ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಶೋಧನಾ ಕಾರ್ಯಾಗಾರಕ್ಕೆ ಚಾಲನೆ
ಉಜಿರೆ: ಸಂಶೋಧನಾ ಪ್ರಕ್ರಿಯೆಗೆ ಪೂರಕ ತಾಂತ್ರಿಕ ಪರಿಕರವಾಗಿ ತಂತ್ರಜ್ಞಾನವು ಬಳಕೆಯಾಗಬೇಕೇ ಹೊರತು ಹೊಸದನ್ನು ಹುಡುಕಾಡುವ ಪ್ರಜ್ಞೆಯನ್ನೇ ನಿಯಂತ್ರಿಸುವ ಮಟ್ಟಿಗೆ ನಿರ್ಣಾಯಕವಾಗಬಾರದು ಎಂದು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚಿನ್ನಪ್ಪಗೌಡ ಅಭಿಪ್ರಾಯಪಟ್ಟರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಿಸರ್ಚ್ ಆಂಡ್ ಡೆವೆಲಪ್‌ಮೆಂಟ್ ಸೆಲ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ಸಂಶೋಧನ ಬರವಣಿಗೆ ಮತ್ತು ಪ್ರಕಟಣೆ - ವಿಧಾನಾತ್ಮಕ ದೃಷ್ಟಿಕೋನ’ ಕುರಿತು ಗುರುವಾರ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನವು ಸಂಶೋಧಕನ ಪರಿಶ್ರಮ ಕಡಿಮೆಗೊಳಿಸಿ ಸಹಾಯಕನಂತಿರಬೇಕು. ಆದರೆ, ಈ ಪ್ರಕ್ರಿಯೆಯಲ್ಲಿ ಸಂಶೋಧಕನೇ ಮುಖ್ಯಪಾತ್ರ ವಹಿಸಬೇಕೇ ವಿನಃ ತಂತ್ರಜ್ಞಾನ ನಿರ್ಣಾಯಕವಾಗಬಾರದು. ಸಂಶೋಧಕ ಇಲ್ಲದಿದ್ದರೆ ತಂತ್ರಜ್ಞಾನ ಅರ್ಥಹೀನ. ತಂತ್ರಜ್ಞಾನವೂ ಕೂಡಾ ಸಂಶೋಧನೆಯ ಫಲವಾಗಿರುತ್ತದೆ. ತಂತ್ರಜ್ಞಾನವು ಮನುಷ್ಯ ಹುಡುಕಾಟದ ಫಲವೇ ಆಗಿರುತ್ತದೆ. ಹೀಗಾಗಿ ಸಂಶೋಧನೆಯು ಮನುಷ್ಯಕೇಂದ್ರಿತವಾಗಿರಬೇಕು. ಕೇವಲ ತಂತ್ರಜ್ಞಾನ ಕೇಂದ್ರಿತವಾಗಿರಬಾರದು. ತಂತ್ರಜ್ಞಾನದ ಭರಾಟೆಯಲ್ಲಿ ಸಂಶೋಧನೆಯ ಹಿಂದಿನ ಮನುಷ್ಯ ಬೌದ್ಧಿಕ ಶಕ್ತಿ ಹಿನ್ನೆಲೆಗೆ ಸರಿಯಬಾರದು ಎಂದು ಹೇಳಿದರು.
ಬೋಧಕರಾಗಲು ಬೇಕಾದ ಶೈಕ್ಷಣಿಕ ಅರ್ಹತೆಯನ್ನಷ್ಟೇ ದೃಷ್ಟಿಯಲ್ಲಿರಿಸಿಕೊಂಡು ಸಂಶೋಧನೆಗೆ ತೊಡಗಬಾರದು. ಸಂಶೋಧನೆ ಎನ್ನುವುದು ಉದ್ಯೋಗ ದಕ್ಕಿಸಿಕೊಳ್ಳುವ ಗುರುತಿಸಿಕೊಳ್ಳುವ ಖಯಾಲಿ ಅಲ್ಲ. ಸಂಶೋಧನೆ ಎನ್ನುವುದು ಪ್ರವೃತ್ತಿಯಾಗಬೇಕು. ಅದು ಫ್ಯಾಶನ್ ಅಲ್ಲ. ಅದು ಹೊಸದೊಂದನ್ನು ಹುಡುಕಾಡುವ ವ್ಯಕ್ತಿಗತ ಉತ್ಸಾಹದ ಪ್ರತಿಫಲ ಎಂದು ಹೇಳಿದರು.
ನಿರಂತರ ಓದಿನ ಆಸಕ್ತಿ ಮತ್ತು ಸಂಶೋಧನೆಯ ಹಸಿವು ಇಲ್ಲದವರು ಉತ್ತಮ ಪ್ರಾಧ್ಯಾಪಕರಾಗಲು ಸಾಧ್ಯವಿಲ್ಲ. ಸಂಶೋಧನೆಯು ಬೋಧನೆಯ ಅವಿಭಾಜ್ಯ ಅಂಗ. ಒಬ್ಬ ಪ್ರಾಧ್ಯಾಪಕ ಸದಾ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಪ್ರತಿಯೊಂದು ಹೊಸ ಸಂಗತಿಯೂಒAದು ಸಂಶೋಧನೆಯ ಫಲವಾಗಿರುತ್ತದೆ. ತರಗತಿ ನಿರ್ವಹಿಸುವಾಗ ಅಧ್ಯಾಪಕ ಹೊಸ ಐಡಿಯಾ, ಹೊಸ ಪರಿಕಲ್ಪನೆ ಹೊಳೆಸಿಕೊಳ್ಳುವುದುಕ್ಕೆ ಈ ಸಂಶೋಧನಾತ್ಮಕ ಗುಣವೇ ಆಧಾರವಾಗಿರುತ್ತದೆ ಎಂದು ತಿಳಿಸಿದರು.
ಸಂಶೋಧನೆ ಎಂದರೆ ಕೇವಲ ಓದು ಅಥವಾ ಬರವಣಿಗೆ ಮಾತ್ರವಲ್ಲ. ಅದು ಸಂಶೋಧಕನ ಅನುಭವ ಮತ್ತು ವೈಯಕ್ತಿಕ ಗಮನವನ್ನು ಅಪೇಕ್ಷಿಸುತ್ತದೆ. ಅಧ್ಯಯನ, ಜ್ಞಾನ ವಿಸ್ತರಣೆಯ ಹಾದಿಯಲ್ಲಿಹೊಸ ವಾದಗಳ ಮಂಡಿಸಬೇಕಾಗುತ್ತದೆ. ಈಗಾಗಲೇ ಇರುವ ಜ್ಞಾನದ ಆಧಾರದ ಮೇಲೆ ಹೊಸದನ್ನು ರೂಪಿಸಬೇಕಾಗುತ್ತದೆ. ಹಿಂದಿನ ಜ್ಞಾನ ವೈಜ್ಞಾನಿಕ ತಳಹದಿಯನ್ನು ಕಲ್ಪಿಸಿಕೊಡುತ್ತದೆ. ಈ ಆಯಾಮದಲ್ಲಿ ಬೌದ್ಧಿಕ ಬಲ ರೂಪಿಸಿಕೊಳ್ಳಬೇಕು. ಹೊಸ ಚಿಂತನೆಕಟ್ಟಬೇಕು. ಆಳವಾದ ಒಳನೋಟಗಳ ಮೂಲಕ ಸಂಶೋಧನೆಯ ಸಾಮರ್ಥ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಗತ್ತಿನಲ್ಲಿ ಇಲ್ಲದೇ ಇರುವುದನ್ನು ಹುಡುಕಲು ಸಾಧ್ಯವಿಲ್ಲ. ಆದ್ದರಿಂದ ಒಂದು ನಿರ್ದಿಷ್ಟ ಸಂಶೋಧನಾ ಪ್ರಮೇಯ ಕಂಡುಕೊಂಡು ಅದನ್ನು ವಿಸ್ತರಣೆ ಅಥವಾ ಪರಿಷ್ಕರಣೆ ಮಾಡುವ ಇಲ್ಲವೇ ಹೊಸ ವಿಷಯವನ್ನು ನೀಡುವುದರ ಕುರಿತಾಗಿ ಸಂಶೋಧಕನಿಗೆ ಸ್ಪಷ್ಟವಾದ ದೃಷ್ಟಿಕೋನ ಇರಬೇಕು. ಇತ್ತೀಚಿನ ಸಂಶೋಧನೆಗಳು ಜಾಳುಜಾಳಾಗುತ್ತಿವೆ ಎಂಬ ಕೊರಗು ವ್ಯಕ್ತವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಮಾರ್ಗದರ್ಶಕರು ಹೆಚ್ಚು ಗಮನವಹಿಸಬೇಕು ಈ ಕೊರಗು ನಿವಾರಿಸಿ ಗುಣಮಟ್ಟದ ಸಂಶೋಧನೆ ಸಾಧ್ಯವಾಗಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ ಮಾತನಾಡಿದರು. ಸಂಶೋಧನೆಯ ಹಾದಿ ಪ್ರಯಾಸದಾಯಕವಾಗಿದ್ದರೂ ಖುಷಿ ನೀಡುತ್ತದೆ. ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಹೆಚ್ಚಾಗಿ ಆಕರ್ಷಿಸಬೇಕು ಎನ್ನುವ ಉದ್ದೇಶದಿಂದ ಕಾಲೇಜು ಸಂಶೋಧನಾ ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್‌ಡಾ. ಸೌಮ್ಯಾ ಬಿ. ಪಿ ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕರಾದ ಡಾ. ದಿವಾಕರ ಕೆ, ಡಾ. ಸುದರ್ಶನ್ ಪಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ