ಲೇಖಾ ಲೋಕ-55: ಬಹುಭಾಷಾ ಪಂಡಿತರು ಹೊ.ವೆ. ಶೇಷಾದ್ರಿ

Upayuktha
0


ದೇಶಪ್ರೇಮಿ, ಚಿಂತಕರು, ಬಹುಭಾಷಾ ಕೋವಿದರು, ಪ್ರಖ್ಯಾತ ಲೇಖಕರಾದ ಹೊ ವೆ ಶೇಷಾದ್ರಿ ಅವರು ವೆಂಕಟರಾಮಯ್ಯ ಮತ್ತು ಪಾರ್ವತಮ್ಮ ಅವರ ಪುತ್ರನಾಗಿ 1926 ಮೇ 26ರಂದು ಹೊಂಗಸಂದ್ರ ಗ್ರಾಮದಲ್ಲಿ ಜನಿಸಿದರು. ಇವರ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಜರುಗಿ, ಸೆಂಟ್ರಲ್ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಷಯದೊಂದಿಗೆ ಎಂ.ಎಸ್ಸಿ ಪದವಿ ಸ್ವರ್ಣಪದಕದೊಂದಿಗೆ ಪಡೆದಿದ್ದು ವಿಶೇಷ. ಶಿಕ್ಷಣ ಪೂರೈಸಿದ ಮೇಲೆ ಸಂಪೂರ್ಣವಾಗಿ ಸಮಾಜಸೇವೆ ಮಾಡಲು ಉದ್ಯುಕ್ತರಾಗಿ, ತಮ್ಮ ಜೀವನವನ್ನೇ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಮಹನೀಯರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತನಾಗಿ ದೇಶದ್ಯಾಂತ ಸಂಚರಿಸಿ, ಪ್ರಚಾರಕರಾದರು. 1953-56 ರ ವರೆಗೆ ಮಂಗಳೂರಿನಲ್ಲಿ ಸಹಕಾರ್ಯ ನಿರ್ವಹಿಸಿದರು. 1960 ರಲ್ಲಿ ಕರ್ನಾಟಕ ಪ್ರಾಂತ್ಯ ಪ್ರಚಾರಕರಾಗಿ ಮತ್ತು 1980 ರಲ್ಲಿ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಕ್ಷೇತ್ರೀಯ ಪ್ರಚಾರ ಕಾರ್ಯನಿರ್ವಾಹಕರಾಗಿಯೂ ಅಪರಿಮಿತ ಸೇವೆ ಸಲ್ಲಿಸಿದರು. 1987 ರಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ದೊಡ್ಡ ಜವಾಬ್ದಾರಿ ಪಡೆದು ಸತತ 9 ವರ್ಷಗಳ ಕಾಲ ನಿರ್ವಹಿಸಿದ ಯಶಸ್ಸು ಹೊ.ವೆ ಶೇಷಾದ್ರಿ ಅವರಿಗೆ ಸಲ್ಲುತ್ತದೆ. ರಾಷ್ಟ್ರೀಯ ಸೇವಾ ಸಂಘದ ಸಂಘಟನೆ ಮೂಲಕ, ಅಸ್ಪೃಶ್ಯತೆ ಮತ್ತು ಸಾಮಾಜಿಕ ದೋಷ ನಿವಾರಣೆ, ಮತಾಂತರ ಪಿಡುಗಿನ ನಿವಾರಣೆ, ಸ್ವದೇಶಿ ವಸ್ತುಬಳಕೆಯ ಆಂದೋಲನ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ದೇಶಾದ್ಯಂತ ಸಂಚರಿಸಿ, ಅಪಾರ ಕಾರ್ಯ ನಿರ್ವಹಿಸುವುದರ ಜೊತೆಗೆ ಯುವ ಜನಾಂಗಕ್ಕೆ ನಿರಂತರ ಮಾರ್ಗದರ್ಶನ ನೀಡಿದ ಮಹಾನ್ ದೇಶಭಕ್ತರು.


ಆರ್ ಎಸ್ ಎಸ್ ವೈಚಾರಿಕತೆ ಹಾಗೂ ಸೈದ್ಧಾಂತಿಕ ಬರಹ ಬರೆದು ವಿಚಾರ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ ನೀಡಿದರು. ಸಮಾಜದಿಂದ ಅವರಿಗೆ ದೊರೆತ ಅನುಭವಗಳನ್ನು ತಮ್ಮ ಬರಹಗಳ ಮೂಲಕ ವಿಕ್ರಮ, ಉತ್ಥಾನ, ಇಂಗ್ಲೀಷ್ ಆರ್ಗನೈಸರ್, ಹಿಂದಿ ಪಾಂಚಜನ್ಯ ಮತ್ತು ದೇಶದ ಇತರ ಭಾಷೆಗಳ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಇವರ ಲೇಖನಗಳು ಜನ ಮಾನಸದಲ್ಲಿ ಅಚ್ಚಳಿಯದ ಲೇಖನಗಳಾಗಿ, ಜನಪ್ರಿಯವಾಗಿ, ಆಕರ್ಷಣೆಯ ವಿಮರ್ಶಾತ್ಮಕ  ಪ್ರತಿಪಾದನೆಯ ಬರಹಗಳಾಗಿ ದಾಖಲೆಯಾದವು. ಸರಳ ಶೈಲಿ, ಮನಮುಟ್ಟುವ ನಿರೂಪಣೆ ಇವರ ಲೇಖನಗಳ ವೈಶಿಷ್ಟ್ಯತೆ.

ಇವರು ಕನ್ನಡ, ಆಂಗ್ಲ ಮರಾಠಿ ಭಾಷೆಯಲ್ಲಿ ಅನೇಕ ಉಪಯುಕ್ತ ಕೃತಿಗಳನ್ನು ರಚಿಸಿ ದೇಶಕ್ಕೆ ನೀಡಿದ್ದಾರೆ. ಕನ್ನಡದಲ್ಲಿ ಯುಗಾವತಾರ, ಅಮ್ಮಾ ಬಾಗಿಲು ತೆಗೆ, ದೇಶ ವಿಭಜನೆಯ ದುರಂತ ಕಥೆ, ಚಿಂತನಗಂಗಾ, ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ಭುಗಿಲು, ಲಲಿತ ಪ್ರಬಂಧಗಳ ಸಂಗ್ರಹ ತೋರ್ಬೆರಳು, ಮತ್ತು ಆಂಗ್ಲ ಭಾಷೆಯಲ್ಲಿ "ಬಂಚ್ ಆಫ್ ಥಾಟ್ಸ್ ". ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಷನ್, ಆರ್ ಎಸ್ ಎಸ್ ಎ ವಿಷನ್ ಇನ್ ಆಕ್ಷನ್, ಯೂನಿವರ್ಸಲ್ ಸ್ಪಿರಿಟ್ ಆಫ್ ಹಿಂದೂ ನ್ಯಾಷಲಿಸಮ್, ದಿ ವೇ, ಯೋಗ ಎ ಸೋಷಿಯಲ್ ಇಂಪರೆಟಿವ್ ಮುಂತಾದವುಗಳನ್ನು ಬರೆದರು.


ಹಿಂದಿ ಮತ್ತು ಮರಾಠಿಯಲ್ಲಿ ಕೃತಿ ರೂಪ್ ಸಂಘ ದರ್ಶನ್, ನಾನ್ಯ ಪಂಥ್, ಉಗವೇ ಸಂಘ ಪಹಾಟ್ ಸಹ ರಚಿಸಿದ್ದು ಪ್ರಮುಖವಾಗಿವೆ. ಹೊ ವೆ. ಶೇಷಾದ್ರಿ ಅವರು ಬರೆದ ಪ್ರಸಿದ್ಧವಾದ ತೋರ್ಬೆರಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ 1982 ರಲ್ಲಿ ಲಲಿತ ಪ್ರಬಂಧ ಸಂಕಲನ ಎಂದು ತೀರ್ಮಾನಿಸಿ, ಪ್ರಶಸ್ತಿ ನೀಡಿ, ಗೌರವಿಸಿತು.


ಸದಾ ದೇಶದ ಬಗ್ಗೆ ಪ್ರೇಮ ವ್ಯಕ್ತಪಡಿಸಿ, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿ, ಅನೇಕ ಉಪನ್ಯಾಸ, ಬರಹಗಳನ್ನು, ಮಾರ್ಗದರ್ಶನಗಳನ್ನು ನೀಡಿ, ಯುವ ಜನತೆಗೆ ದಾರಿದೀಪವಾಗಿ, 14-8-2005 ರಂದು ಲೋಕವನ್ನು ಅಗಲಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top