ಸುರತ್ಕಲ್: ಮೌಲ್ಯಾಧರಿತ ಪಠ್ಯಕ್ರಮಗಳು ಇಂದಿನ ಶಿಕ್ಷಣ ವ್ಯವಸ್ಥೆಯ ಮುಖ್ಯ ಅಂಶವಾಗಿದೆ. ಅವುಗಳನ್ನು ಮನಮುಟ್ಟುವಂತೆ ಬೋಧಿಸುವುದು ಶಿಕ್ಷಕರ ಜವಾಬ್ದಾರಿ ಎಂದು ಹಿಂದು ವಿದ್ಯಾದಾಯಿನೀ ಸಂಘ (ರಿ.) ಸುರತ್ಕಲ್‌ನ ಅಧ್ಯಕ್ಷ ಜಯಚಂದ್ರ ಎಸ್. ಹತ್ವಾರ್ ನುಡಿದರು.
ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ.)ಯ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಆಂತರಿಕ ಗುಣಮಟ್ಟ ಖಾತರಿ ಕೋಶ, ಇಂಗ್ಲೀಷ್ ವಿಭಾಗ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇಂಗ್ಲೀಷ್ ಪ್ರಾಧ್ಯಾಪಕರ ಸಂಘಗಳು ಓರಿಯೆಂಟ್ ಬ್ಲ್ಯಾಕ್‌ಸ್ವಾನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ತೃತೀಯ ಸೆಮಿಸ್ಟರ್ ಯು.ಜಿ. ಇಂಗ್ಲೀಷ್ ಪಠ್ಯಕ್ರಮದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ಭಾಷಾ ಪ್ರಾಧ್ಯಾಪಕಿ ಮತ್ತು ಬಿ.ಓ.ಎಸ್ ಅಧ್ಯಕ್ಷೆ ಪ್ರೊ. ಪರಿಣಿತಾ ಇಂಗ್ಲೀಷ್ ಭಾಷೆಯನ್ನು ಕೇವಲ ಸಂವಹನ ಕೌಶಲ್ಯಕ್ಕೆ ಸೀಮಿತಗೊಳ್ಳದೆ ಭಾವನೆಗಳ ವ್ಯಕ್ತೀಕರಣ, ಸಾಂಸ್ಕೃತಿಕ ಸಂವೇದನೆಗಳ ಅಭಿವ್ಯಕ್ತಿಗೆ ಪೂರಕವಾಗಿ ಬಳಸಿಕೊಳ್ಳಬೇಕು. ಬಹುಸಂಸ್ಕೃತಿಯ ಒಳಗೊಳ್ಳುವಿಕೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವಂತಹ ಪಠ್ಯಕ್ರಮಗಳು ರೂಪಿತಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ವಿಶ್ವವ್ಯಾಪಿಯಾಗಿ ಬಳಸಲ್ಪಡುವ ಇಂಗ್ಲೀಷ್ ಭಾಷೆಯ ಅಧ್ಯಯನ ಪ್ರಸ್ತುತ ಕಾಲಘಟ್ಟದಲ್ಲಿ ಮುಖ್ಯವಾಗಿದ್ದು ಸುಲಲಿತ ಇಂಗ್ಲೀಷ್ ಭಾಷಾಜ್ಞಾವು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ಮಾಹೆಯ ಪ್ರಾಧ್ಯಾಪಕರಾದ ಪ್ರವೀಣ್ ಶೆಟ್ಟ ಮತ್ತು ಡಾ. ಅನುಪಾ ಲೂಯೀಸ್ ತಾಂತ್ರಿಕ ಅವಧಿಗಳನ್ನು ನಡೆಸಿದರು. ಮಂಗಳೂರು ವಿ.ವಿಯ ತೃತೀಯ ಸೆಮಿಸ್ಟರ್‌ನ ವರ್ಕ್ಬುಕ್‌ನ ಕುರಿತು ಸಂವಾದಾತ್ಮಕ ಚರ್ಚೆ, ನವೀನ ಬೋಧನಾ ವಿಧಾನಗಳ ಪರಿಚಯ ಮತ್ತು ವಿದ್ಯಾರ್ಥಿಗಳಿಗೆ ಸುಗಮ ಪಾಠ ರೂಪಿಸುವ ಬಗ್ಗೆ ಪ್ರಾಧ್ಯಾಪಕರಿಗೆ ಅರಿವು ಮೂಡಿಸಲಾಯಿತು.
ಮಂಗಳೂರು ವಿಶ್ವವಿದ್ಯಾನಿಲಯ ಇಂಗ್ಲೀಷ್ ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ. ವಿಕ್ಟರ್ ವಾಸ್ ಇ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಶರ್ಮಿತಾ ಯು. ಕಾರ್ಯಕ್ರಮ ನಿರೂಪಿಸಿದರು. ವಿಭಾಗ ಮುಖ್ಯಸ್ಥ ಕುಮಾರ್ ಮಾದರ್ ವಂದಿಸಿದರು.
ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಧನ್ಯಕುಮಾರ್ ವೆಂಕಣ್ಣವರ್, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಪಿ.ಡಿ., ಭಾಷಾ ವಿಭಾಗದ ಪ್ರಾಧ್ಯಾಪಕರಾದ ಡಾ. ಸಂತೋಷ್ ಆಳ್ವ, ರಿಬಾ ಜಾನೆಟ್, ಅಕ್ಷತಾ ವಿ., ಜ್ಯೋತಿ ಕಾಮತ್, ರಮಿತಾ, ನಟರಾಜ್ ಜೋಷಿ, ಮಂಗಳೂರು ವಿಶ್ವವಿದ್ಯಾನಿಲಯ ಇಂಗ್ಲೀಷ್ ಪ್ರಾಧ್ಯಾಪಕರ ಸಂಘದ ಉಪಾಧ್ಯಕ್ಷೆ ಡಾ. ಶ್ರೀಜಾ, ಕೋಶಾಧಿಕಾರಿ ಶಾಂತಿ ರೋಚ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


