಕೈ ಹಾಕಿದೆ. ಸಂಸ್ಥೆಯ ಆಶ್ರಯದಲ್ಲಿ ವರ್ಷಂಪ್ರತಿ ಜರಗುವ 'ಗೂಡುದೀಪ' ಇದಕ್ಕೆ ಸಾಕ್ಷಿ. ದೀಪಾವಳಿಯ ಸಂದರ್ಭದಲ್ಲಿ ಆಕಾಶ ಬುಟ್ಟಿಯನ್ನು ಹಚ್ಚಿಟ್ಟು ಬಲಿಯೇಂದ್ರನನ್ನು ಇಡಿರ್ಗೊಳ್ಳುವ ಪರಿಪಾಠ ಹಿಂದೆ ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಆದರೆ ಈಗಿನ ನಗರೀಕರಣದ ವ್ಯವಸ್ಥೆಯಿಂದಾಗಿ ನಮ್ಮ ಮೂಲ ಸಂಸ್ಕೃತಿ ಮತ್ತು ಆಚರಣೆಗಳು ಕಾಲದ ಪ್ರವಾಹದಲ್ಲಿ ಕೊಚ್ಚಿ ಹೋಗಬೇಕಾದರೆ 'ಗೂಡು ದೀಪ ಸಂಸ್ಕೃತಿ' ಗೆ ಮಂಗಳೂರು ಮಹಾನಗರದಲ್ಲಿ ನಮ್ಮ ಕುಡ್ಲ ಮರುಹುಟ್ಟು ನೀಡಿತು.
ಮೊದಲಿಗೆ ನಗರದ ಲಾನ್ಸ್ ವೇ ಹೋಟೆಲಿನಲ್ಲಿ 'ಗೂಡುದೀಪ ಸ್ಪರ್ಧೆ' ನಡೆದಾಗ ಕೇವಲ 36 ಗೂಡುದೀಪಗಳು ಬಂದಿದ್ದವು, ಬಳಿಕ ಈ ಸ್ಪರ್ಧೆಯನ್ನು ಕುದ್ರೋಳಿಗೆ ಸ್ಥಳಾಂತರಿಸಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಪೂರ್ಣ ಸಹಕಾರದೊಂದಿಗೆ ಅಲ್ಲೇ ಪ್ರತಿವರ್ಷ ನಡೆಸುವಂತಾಯಿತು. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಹೀಗೆ ಮೂರು ವಿಭಾಗಗಳಲ್ಲಿ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ವಿವಿಧ ಮಾದರಿಯ ಗೂಡುದೀಪಗಳು ಸ್ಪರ್ಧಾತ್ಮಕವಾಗಿ ಭಾಗವಹಿಸುತ್ತುರುವುದು 'ನಮ್ಮ ಕುಡ್ಲ' ದ ವಿಶ್ವಾಸಾರ್ಹತೆಯ ಪ್ರತೀಕ.
ನಗರದಲ್ಲಿ ಹಿತ್ತಲು ಸಂಸ್ಕೃತಿ ಮರೆಯಾಗುತ್ತಿದ್ದಂತೆ ದೊಡ್ಡ ದೊಡ್ಡ ಬಡಾವಣೆಗಳು ಎದ್ದು ನಿಂತು, ಕ್ರಮೇಣ ಕಣ್ಮರೆಯಾಗತೊಡಗಿದ ಗೂಡುದೀಪ ರಚನೆಯು ಪುನರಾರಂಭಗೊಂಡು ಮತ್ತೆ ಹೊಸ ರೂಪಿನಿಂದ ರಂಜಿಸುವಂತೆ ಮಾಡಿರುವುದು ಈ ಸ್ಪರ್ಧೆಯ ಧನಾಂಶ. ವಿಜೇತರಿಗೆ ಮೂರು ವಿಭಾಗಗಳಲ್ಲೂ ಬಂಗಾರದ ಪದಕ ಸೇರಿದಂತೆ ನೂರಾರು ಆಕರ್ಷಕ ಬಹುಮಾನಗಳನ್ನು ಹಾಗೂ ಸಿಹಿತಿಂಡಿ ಪೊಟ್ಟಣಗಳನ್ನು ನೀಡಲು ಪ್ರಾಯೋಜಕರು ಮುಂದೆ ಬರುತ್ತಿದ್ದಾರೆ. ಇದರೊಂದಿಗೆ ತುಳುನಾಡಿನ ವಿಶೇಷ ಸಾಧಕರಿಗೆ 'ನಮ್ಮ ತುಳುವೆರ್' ಮತ್ತು 'ನಮ್ಮ ಕುಡ್ಲ' ಪ್ರಶಸ್ತಿಯನ್ನು ನೀಡುವ ಮೂಲಕ ಮಾಧ್ಯಮಲೋಕದಲ್ಲಿ ತನ್ನ ಸ್ಥಾನವನ್ನು ಅದು ಗಟ್ಟಿಗೊಳಿಸಿಕೊಂಡಿದೆ.
ನಮ್ಮ ಕುಡ್ಲ 24×7:
ಮಾಧ್ಯಮ ಜಗತ್ತು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿರುವ ಸಂದರ್ಭದಲ್ಲೇ ನಮ್ಮ ಕುಡ್ಲ ಮತ್ತೊಂದು ಘನವಾದ ಹೆಜ್ಜೆಯರಿಸಿದೆ. ಪೂರ್ಣಪ್ರಮಾಣದ ದೃಶ್ಯವಾಹಿನಿಯಾಗಿ ಪದಾರ್ಪಣೆ ಮಾಡಿರುವುದೇ ಆ ಸಾಧನೆ. ಪ್ರಸ್ತುತ ನಮ್ಮ ಕುಡ್ಲ ಸುದ್ಧಿವಾಹಿನಿಯ ಸಾರಥ್ಯ ವಹಿಸಿಕೊಂಡಿರುವ ಲೀಲಾಕ್ಷ ಬಿ. ಕರ್ಕೇರಾ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಒಂದು ರಾಷ್ಟ್ರೀಯ ವಾಹಿನಿಗೆ ಸರಿಗಟ್ಟುವಂತೆ ದಿನದ 24 ಗಂಟೆಯೂ ಅದು ತನ್ನ ಪ್ರಸಾರ ಕಾರ್ಯವನ್ನು ನೆರವೇರಿಸುತ್ತಿದೆ. ದಿನದಲ್ಲಿ ನಾಲ್ಕು ಬಾರಿ ಕನ್ನಡ ವಾರ್ತೆಗಳು, ಎರಡು ಬಾರಿ ತುಳು ಸುದ್ದಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆ, ವಿಶ್ಲೇಷಣೆ ಗಳ ಮೂಲಕ ಪ್ರಾದೇಶಿಕ ಮಟ್ಟವನ್ನು ಮೀರಿ ಬೆಳೆದಿದೆ ಎನ್ನುವುದು ಹೆಮ್ಮೆಪಡುವ ಸಂಗತಿ. ಇದೀಗ ಮಂಗಳೂರಿನ ಹೃದಯ ಭಾಗದ ಹಂಪನಕಟ್ಟೆ ಕ್ಲಾಸಿಕ್ ಆರ್ಕೇಡ್ ನಲ್ಲಿ ಸುಸಜ್ಜಿತವಾದ ಸ್ವಂತ ಸ್ಟುಡಿಯೋವನ್ನು ಹೊಂದಿದೆ.
ದೈನಂದಿನ ಸುದ್ದಿ ಸಮಾಚಾರಗಳ ಜೊತೆಗೆ ಕಲೆ, ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ನೆಲೆಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡುತ್ತಿರುವುದು ನಮ್ಮ ಕುಡ್ಲದ ವೈಶಿಷ್ಟ್ಯ. ನೇರ ಸಂವಹನ - ಸಂದರ್ಶನಗಳ ಮೂಲಕ ವೀಕ್ಷಕರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮಗಳು ಸ್ಟುಡಿಯೋದಿಂದಲೇ ನೇರ ಪ್ರಸಾರಗೊಳ್ಳುತ್ತಿವೆ. ಯುವ ನಿರೂಪಕರು, ನುರಿತ ಸಂಕಲನಕಾರರು ಹಾಗೂ ಆಯಾಯ ವಿಭಾಗಗಳಲ್ಲಿ ಪಳಗಿದ ಸಿಬ್ಬಂದಿ ವರ್ಗ 'ನಮ್ಮ ಕುಡ್ಲ ಕೂಟ' ವನ್ನು ಬಲಪಡಿಸಿದೆ. ಕಳೆದ 25 ವರ್ಷಗಳಿಂದ ಅದರ ಭಾಗವಾಗಿ, ಈಗಲೂ ಒಂದಷ್ಟು ಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ನಮ್ಮ ವೀಕ್ಷಕರನ್ನು ತಲುಪುತ್ತಿರುವುದು ವೈಯಕ್ತಿಕವಾಗಿ ನನಗೂ ಧನ್ಯತೆಯನ್ನು ತಂದಿದೆ.
- ಭಾಸ್ಕರ ರೈ ಕುಕ್ಕುವಳ್ಳಿ
'ವಿದ್ಯಾ' ಕದ್ರಿ ಕಂಬಳ ರಸ್ತೆ, ಬಿಜೈ ಮಂಗಳೂರು - 575004
ದೂರವಾಣಿ-9449016616,8660935087
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ