ಆತ್ಮಹತ್ಯೆ: ಸಮಾಜದ ಕಳವಳದ ನೆರಳು

Upayuktha
0
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳು



ಶಿವಮೊಗ್ಗ: ಎಲ್ಲೆಡೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಕಾರಣದಿಂದಾಗಿ ಆತ್ಮಹತ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳು ಸಮಾಜದಲ್ಲಿ ನಡೆಯುತ್ತಿವೆ. ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆಯಲ್ಲಿರುವ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನೋವಿಜ್ಞಾನ ವಿಭಾಗದಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.


ಇದರ ಅಂಗವಾಗಿ ಕು. ಶಿಲ್ಪಾ, ಕ್ಲಿನಿಕಲ್ ಸೈಕಾಲಜಿಸ್ಟ್, ಬೆಂಗಳೂರು ಇವರು ಆನ್ಲೈನ್ ಮೂಲಕ ಆತ್ಮಹತ್ಯೆಗೆ ಕಾರಣ ಮತ್ತು ಅದನ್ನು ತಡೆಗಟ್ಟುವ ಕ್ರಮದ ಬಗ್ಗೆ ಉಪನ್ಯಾಸ ನೀಡಿದರು. ಅವರು ನೀಡಿದ ಮಾಹಿತಿಯ ಪ್ರಕಾರ ಪ್ರತಿ 43 ಸೆಕೆಂಡಿಗೆ ಒಬ್ಬರಂತೆ ವಿಶ್ವದಲ್ಲಿ ದಿನಕ್ಕೆ 7,20,000 ಜನರು ಬಲಿಯಾಗುತ್ತಿದ್ದಾರೆ.ಅದರಲ್ಲಿ ಮುಖ್ಯವಾಗಿ ತಿಳಿದುಬಂದ ಸಂಗತಿ ಏನೆಂದರೆ 15 ರಿಂದ 29 ವರ್ಷದೊಳಗಿನ ಯುವಪೀಳಿಗೆ ಇದರಲ್ಲಿ ಹೆಚ್ಚಾಗಿದ್ದಾರೆ. ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 44% ಜನ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.


ಕಳೆದ ಎರಡು ವರ್ಷದಲ್ಲಿ ಅಂದರೆ 2023ರಲ್ಲಿ 10,343 ಹಾಗೂ 2024ರಲ್ಲಿ 11,334 ಜನ ಬಲಿಯಾಗಿದ್ದಾರೆ. ಅದರಲ್ಲೂ ಹಾಸ್ಟೆಲ್ ಹಾಗೂ ಪಿಜಿಯಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ, ಹೀಗೆ 21 ವರ್ಷದ ಅನನ್ಯ ದ್ವಿತೀಯ ಪದವಿ ವಿದ್ಯಾರ್ಥಿನಿ ಹಾಗೂ 22 ವರ್ಷದ ರೀಟಾ (ಹೆಸರು ಬದಲಿಸಿದೆ) ಎಂಬ ವಿದ್ಯಾರ್ಥಿನಿಯರೂ ಆತ್ಮಹತ್ಯೆಗೆ ಯತ್ನಿಸಿದ್ದು ಅದಕ್ಕೆ ಕಾರಣ "ಮಾನಸಿಕ ಒತ್ತಡ" ಎಂದು ತನಿಖೆ ವೇಳೆ ತಿಳಿದು ಬಂದಿದೆ. ಅದಲ್ಲದೆ ನಿರುದ್ಯೋಗ, ಲವ್ ಫೈಲ್ಯೂರು, ಮಾನಸಿಕ ಒತ್ತಡ, ಕುಟುಂಬದಲ್ಲಿ ಕಲಹ, ಮುಂತಾದವುಗಳಿಂದಲೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೀತಿಯ ಆತ್ಮಹತ್ಯೆಗಳನ್ನು ತಡೆಗಟ್ಟಲು ಕುಟುಂಬ ಹಾಗೂ ಸ್ನೇಹಿತರು ಕ್ರಮಕೈಗೊಳ್ಳಬೇಕು ಎಂದಿದ್ದಾರೆ.


ಮುಖ್ಯವಾಗಿ ಮನೋವಿಜ್ಞಾನಿಗಳು ಅಂತಹವರನ್ನು ವೀಕ್ಷಿಸಿ ಅವರಿಗೆ ಉತ್ತಮ ಆಪ್ತಸಮಾಲೋಚನೆ ನೀಡಬೇಕೆಂದು ತಿಳಿಸಿದ್ದಾರೆ. ಈ ಕಾರ್ಯಕ್ರಮ ದಲ್ಲಿ ಒಟ್ಟು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರೂ ಹಾಗೂ ವೃತ್ತಿಪರರು ಪಾಲ್ಗೊಂಡಿದ್ದರು. ಆತ್ಮಹತ್ಯೆಯ ಬಗ್ಗೆ ಹಮ್ಮಿಕೊಂಡಿದ್ದ ಮುಂಜಾಗ್ರತ ಕಾರ್ಯಕ್ರಮವು ಸಾಕಷ್ಟು ಪ್ರಮಾಣದಲ್ಲಿ ಒಳ್ಳೆಯ ಸಂದೇಶ ನೀಡಿದ್ದು ಈ ವಿಷಯದ ಬಗ್ಗೆ ಎಲ್ಲರೂ ಗಮನಹರಿಸಬೇಕಾಗಿದೆ.


ಆತ್ಮಹತ್ಯೆ ತಡೆಗಟ್ಟಲು ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸಿ ಅದು ದುರ್ಬಲತೆ ಅಲ್ಲ ಎಂಬ ಸಂದೇಶ ನೀಡಬೇಕು ಅಲ್ಲದೆ, ತೊಂದರೆಗೀಡಾದವರಿಗೆ ಕೌನ್ಸೆಲಿಂಗ್ ಹಾಗೂ ವೈದ್ಯರ ನೆರವು ದೊರಕಿಸುವ ಪ್ರಯತ್ನ ಮಾಡಲು ಯತ್ನಿಸಬೇಕು. ಅವರಿಗೆ ಒಂಟಿತನ ಉಂಟಾಗದAತೆ ನೋಡಿಕೊಳ್ಳಬೇಕು, ಅಷ್ಟೇ ಅಲ್ಲದೆ ಕುಟುಂಬ ಹಾಗೂ ಸ್ನೇಹಿತರು ಭಾವನಾತ್ಮಕ ಬೆಂಬಲ ನೀಡಿ ಮಾದಕ ವಸ್ತುಗಳಾದ ಮದ್ಯಪಾನ, ಧೂಮಪಾನ ಹಾಗೂ ಇತರೆ ಮಾದಕ ವಸ್ತುಗಳಿಂದ  ದೂರ ಇರುವಂತೆ ನೋಡಿಕೊಳ್ಳಬೇಕು, ಆತ್ಮಹತ್ಯೆಯ ಬಗ್ಗೆ ಯೋಚಿಸಲು ಅವಕಾಶ ಇಲ್ಲದಂತೆ ಸಮಾಜ ಪರಸ್ಪರ ನೆರವಾಗುತ್ತಾ, ಅದರೊಂದಿಗೆ ಸರ್ಕಾರ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮ ಹಾಗೂ ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಹಮ್ಮಿಕೊಳ್ಳಬೇಕು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಮತ್ತು ಎಲ್ಲರಿಗೂ ಮನೋವೈದ್ಯಕೀಯ ನೆರವು ದೊರಕುವಂತೆ ಮಾಡಬೇಕಾಗಿದೆ.


ಆತ್ಮಹತ್ಯೆ ಅನಿವಾರ್ಯವಲ್ಲ– ತಡೆಗಟ್ಟಬಹುದಾದ ಮಾನವೀಯ ಸಮಸ್ಯೆ. ಪ್ರತಿಯೊಬ್ಬರೂ ಲಕ್ಷಣಗಳನ್ನು ಗಮನಿಸಿ, ಕೇಳಿ, ಜೊತೆಗಿದ್ದು ಬೆಂಬಲಿಸಿದರೆ ಒಂದು ಜೀವವನ್ನು ಉಳಿಸಬಹುದು. ಮನೋವೈದ್ಯರಾಗಿ ಇರಬೇಕಿಲ್ಲ– ಮಾನವನಾಗಿ, ಕರುಣೆಯಿಂದ ವರ್ತಿಸಿದರೆ ಸಾಕು. ಆತ್ಮಹತ್ಯೆ ವಿರೋಧದ ಹೋರಾಟವು ಕೇವಲ ವೈದ್ಯಕೀಯ ಅಥವಾ ಸರ್ಕಾರಿ ಕೆಲಸವಲ್ಲ, ಇದು ನಮ್ಮೆಲ್ಲರ ಒಟ್ಟುಗೂಡಿದ ಜವಾಬ್ದಾರಿ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ‘ವಾಲ್ ಆಫ್ ಹೋಪ್’ ಎಂಬ ಭಿತ್ತಿಪತ್ರ ರಚನೆ, ಆರ್ಟ್ ಥೆರಪಿ ಕಾರ್ಯಾಗಾರ ಹಾಗೂ ‘ಆತ್ನಹತ್ಯೆ ಏನು, ಯಾಕೆ’ ಎಂಬ ರೂಪಕವನ್ನು ಪ್ರಸ್ತುತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top