ಎನ್ಎಂ‌ಐಟಿಯಲ್ಲಿ ‘ಗೌಬಯೋ’ ಉತ್ಪನ್ನ ಲೋಕಾರ್ಪಣೆ

Upayuktha
0


ಬೆಂಗಳೂರು: ‘ರಾಸಾಯನಿಕ ಮೂಲದ ಹಾನಿಕಾರಕ ಪದಾರ್ಥಗಳನ್ನೊಳಗೊಂಡ ರಸಗೊಬ್ಬರ ಹಾಗೂ ಕೀಟನಾಶಕಗಳ ಹೇರಳ ಬಳಕೆಯಿಂದ ನಮ್ಮ ಕೃಷಿ ಭೂಮಿ ಕ್ರಮೇಣವಾಗಿ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಇಳುವರಿ ತಗ್ಗಿದೆ ಹಾಗೂ ಅನ್ನ ನೀಡುವ ಭೂಮಿ ಬಂಜರಾಗುತ್ತಿದೆ. ನಾವು ಅಧಿಕ ಇಳುವರಿಗೆ ಹಾಗೂ ಕೀಟಗಳ ನಿಯಂತ್ರಣಕ್ಕೆ ಸಾವಯವ ಮಾರ್ಗವನ್ನು ಕಂಡುಕೊಳ್ಳದಿದ್ದರೆ ಬಹು ದೊಡ್ಡ ಅನಾಹುತ ಖಚಿತ. ಈ ನಿಟ್ಟಿನಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಅಟಲ್ ಅನ್ವೇಷಣಾ ಕೇಂದ್ರ ಹಾಗೂ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಅಟಲ್ ಸಮುದಾಯ ಅನ್ವೇಷಣಾ ಕೇಂದ್ರಗಳ ಬೆಂಬಲ ಮತ್ತು ಮಾರ್ಗದರ್ಶನಗಳೊಡನೆ ಶಿವಮೊಗ್ಗದ ವಾಸುಕಿ ಆಗ್ರೋಕೆಮಿಕಲ್ಸ್ ಉದ್ಯಮ ಹೊರತಂದಿರುವ ‘ಗೌಬಯೋ’ ಹೆಸರಿನ ದ್ರವರೂಪದ ಹುದುಗಿಸಿದ ಸಾವಯವ ಗೊಬ್ಬರ ನಿಜಕ್ಕೂ ಒಂದು ಗಮನಾರ್ಹ ಸಾಧನೆ. ಇದು ನಮ್ಮ ರೈತರಿಗೆ ವರದಾನ ಮಾತ್ರವಲ್ಲ, ದೇಶದ ಅಭಿವೃದ್ಧಿಗೂ ತನ್ನದೇ ಆದ ಕಾಣಿಕೆ ಸಲ್ಲಿಸುತ್ತದೆ’, ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ನುಡಿದರು.


ಅವರು ಗೋವಿನ ಸಗಣಿ ಹಾಗೂ ಗೋವಿನ ಮೂತ್ರ ಆಧಾರಿತ ಸ್ಲರಿಯನ್ನು ಸಂಸ್ಕರಿಸಿ ಹೊರತಂದಿರುವ ‘ಗೌಬಯೋ’ ಉತ್ಪನ್ನವನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. 


‘ಈ ಬಗೆಗಿನ ಸಂಶೋಧನೆ ಇಲ್ಲಿಯೇ ನಿಲ್ಲಬಾರದು. ಮತ್ತಷ್ಟು ಉತ್ಸುಕತೆಯಿಂದ ನಿರಂತರವಾಗಿ ಜರುಗಬೇಕು ಹಾಗೂ ಸಾವಯವ ಕೃಷಿ ವಿಧಾನವನ್ನು ಇಡೀ ದೇಶದಲ್ಲಿ ಅಳವಡಿಸಬೇಕು. ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮದೇ ಆದ ಸ್ಟಾರ್ಟ್‍ಅಪ್‍ಗಳ್ ಮೂಲಕ ಸಾವಯವ ಕೃಷಿಗೆ ಅಗತ್ಯ ತಂತ್ರಜ್ಞಾನದ ನೆರವು ನೀಡಬೇಕು. ಈ ದ್ರವರೂಪದ ಗೊಬ್ಬರದ ಸಿಂಪಡಿಕೆಯನ್ನು ಡ್ರೋನ್ ತಂತ್ರಜ್ಞಾನವನ್ನು ಬಳಸಿ ಅನುಷ್ಠಾನಗೊಳಿಸಿದರೆ ರೈತರ  ಸಮಯವೂ ಉಳಿಯುತ್ತದೆ, ಪರಿಶ್ರಮ ಹಾಗೂ ವೆಚ್ಚಗಳು ಗಣನೀಯ ಪ್ರಮಾಣದಲ್ಲಿ ತಗ್ಗುತ್ತವೆ’ ಎಂದರು.


ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದವರು ಶಿವಮೊಗ್ಗದ ಕೃಷಿ ಹಾಗೂ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್. ಅವರು ಮಾತನಾಡಿ, ನಿಟ್ಟೆ ಪ್ರಾಯೋಜಿತ ಸ್ಟಾರ್ಟ್‍ಅಪ್‍ಗಳು ಅಡಿಕೆ ಹಾಗೂ ತೆಂಗಿನ ಮರಗಳನ್ನು ಏರುವ, ಕುಯಿಲು ಮಾಡುವ ಸೂಕ್ತ ಯಂತ್ರಗಳನ್ನು ಅನ್ವೇಷಿಸಿದರೆ ನಿಜಕ್ಕೂ ಅಡಿಕೆ ಹಾಗೂ ತೆಂಗು ಬೆಳೆಗಾರರು ನಿರಾಳರಾಗುತ್ತಾರೆ ಎಂದರು. 


ಮತ್ತೋರ್ವ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದವರು ಕರ್ನಾಟಕ ಸರ್ಕಾರದ ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ವಿಭಾಗದ ಆಯುಕ್ತೆ ಶ್ರೀರೂಪ ಅವರು. ತಮ್ಮ ಭಾಷಣದಲ್ಲಿ ಅವರು, ‘ಲೋಕಾರ್ಪಣೆಗೊಂಡಿರುವ ‘ಗೌಬಯೋ’ ಉತ್ಪಾದನೆ ಅಧಿಕಗೊಳ್ಳಲು ಗೋಶಾಲೆಗಳನ್ನು ಗಣನೀಯ ಸಂಖ್ಯೆಯಲ್ಲಿ ಒಳಗೊಳ್ಳಬೇಕಾಗಿದೆ. ಸರ್ಕಾರ ಗೋಶಾಲೆಗಳೊಡನೆ ಚರ್ಚಿಸಿ ಅಗತ್ಯ ನೆರವನ್ನು ನೀಡಲಿದೆ’, ಎಂದರು.


ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸರ್ವರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಸಂಸ್ಥೆಯ ಅಟಲ್ ಸಮುದಾಯ ಅನ್ವೇಷಣಾ ಕೇಂದ್ರದ ಮುಖ್ಯಸ್ಥ ಡಾ. ಶಿವಪ್ರತಾಪ್ ಸಿಂಗ್ ಯಾದವ್ ವಂದನಾರ್ಪಣೆ ಸಲ್ಲಿಸಿದರು. ಶಿವಮೊಗ್ಗದ ವಾಸುಕಿ ಆಗ್ರೋ ಕೆಮಿಕಲ್ಸ್ ಎಲ್.ಎಲ್.ಪಿ ವತಿಯಿಂದ ರಂಜಿತ್ ಎನ್.ಎಸ್ ಹಾಗೂ ರಾಮಚಂದ್ರ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.  


ನಿಟ್ಟೆ ವಿಶ್ವವಿದ್ಯಾಲಯದ ಯೋಜನಾ ನಿರ್ದೇಶಕಿ ಡಾ. ಇಂದ್ರಾಣಿ ಕರುಣಸಾಗರ್, ಸಂಶೋಧನಾ ಸಲಹೆಗಾರ ಡಾ. ಇದ್ದ್ಯಾ ಕರುಣಸಾಗರ್, ನಿಟ್ಟೆ ಅಟಲ್ ಅನ್ವೇಷಣಾ ಕೇಂದ್ರದ ಆಡಳಿತ ಮಂಡಲಿಯ ಸದಸ್ಯ ಚೇತನ್ ಜೆ. ಶಿರ್ನಲಿ, ಕೇಂದ್ರದ ನಿರ್ವಾಹಕರಾದ ಪುನೀತ್ ರೈ, ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ವಿಭಾಗದ ಅಧಿಕಾರಿಗಳು, ನೂರಾರು ಸ್ಟಾರ್ಟ್‍ಅಪ್‍ಗಳ ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.




 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top