ವಿಜಯದಶಮಿಯ ಮಹತ್ವ

Upayuktha
0



ಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣರು ಮುಂತಾದವರ ಮೇಲೆ ನಿಯಂತ್ರಣವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಈ ದಿನಕ್ಕೆ ದಶಹರಾ, ದಸರಾ, ವಿಜಯ ದಶಮಿ ಮುಂತಾದ ಹೆಸರುಗಳಿವೆ.


ಇದು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ‘ಆಶ್ವಯುಜ ಶುಕ್ಲ ದಶಮಿ’ಗೆ ವಿಜಯದಶಮಿ ಎನ್ನುವ ಹೆಸರಿದೆ. ಇದು ನವರಾತ್ರಿ ಮುಗಿದ ನಂತರದ ದಿನವಾಗಿದೆ. ಆದುದರಿಂದ ಇದನ್ನು ನವರಾತ್ರಿಯ ಸಮಾಪ್ತಿಯ ದಿನವೆಂದೂ ಪರಿಗಣಿಸುತ್ತಾರೆ. ಕೆಲವು ಮನೆತನಗಳಲ್ಲಿ ನವರಾತ್ರಿಯ ದೇವಿಯನ್ನು ನವಮಿಯಂದು ಮತ್ತು ಕೆಲವರು ದಶಮಿಯಂದು ವಿಸರ್ಜನೆ ಮಾಡುತ್ತಾರೆ. ಈ ದಿನ ಸೀಮೋಲ್ಲಂಘನ, ಶಮೀ ಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧಪೂಜೆ ಈ ನಾಲ್ಕು ಕಾರ್ಯಗಳನ್ನು ಮಾಡಬೇಕಾಗಿರುತ್ತದೆ.


ಸೀಮೋಲ್ಲಂಘನ ಅಂದರೇನು ? ಯಾವಾಗ ಮಾಡಬೇಕು ?

ಅಪರಾಹ್ನ ಕಾಲದಲ್ಲಿ ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆಗೆ ಸೀಮೋಲ್ಲಂಘನಕ್ಕಾಗಿ ಹೋಗುತ್ತಾರೆ ಮತ್ತು ಶಮೀವೃಕ್ಷ ಅಥವಾ ಮಂದಾರದ ವೃಕ್ಷವಿರುವಲ್ಲಿ ನಿಲ್ಲುತ್ತಾರೆ. ಮುಂದಿನ ಶ್ಲೋಕದೊಂದಿಗೆ ಶಮೀಪೂಜೆಗಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.


ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ |

ಧಾರಿಣ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯವಾದಿನೀ ||

ಕರಿಷ್ಯಮಾಣಯಾತ್ರಾಯಾಂ ಯಥಾಕಾಲ ಸುಖಂ ಮಯಾ |

ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ ||


ಅರ್ಥ : ಶಮಿಯು ಪಾಪಶಮನ ಮಾಡುತ್ತದೆ. ಶಮಿಯ ಮುಳ್ಳುಗಳು ನಸುಗೆಂಪಾಗಿರುತ್ತವೆ. ಶಮಿಯು ರಾಮನಿಗೆ ಪ್ರಿಯವಾದುದನ್ನು ನುಡಿಯುವಂತಹದ್ದು, ಅರ್ಜುನನ ಬಾಣಗಳನ್ನು ಧಾರಣೆ ಮಾಡುವಂತಹದ್ದಾಗಿದೆ. ಎಲೈ ಶಮಿಯೇ, ರಾಮನು ನಿನ್ನನ್ನು ಪೂಜಿಸಿದ್ದನು. ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆಯು ನಿರ್ವಿಘ್ನ, ಸುಖಕರವಾಗುವಂತೆ ಮಾಡು.


ಮಂದಾರವೃಕ್ಷದ ಪೂಜೆ ಮಾಡುವುದಿದ್ದಲ್ಲಿ ಮುಂದಿನ ಮಂತ್ರವನ್ನು ಹೇಳುತ್ತಾರೆ.


ಅಶ್ಮಂತಕ ಮಹಾವೃಕ್ಷ ಮಹಾದೋಷ ನಿವಾರಣ |

ಇಷ್ಟಾನಾಂ ದರ್ಶನಂ ದೇಹಿ ಕುರು ಶತ್ರುವಿನಾಶನಮ್ ||


ಅರ್ಥ : ಎಲೈ ಅಶ್ಮಂತಕ ಮಹಾ ವೃಕ್ಷವೇ, ನೀನು ಮಹಾದೋಷಗಳ ನಿವಾರಣಕಾರಿಯಾಗಿರುವೆ. ನನ್ನ ಮಿತ್ರರ ದರ್ಶನವನ್ನು ಮಾಡಿಸು ಮತ್ತು ನನ್ನ ಶತ್ರು ಗಳನ್ನು ನಾಶ ಮಾಡು.


ಅನಂತರ ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ ಅಥವಾ ತಾಮ್ರದ ನಾಣ್ಯಗಳನ್ನು ಇಡುತ್ತಾರೆ. ಬಳಿಕ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ. ಶಮಿಯ ಎಲೆಗಳ ನ್ನಲ್ಲದೇ ಮಂದಾರದ ಎಲೆಗಳನ್ನು ಬಂಗಾರ ವೆಂದು ದೇವರಿಗೆ ಅರ್ಪಿಸುತ್ತಾರೆ ಮತ್ತು ಆಪ್ತಮಿತ್ರರಿಗೆ ಕೊಡುತ್ತಾರೆ. ಈ ಬಂಗಾರವನ್ನು ಕಿರಿಯರು ಹಿರಿಯರಿಗೆ ಕೊಡಬೇಕು ಎನ್ನುವ ಸಂಕೇತವಿದೆ.


ಆಯುಧಪೂಜೆ ಶಸ್ತ್ರಪೂಜೆ ಅಂದರೆ ಏನು ?

ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ. ‘ದಸರಾ’ ವಿಜಯದ ಹಬ್ಬವಾಗಿರುವುದರಿಂದ ಈ ದಿನ ರಾಜರಿಗೆ ವಿಶೇಷ ವಿಧಿಯನ್ನು ಹೇಳಲಾಗಿದೆ. 


ಇದು ವಿಜಯದ, ಪರಾಕ್ರಮದ ಹಬ್ಬವಾಗಿದೆ. ಅರ್ಜುನನು ಅeತವಾಸದಲ್ಲಿ ಶಮಿಯ ಉಡಿಯಲ್ಲಿ ಇಟ್ಟ ಶಸ್ತ್ರಗಳನ್ನು ತೆಗೆದು, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವಸೈನ್ಯದ ಮೇಲೆ ಆಕ್ರಮಣ ಮಾಡಿ ಇದೇ ದಿನ ವಿಜಯವನ್ನು ಸಂಪಾದಿ ಸಿದ್ದನು. ಈ ದಿನದಂದೇ ಶ್ರೀರಾಮಚಂದ್ರನು ರಾವಣನ ಮೇಲೆ ವಿಜಯ ಪಡೆದು ಆತನನ್ನು ವಧಿಸಿದ್ದನು ಎಂದು ನಂಬಲಾಗುತ್ತದೆ. ಈ ಘಟನೆಗಳ ಸಂಕೇತವಾಗಿ ಈ ದಿನಕ್ಕೆ ವಿಜಯದಶಮಿ ಎಂದು ಹೆಸರು ಬಂದಿದೆ. ಹಾಗೆ ನೋಡಿದರೆ ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ನಡೆದು ಬಂದಂತಿದೆ. ಪ್ರಾರಂಭದ ಕಾಲದಲ್ಲಿ ಇದು ಕೃಷಿಗೆ ಸಂಬಂಧಪಟ್ಟ ಒಂದು ಲೋಕೋತ್ಸವವಾಗಿತ್ತು. 


ಮಳೆಗಾಲದಲ್ಲಿ ಬಿತ್ತಿದ ಪ್ರಥಮ ಪೈರು ಮನೆಗೆ ಬಂದಾಗ ರೈತರು ಈ ಉತ್ಸವ ವನ್ನು ಆಚರಿಸುತ್ತಿದ್ದರು. ಕಲಶ ಸ್ಥಾಪನೆಯ ದಿನ ಕಲಶದ ಕೆಳಗಿನ ಪೀಠದಲ್ಲಿ ಒಂಭತ್ತು ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಈ ಧಾನ್ಯದ ಮೊಳಕೆಗಳನ್ನು ತೆಗೆದು ದೇವ ರಿಗೆ ಅರ್ಪಿಸುತ್ತಾರೆ. ಅನೇಕ ಕಡೆ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಪದ್ಧತಿಯಿಂದ ಕೃಷಿಗೆ ಸಂಬಂಧಪಟ್ಟ ಈ ಹಬ್ಬದ ಸ್ವರೂಪ ಸ್ಪಷ್ಟವಾಗುತ್ತದೆ. ಮುಂದೆ ಈ ಹಬ್ಬಕ್ಕೆ ಧಾರ್ಮಿಕ ಸ್ವರೂಪವನ್ನು ಕೊಡಲಾಯಿತು ಮತ್ತು ಇತಿಹಾಸ ಕಾಲದಲ್ಲಿ ಇದು ರಾಜಕೀಯ ಸ್ವರೂಪದ ಹಬ್ಬವಾಯಿತು.


-ವಿನೋದ ಕಾಮತ್,

ರಾಜ್ಯ ವಕ್ತಾರರು, ಸನಾತನ ಸಂಸ್ಥೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top