ಕೇಂದ್ರ ಸರಕಾರದ ಜೊತೆ ಚರ್ಚಿಸುವೆ ಸಾಹಿತಿ- ಹೋರಾಟಗಾರರ ನಿಯೋಗಕ್ಕೆ ಭರವಸೆ
ಕಲಬುರಗಿ: ಇಲ್ಲಿನ ದೂರದರ್ಶನ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ದೇಶದ ಯಾವುದೇ ಕೇಂದ್ರಗಳನ್ನು ಮುಚ್ಚಿದರೂ ಕಲಬುರಗಿ ಕೇಂದ್ರವನ್ನು ಮುಚ್ಚದಂತೆ ಕೇಂದ್ರ ಸರ್ಕಾರದ ಜೊತೆ ತಕ್ಷಣ ಮಾತನಾಡುವುದಾಗಿ ರಾಜ್ಯಸಭೆಯ ವಿರೋಧ ಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಭರವಸೆ ನೀಡಿದರು.
ಕಲಬುರಗಿ ಜಿಲ್ಲೆಯ ಹಿರಿಯ ಸಾಹಿತಿಗಳು, ಹೋರಾಟಗಾರರು ಹಾಗೂ ಚಿಂತಕರ ನಿಯೋಗ ಅವರನ್ನು ಕಲ್ಬುರ್ಗಿಯ ಐವಾನ್ ಈ ಶಾಹಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ ದೂರದರ್ಶನ ಕೇಂದ್ರವನ್ನು ಮುಚ್ಚದಂತೆ ಮನವಿ ಸಲ್ಲಿಸಿದಾಗ ಮಾತನಾಡಿದ ಅವರು ದೇಶದ ಇತರ ಕೇಂದ್ರಗಳ ಬಗ್ಗೆ ಯಾವುದೇ ನೀತಿಗಳಿದ್ದರೂ ಕಲಬುರಗಿ ಕೇಂದ್ರವನ್ನು ಮಾತ್ರ ಮುಚ್ಚಲು ಬಿಡುವುದಿಲ್ಲ. ಈ ಭಾಗಕ್ಕೆ ಅತ್ಯಂತ ಅವಶ್ಯಕವಾದ ಈ ಕೇಂದ್ರವನ್ನು ಮತ್ತೆ ಪುನಶ್ಚೇತನ ಗೊಳಿಸುವಂತೆ ಕೂಡಾ ಸಂಬಂಧ ಪಟ್ಟ ಸಚಿವರು ಸೇರಿದಂತೆ ಕೇಂದ್ರ ಸರ್ಕಾರದ ಜೊತೆ ಶೀಘ್ರದಲ್ಲಿ ಪತ್ರ ಬರೆದು ಚರ್ಚಿಸುವುದಾಗಿ ಹೇಳಿದರು.
ಜುಲೈ 24 ರಿಂದ ಕಲಬುರಗಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಣ ಸ್ಥಗಿತಗೊಂಡಿರುವುದು ಖೇದಕರ. ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ತಕ್ಷಣ ಕಾರ್ಯಾರಂಭ ಮಾಡಲು ಸಿಬ್ಬಂದಿ ನೇಮಕ,ಆಧುನಿಕ ತಂತ್ರಜ್ಞಾನ ಸೌಲಭ್ಯ ಒದಗಿಸುವುದು ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ರಾಜ್ಯದ ಸಚಿವರ ಸಹಯೋಗದೊಂದಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಖರ್ಗೆಯವರು ಆಶ್ವಾಸನೆ ನೀಡಿದರು.
ಕಲಬುರಗಿ ದೂರದರ್ಶನ ಕೇಂದ್ರದಲ್ಲಿ ನಿರ್ಮಾಣಗೊಂಡ ಕಾರ್ಯಕ್ರಮಗಳು ಚಂದನ ವಾಹಿನಿಯಲ್ಲಿ ಸುಮಾರು 170 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರಸಾರಗೊಳ್ಳುತ್ತಿತ್ತು. ಕಲ್ಯಾಣ ಕರ್ನಾಟಕ ವಿಭಾಗದ ರೈತರು, ಕಾರ್ಮಿಕರು, ಸಾಹಿತಿಗಳು, ಕಲಾವಿದರು, ಚಿಂತಕರು,ತಜ್ಞರು ಪಾಲ್ಗೊಳ್ಳಲು ಅವಕಾಶವಿದ್ದ ಇಂತಹ ಕೇಂದ್ರವನ್ನು ನಿಷ್ಕ್ರಿಯಗೊಳಿಸಿ ಕಾರ್ಯಕ್ರಮ ನಿರ್ಮಾಣ ಮಾಡದಂತೆ ಬಂದ್ ಮಾಡಿರುವುದಲ್ಲದೆ ಈಗಾಗಲೇ ಕೇಂದ್ರದಲ್ಲಿರುವ ಉಪಕರಣಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಮತ್ತು ವಿವಿಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ನಿಲಯ ನಿರ್ದೇಶಕರು ಸೇರಿದಂತೆ ಕಾರ್ಯಕ್ರಮ ವಿಭಾಗದಲ್ಲಿ ಒಬ್ಬನೇ ಒಬ್ಬ ಅಧಿಕಾರಿ ಕೂಡ ಇಲ್ಲದೆ ಕುಂಟುತ್ತ ಸಾಗುತ್ತಿದ್ದ ಈ ಕೇಂದ್ರವನ್ನು ಜುಲೈ 24 ರಿಂದ ಸಂಪೂರ್ಣವಾಗಿ ನಿಲುಗಡೆಗೊಳಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಕಲಬುರಗಿಯಲ್ಲಿ 1977ರಲ್ಲಿ ದೂರದರ್ಶನ ಕೇಂದ್ರ ಸ್ಥಾಪನೆಯಾಗಿದೆ. ಸುಮಾರು ಐದು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಯಕ್ರಮ ನಿರ್ಮಾಣ ಸೌಲಭ್ಯ (ಪಿಜಿಎಫ್) ಕೇಂದ್ರವನ್ನು ಬಂದ್ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ ಈ ಕೇಂದ್ರವನ್ನು ಮಚ್ಚದಂತೆ ರಾಷ್ಟ್ರಪತಿಗಳಿಗೆ ಪ್ರಧಾನ ಮಂತ್ರಿಗಳಿಗೆ ಪ್ರಸಾರ ಭಾರತಿ ಹಾಗೂ ಕೇಂದ್ರ ಸಚಿವರಿಗೆ ಒತ್ತಡ ಹಾಕಿ ಈ ಕೇಂದ್ರವನ್ನು ಮುಂದುವರಿಸಬೇಕೆಂದು ಒತ್ತಾಯಿಸಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಹಿರಿಯ ಮಕ್ಕಳ ಸಾಹಿತಿ ಏ.ಕೆ ರಾಮೇಶ್ವರ, ಭೀಮಣ್ಣ ಬೋನಾಳ, ಸಾಹಿತಿಗಳು ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಿ ಎಸ್ ಮಾಲಿ ಪಾಟೀಲ್ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಸುರೇಶ್ ಬಡಿಗೇರ್, ಹನುಮಂತರಾಯ, ಬಾನು ಕುಮಾರ್ ಮುಂತಾದವರು ಯೋಗದಲ್ಲಿ ತೆರಳಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ