ಮೂಡುಬಿದಿರೆ: ಭಾರತದ ಎಲ್ಲಾ ವಿವಿಗಳು ಸ್ನಾತಕೋತ್ತರ ಹಂತದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಸೀಟನ್ನು ಮೀಸಲಿಡಬೇಕು. ಸ್ಕೌಟ್ಸ್ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಒಂದು ಸಶಕ್ತ ಶಿಕ್ಷಣ ನೀತಿ ಬೇಕು. ಸರ್ವಧರ್ಮಗಳ ಪ್ರಾರ್ಥನೆ ಹೆಸರಿಗಷ್ಟೆ ಜರುಗದೆ ನಿಜಾರ್ಥದಲ್ಲಿ ನಾವೆಲ್ಲ ಒಂದಾಗಿ ಸಹಿಷ್ಣುತೆಯಿಂದ ಬದುಕುವ ವಾತಾವರಣ ನಮ್ಮ ನಡುವೆ ಸೃಷ್ಟಿಯಾಗಬೇಕು ಎಂದು ಕರ್ನಾಟಕ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧಿಯಾ ನುಡಿದರು.
ಅವರು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ರಾಷ್ಟ್ರ ಹಾಗೂ ರಾಜ್ಯ ಸಂಸ್ಥೆಗಳ ವತಿಯಿಂದ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಐದು ದಿನಗಳ ರೊಬೊಟಿಕ್ಸ್ , ಕೃತಕ ಬುದ್ದಿಮತ್ತೆ, ಯುವ ಉದ್ಯಮಶೀಲತೆ ಹಾಗೂ ಸ್ಟೆಮ್ ವಿಷಯಗಳನ್ನು ಒಳಗೊಂಡ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ 12 ರಾಜ್ಯಗಳಿಂದ ವಿದ್ಯಾರ್ಥಿಗಳು ಈ ತರಬೇತಿ ಕಾರ್ಯಾಗಾರಕ್ಕೆ ಆಗಮಿಸಿರುವುದು ಸಂತಸದ ವಿಷಯ. ಕಾರ್ಯಾಗಾರವನ್ನು ತಮ್ಮ ಉನ್ನತಿಗೆ ಉಪಯೋಗಿಸಿಕೊಳ್ಳಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಡಾ ಪಿ ಎಲ್ ಧರ್ಮ, ಶಿಸ್ತು, ಸೇವಾ ಮನೋಭಾವ, ನೇತೃತ್ವ ಹಾಗೂ ಸಾಮಾಜಿಕ ಜವಾಬ್ದಾರಿ, ರಾಷ್ಟ್ರೀಯ ಏಕತೆಯನ್ನು ಮೂಡಿಸುತ್ತಿರುವ ಸ್ಕೌಟ್ಸ್ ಆಂದೋಲನ, ಯುವಜನತೆಯಲ್ಲಿ ಇನ್ನಷ್ಟು ಜವಾಬ್ದಾರಿ ಹಾಗೂ ಬದ್ಧತೆಯನ್ನು ಬೆಳಸಲಿ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಸ್ಕೌಟ್ಸ್ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಹಿಂತಿರುಗಿ ಕೊಡುವ ಮನೋಭಾವ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಿಷ್ಠೆ ಹಾಗೂ ನಿರಂತರ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ನವದೆಹಲಿಯ ಮಾಜಿ ನಿರ್ದೇಶಕ ಕೃಷ್ಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮನ್ನು ಸಬಲಗೊಳಿಸಿಕೊಂಡ ಬಳಿಕ ಇತರರನ್ನು ಪ್ರೇರೇಪಿಸಲು ಮುಂದಾಗಬೇಕು ಎಂದರು. ಯುವ ಸಮುದಾಯ ತಮ್ಮ ಶಕ್ತಿಯನ್ನು ಅರಿತುಕೊಂಡು ಅದನ್ನು ಸಮಾಜದ ಹಿತಕ್ಕೆ ಬಳಸಬೇಕು ಎಂದು ತಿಳಿಸಿದರು.
ಶಿಬಿರದ ನಾಯಕ ಅನಲೇಂದ್ರ ಶರ್ಮ ಸ್ವಾಗತಿಸಿ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್ ವಂದಿಸಿ, ರೇಂಜರ್ ಲೀಡರ್ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಬಿಎಂ ತುಂಬೆ, ವಿಮಲಾ ರಂಗಯ್ಯ, ನವೀನ್‌ಚಂದ್ರ ಅಂಬೂರಿ, ಸತ್ಯಜಿತ್ ಚಟರ್ಜಿ, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಸಹಪ್ರಧ್ಯಾಪಕ ಡಾ ಹರೀಶ್ ಕುಂದರ್ ಹಾಗೂ ಇನ್ನಿತರರು ಇದ್ದರು. ಕಾರ್ಯಾಗಾರದಲ್ಲಿ ದೇಶದ 12 ರಾಜ್ಯಗಳಿಂದ 254 ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದರು.

.png)
