ಹಿರಿಯ ನಾಗರಿಕರ ಆರೈಕೆಗಾಗಿ ಅಲೋಶಿಯಸ್ ವಿವಿಯಿಂದ ಸರ್ಟಿಫಿಕೇಟ್ ಕೋರ್ಸ್

Upayuktha
0



ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಹಾಗೂ ಡೆವಲಪ್ ಮೆಂಟ್ ಎಜ್ಯುಕೇಶನ್ ಸರ್ವಿಸ್ [ಡೀಡ್ಸ್], ಮಂಗಳೂರು ಜಂಟಿ ಸಹಯೋಗದೊಂದಿಗೆ ಹಿರಿಯ ನಾಗರಿಕರಿಗೆ ಆರೈಕೆದಾರರಾಗಲು ಇಚ್ಛಿಸುವ ಆಸಕ್ತರಿಗೆ ಸರ್ಟಿಫಿಕೇಟ್ ಕೋರ್ಸ್ ಒಂದನ್ನು ಆಯೋಜಿಸುತ್ತಿದೆ.  


ಈ ಕೋರ್ಸಲ್ಲಿ ತರಬೇತಿ ಹೊಂದಿದ ಅಭ್ಯರ್ಥಿಗಳು ಹಿರಿಯ ನಾಗರಿಕರ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡುವ ವಿವಿಧ ಬಗೆಯ ಕೌಶಲ್ಯವನ್ನು ಪಡೆದು ಉನ್ನತ ಮಟ್ಟದ ಸೇವೆಯನ್ನು ನೀಡಲು ಪರಿಣತಿಯನ್ನು ಹೊಂದುತ್ತಾರೆ. ಈ ತರಬೇತಿಯಲ್ಲಿ ಉತ್ತೀರ್ಣರಾಗುವ ಯಾವುದೇ ಅಭ್ಯರ್ಥಿ ತನ್ನ ಸ್ವಗೃಹದಲ್ಲಿ, ನೆರೆಹೊರೆಯಲ್ಲಿ, ಆಸ್ಪತ್ರೆಗಳಲ್ಲಿ, ವಯೋವೃದ್ಧರ ಆಶ್ರಯತಾಣಗಳಲ್ಲಿ, ಡೇಕೇರ್ ಕೇಂದ್ರಗಳಲ್ಲಿ ಸೇವೆ ಒದಗಿಸಲು ಅರ್ಹತೆಯನ್ನು ಹೊಂದುತ್ತಾರೆ.


ವೃದ್ಧಾಪ್ಯವು ಸಾರ್ವತ್ರಿಕ ವಾಸ್ತವವಾಗಿದ್ದು, ವರ್ಧಿಸುತ್ತಿರುವ ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಮ್ಮ ಹಿರಿಯರ ಆರೈಕೆ ನಾವು ಯಾರಿಗೋ ತೋರಬೇಕಾದ ಔದಾರ್ಯವಲ್ಲ ನಮ್ಮ ಹಿರಿಯರ ಆರೈಕೆ ಮತ್ತು ಕಾಳಜಿಯು ವೈದ್ಯಲೋಕದ ಜವಾಬ್ದಾರಿ ಮಾತ್ರ  ಅಲ್ಲ. ಅದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಹೌದು. ಜೊತೆಗೆ ಅದೊಂದು ಸಾಮಾಜಿಕ ಬದ್ಧತೆ ಮತ್ತು ಕರ್ತವ್ಯವೂ ಕೂಡಾ. 


ಔಷಧಿಗಳು ಮತ್ತು ಚಿಕಿತ್ಸೆ ಅವರನ್ನು ಕೇವಲ ರೋಗಮುಕ್ತರನ್ನಾಗಿಸಬಹುದು. ಆದರೆ ಅವರನ್ನು ಗುಣಮುಖರನ್ನಾಗಿಸಲು ವೈದ್ಯಕಿಯೇತರ ಕ್ರಮಗಳು ಅಷ್ಟೇ ಮುಖ್ಯ.  ವೃದ್ಧಾಪ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಮನೋವಿಜ್ಞಾನ, ಶರೀರಶಾಸ್ತ್ರ, ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರ ಮುಂತಾದ ವಿವಿಧ ಕ್ಷೇತ್ರಗಳ ತಿಳಿವಳಿಕೆಯ ಸಮ್ಮಿಶ್ರಿತ ಆರೈಕೆಯ ಮನೋಭಾವವನ್ನು ಹೊಂದುವುದು ಅಗತ್ಯ ಎನ್ನುವುದು ನಮ್ಮ ತಿಳಿವಳಿಕೆ ಮತ್ತು ನಂಬಿಕೆ ಆಗಿರುತ್ತದೆ. 


ಹಿರಿಯ ಜೀವಿಗಳು ಘನತೆಯಿಂದ ತಮ್ಮ ಜೀವನದ ಕೊನೆಗಾಲದ ಪಯಣವನ್ನು ನೆಮ್ಮದಿಯಿಂದ ಸಾಗಲು ಸುಗಮವಾದ ವಾತಾವರಣವನ್ನು ನಾವು ಕಲ್ಪಿಸಬೇಕಾಗಿದೆ. ಹಿರಿಯ ನಾಗರಿಕರ  ಬಗೆಗಿನ ಕಾಳಜಿ ನಮ್ಮಲ್ಲಿ ಎಷ್ಟೇ ಪ್ರಬಲವಾಗಿದ್ದರೂ, ಅವರ ಆರೈಕೆಯ ಬಗ್ಗೆ ನಮ್ಮ ಜ್ಞಾನ ಮತ್ತು ಸಾಮರ್ಥ್ಯವು ಸೀಮಿತವಾಗಿದೆ ಎಂಬುದನ್ನು ನಾವು ಗುರುತಿಸಿದ್ದೇವೆ. ಇದನ್ನು ಪರಿಹರಿಸಲು, ಪ್ರತೀ ನಾಗರಿಕರು ತಮ್ಮ ತಮ್ಮ ಕುಟುಂಬದ ಹಿರಿಯ ಸದಸ್ಯರನ್ನು ಭಾವನಾತ್ಮಕವಾಗಿ, ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ಒಂದು ಸಾಮಾಜಿಕ ಜಾಗೃತಿ, ಅರಿವು ಮತ್ತು ಜವಾಬ್ದಾರಿಯನ್ನು ಬೆಳೆಸುವುದು ನಮ್ಮ ಆಶಯವಾಗಿದೆ.  ಈ  ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಆರೈಕೆದಾರರಿಗೆ ವೃತ್ತಿಪರ ತಾಂತ್ರಿಕ ಕೌಶಲ್ಯ ಸರ್ಟಿಫಿಕೇಟ್ ಕೋರ್ಸ್ ನ್ನು ನವೆಂಬರ್ ತಿಂಗಳಿನಿಂದ ಮೊದಲ ಬ್ಯಾಚಿಗೆ ತರಬೇತಿಯನ್ನು ನೀಡಲಾಗುತ್ತದೆ.


ಕೋರ್ಸ್ ವಿವರ:

ಕೋರ್ಸ್ ಅವಧಿ ಒಂದು ತಿಂಗಳು [26 ದಿನಗಳು ಒಟ್ಟು 162 ಗಂಟೆಗಳು]

3 ನವಂಬರ್ 2025 ರಂದು ಮೊದಲ ಬ್ಯಾಚ್. 

3 ಜನವರಿ 2026 ರಲ್ಲಿ ಎರಡನೆ ಬ್ಯಾಚ್. [ತದನಂತರದ ಬ್ಯಾಚ್ ಗಳನ್ನು ಕಾಲಕಾಲಕ್ಕೆ ಪ್ರಕಟಿಸಲಾಗುವುದು]

ಉದ್ಯೋಗದಲ್ಲಿರುವವರಿಗೆ ವಾರಾಂತ್ಯದ ಬ್ಯಾಚನ್ನು ಫೆಬ್ರುವರಿ 2026 ರಿಂದ ನಡೆಸಲಾಗುವುದು [ವರ್ಷದ 26 ಭಾನುವಾರಗಳು]

ಮಂಗಳೂರು ನಗರದ ಹೊರವಲಯದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಕೋರ್ಸ್ ವೆಚ್ಚ: ಪ್ರತೀ ಅಭ್ಯರ್ಥಿಗಳಿಗೆ ರೂ. 7500/- [ಊಟ, ವಸತಿ ಪ್ರತ್ಯೇಕ]

ಆರ್ಥಿಕ ಅನಾನುಕೂಲತೆ ಇರುವ ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನ ಅಥವಾ ಶುಲ್ಕದಲ್ಲಿ ರಿಯಾಯತಿ ನೀಡಲಾಗುವುದು.


ಅನುಕೂಲಗಳು:

ತರಬೇತಿ ಹೊಂದಿ ಪ್ರಮಾಣ ಪತ್ರ ಪಡೆದವರಿಗೆ ವಿವಿಧ ಆಸ್ಪತ್ರೆಗಳು, ವೃದ್ಧಾಶ್ರಮಗಳು, ಹಿರಿಯ ನಾಗರಿಕರ ಡೇಕೇರ್ ಕೇಂದ್ರಗಳಲ್ಲಿ, ಆರೈಕೆದಾರರನ್ನು ಒದಗಿಸುವ ಏಜೆನ್ಸಿಗಳಲ್ಲಿ ಉದ್ಯೋಗ ಲಭ್ಯ.

ತುಳು, ಕೊಂಕಣಿ, ಬ್ಯಾರಿ, ಅರೆಬಿಕ್, ಮಲೆಯಾಳಂ, ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಹೀಬ್ರೂ ಮಾತಾಡಲು ಬಲ್ಲವರಿಗೆ ವಿದೇಶಗಳಲ್ಲಿ ವಿಫುಲ ಅವಕಾಶ.

ದ್ವಿಚಕ್ರ ವಾಹನ ಚಲಾಯಿಸಲು ಬಲ್ಲವರಿಗೆ, ಪಾಸ್ ಪೋರ್ಟ್ ಇದ್ದವರಿಗೆ ತಕ್ಷಣದ ಉದ್ಯೋಗ ಅವಕಾಶಗಳು.

ಸರಕಾರಿ, ಅರೆಸರ್ಕಾರಿ ಮತ್ತು ಖಾಸಗಿ ಆರೋಗ್ಯ ವಲಯಗಳಲ್ಲಿ ಶುಶ್ರೂಷಾ ಸಹಾಯಕರಾಗಲು ಅನುಕೂಲ.

ಸ್ವಂತ ಆರೈಕೆದಾರ ಸೇವಾ ಏಜೆನ್ಸಿ ಅಥವಾ ಡೇಕೇರ್ ಕೇಂದ್ರ ನಡೆಸಲು ಅರ್ಹತೆಯನ್ನು ಪಡೆಯುವುದು.  

ಕನಿಷ್ಠ ಮನೆಗಳಲ್ಲಿ ಈ ತರಬೇತಿ ಹೊಂದಿದವರಿದ್ದರೆ ಮನೆಯ ಹಿರಿಯ ಜೀವಗಳು ಪದೇ ಪದೇ ಆಸ್ಪತ್ರೆಗೆ ಸೇರುವುದನ್ನು ತಪ್ಪಿಸಬಹುದು.  ಅವರು ಪರಾವಲಂಬಿಯಾಗಬೇಕಿಲ್ಲ. 


ಈ ಕೋರ್ಸನ್ನು ವೈದ್ಯಕ್ಷೇತ್ರದ ಪರಿಣಿತರು, ಅನುಭವಿ ಶುಶ್ರೂಷಾ ದಾದಿಯರು, ಮನೋವಿಜ್ಞಾನ ಕ್ಷೇತ್ರದ ತಜ್ಞರು, ಸಮಾಜಕಾರ್ಯ ಕ್ಷೇತ್ರದ ಪ್ರಾಜ್ಞರ ದೀರ್ಘಕಾಲದ ವೃತ್ತಿ ಅನುಭವದ ಆಧಾರದಲ್ಲಿ ರೂಪಿಸಲಾಗಿದೆ. ಈ ಕೋರ್ಸ್ ವೈದ್ಯಕೀಯೇತರ ಸರ್ಟಿಫಿಕೇಟ್ ಕೋರ್ಸ್ ಆಗಿದ್ದು ತರಬೇತಿ ಹೊಂದಿದ ಬಳಿಕ ಆರೈಕೆದಾರರಾಗಿ ವೃತ್ತಿ ನಿರ್ವಹಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ವಿವಿಧ ಸೇವಾಸಂಸ್ಥೆಗಳು, ವಯೋವೃದ್ಧರ ಧಾಮಗಳು, ಶುಶ್ರೂಷಾ ಕೇಂದ್ರಗಳನ್ನು ನಡೆಸುವ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಸೇವೆಯನ್ನು ಒದಗಿಸುವ ಏಜೆನ್ಸಿಗಳಿಗೆ ಪರಿಚಯಿಸುವುದು ಈ ಕೋರ್ಸಿನ ವಿನ್ಯಾಸದ ಭಾಗವಾಗಿದೆ. 



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top