ಸಮಾಜ ಶಾಸ್ತ್ರದ ಮಾಷ್ಟ್ರಿಗೆ ಇಂದೇಕೋ ಕ್ಲಾಸ್ ತೆಗೆದುಕೊಳ್ಳಲು ಮನಸ್ಸಾಗಲಿಲ್ಲ. "ನಾವಿಂದು ಇಂಗ್ಲೀಷ್ ಶಬ್ದ ಬಂಡಿ ಆಡೋಣ" ಎಂಬ ಪುಕ್ಕಟೆ ಸೂಚನೆ ನೀಡಿದರು. ಮಕ್ಕಳೆಲ್ಲ ಎಂದಿಲ್ಲದ ಉತ್ಸಾಹದಿಂದ "ಸರಿ ಸರ್, ಆರಂಭಿಸಿ" ಅಂತ ಸೀಟಿ ಊದಿ ಹಸಿರು ನಿಶಾನೆ ತೋರಿಸಿದರು. ಸಮಾಜ ಮಾಸ್ಟ್ರು "ಎ.....ಫೋರ್" ಎನ್ನುವಾಗಲೇ ತರಗತಿಯ ಮಕ್ಕಳೆಲ್ಲ "ಏರೋ....ಏರೋ" ಎಂದು ಕೂಗಿದರು. ಮತ್ತೆ ಮಾಷ್ಟ್ರು "ಬಿ.... ಫೋರ್" ಅಂತ ಕೂಗುತ್ತಲೇ ಇರುವಾಗ "ಬ್ರಷ್.... ಬ್ರಷ್" ಎಂಬ ಘೋಷಣೆ ಇಡೀ ಕ್ಲಾಸಲ್ಲಿ ಮೊಳಗಿತು. ಮಾಷ್ಟ್ರಿಗೆ ಬಹಳ ಕುತೂಹಲ,.... 'ಎಂದೂ ಇಲ್ಲದ ಉತ್ಸಾಹ ಮಕ್ಕಳಲ್ಲಿ ಇಂದೇಕೆ'? ಅಂತ. ಆದರೂ ಅದನ್ನು ತೋರಿಸಿಕೊಳ್ಳದೆ ಮತ್ತೆ "ಸಿ...ಫಾರ್" ಎನ್ನುತ್ತಾ ದನಿ ಎತ್ತುವುದಕ್ಕೂ ಮೊದಲೇ ಮಕ್ಕಳೆಲ್ಲ "ಚಪ್ಪಲ್.... ಚಪ್ಪಲಿ" ಅಂತ ಕೂಗಬೇಕೇ!? ಸಮಾಜ ಶಾಸ್ತ್ರದ ಮಾಷ್ಟ್ರಿಗೆ ಸಖೇದ್ ಆಶ್ಚರ್ಯ! ಇರಲಿ, ಮಕ್ಕಳನ್ನು ಒಂದಿಷ್ಟು ಗಲಿಬಿಲಿ ಗೊಳಿಸಬೇಕೆಂದು ಅಕ್ಷರ ಸರಣಿ ಬಿಟ್ಟು "ಎಸ್ ಫೋರ್" ಅಂತ... ಸರಣಿ ಬದಲಿಸಿದರು.
ತರಗತಿಯ ಮಕ್ಕಳು ಒಂದು ಕ್ಷಣ ಗಲಿಬಿಲಿಗೊಂಡಂತವರಾದರೂ ಮತ್ತೆ ಏಕ ಕಂಠದಿಂದ "ಶೂ... ಶೂ... ಶೂ" ಅಂತ ಬೊಬ್ಬಿಟ್ಟರು. ಸಮಾಜಶಾಸ್ತ್ರದ ಮಾಷ್ಟ್ರಿಗೆ ಅಚ್ಚರಿ! ಜೊತೆಗೆ ಸಂತೋಷ ಕೂಡ. ತರಗತಿಯಲ್ಲಿನ ಎಲ್ಲ ಮಕ್ಕಳು ಅತ್ಯುತ್ಸಾಹದಿಂದ ತನ್ನ ತರಗತಿಯಲ್ಲಿ ಭಾಗಿಯಾಗಿರುವುದು ಅವರಿಗೆ ಬಹಳ ಸಂತೋಷ ಕೊಟ್ಟಿತು. ಕುತೂಹಲ ತಡೆಯಲಾರದ ಸಮಾಜ ಮಾಸ್ಟ್ರು ಮತ್ತೆ ಇಡೀ ತರಗತಿಯನ್ನು ಪ್ರಶ್ನಿಸಿದರು. "ಮಕ್ಕಳೇ ನಾನು ಯಾವುದೇ ಆಂಗ್ಲ ಅಕ್ಷರ ಹೇಳಿದ ಕ್ಷಣ ನೀವೆಲ್ಲ ಅದಕ್ಕೆ ಸಂಬಂಧಿಸಿದ ಒಂದೇ ಶಬ್ದವನ್ನು ಎಲ್ಲರೂ ಏಕಕಾಲಕ್ಕೆ ಹೇಳುತ್ತಿದ್ದೀರಿ. ಇದು ಹೇಗೆ ಸಾಧ್ಯ? ಆ ಶಬ್ದಗಳಲ್ಲಿ ಅಂತಹ ವಿಶೇಷತೆ ಏನು?
ಅಷ್ಟರಲ್ಲಿ ತರಗತಿಯಲ್ಲಿ ತಲೆ ಹರಟೆ ಮಾಡುವ ಗೋಪಿ ಎದ್ದು ನಿಂತು ಹೇಳಿದ." ಸಾರ್ ಅದು ಬಹಳ ಸಿಂಪಲ್, ಸಭೆಯಲ್ಲಿ ಮುಖ್ಯ ಅತಿಥಿಗಳಿಗೆ 'ಏರೋ' ಬಿಟ್ಟವ, ಚಪ್ಪಲಿ ಎಸೆದವ, ಹಾಗೆಯೇ ಅತಿಥಿಗಳಿಗೆ ಇಂಕ್ ಸ್ಪ್ರೇ ಮಾಡಿದವ, ನಾಯಕರ ಫೋಟೋಗಳಿಗೆ ಕಪ್ಪು ಬಣ್ಣದ ಬ್ರಷ್ ಬಳಿದವ, ಕೋರ್ಟಿನಲ್ಲಿ ನ್ಯಾಯಾಧೀಶರಿಗೆ ಶೂ ಎಸೆದವರೆಲ್ಲ ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಚಾರ ಪಡೆಯುತ್ತಾರೆ... ಏನ್ ಸರ್ ನೀವು ಸಮಾಜಶಾಸ್ತ್ರದ ಮಾಸ್ಟರ್ ಆದರೂ ಸಮಾಜದ ಸಮಕಾಲೀನ ವಿದ್ಯಮಾನಗಳ ಬಗ್ಗೆ ಪೇಪರುಗಳಲ್ಲಿ ಸುದ್ದಿಯಾಗುತ್ತಿದ್ದು ಅವನ್ನು ಓದುತ್ತಿಲ್ಲವೇ?" ಎಂದಾಗ ಸಮಾಜ ಮಾಷ್ಟ್ರು "ವಿಷಯ ಹೌದಲ್ವಾ" ಎನ್ನುತ್ತಾ ತರಗತಿಯಲ್ಲಿನ ಮಕ್ಕಳ ಸಾಮಾನ್ಯ ಜ್ಞಾನದ ಬಗ್ಗೆ "ಭೇಷ್"! ಎನ್ನುತ್ತಲೇ ತನ್ನ ಬೋಳು ಮಂಡೆಯ ಮೇಲೆ ಕೈ ಇರಿಸಿ ತರಗತಿಯ ಹೊರಗಡೆ ಬಂದರು!
- ಎಸ್ ಎನ್ ಭಟ್, ಸೈಪಂಗಲ್ಲು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ