ಉಜಿರೆ: ವಿವಿಧ ಹವ್ಯಾಸಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಹಾಬಿ ಸರ್ಕಲ್ ವತಿಯಿಂದ ಎರಡು ದಿನಗಳ ಕಾರ್ಯಾಗಾರ ನೆರವೇರಿತು. ಶನಿವಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಡಾ ಬಿ ಎ ಕುಮಾರ ಹೆಗ್ಡೆ ರವರು ಮಾತನಾಡಿ, ವ್ಯಕ್ತಿತ್ವ ವಿಕಸನದ ಕುರಿತು ಕಾರ್ಯಗಾರವನ್ನು ನಡೆಸಿಕೊಟ್ಟರು. ಪ್ರಚಲಿತ ವಿದ್ಯಮಾನಗಳ ಅರಿವಿದ್ದರೆ ಮಾತ್ರ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ನಮ್ಮ ಜೀವನದಲ್ಲಿ ಒಂದು ಆದರ್ಶವಿರಬೇಕು ಹಾಗೂ ಆದರ್ಶ ವ್ಯಕ್ತಿಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕೆಂದು ಇವರು ಹೇಳಿದರು.
ಇತಿಹಾಸ ವಿಭಾಗ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಮ್ಮ ಜ್ಞಾನದ ಅನಾವರಣವು ಸಮರ್ಥ ವ್ಯಕ್ತಿತ್ವದಿಂದ ಮಾತ್ರ ಸಾಧ್ಯ ಎಂದರು. ವಿದ್ಯಾರ್ಥಿನಿ ಸಂಹಿತಾ ಕಾರ್ಯಕ್ರಮವನ್ನು ನಿರೂಪಿಸಿ ಮಿಥುನ್ ಸ್ವಾಗತಿಸಿ ಅಕ್ಷತಾ ವಂದಿಸಿದರು. ಅಭ್ಯಾಗತರಾದ ಶ್ರೀಮತಿ ನಿಶ್ಮಿತಾ ಹಾಗೂ ವಿದುಷಿ ಶ್ರೀದೇವಿ, ವಿದ್ಯಾರ್ಥಿ ಪ್ರತಿನಿಧಿ ಸುಶೀರಾ ಉಪಸ್ಥಿತರಿದ್ದರು.
ಉದ್ಘಾಟನೆಯ ತರುವಾಯ ಸೀರೆಗೆ ಕುಚ್ಚು ಹಾಕುವ ಕುರಿತು ತರಬೇತಿಯನ್ನು ಕಲಾವಿದರಾಗಿರುವ ಶ್ರೀಮತಿ ನಿಶ್ಮಿತಾರವರು ನಡೆಸಿಕೊಟ್ಟರು. ಬಳಿಕ ಭಾವಗೀತೆಯನ್ನು ವಿದುಷಿ ಶ್ರೀದೇವಿ ಸಂಗೀತ ಶಿಕ್ಷಕಿ ನಿನಾದ ಕ್ಲಾಸಿಕಲ್ಸ್ ಉಜಿರೆ ಇವರು ನೆರವೇರಿಸಿದರು.
ಎರಡನೇ ದಿನವಾದ ಭಾನುವಾರ ಸುಡೊಕು ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು. ಬಳಿಕ ಕರಕುಶಲ ಕಲೆಯ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ ಧರ್ಮಸ್ಥಳ ಇಲ್ಲಿಯ ಚಿತ್ರಕಲಾ ಅಧ್ಯಾಪಕ ಶಶಾಂಕ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅನಂತರ ಕುಣಿತ ಭಜನೆಯ ಸತ್ರವು ನಡೆದಿದ್ದು ಭಜನಾ ಶಿಕ್ಷಕಿ ಸುರಕ್ಷಾ ಆಚಾರ್ಯ ಇವರು ಕುಣಿತ ಭಜನೆಯಲ್ಲಿ ವಿದ್ಯಾರ್ಥಿಗಳನ್ನು ತಲ್ಲೀನಗೊಳಿಸಿದರು.
ಅನಂತರ ವಿದುಷಿ ಶ್ರೀದೇವಿ ರವರು ಅಭ್ಯಾಗತರಾಗಿ ಆಗಮಿಸಿ ಭಾವಗೀತೆಯ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಸಮರೂಪ ಸಮಾರಂಭದೊಂದಿಗೆ ನಾಣ್ಯಗಳ ಸಂಗ್ರಹದ ಕುರಿತಾಗಿ ಉಪನ್ಯಾಸವನ್ನು ನಡೆದಿದ್ದು ಮಂಜೂಷ ವಸ್ತು ಸಂಗ್ರಹಾಲಯ ಧರ್ಮಸ್ಥಳ ಇಲ್ಲಿಯ ನಿವೃತ್ತ ಉದ್ಯೋಗಿಯಾಗಿರುವ ಹಾಗೂ ನಾಣ್ಯಶಾಸ್ತ್ರ ನಿಪುಣರಾಗಿರುವ ಪುಷ್ಪದಂತರವರು ನಡೆಸಿಕೊಟ್ಟು ನಾಣ್ಯಗಳ ಸಂಗ್ರಹವನ್ನು ಹೇಗೆ ಆರಂಭಿಸಬೇಕು ಹಾಗೂ ಇದರ ಮಹತ್ವವೇನು ಎಂಬುದನ್ನು ವಿವರಿಸಿದರು.
ಹಾಬಿ ಸರ್ಕಲ್ ನ ಅಧ್ಯಾಪಕ ಸಂಯೋಜಕಿ ಅಭಿಜ್ಞಾ ಉಪಾಧ್ಯಾಯ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎರಡು ದಿನಗಳ ಕಾರ್ಯಾಗಾರದ ಯಶಸ್ಸಿನ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲವೊಂದಿದ್ದರೆ ಯಾವುದೇ ಕಠಿಣ ವಿಚಾರಗಳನ್ನು ಸಾಧಿಸಬಹುದು ಎಂದು ಹೇಳಿ ಒಂದೆರಡು ಕಥೆಗಳನ್ನು ಉದಾಹರಿಸಿದರು. ಸಮಾರೋಪ ಸಮಾರಂಭ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಅಂಕಿತಾ ಭಟ್ ಹಾಗೂ ಸ್ವಾಗತವನ್ನು ವಿದ್ಯಾರ್ಥಿ ಸಂಯೋಜಕಿ ಸುಶಿರಾ ಹಾಗೂ ವಂದನಾರ್ಪಣೆಯನ್ನು ಶ್ರೀಗೌರಿ ನೆರವೇರಿಸಿದರು. ಹಾಬಿ ಸರ್ಕಲ್ ನ ವಿದ್ಯಾರ್ಥಿಗಳು ಎರಡು ದಿನದ ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.