ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ

Upayuktha
0


ಮಂಗಳೂರು: ಕದ್ರಿ ಯಕ್ಷ ಬಳಗವು ಈ ವರ್ಷದ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಪ್ರಶಸ್ತಿಯನ್ನು ಪಾವಂಜೆ ಮೇಳದ ಪ್ರಧಾನ ವೇಷಧಾರಿ, ಪ್ರಬಂದಕ ಡಿ.ಮಾಧವ ಬಂಗೇರ ಕೊಳತ್ತಮಜಲು ಅವರಿಗೆ ನೀಡಿ ಗೌರವಿಸಲಿದೆ.


ಇವರು ಕಳೆದ ಮೂರು ದಶಕಗಳಿಂದ ಯಕ್ಷಗಾನ ರಂಗದಲ್ಲಿ ಶ್ರೀರಾಮ, ಶ್ರೀ ಕೃಷ್ಣ, ಶ್ರೀ ವಿಷ್ಣು, ಜಾಬಾಲಿ ಮೊದಲಾದ ಸಾತ್ವಿಕ ಪಾತ್ರ ಗಳನ್ನು ನಿರ್ವಹಿಸಿ, "ಮಾನಿಷಾದ" ಪ್ರಸಂಗದ ಶ್ರೀರಾಮನ ಪಾತ್ರ ನಿರ್ವಹಣೆಯಲ್ಲಿ ಸಿದ್ದಿ ಪ್ರಸಿದ್ದಿ ಹೊಂದಿರುವ "ಯಕ್ಷ ರಾಮ" ಬಿರುದು ಪಡೆದ ಸರಳ ಸಜ್ಜನಿಕೆಯ ಕಲಾವಿದರಾಗಿದ್ದಾರೆ.


ಕಟೀಲು ಮೇಳದಲ್ಲಿ ಕಲಾ ಜೀವನ ಆರಂಭ ಮಾಡಿ ಒಂದೂವರೆ ದಶಕ ಸೇವೆ ಸಲ್ಲಿಸಿ, ಬಪ್ಪನಾಡು, ಸುಂಕದಕಟ್ಟೆ ಮೇಳಗಳಲ್ಲಿ ತಿರುಗಾಟ ಅನುಭವ ಪಡೆದವರು. ಪಟ್ಲ ಭಾಗವತರ ನೆಚ್ಚಿನ ಕಲಾವಿದನಾಗಿ  ಬೆಳೆದು  ಪಾವಂಜೆ ಮೇಳದಲ್ಲಿ ಕಲಾ ಯಾನ ಮುಂದುವರಿಸುತ್ತಿರುವ ಇವರು ಹಲವಾರು ಯಕ್ಷಗಾನ ಬಯಲಾಟ, ತಾಳಮದ್ದಳೆ, ಗಾನ -ನಾಟ್ಯ ವೈಭವಗಳನ್ನು ಸಂಯೋಜಿಸಿದ್ದಾರೆ. ನಿರೂಪಕರಾಗಿಯೂ ಜನಪ್ರಿಯತೆ ಗಳಿಸಿದ್ದಾರೆ.


ಕದ್ರಿ ಕಂಬಳ ಗುತ್ತಿನ ಯಜಮಾನರಾಗಿ ಹಲವು ದಶಕಗಳ ಕಾಲ ಇತಿಹಾಸ ಪ್ರಸಿದ್ದ ಸಂಪ್ರದಾಯಿಕ ಕದ್ರಿ ಕಂಬಳವನ್ನು ಸಂಘಟಿಸಿದ್ದ ಹಿರಿಯ ಹವ್ಯಾಸಿ ಅರ್ಥಧಾರಿ ಸ್ವರ್ಗ್ಗೀಯ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣಾರ್ಥ ಪ್ರಶಸ್ತಿ ನೀಡಲಾಗುತ್ತಿದೆ.


ನವೆಂಬರ್ 4 ರಂದು ಕದ್ರಿ ದೇವಸ್ಥಾನದಲ್ಲಿ ಪಾವಂಜೆ ಮೇಳ ದ ಸೇವೆ ಬಯಲಾಟ "ಛಾಯಾ ನಂದನ" ನೂತನ ಪ್ರಸಂಗ ಪ್ರದರ್ಶನ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕದ್ರಿ ಯಕ್ಷ ಬಳಗದ ಕದ್ರಿ ನವನೀತ ಶೆಟ್ಟಿ ಹಾಗೂ ಪ್ರದೀಪ್ ಆಳ್ವ ಕದ್ರಿ ತಿಳಿಸಿದ್ದಾರೆ.



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top