ಬಂಟ್ವಾಳ: ಇಲ್ಲಿನ ಅರಳ ಗ್ರಾಮದ ಎರ್ಮಾಳ್ ಸಮೀಪದ ಕಂಡದೊಟ್ಟು ನಿವಾಸಿ, ಹಿರಿಯ ಉದ್ಯಮಿ ಎ.ಕೆ. ಸುಂದರ ಸಾಲ್ಯಾನ್ (79) ಇವರು ಅಸೌಖ್ಯದಿಂದ ಬೆಂಗಳೂರು ಸ್ವಗೃಹದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರರು ಮತ್ತು ಸಹೋದರಿ ಇದ್ದಾರೆ. ಬೆಂಗಳೂರಿನಲ್ಲಿ ಕಳೆದ 45 ವರ್ಷಗಳಿಂದ 'ಮಂಗಳಾ ಆರ್ಟ್ ಪ್ರಿಂಟರ್ಸ್' ಮುದ್ರಣ ಸಂಸ್ಥೆ ಮುನ್ನಡೆಸುತ್ತಿದ್ದು, ಬಂಟ್ವಾಳ ತಾಲೂಕು ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ, ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ, ಕಾರ್ಕಳ ಬಜಗೋಳಿ ಶ್ರೀ ಆದಿಶಕ್ತಿ ಧರ್ಮದೇವಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಮಹತ್ತರ ಕೊಡುಗೆ ಸಲ್ಲಿಸಿದ್ದರು.
'ಸುಮಂಗಲಾ' ಸ್ಮರಣ ಸಂಚಿಕೆ, 'ಸಫಲ ತ್ರೈಮಾಸಿಕ ಪತ್ರಿಕೆ' ಸಹಿತ ವಿವಿಧ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶಾರದೋತ್ಸವ ಕಾರ್ಯಕ್ರಮಕ್ಕೆ ಉಚಿತ ಆಮಂತ್ರಣ ಪತ್ರಿಕೆ ಮುದ್ರಿಸಿ, ಕೊಡುಗೈ ದಾನಿಯಾಗಿ, ಸರಳ, ಸಜ್ಜನಿಕೆಯಿಂದಲೇ ಎಲ್ಲರ ನೆಚ್ಚಿನ 'ಸುಂದರಣ್ಣ' ಎಂದೇ ಗುರುತಿಸಿಕೊಂಡಿದ್ದರು.
ಮೃತರ ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಸ್ವಗೃಹ ಬಳಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಆರ್ ಎಸ್ ಎಸ್ ಮುಖಂಡ ಡಾ. ಕೆ. ಪ್ರಭಾಕರ ಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ. ರಮಾನಾಥ ರೈ, ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ಎಂ. ಆರ್. ರಾಜಶೇಖರ್, ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ