ವಿವಿಧ ತಂಡಗಳಿಂದ ಅಪರೂಪದ ಪ್ರಸಂಗಗಳ ಪ್ರಸ್ತುತಿ
ಮಂಗಳೂರು: 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ- ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಈ ಬಾರಿ ನಡೆಸಲಿರುವ 13ನೇ ವರ್ಷದ ನುಡಿಹಬ್ಬ 'ಯಕ್ಷಗಾನ ತಾಳಮದ್ದಳೆ ಸಪ್ತಾಹ- ತ್ರಯೋದಶ ಸರಣಿ'ಯು ಇದೇ 2025 ನವೆಂಬರ್ ತಿಂಗಳ 23 ರಿಂದ 29 ರವರೆಗೆ ನಿಗದಿಯಾಗಿದೆ.
ನಿರಂತರ ಏಳು ದಿನಗಳ ಕಾರ್ಯಕ್ರಮವನ್ನು ನಗರದ ವಿಶ್ವವಿದ್ಯಾಲಯ ಕಾಲೇಜು ರವೀಂದ್ರ ಕಲಾ ಭವನದಲ್ಲಿ ಏರ್ಪಡಿಸಲಾಗಿದೆ. ಸಂಘಟನಾ ಪರ್ವ ಎಂಬ ಹೆಸರಿನ ಸಪ್ತಾಹದಲ್ಲಿ ಜಿಲ್ಲೆಯ ವಿವಿಧ ತಂಡಗಳಿಂದ ತಾಳಮದ್ದಳೆ ಕ್ಷೇತ್ರಕ್ಕೆ ಅಪರೂಪವೆನಿಸಿದ ಕೆಲವು ಯಕ್ಷಗಾನ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ' ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಇತ್ತೀಚೆಗೆ ಕದ್ರಿ ದೇವಳದ ವಠಾರದಲ್ಲಿ ಜರಗಿದ ಯಕ್ಷಾಂಗಣದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 'ನವಂಬರ 23 ರಂದು ಆದಿತ್ಯವಾರ ಅಪರಾಹ್ನ ಗಂಟೆ 2ರಿಂದ 'ಮಿತ್ತಲೋಕೊದ ಪೆತ್ತ' ತುಳು ತಾಳಮದ್ದಳೆಯೊಂದಿಗೆ ಆರಂಭವಾಗುವ ಸಪ್ತಾಹದ ಉದ್ಘಾಟನಾ ಸಮಾರಂಭ ಅದೇ ದಿನ ಸಂಜೆ ಗಂ.4 ಕ್ಕೆ ಜರಗುವುದು. ಬಳಿಕ 'ನಚಿಕೇತೋಪಖ್ಯಾನ' ಕನ್ನಡ ಪ್ರಸಂಗದ ತಾಳಮದ್ದಳೆಯಿದೆ. ಮುಂದೆ ಪ್ರತಿದಿನ ಸಾಯಂಕಾಲ 4.00 ರಿಂದ ಈಗಾಗಲೇ ತಾಳಮದ್ದಳೆ ಕ್ಷೇತ್ರದಲ್ಲಿ ಖ್ಯಾತರಾದ ಹಿರಿಯ ಯಕ್ಷಗಾನ ಕಲಾವಿದರನ್ನು ಬಳಸಿಕೊಂಡು ವಿವಿಧ ತಂಡಗಳು ವಿನೂತನ ಪ್ರಸಂಗಗಳನ್ನು ಪ್ರಸ್ತುತಪಡಿಸಲಿವೆ' ಎಂದವರು ತಿಳಿಸಿದರು.
ಭಾಗವಹಿಸುವ ಕಲಾ ಸಂಘಗಳು:
'ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಮೂಡಿ ಬರುವ ತ್ರಯೋದಶ ಸರಣಿಯಲ್ಲಿ ಕ್ರಮವಾಗಿ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಸಂಘ ಸೂಡ, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಯಕ್ಷಧ್ರುವ ಪಟ್ಲ ಹವ್ಯಾಸಿ ಘಟಕ ಮಂಗಳೂರು, ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟ್ ಉಪ್ಪಿನಂಗಡಿ, ಅಂಬುರಹ ಯಕ್ಷ ಸದನ ಪ್ರತಿಷ್ಠಾನ ಬೊಟ್ಟಿಕೆರೆ, ಹವ್ಯಾಸಿ ಬಳಗ ಕದ್ರಿ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡಗಳು ಭಾಗವಹಿಸಲಿವೆ. ಸಪ್ತಾಹದಲ್ಲಿ ಪ್ರತಿವರ್ಷದಂತೆ ಅಗಲಿದ ಹಿರಿಯ ಕಲಾವಿದರ ಸಂಸ್ಮರಣೆ, ಸಾಧಕರ ಸನ್ಮಾನ ಮತ್ತು ಪ್ರಶಸ್ತಿ ಪ್ರದಾನಗಳೂ ಜರಗಲಿವೆ' ಎಂದು ಸಮಿತಿ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಮಾಹಿತಿ ನೀಡಿದರು.
ಮುಂಬಯಿ ಉದ್ಯಮಿ ಜಗದೀಶ್ ಪೂಜಾರಿ ಇರಾ ಆಚೆಬೈಲು, ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಮಹಿಳಾ ಸಂಚಾಲಕಿ ನಿವೇದಿತಾ ಎನ್.ಶೆಟ್ಟಿ ಬೆಳ್ಳಿಪ್ಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಕಾರ್ಯಕಾರಿಣಿ ಸದಸ್ಯರುಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಸಿದ್ಧಾರ್ಥ ಆಜ್ರಿ, ವಾಸಪ್ಪ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದು ಸೂಕ್ತ ಸಲಹೆ ನೀಡಿದರು.


 
 
 
 
 
 
 
 
 
 
 
 

 
