ಮಂಗಳೂರು: ಹೋಟೆಲ್ ಉದ್ಯಮಿ, ನಗರದ ಜನತಾ ಡಿಲಕ್ಸ್ ಹೋಟೆಲ್ ಮಾಲೀಕ ಪತ್ತುಮುಡಿ ಸೂರ್ಯನಾರಾಯಣ ರಾವ್ (72) ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ ಭಾರತಿ ರಾವ್, ಪುತ್ರಿ ಶ್ರೀಲಕ್ಷ್ಮೀ ಇದ್ದಾರೆ.
ಸಣ್ಣ ವಯಸ್ಸಿನಲ್ಲೇ ಪಾಕ ವಿದ್ಯೆಯಲ್ಲಿ ಪ್ರಾವೀಣ್ಯತೆ ಪಡೆದ ಅವರು, ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಅಡುಗೆ ಸಹಾಯಕರಾಗಿ, ಬಳಿಕ ಸಣ್ಣ ಅಂಗಡಿ ವ್ಯವಹಾರ ನಡೆಸಿ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಅವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಹಂತ ಹಂತವಾಗಿ ಯಶಸ್ಸು ಕಂಡರು.
ಆರಂಭದಲ್ಲಿ ಮಂಗಳೂರಿನ ಕೆ. ಎಸ್. ರಾವ್ ರಸ್ತೆಯಲ್ಲಿ ‘ಜನತಾ ಡಿಲಕ್ಸ್’ ಹೆಸರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಅವರು ಬಳಿಕ ಕ್ರಮೇಣ ತನ್ನ ಉದ್ಯಮವನ್ನು ವಿಸ್ತರಿಸಿ ಬಳ್ಳಾಲ್‌ಬಾಗ್ ಸಮೀಪ ಪತ್ತುಮುಡಿ ಸೌಧ ಎಂಬ ಸಮುಚ್ಚಯ ನಿರ್ಮಿಸಿ ಅಲ್ಲಿಯೂ ಹೋಟೆಲ್ ಉದ್ಯಮ ಹಾಗೂ ಕೇಟರಿಂಗ್ ವ್ಯವಹಾರ ಆರಂಭಿಸಿದ್ದರು.
ಹೋಟೆಲ್ ಜನತಾ ಡಿಲಕ್ಸ್ ಮಾಲೀಕ ಪತ್ತುಮುಡಿ ಸೂರ್ಯನಾರಾಯಣ ರಾವ್ ಇವರ ಅಸಾಮಾನ್ಯ ಸಾಧನೆ ಪ್ರಶಂಸನೀಯ. ಪ್ರಾರಂಭದಲ್ಲಿ ಸಾಧನೆಯ ದುರ್ಗಮವಾದ ದಾರಿಯನ್ನು ಇವರು ಕ್ರಮಿಸಬೇಕಾಗಿತ್ತು. ಈ ಕಡಿದಾದ ದಾರಿಯನ್ನು ಕುಟ್ಟಿ, ತಟ್ಟಿ, ಮೆಟ್ಟಿ ಹೆದ್ದಾರಿಯನ್ನಾಗಿ ಮಾಡಿ ಮುಂದುವರಿದ ಸಾಹಸಿ ಇವರು.
ಹೊಟೇಲಿನ ವ್ಯವಹಾರದಲ್ಲಿ 'ಅ' ದಿಂದ 'ಅಃ' ದವರೆಗಿನ ಅನುಭವ, ಸಮಸ್ತ ವ್ಯಾಪಾರ ವ್ಯವಹಾರವನ್ನು ಸೂಕ್ಷ್ಮವಾಗಿ ಚಿಕಿತ್ಸಕ ದೃಷ್ಟಿಯಿಂದ ಅವಲೋಕಿಸಿ ಪರಿಹಾರ ಕಂಡು ಹುಡುಕುವ ಜಾಣ್ಮೆ ರಕ್ತಗತವಾಗಿ ಬಂದಿದೆ.
ಹಾಗಾಗಿ ಪತ್ತುಮುಡಿ ಸೂರ್ಯನಾರಾಯಣ ರಾವ್ ಅವರದು ಮಡಿ ಮೈಲಿಗೆಯ ಮನೆ. ತಿಂಗಳಲ್ಲಿ ಮೂರು-ನಾಲ್ಕು ದಿನ ಅಡುಗೆ ಕೆಲಸ ಅವರ ಪಾಲಿಗೇ ಪ್ರಾಪ್ತವಾಗುತ್ತಿತ್ತು. ಹಾಗಾಗಿ ಅಡುಗೆ ಕೆಲಸದಲ್ಲಿ ಬಹಳ ಪಳಗಿದವರು. ಹೈಸ್ಕೂಲ್ ವಿದ್ಯಾಭ್ಯಾಸ ಪೂರ್ತಿಯಾಗಿತ್ತು. ಉದ್ಯೋಗ ತಕ್ಷಣ ಲಭ್ಯವಾಗುವ ಹಾಗಿಲ್ಲ. ಪ್ರಾರಂಭದಲ್ಲಿ ಅಂಗಡಿ ಇಟ್ಟು ನೋಡಿ ಅನುಭವವಿಲ್ಲದೇ ನಷ್ಟವಾಯಿತು. ಸಂತೆ ವ್ಯಾಪಾರವನ್ನು ಮಾಡಿದ್ದುಂಟು. ಪತ್ತುಮುಡಿ ಮನೆಯ ಹೆಗ್ಗಳಿಕೆಯಿಂದಾಗಿ ಸ್ವಲ್ಪ ಮುಜುಗರವನ್ನು ಅನುಭವಿಸಿದೆ. ಆ ನಂತರ ಸ್ವಂತ ಹೊಟೇಲ್ ನಡೆಸಿರುವುದಾಗಿದೆ. "One Man Show" ಅವರ ಸ್ವಂತ ಹೊಟೇಲ್. ಆದುದರಿಂದ ಅಳುಕಿಲ್ಲದೇ ಎಲ್ಲಾ ಕೆಲಸ ಮಾಡಿದರು. ಪ್ರಾರಂಭದಲ್ಲಿ ಸ್ವಲ್ಪ ಅಡಚಣೆ ಉಂಟಾದರೂ ಬಳಿಕ ಯಶಸ್ವಿಯಾಯಿತು. ಹೋಟೆಲ್ ಅನುಭವ ಪೂರ್ತಿ ಪ್ರಾಪ್ತಿಯಾಯಿತು. ಜೊತೆಗೆ ಕೃಷಿ ಬೇಸಾಯವನ್ನೂ ಶ್ರದ್ಧೆಯಿಂದ ಪೂರೈಸಿದರು.
ಆ ಮೇಲೆ ಕುಂದಾಪುರದ "ಶರೋನ್" ಹೋಟೆಲ್ ಮತ್ತು ಉಡುಪಿಯ “ಕಿದಿಯೂರು" ಹೋಟೆಲ್‌ನಲ್ಲಿ ಸಸ್ಯಹಾರಿ ರೆಸ್ಟೋರೆಂಟ್‌ನಲ್ಲಿ ಪಾಲುದಾರನಾಗಿ ವ್ಯವಹರಿಸಿದ್ದರು. ಸದ್ರಿಯವರು 10 ಜನರ ಅಡುಗೆ ಮಾಡಬೇಕಾದ ಸಂದರ್ಭದಲ್ಲಿ ಗ್ರಾಮ್‌ಗಳು ಹಾಗೂ ಕಿಲೋಗಳ ಲೆಕ್ಕದಲ್ಲಿಯೂ. 100 ಜನರ ಅಡುಗೆ ಮಾಡಬೇಕಾದ ಸಂದರ್ಭದಲ್ಲಿ ಕ್ವಿಂಟಾಲ್‌ಗಳ ಲೆಕ್ಕದಲ್ಲಿಯೂ, ಸಾವಿರ ಜನರ ಅಡುಗೆ ಮಾಡಬೇಕಾದ ಸಂದರ್ಭದಲ್ಲಿ ಮೂಟೆಗಳ ಲೆಕ್ಕದಲ್ಲಿಯೂ ಕರಾರುವಕ್ಕಾಗಿ ಹೇಳುವ ಪ್ರಾವೀಣ್ಯತೆಯನ್ನು ಹೊಂದಿದ್ದರು. ಆಯಾಯ ಸಂದರ್ಭಕ್ಕಗನುಗುಣವಾಗಿ ಅಡುಗೆಗಳ ಏರುಪೇರುಗಳನ್ನು ಗಮನಿಸಿ. ಸರಿಪಡಿಸುವ ಚಾಕಚಕ್ಯತೆಯನ್ನು ಹೊಂದಿದ್ದರು. ಅಷ್ಟೇ ಅಲ್ಲದೆ ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೆ. ಜನರಿಗೆ ಉತ್ತಮ ಗುಣಮಟ್ಟದ ಆಹಾರವನ್ನೇ ಒದಗಿಸುವಲ್ಲಿ ಆದ್ಯತೆ ನೀಡುತ್ತಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ