ಮಂಗಳೂರು: ಕುಂದಾಪುರದ ಕಾರ್ವಾಲ್ ಮನೆತನ ಹಾಗೂ ಮಾಂಡ್ ಸೊಭಾಣ್ ಜಂಟಿಯಾಗಿ, ಕೊಂಕಣಿ ಕಲೆ, ಸಂಸ್ಕೃತಿಗೆ ಮಹತ್ತರ ಕೊಡುಗೆ ನೀಡಿದ ಕಲಾವಿದರನ್ನು ಗೌರವಿಸಲು ನೀಡುವ 21 ನೇ ವರ್ಷದ ಕಲಾಕಾರ್ ಪುರಸ್ಕಾರಕ್ಕೆ ಕಾಸರಗೋಡು ಚಿನ್ನಾ ಇವರನ್ನು ಆಯ್ಕೆ ಮಾಡಲಾಗಿದೆ. 2025 ನವೆಂಬರ್ 02 ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 6.00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ರೂ. 50,000/- ನಗದು ಒಳಗೊಂಡ ಈ ಪುರಸ್ಕಾರವನ್ನು ಪ್ರದಾನ ಮಾಡಲಿರುವರು. ಭಾಷಾ ತಜ್ಞ ಡೊ ಪ್ರತಾಪ್ ನಾಯ್ಕ್, ಮತ್ತು ಮಸ್ಕತ್ ನಲ್ಲಿರುವ ಉದ್ಯಮಿ ಹಾಗೂ ಶ್ರೇಷ್ಟ ಕಲಾಪ್ರೋತ್ಸಾಹಕ ಸ್ಟ್ಯಾನ್ಲಿ ಫೆರ್ನಾಂಡಿಸ್ (ದಾಟ್ಟು) ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
ಶ್ರೀನಿವಾಸ ರಾವ್ ಎಸ್. (68) ಕಾಸರಗೋಡು ಚಿನ್ನಾ ಎಂದು ರಂಗಲೋಕದಲ್ಲಿ ಪ್ರಸಿದ್ಧರು. ನಟನೆಯಲ್ಲಿ ಚಿನ್ನದ ಪದಕದೊಡನೆ ಡಿಎಫ್‌ಎ ಪದವಿ ಪಡೆದಿದ್ದಾರೆ. 1969 ರಲ್ಲಿ ರಂಗ ಪ್ರವೇಶ ಮಾಡಿದ ಇವರು ಕೊಂಕಣಿ, ಕನ್ನಡ, ತುಳು, ಮಲಯಾಳಂ ಹಾಗೂ ಇಂಗ್ಲೀಷಿನ 400ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವು ನಾಟಕಗಳಿಗೆ ನಿರ್ದೇಶನ ನೀಡಿದ್ದಾರೆ. ಭಾಷಾಂತರ ಮಾಡಿದ್ದಾರೆ. ಆಕಾಶವಾಣಿಯಲ್ಲಿ, ದೂರದರ್ಶನದಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಲಾರಿ ನಾಟಕ, ಗೀತ ಸಂಗೀತ ರಥ, ಯಕ್ಷತೇರು, ಕನ್ನಡ ಸ್ವರ, ಮೂಕಾಭಿನಯ ಇತ್ಯಾದಿ ಪ್ರಯೋಗಗಳ ನೂರಾರು ಪ್ರದರ್ಶನಗಳನ್ನು ಮಾಡಿದ್ದಾರೆ. ಸಿನಿಮಾ ನಿರ್ದೇಶನ ಹಾಗೂ ನಟನೆಯಲ್ಲೂ ಕೈಯಾಡಿಸಿದ್ದಾರೆ. ಅವರು ನಿರ್ದೇಶಿಸಿದ ʻಉಜ್ವಾಡುʼ ಕೊಂಕಣಿ ಚಲನಚಿತ್ರಕ್ಕೆ 2011 ರ ಕರ್ನಾಟಕ ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರದ ಗೌರವ ಲಭಿಸಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ʻಘರ್ ಘರ್ ಕೊಂಕಣಿʼ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಕೊಂಕಣಿಯ ಎಲ್ಲಾ ಸಮುದಾಯಗಳ ನಡುವೆ ಭಾಷಾಭಿಮಾನ ಮೂಡಿಸಿದ್ದಾರೆ. ರಂಗ ಚಿನ್ನಾರಿ ಟ್ರಸ್ಟ್ ಮೂಲಕ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಅವರ ʻತೀಸ್ ಕಾಣಿಯೊʼ ಅನುವಾದ ಸಂಗ್ರಹಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಲಭಿಸಿದೆ. ಕೊಂಕಣಿ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ರಿ, ಕೇರಳ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟಕ ರಂಗದಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳೊಡನೆ ಹಲವಾರು ಸನ್ಮಾನಗಳು ದೇಶ ವಿದೇಶಗಳಲ್ಲಿ ಲಭಿಸಿವೆ.
ಸನ್ಮಾನ ಕಾರ್ಯಕ್ರಮದ ನಂತರ ತಿಂಗಳ ವೇದಿಕೆ ಸರಣಿಯ 287 ನೇ ಕಾರ್ಯಕ್ರಮದಲ್ಲಿ ಮ್ಯಾಕ್ಸಿಮ್ ಪಿರೇರಾ ಮತ್ತು ತಂಡದಿಂದ 17 ನೇ ಮ್ಯಾಕ್ಸಿಮ್ ನೈಟ್ ರಸಮಂಜರಿ ನಡೆಯಲಿದೆ.
ಕೊಂಕಣಿ ಕಲಾವಿದರನ್ನು ಗೌರವಿಸಲು 2005 ರಲ್ಲಿ ಕಾರ್ವಾಲ್ ಮನೆತನದ ಹೆಸರಲ್ಲಿ ಮಾಂಡ್ ಸೊಭಾಣ್ ಸಹಯೋಗದಲ್ಲಿ ಕಲಾಕಾರ್ ಪುರಸ್ಕಾರವನ್ನು ಸ್ಥಾಪಿಸಲಾಗಿತ್ತು. ಇದುವರೆಗೆ ಅರುಣ್‍ರಾಜ್ ರೊಡ್ರಿಗಸ್ (ನಾಟಕ), ಜೊಯೆಲ್ ಪಿರೇರಾ (ಸಂಗೀತ), ಹ್ಯಾರಿ ಡಿಸೊಜಾ (ಬ್ರಾಸ್ ಬ್ಯಾಂಡ್), ವಂ. ಚಾರ್ಲ್ಸ್ ವಾಸ್ (ಭಕ್ತಿ ಸಂಗೀತ), ಅನುರಾಧಾ ಧಾರೇಶ್ವರ್ (ಸಂಗೀತ), ಸಂತ ಭದ್ರಗಿರಿ ಅಚ್ಯುತದಾಸ, ಬೆಂಗಳೂರು (ಹರಿಕಥೆ), ಜೇಮ್ಸ್ ಲೊಪಿಸ್, ಹೊನ್ನಾವರ (ಬ್ರಾಸ್ ಬ್ಯಾಂಡ್), ನೊರ್ಬರ್ಟ್ ಗೊನ್ಸಾಲ್ವಿಸ್ (ಸಂಗೀತ), ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ (ನಾಟಕ), ರೋಶನ್ ಡಿಸೋಜ (ಸಂಗೀತ), ಕ್ರಿಸ್ಟೋಫರ್ ಡಿಸೋಜ (ನಾಟಕ), ಆವಿಲ್ ಡಿಕ್ರೂಜ್ (ನೃತ್ಯ) ಎಂ. ಗೋಪಾಲ ಗೌಡ (ಜನಪದ), ಡೊಲ್ಲಾ ಮಂಗಳೂರು (ನಾಟಕ), ಐರಿನ್ ರೆಬೆಲ್ಲೊ (ಮದುವೆ ಸೊಭಾನೆ ಹಾಡುಗಳು), ಅನಿತಾ ಡಿಸೋಜ (ಗಾಯನ), ನಿಹಾಲ್ ತಾವ್ರೊ (ಗಾಯನ), ಮೆಲ್ವಿನ್ ಪೆರಿಸ್ (ಸಂಗೀತ), ಆಪೊಲಿನಾರಿಸ್ ಡಿಸೋಜ (ಗಾಯನ) ಮತ್ತು ರೋಶನ್ ಬೇಳ (ಸಂಗೀತ) ಇವರಿಗೆ ಈ ಪುರಸ್ಕಾರ ಲಭಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


