ಕಲಬುರಗಿ ಪೀಠ ಮಾಹಿತಿ ಆಯುಕ್ತರಾಗಿ ಬಿ. ವೆಂಕಟ ಸಿಂಗ್ ಅಧಿಕಾರ ಸ್ವೀಕಾರ

Upayuktha
0

ಮಾಹಿತಿ ಹಕ್ಕಿನಡಿ 7,000 ಬಾಕಿ ಅರ್ಜಿಗಳ ವಿಲೇವಾರಿಗೆ ತ್ವರಿತ ಕ್ರಮ





(ವರದಿ: ಡಾ. ಸದಾನಂದ ಪೆರ್ಲ)


ಕಲಬುರಗಿ: ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ಬಿ ವೆಂಕಟ ಸಿಂಗ್ ಅವರು ಕಲಬುರಗಿ ಪೀಠದ ಮಾಹಿತಿ ಆಯುಕ್ತರಾಗಿ ಕಲಬುರಗಿಯಲ್ಲಿ ಅಧಿಕಾರ ಸ್ವೀಕರಿಸಿ ಈ ಪೀಠದಲ್ಲಿ ವಿಲೇವಾರಿಗೆ ಬಾಕಿ ಉಳಿದಿರುವ 7 ಸಾವಿರ ಅರ್ಜಿಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಲು ಆದ್ಯತೆ ನೀಡಲಾಗುವುದು ಎಂದು ಪ್ರಕಟಿಸಿದರು. 


ಕಲಬುರಗಿಯ ರೈಲ್ವೆ ನಿಲ್ದಾಣದ ಬಳಿಯ ಅತಿಥಿಗೃಹದಲ್ಲಿ ಕಾರ್ಯಾಚರಿಸುತ್ತಿರುವ ಮಾಹಿತಿ ಆಯುಕ್ತರ ಕಚೇರಿಯಲ್ಲಿ ಅ 21ರಂದು ಪದಗ್ರಹಣ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಕಲಬುರಗಿ ಪೀಠದಲ್ಲಿ ಅಧಿಕಾರಿಗಳ ಮಟ್ಟ ಮತ್ತು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಇತ್ಯರ್ಥ ಪಡಿಸದ  7 ಸಾವಿರ ಅರ್ಜಿಗಳು ವಿಲೇವಾರಿಗೆ  ಬಾಕಿ ಉಳಿದಿದ್ದು ತ್ವರಿತವಾಗಿ ಇವುಗಳನ್ನು ಇತ್ಯರ್ಥ ಪಡಿಸಲು ವಿಶೇಷ ಆದ್ಯತೆ ನೀಡಲಾಗುವುದು. ತ್ವರಿತ ಮತ್ತು ನಿಗದಿತ ಅವಧಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ದಂಡಕ್ಕೆ ಆದ್ಯತೆ ನೀಡದೆ ಮಾಹಿತಿ ಒದಗಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಇದಕ್ಕೆ ಅಧಿಕಾರಿಗಳು ಮತ್ತು ಅರ್ಜಿದಾರರ ಸಹಕಾರ ಅಗತ್ಯ ಬೇಕಾಗಿದೆ ಎಂದರು.


ಅರ್ಜಿ ವಿಲೇವಾರಿಯಲ್ಲಿ ದೇಶದಲ್ಲಿ ಅತಿ ಹೆಚ್ಚು ಕಡತಗಳಿರುವ ರಾಜ್ಯ ಮಹಾರಾಷ್ಟ್ರ 60 ಸಾವಿರ ಅರ್ಜಿಗಳೊಂದಿಗೆ ಮೊದಲನೆಯ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ತಮಿಳುನಾಡು ಇದ್ದು 51 ಸಾವಿರ ಅರ್ಜಿಗಳನ್ನು ಹೊಂದಿವೆ. ಕರ್ನಾಟಕವು 39 ಸಾವಿರ ಅರ್ಜಿಗಳೊಂದಿಗೆ ಮೂರನೆಯ ಸ್ಥಾನದಲ್ಲಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಮೂವರು ಹೊಸ ಮಾಹಿತಿ ಆಯುಕ್ತರ ನೇಮಕದಿಂದ 51 ಸಾವಿರದಷ್ಟು ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡಿ ಈಗ 39 ಸಾವಿರ ಅರ್ಜಿಗಳು ಮಾತ್ರ ಬಾಕಿ ಉಳಿದಿವೆ.


ಮಾಹಿತಿ ಕೋರಿಕೆಗಾಗಿ ಅರ್ಜಿ ಸಲ್ಲಿಸಿ 30 ದಿನಗಳಲ್ಲಿ ಉತ್ತರ ನೀಡಬೇಕಾಗಿದ್ದು ಆ ವೇಳೆಯಲ್ಲಿ ಅರ್ಜಿ ಇತ್ಯರ್ಥಗೊಳಿಸದಿದ್ದರೆ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಬಹುದಾಗಿದೆ. ಅಲ್ಲಿಯೂ ಇತ್ಯರ್ಥ ಗೊಳಿಸಲಾಗದಿದ್ದರೆ ಮಾಹಿತಿ ಆಯೋಗಕ್ಕೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಕಲಬುರಗಿ ಪೀಠವು 7 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು ಸಾರ್ವಜನಿಕರಿಗೆ ಸಕಾಲದಲ್ಲಿ ಮಾಹಿತಿ ನೀಡುವುದು ಪ್ರಥಮ ಆದ್ಯತೆಯೆಂದು ಹೇಳಿದರು.


ಇದಕ್ಕಾಗಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಆಯೋಗದೊಂದಿಗೆ ಸಹಕಾರ ನೀಡಬೇಕು ಎಂದು ಬಿ ವೆಂಕಟ್ ಸಿಂಗ್ ಮನವಿ ಮಾಡಿದರು.


ಕಲಬುರಗಿಯಲ್ಲಿ ಮಾಹಿತಿ ಆಯೋಗದ ಪೀಠಕ್ಕೆ ಸ್ವಂತ ಕಟ್ಟಡ ವಿಲ್ಲದಿರುವುದರಿಂದ ಹೈಕೋರ್ಟ್ ಪಕ್ಕದಲ್ಲಿ ಸ್ಥಳ ಗುರುತಿಸಲಾಗಿದ್ದು ಈಗಾಗಲೇ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಮಂಜೂರು ಮಾಡಿಸಿ ಸ್ವಂತ ಕಟ್ಟಡ ನಿರ್ಮಿಸಲಾಗುವುದು ಎಂದರು 


ಜಿಲ್ಲಾ ಹಂತದ ಕಾರ್ಯಾಗಾರಕ್ಕೆ ಸಿದ್ಧತೆ

ಮಾಹಿತಿ ಆಯೋಗದ ಕಾರ್ಯಚಟುವಟಿಕೆಗಳನ್ನು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲು ಜಿಲ್ಲಾವಾರು ಕಾರ್ಯಗಾರ ನಡೆಸಲು ಉದ್ದೇಶಿಸಲಾಗಿದೆ. ಆ ಮೂಲಕ ಮಾಹಿತಿ ಆಯೋಗದ ಕಾರ್ಯ ಚಟುವಟಿಕೆಗಳನ್ನು ಇನ್ನಷ್ಟು ವಿಶಾಲಗೊಳಿಸಲಾಗುವುದು ಎಂದು ಹೇಳಿದರು. ಮಾಹಿತಿ ಆಯೋಗ ಸಂಪೂರ್ಣವಾಗಿ ನ್ಯಾಯಾಂಗದ ಅಡಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಯಾವುದೇ ರೀತಿಯ ಅಕ್ರಮ ಲಾಬಿ, ಒತ್ತಡ ಮತ್ತು ಆಮಿಷಗಳಿಲ್ಲದೆ ಸ್ವತಂತ್ರವಾಗಿ ಮತ್ತು ಸಾರ್ವಜನಿಕರ ಹಿತ ದೃಷ್ಟಿಯಿಂದ ಪಾರದರ್ಶಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.


ಪತ್ರಕರ್ತರು ಮತ್ತು ಮಾಹಿತಿ ಆಯೋಗದ ಕೆಲಸ ಸಮಾನ

ಪತ್ರಕರ್ತರು ನಿರ್ವಹಿಸುವ ಕೆಲಸ ಮತ್ತು ಮಾಹಿತಿ ಆಯೋಗ ಸಮಾನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ನೀಡಲು ನೆರವಾಗುತ್ತಿದೆ. ಮೂಲತಃ ನಾನೊಬ್ಬ ಪತ್ರಕರ್ತನಾಗಿರುವುದರಿಂದ ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳಿಂದ ಉತ್ತರ ಪಡೆದು ಸಾರ್ವಜನಿಕರಿಗೆ ತಿಳಿಸುತ್ತಿದ್ದಂತೆ ಮಾಹಿತಿ ಆಯೋಗವು ಕೂಡಾ ಮಾಹಿತಿ ಹಕ್ಕಿನ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಅಧಿಕಾರಿಗಳಿಂದ ಉತ್ತರ ಪಡೆದು ಸಾರ್ವಜನಿಕರಿಗೆ ವಿವರವಾದ ಮಾಹಿತಿಯನ್ನು ನೀಡಿ ಪಾರದರ್ಶಕವಾದ ಆಡಳಿತ ಮಾಡಲು ಮುಂದಾಗಲಿದೆ. ಇದಕ್ಕಾಗಿ ಮಾಹಿತಿ ಆಯೋಗದ ಕೆಲಸ ಕಾರ್ಯ ಸುಗಮವಾಗಿ ನಡೆಯಲು ಮಾಧ್ಯಮದವರ ಸೂಕ್ತ ಮಾರ್ಗದರ್ಶನ ಅಗತ್ಯ ಎಂದು ಬಿ.ವೆಂಕಟ ಸಿಂಗ್ ಹೇಳಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top