ಮಂಗಳೂರು: ಎಂಬಿಎ ಅಧ್ಯಯನ ಕೌಶಲ್ಯ ಮತ್ತು ಅವಕಾಶಗಳ ಸಂಗಮ. ಇದು ನಾಯಕತ್ವ ಗುಣ, ಆಡಳಿತಾತ್ಮಕ ಕೌಶಲ್ಯ ಸಾಧಿಸಲು ಪೂರಕ, ಎಂದು ಕರ್ನಾಟಕ ರಾಜ್ಯ ಸರಕಾರ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದ್ದಾರೆ.
ಇತ್ತೀಚೆಗೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಎಂಬಿಎ (ಐಬಿ) ವಿಭಾಗದ ವತಿಯಿಂದ ನೂತನ ವಿದ್ಯಾರ್ಥಿಗಳಿಗೆ ಪ್ರಾರಂಭೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯ ಕಾಲೇಜಿನ ಎಂಬಿಎ ವಿಭಾಗಕ್ಕೆ ದಾಖಲಾದ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಧ್ಯಾ ಕಾರ್ಯಕ್ರಮ ಎಂಬಿಎ ವಿಭಾಗದ ಸಲಹೆಗಾರ ಪ್ರೊ. ಜಯವಂತ ನಾಯಕ್ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಎಂಬಿಎ ಕಾರ್ಯಕ್ರಮವನ್ನು ಪ್ರಾರಂಭಿಸುವಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ವಿಶೇಷ ಮುತುವರ್ಜಿ ವಹಿಸಿದ್ದರು, ಎಂದು ಅವರ ಕೊಡುಗೆಯನ್ನು ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ವಿದ್ಯಾರ್ಥಿಗಳು ತಮಗೆ ಲಭಿಸಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಅಗಾಧ ಸಾಧನೆಯನ್ನು ಮಾಡಬಹುದು ಎಂದರು.
ಇದೇ ವೇಳೆ, ವಾರಂಗಲ್ ನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ರಾಷ್ಟ್ರಮಟ್ಟದ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಭಾಗಿಯಾಗಲಿರುವ ಎಂಬಿಎ ವಿಭಾಗದ ವಿದ್ಯಾರ್ಥಿ ಕು. ನಿಶಾಲ್ ಡೆಲ್ಫಿನ್ ಡಿಸೋಜರನ್ನು ಸನ್ಮಾನಿಸಲಾಯಿತು. ಕುಮಾರಿ ಅರ್ಲಿನ್ ಶಾಲ್ಮ ಫೆರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿದರು. ಮಹಮದ್ ಶೌಹಾನ್ ವಂದಿಸಿದರು. ಕಾರ್ಯಕ್ರಮವನ್ನು ಕುಮಾರಿ ಶರಣ್ಯ ನಿರೂಪಿಸಿದರು. ವಿಭಾಗದ ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.