ಧರ್ಮಸ್ಥಳದಲ್ಲಿ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮಜಾಗೃತಿ ಸಮಾವೇಶ

Upayuktha
0

ದೇವರ ಅನುಗ್ರಹ, ಧರ್ಮದೇವತೆಗಳ ಅಭಯ ಹಾಗೂ ಅಣ್ಣಪ್ಪಸ್ವಾಮಿಯ ರಕ್ಷಣೆಯಿಂದ ಸಮಸ್ಯೆಗಳು ನಿವಾರಣೆಯಾಗಿವೆ. ಸತ್ಯದ ಸಾಕ್ಷಾತ್ಕಾರವಾಗಿದೆ.


ಉಜಿರೆ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ, ಧರ್ಮದೇವತೆಗಳ ಅಭಯ ಮತ್ತು ಅಣ್ಣಪ್ಪ ಸ್ವಾಮಿ ರಕ್ಷಣೆಯಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತಿವೆ. ಸತ್ಯದ ಸಾಕ್ಷಾತ್ಕಾರವಾಗುತ್ತಿದೆ. ಜೊತೆಗೆ ಶಾಂತಿ, ನೆಮ್ಮದಿಯೂ ದೊರಕಿದೆ. ಅಲ್ಲದೆ ಧರ್ಮಸ್ಥಳದ ಭಕ್ತರು ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ನಮಗೆ ಎಲ್ಲಾ ಸೇವಾಕಾರ್ಯಗಳನ್ನು ಮುಂದುವರಿಸಲು ನವಚೈತನ್ಯ ಮತ್ತು ಉತ್ಸಾಹ ಮೂಡಿಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಧಾರ್ಮಿಕ ಕ್ಷೇತ್ರಗಳ ಮುಖಂಡರ ಧರ್ಮಜಾಗೃತಿ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಮಾವೇಶದಲ್ಲಿ ಭಾಗವಹಿಸಿದ ಎಲ್ಲರಿಗೂ ಹೆಗ್ಗಡೆಯವರು ಧನ್ಯತೆಯಿಂದ ಕೃತಜ್ಞತೆ ಮತ್ತು ಸಂತೋಷ ವ್ಯಕ್ತಪಡಿಸಿದರು. ಇದೀಗ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಕಟವಾಗಿ ಎಲ್ಲರಿಗೂ ಪರಿಚಿತವಾಗಿದೆ.


ನಾನು ಧರ್ಮಾಧಿಕಾರಿಯಾಗಿ “ಹೆಗ್ಗಡೆ” ಪೀಠವನ್ನು ಬಯಸಿದವನಲ್ಲ. ಆದರೆ ಅನಿರೀಕ್ಷಿತವಾಗಿ ತೀರ್ಥರೂಪರ ನಿಧನದಿಂದ ನಾನು ಪಟ್ಟವನ್ನು ಸ್ವೀಕರಿಸಬೇಕಾಯಿತು. ಇಲ್ಲಿ ನಾನು “ನೆಪ” ಮಾತ್ರ. ಎಲ್ಲಾ ಕಾರ್ಯಗಳೂ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರದೊಂದಿಗೆ, ಧರ್ಮದೇವತೆಗಳ ಆಶಯದಂತೆ ಹಾಗೂ ಅಣ್ಣಪ್ಪ ಸ್ವಾಮಿಯ ರಕ್ಷಣೆಯಿಂದ ಸುಗಮವಾಗಿ ನಡೆಯುತ್ತವೆ. 


ಪ್ರತೀ ಸಂಕ್ರಮಣದ ದಿನ ನಾನು ಧರ್ಮದೇವತೆಗಳಿಗೆ ವರದಿ ಒಪ್ಪಿಸಬೇಕು. ಆಗ ಅವರು, ತಿಳುವಳಿಕೆ ಇಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಇದೆ. ಏನೇ ಆಪತ್ತು, ವಿಪತ್ತು ಬಂದರೂ ಹೆತ್ತ ತಾಯಿಯಂತೆ ನಾವು ರಕ್ಷಣೆ ನೀಡುತ್ತೇವೆ ಎಂದು ಅವರು ಅಭಯ ನೀಡುತ್ತಾರೆ. ಏನಾದರು ತಪ್ಪಾದಲ್ಲಿ ಕೈಯ ಎಣ್ಣೆ ಕಣ್ಣಿಗೆ ತಾಗಿದಂತೆ ಆಗಬಹುದು ಎಂದು ಎಚ್ಚರಿಕೆಯನ್ನೂ ನೀಡುತ್ತಾರೆ ಎಂದು ಹೆಗ್ಗಡೆಯವರು ತಿಳಿಸಿದರು.


ತಮಗೆ ಧರ್ಮಾಧಿಕಾರಿಯಾಗಿ ಪಟ್ಟಾಭಿಷೇಕ ಆದಾಗ ಆರಂಭದಲ್ಲಿಯೂ ಅನೇಕ ಪ್ರತಿಭಟನೆ, ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಕುಟುಂಬದ ಎಲ್ಲಾ ಸದಸ್ಯರ ಸಹಕಾರ, ನೌಕರವೃಂದದವರ ಕರ್ತವ್ಯ ನಿಷ್ಠೆ ಹಾಗೂ ಊರಿನ ನಾಗರಿಕರು ಮತ್ತು ಕ್ಷೇತ್ರದ ಅಭಿಮಾನಿಗಳ ಸಹಕಾರದಿಂದ ಎಲ್ಲಾ ಸಮಸ್ಯೆಗಳು ಸುಗಮವಾಗಿ ನಿವಾರಣೆಯಾಗಿವೆ. ಚತುರ್ದಾನ ಪರಂಪರೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉಚಿತ ಸಾಮೂಹಿಕ ವಿವಾಹ, ಮದ್ಯವರ್ಜನ ಶಿಬಿರ, ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳು ಇತ್ಯಾದಿ ಹತ್ತು-ಹಲವು ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಯಿತು.

 


ಇತರ ಊರುಗಳಲ್ಲಿರುವ ಎಲ್ಲಾ ತೀರ್ಥಕ್ಷೇತ್ರಗಳು ಕೂಡಾ ಪವಿತ್ರವಾಗಿದ್ದು ನಿಮ್ಮ ಊರಿನ ಕ್ಷೇತ್ರವನ್ನು, ಅಲ್ಲಿನ ಸಂಪ್ರದಾಯ ಪರಂಪರೆಯ ರಕ್ಷಣೆಯೊಂದಿಗೆ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನೂ ಕಾಪಾಡಿ ಎಂದು ಹೆಗ್ಗಡೆಯವರು ಸಲಹೆ ನೀಡಿದರು.


ಇಂದು ತಾನು ಸಭೆಗೆ ಬರುವಾಗ “ಹೆಗ್ಗಡೆ” ಯಾಗಿ ಬಂದಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಬಂದೆ. ಎಲ್ಲರ ಮುಖದಲ್ಲಿ ಮಂದಹಾಸ ಕಂಡು ನನಗೂ ಸಂತೋಷವಾಗಿದೆ. ತೃಪ್ತಿ ಮತ್ತು ನೆಮ್ಮದಿ ದೊರಕಿದೆ ಎಂದು ಅವರು ಹೇಳಿದರು.


ಬಾರ್ಕೂರಿನ ಹಿರಿಯ ವಿದ್ವಾಂಸ ದಾಮೋದರ ಶರ್ಮಾ ಮಾತನಾಡಿ ಭಕ್ತರಲ್ಲಿಯೂ ಭಗವಂತನನ್ನು ಕಾಣುವ ಹೆಗ್ಗಡೆಯವರು, ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಎಂಬ ಚತುರ್ವಿಧ ದಾನ ಪರಂಪರೆಯನ್ನು ಮುಂದುವರಿಸಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅನ್ನದಾನದಿಂದ ಕ್ಷೇತ್ರ ಬೆಳಗುತ್ತದೆ, ಬೆಳೆಯುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ಸ್ವಚ್ಛತೆಯಿಂದ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದೂ ಸಾಧಿಸಿ ತೋರಿಸಿದ್ದಾರೆ.


ಧರ್ಮಸ್ಥಳದ ದಾನ ಪರಂಪರೆ, ಸಮಾಜಮುಖಿ ಸೇವಾ ಕಾರ್ಯಗಳು ವಿಶ್ವಮಾನ್ಯವಾಗಿವೆ. ಹಾಗಾಗಿ ಹೆಗ್ಗಡೆಯವರು ದೇವರು ಮತ್ತು ಮನುಷ್ಯರ ಸೇವೆ ಮಾಡಿ “ದೇವಮಾನವ” ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಯಕ್ಷಗಾನ ಬಯಲಾಟ ಪ್ರದರ್ಶನದ ಮೂಲಕ ಧರ್ಮಜಾಗೃತಿಯನ್ನೂ ಮಾಡುತ್ತಿದ್ದಾರೆ. ಇಲ್ಲಿನ ಸೇವಾಕಾರ್ಯಗಳು ನಮಗೆಲ್ಲರಿಗೂ ಆದರ್ಶ ಹಾಗೂ ಅನುಕರಣೀಯವಾಗಿವೆ. ಧರ್ಮದೇವತೆಗಳು ಹಾಗೂ ಶ್ರೀ ಮಂಜುನಾಥ ಸ್ವಾಮಿಯ ವರ್ಚಸ್ಸನ್ನು ಸಮಾಜನುಖಿ ಸೇವಾಕಾರ್ಯಗಳಲ್ಲಿ ಬಳಸಿ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಹೆಗ್ಗಡೆಯವರನ್ನು ಅವರು ಅಭಿನಂದಿಸಿದರು.


ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟ ಮಾತನಾಡಿ, ಮುನಿಗಳಂತೆ ಮೌನದಿಂದ ಹೆಗ್ಗಡೆಯವರು ಎಲ್ಲವನ್ನೂ ಜಯಿಸಿದ್ದಾರೆ. ಮೌನದಿಂದ ತನ್ನನ್ನು ತಾನು ತಿಳಿದುಕೊಳ್ಳುವವರಿಗೆ “ಮುನಿ” ಎನ್ನುತ್ತಾರೆ. ಹೆಗ್ಗಡೆಯವರು ಮುನಿಯಂತೆ ಎಲ್ಲವನ್ನೂ ಹಾಗೂ ಎಲ್ಲರನ್ನೂ ಗೆದ್ದಿದ್ದಾರೆ.


ಅವರ ಭಾಷಣ ಮತ್ತು ಲೇಖನವೂ ಅಚ್ಚುಕಟ್ಟಾಗಿದ್ದು ಭೋದಪ್ರದವಾಗಿದೆ. ಧರ್ಮಜಾಗೃತಿಯೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೂ ಪ್ರೇರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಒಂದು ದೇವಸ್ಥಾನ ಜೀರ್ಣೋದ್ಧಾರಗೊಳಿಸಿದರೆ ಒಂದು ಅಶ್ವಮೇಧ ಯಾಗ ಮಾಡಿದ ಪುಣ್ಯ ಬರುತ್ತದೆ. ಎಂಬ ನಂಬಿಕೆಯಿದೆ. ಹೆಗ್ಗಡೆಯವರು 350 ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿರುವುದರಿಂದ ಅವರಿಗೆ 350 ಅಶ್ವಮೇಧ ಯಾಗ ಮಾಡಿದ ಪುಣ್ಯಸಂಚಯವಾಗಿದೆ ಎಂದು ಹೇಳಿದರು.

ಹೆಗ್ಗಡೆಯವರೊಂದಿಗೆ ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ತಾವೆಲ್ಲರೂ ಸದಾ ಬದ್ಧರು ಹಾಗೂ ಸಿದ್ಧರು ಎಂದು ಅವರು ಭರವಸೆ ನೀಡಿದರು.


ವಿದ್ವಾನ್ ನಾಗೇಂದ್ರ ಭಾರದ್ವಾಜ ಮಾತನಾಡಿ ಯಾವುದನ್ನೂ ಕಳೆದುಕೊಳ್ಳುವುದು ಸುಲಭ. ಆದರೆ, ಅದನ್ನು ಪಡೆಯುವುದು ಕಷ್ಟ. ಎಲ್ಲಾ ಕ್ಷೇತ್ರಗಳ ಜೀರ್ಣೋದ್ಧಾರಕ್ಕೆ ಹೆಗ್ಗಡೆಯವರು ಪ್ರಸಾದರೂಪವಾಗಿ ಧರ್ಮಸ್ಥಳದಿಂದ ಪ್ರಥಮ ದಾನವನ್ನು ನೀಡಿ ಪೋತ್ಸಾಹಿಸುತ್ತಾರೆ. ಹಾಗಾಗಿ ನಮ್ಮ ಎಲ್ಲಾ ಕ್ಷೇತ್ರಗಳೂ ಶಕ್ತಿಕೇಂದ್ರಗಳಾಗಿ ಧರ್ಮಸ್ಥಳದ ಜೊತೆಗೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಅವರು ಭರವಸೆ ನೀಡಿದರು.


ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಮಾತನಾಡಿ, ದೇವಸ್ಥಾನದ ರಕ್ಷಣೆ ಕೂಡಾ ಎಲ್ಲರ ಸಾಂವಿಧಾನಿಕ ಹಕ್ಕು ಆಗಿದೆ. ಸತ್ಯಕ್ಕೆ ಸದಾ ಜಯವಿದೆ ಎಂಬುದು ನಮಗೆ ಈಗ ಅನುಭವಕ್ಕೆ ಬಂದಿದೆ. ಹಿಂದೂಗಳ ಸಾಮೂಹಿಕ ಮೌನದಿಂದಲೇ ಅಪಪ್ರಚಾರ ಮಾಡುವವರಿಗೆ ನಾವು ಎಚ್ಚರಿಕೆಯನ್ನು ಕೊಡುತ್ತೇವೆ. ಇಲ್ಲವಾದಲ್ಲಿ ಮುಂದಿನ ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ.


“ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ನೆನಪಿರಲಿ ಎಂದು ಅವರು ಸೂಚ್ಯವಾಗಿ ತಿಳಿಸಿದರು.


ಕಟೀಲು ದೇವಸ್ಥಾನದ ಲಕ್ಷ್ಮಿನಾರಾಯಣ ಅಸ್ರಣ್ಣರು ಮಾತನಾಡಿ, ನಾವು ದೇವರನ್ನು ದೃಢಭಕ್ತಿಯಿಂದ ಆರಾಧಿಸಿದರೆ ದೇವರು ನಮ್ಮನ್ನು ಸದಾ ರಕ್ಷಣೆ ಮಾಡುತ್ತಾರೆ. ದೇವಿಮಹಾತ್ಮೆ ಪಸ್ರಂಗದಂತೆ ಸಾಮೂಹಿಕ ಪ್ರಾರ್ಥನೆಗೆ ಹೆಚ್ಚಿನ ಶಕ್ತಿ ಇರುತ್ತದೆ. ಧರ್ಮಕ್ಕೆ ಚ್ಯುತಿ ಬಂದಾಗ ಪರಮಾತ್ಮ ಪ್ರತ್ಯಕ್ಷನಾಗಿ ಭಕ್ತರನ್ನು ಎಚ್ಚರಿಸುತ್ತಾನೆ. ನಾವೆಲ್ಲರೂ ಸಂಘಟಿತರಾಗಿ ಧರ್ಮಸ್ಥಳದ ರಕ್ಷಣೆಗೆ ಸಹಕರಿಸಬೇಕು ಎಂದು ಅವರು ಸಲಹೆ ನೀಡಿದರು. ಹಿಂದೂಧರ್ಮ, ಜೈನಧರ್ಮ ಮತ್ತು ಬೌದ್ಧಧರ್ಮ ಎಲ್ಲವೂ ಪರಸ್ಪರ ಪೂರಕವಾಗಿದ್ದು ಅವುಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಅಂದು ಅವರು ಅಭಿಪ್ರಾಯಪಟ್ಟರು.


ಹೇಮಾವತಿ ವಿ. ಹೆಗ್ಗಡೆ, ಶ್ರದ್ಧಾಅಮಿತ್, ಡಿ. ಹರ್ಷೇಂದ್ರ ಕುಮಾರ್, ಸೋನಿಯಾವರ್ಮ ಉಪಸ್ಥಿತರಿದ್ದರು. ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಧಾರ್ಮಿ ಕ್ಷೇತ್ರಗಳು, ದೈವಸ್ಥಾನಗಳು ಮತ್ತು ಶ್ರದ್ಧಾಕೇಂದ್ರಗಳ ಮುಖಂಡರು ಹಾಗೂ ಧಾರ್ಮಿಕ ಪರಿಷತ್ತಿನ ಸದಸ್ಯರು ಸೇರಿದಂತೆ ಸುಮಾರು ಆರು ಸಾವಿರ ಮಂದಿ ಸಭಾಸದರು ಉಪಸ್ಥಿತರಿದ್ದರು.


ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಮೊದಲಾದವರು ಇದ್ದರು. ಪ್ರೊ. ಸುವೀರ್ ಕುಮಾರ್ ಸಭೆಯಲ್ಲಿ ತೆಗೆದುಕೊಂಡ ಠರಾವನ್ನು ಮಂಡಿಸಿದರು. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.


ಕಾರ್ಯಕ್ರಮ ನಿರ್ವಹಿಸಿದ ಎಸ್.ಡಿ.ಎಮ್. ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕೊನೆಯಲ್ಲಿ ಧನ್ಯವಾದವಿತ್ತರು.

 

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top