ರಾಸುಗಳಿಗೆ ಭ್ರೂಣ ವರ್ಗಾವಣೆಯ ಪತ್ರಿಕಾ ವರದಿಯೊಂದನ್ನು ನೋಡಿದೆ. ಕೃತಕವಾಗಿ ಪ್ರಯೋಗ ಶಾಲೆಯಲ್ಲಿ ಅಧಿಕ ಇಳುವರಿಯ ತಳಿಯ ಭ್ರೂಣವನ್ನು ಸೃಷ್ಟಿಸಿ ದನಗಳ ಗರ್ಭಾಶಯದೊಳಗೆ ವರ್ಗಾಯಿಸಿ ಕರೆದಷ್ಟೂ ಮೊಗೆ ಮೊಗೆದು ಹಾಲು ಕೊಡುವ ಅಕ್ಷಯ ಪಾತ್ರೆಯಂತ ತಳಿಗಳ ಸೃಷ್ಟಿ ಇದರ ಹಿಂದಿನ ರಹಸ್ಯ.
ಪತ್ರಿಕಾ ವರದಿ ನೋಡಿದಾಗ ಛೆ! ಎಂಬ ಉದ್ಧಾರದೊಂದಿಗೆ ಮನಸ್ಸು ಕಲುಷಿತಗೊಂಡಿತು. ಅಧಿಕ ಇಳುವರಿ ಎಂಬ ಈ ಭ್ರಾಂತಿ ಮನುಕುಲವನ್ನು ಎಲ್ಲಿಗೆ ಮುಟ್ಟಿಸೀತು ಎಂದು ವ್ಯಾಕುಲಗೊಂಡಿತು.
ಹೇಳಿಕೇಳಿ ಹಸುಗಳು ಹಾಲು ಉತ್ಪಾದನೆ ಮಾಡುವುದು ಅವುಗಳ ಕರುಗಳಿಗೆ. ಅಲ್ಲಿ ಮಿಗತೆ ಇದ್ದರೆ ಮಾತ್ರ ಅವುಗಳ ಉಪಯೋಗಿಸುವ ಹಕ್ಕು ಮನುಷ್ಯರಿಗೆ. ಹಾಗಿದ್ದರೆ ಮಾತ್ರ ಹಾಲು ಸರ್ವ ಶ್ರೇಷ್ಠ ಅಥವಾ ಅಮೃತ. ಅಲ್ಲವಾದರೆ? ಉತ್ತರ ಓದುಗರಿಗೆ ಬಿಡುವೆ. ಇದು ಪ್ರಕೃತಿ ನಿಯಮ.
ದೇಶದ ಜನರ ಆರೋಗ್ಯದ ಉದ್ದೇಶದಿಂದ ಖಾಯಿಲೆ ರಹಿತ ಸಮಸ್ಯೆ ರಹಿತ ದೇಶೀ ದನಗಳನ್ನು ಸಂಕರ ತಳಿಗಳಾಗಿ ಪರಿವರ್ತಿಸಲಾಯಿತು. ಅರ್ಧ ಯಾ ಒಂದು ಲೀಟರ್ ಹಾಲು ಸಿಗುತ್ತಿದ್ದ ದನಗಳ ಬದಲಾಗಿ ಎಂಟರಿಂದ ಹತ್ತು ಲೀಟರ್ ಗೆ ಪರಿವರ್ತಿಸಿ ನಂತರ ಹತ್ತಿಪ್ಪತ್ತು ಲೀಟರ್ಗೆ ಅದನ್ನು ಅಭಿವೃದ್ಧಿಪಡಿಸಲಾಯಿತು. ಅಧಿಕ ಹಾಲನ್ನು ನೋಡಿದ ರೈತರು ನಮ್ಮ ಭಾಗ್ಯದ ಬಾಗಿಲು ತೆರೆಯಿತೆಂದೇ ಅದನ್ನು ಆತ್ಮೀಯವಾಗಿ ಸ್ವೀಕರಿಸಿದರು. ಸಾಕಿದರು! ಹಾಲು ನೀಡುವ ಹಸುಗಳೊಂದಿಗೆ ಖಾಯಿಲೆಗಳ ಸರಮಾಲೆಯನ್ನೂ ಸಾಕಿದರು.!! ಹಾಲಿನ ಉತ್ಪಾದನೆಗಾಗಿ ನಿರಂತರ ಹೋರಾಟವನ್ನೇ ನಡೆಸಿದರು. ಎಲ್ಲಾ ಸಮಸ್ಯೆಗಳಿಂದ ಪಾರಾಗಲು ಉತ್ಪಾದನಾ ವೆಚ್ಚಕ್ಕಿಂತ ಅದೆಷ್ಟೋ ಕಡಿಮೆ ದರದಲ್ಲಿ ಸಿಗುವ ಹಾಲನ್ನು ಬಳಸುವುದು ಶ್ರೇಷ್ಠ ಅಂತ ದನ ಸಾಕುವುದಕ್ಕೆ ವಿದಾಯ ಹೇಳಿದರು. ಮನೆಯಲ್ಲಾದರೂ ಸಮಸ್ಯೆಗಳೊಂದಿಗೆ ನಾನಾ ರೂಪದ ಚಿಕಿತ್ಸೆಗಳನ್ನು ನಡೆಸಿಯೇ ಹಾಲು ಕುಡಿಯುವಂತಿದ್ದರೆ ಅದೇರೂಪದ ಹಾಲನ್ನು ಖರೀದಿಸುವುದೇ ಸುಖ ಅಂತ ಅನಿಸುವುದು ಸಹಜವಾಗಿಯೇ ಇತ್ತು. ಯಾಕೆಂದರೆ ಎಲ್ಲರೂ ಹೋಗುವುದು ಸುಖದ ಬೆನ್ನತ್ತಿಯೇ ಹೊರತು ಕಷ್ಟಗಳ ಹಿಂದಲ್ಲ.
ಹಾಲಿನಂತೆ ಕೃಷಿಯಲ್ಲಿಯೂ ಅಧಿಕ ಇಳುವರಿಯ ಹಿಂದೆ ಹೋಗಿ ಕೃಷಿಕ ಇಂದು ಖಾಯಿಲೆಗಳ, ನಾನಾತರದ ಕೀಟ ಬಾಧೆಗಳ, ಕಾಡು ಪ್ರಾಣಿಗಳ ಉಪಟಳದಿಂದ ಬೇಸತ್ತು ಕೃಷಿಯಿಂದಲೇ ವಿಮುಖನಾಗುವತ್ತ ನಡೆಯುತ್ತಿದ್ದಾನೆ. ಯಾವುದೇ ಅಧಿಕ ಇಳುವರಿ ತಳಿಗಳಾಗಲಿ, ಗೊಬ್ಬರಗಳಾಗಲಿ, ವೈಜ್ಞಾನಿಕ ವಿಶ್ಲೇಷಣೆಯ ಮಣ್ಣು ಪರೀಕ್ಷೆಗಳಾಗಲಿ ರೈತರಿಗೆ ಸುಖವನ್ನಂತೂ ನೀಡಲಿಲ್ಲ. ಮೊದಲಿಗಿಂತ ಸಮಸ್ಯೆಗಳ ಬೆಟ್ಟವೇ ಕಣ್ಣ ಮುಂದೆ ಕಾಣಬಹುದು.
ಅದೇ ರೀತಿ ಹಾಲು ಕುಡಿಯುವ ಮಂದಿಯ ಅಗತ್ಯಗಳನ್ನು ಪೂರೈಸಲು ಪ್ರಕೃತಿ ವಿರೋಧಿ ಸಂತಾನಾಭಿವೃದ್ಧಿ ಕಾರ್ಯಕ್ಕೆ ವ್ಯವಸ್ಥೆಯೊಂದು ಶ್ರೀಕಾರ ಬರೆದದ್ದು ಕಂಡಿತು. 21 ಸಾವಿರ ರೂ ವೆಚ್ಚ ತಗಲುವ ಈ ವ್ಯವಸ್ಥೆಗೆ ರೈತನ ಪಾಲು ಕೇವಲ ರೂ.ಒಂದು ಸಾವಿರವಂತೆ. ಹೆಗ್ಗಣದ ಗೂಡಲ್ಲಿ ತಿಂಡಿ ಇಟ್ಟು ಬಾಗಿಲು ತೆರೆದು ಆಮಿಷವನ್ನು ಒಡ್ಡಿದಂತೆ ಹಾಲಿನ ಅಮೃತ ಪಾತ್ರೆ ತೆರೆದುಕೊಳ್ಳುವ ಆಮಿಷವನ್ನು ಒಡ್ದುತ್ತಿದ್ದಾರೆ.!! ಸರ್ವಾಂಗ ಸುಂದರ ಪ್ರಕೃತಿಯ ನಿಯಮಗಳನ್ನೆಲ್ಲ ಗಾಳಿಗೆ ತೂರುತ್ತಿದ್ದಾರೆ.
ಭ್ರಾಂತಿಯೋ ಸಂಪೂರ್ಣ ಸುಖದಾಶೆ ಬಾಹ್ಯದಲಿ |
ಸಾಂತ ಲೋಕದ ಸೌಖ್ಯ ಖಂಡ ಖಂಡವದು ||
ಸ್ವಾಂತ ಕೃಷಿಯಿಂ ಬ್ರಹ್ಮ ವೀಕ್ಷೆ ಲಭಿಸಿರ್ದೋಡೆ -|
ಕಾಂತ ಪೂರ್ಣಾನಂದ ಮಂಕುತಿಮ್ಮ.||
ಬಾಹ್ಯ ಪ್ರಪಂಚದಿಂದ ಸಂಪೂರ್ಣ ಸುಖವನ್ನು ಪಡೆಯುವ ಆಸೆ ಒಂದು ಭ್ರಾಂತಿ. ಯಾಕೆಂದರೆ ಸುಖಕ್ಕೂ ಒಂದು ಮಿತಿ ಇದೆ. ಸ್ವಂತ ಪ್ರಯತ್ನದಿಂದ ಅಥವಾ ಕೃಷಿಯಿಂದ ಕೆಲಸ ಮಾಡಿದಾಗ ಸಿಗುವುದೇ ಬ್ರಹ್ಮದರ್ಶನ. ಅದು ಮಾತ್ರ ಪರಿಪೂರ್ಣ ಆನಂದವನ್ನು ನೀಡಬಹುದು. ಅಲ್ಲವಾದರೆ ಆನಂದವೆಂಬುದು ಭ್ರಾಂತಿಯೇ ಆದೀತು.
ಓ! ರೈತ ಮಿತ್ರರೇ, ಆಮಿಷಗಳ ಬೋನಲ್ಲಿ ಬೀಳಬೇಡಿ ನಮ್ಮ ಸ್ವಾತಂತ್ರ್ಯದ ಬದುಕನ್ನು ಕಳಕೊಳ್ಳಬೇಡಿ. ತಿಮ್ಮ ಕವಿಯ ನುಡಿಯಂತೆ ಅಧಿಕ ಹಾಲಿನ ಭ್ರಾಂತಿಗೆ ಮರುಳಾಗಬೇಡಿ.
-ಎ.ಪಿ. ಸದಾಶಿವ ಮರಿಕೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ