ಶ್ರೀವಾದಿರಾಜರ ಕೃತಿ ಕುಸುಮಕ್ಕೆ ಶ್ರೀ ಪೇಜಾವರ ಶ್ರೀಗಳ ಮಾಂತ್ರಿಕ ಸ್ಪರ್ಶ!

Upayuktha
0

ಹಳ್ಳಿ- ನಗರ- ಮಹಾನಗರಗಳಿಗೂ ವಿಸ್ತರಿಸಿ ಬೆಳೆದ ಕಾರ್ತಿಕ ತುಳಸಿ ಸಂಕೀರ್ತನೆ 




ಉಡುಪಿ: ಭಾವೀ ಸಮೀರರೆಂದೇ ಉಲ್ಲೇಖಿಸಲಾಗುವ ಉಡುಪಿಯ ಶ್ರೀ ಮಧ್ವ ಗುರುಪರಂಪರೆಯ ಪ್ರಾತಃಸ್ಮರಣೀಯರಾದ ಶ್ರೀ ವಾದಿರಾಜ ಗುರುಸಾರ್ವಭೌಮರು ತೀರಾ ಸಾಮಾನ್ಯರೆನಿಸಿದ ಕೃಷ್ಣಭಕ್ತರಿಗೂ ಅನೇಕ ವಿಧಗಳಲ್ಲಿ ಸರಳ ಭಕ್ತಿಯ ಮಾರ್ಗಗಳನ್ನು ಅನ್ವೇಷಿಸಿ ಬಹಳ ಕಾರುಣ್ಯ ಮೆರೆದವರು.‌


ರುಗ್ಮಿಣೀಶ ವಿಜಯವೆಂಬ ಕಾವ್ಯಗ್ರಂಥವೂ ಸೇರಿದಂತೆ ಅನೇಕ ಮಹತ್ತರ ಕೃತಿಗಳನ್ನು ರಚಿಸಿ ವಿದ್ವತ್ ಪ್ರಪಂಚವನ್ನು ಅನುಗ್ರಹಿಸಿದ ಶ್ರೀವಾದಿರಾಜರು ಲಕ್ಷ್ಮೀ ಶೋಭಾನೆಯಂಥಹ ಕೃತಿಗಳನ್ನು ರಚಿಸಿಕೊಟ್ಟು ಲಕ್ಷಾಂತರ ತಾಯಂದಿರಿಗೆ ಶ್ರೀಲಕ್ಷ್ಮೀನಾರಾಯಣರ ಕೃಪೆ ಸಿದ್ಧಿಯ ದಾರಿ ಹಾಗೂ ತುಳುವಿನಲ್ಲಿ ದಶಾವತಾರ ಕೀರ್ತನೆ ರಚಿಸಿ ಕರಾವಳಿ ನೆಲದ ನಿರಕ್ಷರಿಗಳೂ ಸೇರಿದಂತೆ ಸಕಲ ಆಸ್ತಿಕ ಜನರೂ ಬಹಳ ಸುಲಭ ಹಾಗೂ ಲಯಬದ್ಧವಾಗಿ ಭಗವಂತನನ್ನು ಸ್ತುತಿಸುವ ಮಹದುಪಕಾರ ಮಾಡಿದರು.


ತುಲಸೀ ಸಂಕೀರ್ತನೆ ಅವರ ಮತ್ತೊಂದು ಮಹತ್ವದ ರಚನೆಯಾಗಿದೆ. ಗಾತ್ರದಲ್ಲಿ ತುಂಬ ಚಿಕ್ಕದಾದರೂ ಪಾರಿಜಾತ ಪುಷ್ಪದಷ್ಟೇ ಮೌಲಿಕವಾಗಿದೆ.‌ ಉಡುಪಿ ಶ್ರೀ ಕೃಷ್ಣಮಠದಲ್ಲಿ ಬಹುತೇಕ ನಿತ್ಯ ಸಂಜೆ ಇದರ ಗಾಯನ ನಡೀತದೆ. ಉಳಿದಂತೆ ಕಾರ್ತಿಕ ಮಾಸದಲ್ಲಿ ತೌಳವ ನೆಲದ ಬ್ರಾಹ್ಮಣರ ಮನೆಗಳಲ್ಲಿ ಸಂಜೆಯ ಹೊತ್ತಿನಲ್ಲಿ ನಡೆಯುವ ತುಲಸೀ ಪೂಜೆಯ ವೇಳೆಯಲ್ಲಿ ತುಲಸೀ ಸಂಕೀರ್ತನೆಗಳನ್ನು ಕುಣಿಯುತ್ತ ಹಾಡುವ ಸಂಪ್ರದಾಯ ಅನೂಚಾನವಾಗಿ ನಡೆಯುತ್ತ ಬಂದಿದೆ.‌ ಭಗವಂತನ ದಶಾವತಾರಗಳನ್ನು, ಉಡುಪಿ ಕೃಷ್ಣನನ್ನು ಹಾಡುವ ಅನೇಕ‌ ಕೀರ್ತನೆಗಳು ಇದರಲ್ಲಿವೆ.‌


ಮಹತ್ವದ ಮತ್ತು ಉಲ್ಲೇಖನೀಯ ಸಂಗತಿ ಎಂದರೆ ಈ ಒಂದು ಸಂಪ್ರದಾಯ ವರ್ತಮಾನದ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಕ್ಷೀಣಿಸುವ ಸಂದರ್ಭಗಳಿತ್ತು. ಉಡುಪಿಯ ಮಠಗಳು ಕೆಲವು ದೇವಸ್ಥಾನಗಳು ಹಾಗೂ ತುಂಬ ಸಂಪ್ರದಾಯಸ್ಥ ಮನೆಗಳಲ್ಲಿ ಮಾತ್ರವೇ ಇದು ಉಳಿದುಕೊಂಡಿತ್ತು. ಆದರೆ ಪ್ರಸ್ತುತ ಶ್ರೀಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೀಡಿದ ಮಾಂತ್ರಿಕ ಸ್ಪರ್ಶದಿಂದ ಇವತ್ತು ಉಡುಪಿ ದಕ್ಷಿಣ ಕನ್ನಡ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಚೆನ್ನೈ ಸೇರಿದಂತೆ ಮಾಧ್ವ ಸಂಪ್ರದಾಯದ ಸಾವಿರಾರು ಮನೆಗಳು ನೂರಾರು ದೇವಸ್ಥಾನಗಳು ಬ್ರಾಹ್ಮಣ ಸಂಘಟನೆಗಳಲ್ಲಿ ತುಲಸೀ ಸಂಕೀರ್ತನೆಯು ಹೊಸ ಚೈತನ್ಯವನ್ನು ಪಡೆದು ನಡೀತಾ ಇದೆ.‌ ಈ ಬಗೆಯಲ್ಲಿ ಇದರ ವ್ಯಾಪ್ತಿಯನ್ನು ಅಗಾಧವಾಗಿ ವಿಸ್ತರಿಸಿದ ಶ್ರೇಯ ಶ್ರೀ ಪೇಜಾವರ ಶ್ರೀಗಳಿಗೆ ಸಲ್ಲಬೇಕು.‌


ಸುಮಾರು 25-30 ವರ್ಷಗಳ ಹಿಂದೆ ಪಾವನ. ಸಂಸತ್ತು ಎಂಬ ಧರ್ಮನಿಷ್ಠ ಯುವಕರ ತಂಡವೊಂದನ್ನು ಕಟ್ಟಿ ಅವರಿಗೆಲ್ಲ ತುಲಸೀ ಸಂಕೀರ್ತನೆಯ ಸಂಪ್ರದಾಯ ಬದ್ಧ ರಾಗ ಮತ್ತು ನರ್ತನಗಳ ತರಬೇತಿಯನ್ನು ಸ್ವತಃ ಶ್ರೀಗಳವರೇ ನೀಡಿದರು. ಅಲ್ಲಿಂದ ಮತ್ತೊಂದಷ್ಟು ಜನ ಸಿದ್ಧರಾಗಿ ಅದನ್ನು ಬೆಳೆಸುವಲ್ಲಿ ಶ್ರಮಿಸಿದರು. ಆ ಮೂಲಕ ಒಂದರ್ಥದಲ್ಲಿ ಪುನಃ ಪ್ರಕ್ಷೇಪಗೊಂಡ ಬೀಜ ಇವತ್ತು ಬಹಳ ಸಮೃದ್ಧವಾಗಿ ಬೆಳೆದು ನಿಂತಿದೆ. ಒಂದು ದಿವ್ಯವೂ ಸರಳವೂ ಆದ ಸಂಪ್ರದಾಯವೊಂದು ಪುನಶ್ಚೇತನ ಕಂಡ ಈ ಯಶೋಗಾಥೆಯ ಹಿಂದಿರುವ, ಶ್ರೀಗಳಾದಿಯಾಗಿ ತರಬೇತಿ ನೀಡಿದ ಎಲ್ಲರೂ ಹಾಗೂ ತರಬೇತಿ ಪಡೆದು ತುಲಸೀ ಸಂಕೀರ್ತನೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಸರ್ವರೂ ಅಭಿನಂದನಾರ್ಹರು.‌


- ಜಿ ವಾಸುದೇವ ಭಟ್ ಪೆರಂಪಳ್ಳಿ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top