ಗುರಿಯನ್ನು ಗಮ್ಯವಾಗಿಸಿ ಗುರುತರವಾಗಿಸಿದ ಗುರು

Chandrashekhara Kulamarva
0


ಗುರುವೆಂದರೆ ಅಜ್ಞಾನವೆಂಬ ಅಂಧಕಾರವನ್ನು ಅಳಿಸುವವನು. ನಮ್ಮ ಜೀವನದ ಉದ್ದಕ್ಕೂ ದೀವಿಗೆಯಾಗಿ ಸನ್ಮಾರ್ಗದಲ್ಲಿ ನಡೆಸುವವನು. ನಮ್ಮ ವ್ಯಕ್ತಿತ್ವಕ್ಕೆ ಹೊಳಪು ಹಚ್ಚಿ ಪ್ರಭಾವಳಿಯಂತಿರುವವನು. ಒಂದು ಅಕ್ಷರ ಕಲಿಸಿದವನೂ ಗುರುವಿನ ಸ್ಥಾನಕ್ಕೆ ಅರ್ಹ ಎಂಬುದಾಗಿ ಹೇಳುತ್ತದೆ ನಮ್ಮ ಸನಾತನ ಸಂಸ್ಕೃತಿ. ಇಂದಿನ ನನ್ನ ಗುರು ನಮನ ನನಗಿಂತ ಎಳೆಯನಾದರೂ ಎಲ್ಲರಿಗೂ ಮಾದರಿಯಾಗಬಲ್ಲ ನನ್ನ ಗುರುವೆಂಬ ಹೆಮ್ಮೆಯ ಛಲಗಾರನಿಗೆ.


ಬಡತನವೆಂಬುವುದು ಕರ್ಮಫಲ, ಆದರೆ ಆ ಬಡತನದಲ್ಲಿರುವವರಿಗೆ ವ್ಯಸನ ಅಂಟಿಕೊಂಡರೆ...! ಅದು ಸಂಸಾರಕ್ಕೆ ಶಾಪ. ಆ ಬರಡು ಬಂಡೆಯ ಮೇಲೆ ಮೊಳೆತ ಪುಷ್ಪವಿದು. ಸುಡು ಬಿಸಿಲಿನ ತಾಪ, ಭೋರ್ಗರೆವ ಮಳೆಯ ಪ್ರತಾಪ ಎಲ್ಲವನ್ನೂ ಸಹಿಸಿ ಆಚಲವಾಗಿ ನಿಂತ ದಿಟ್ಟ ಧೀಮಂತ ವ್ಯಕ್ತಿತ್ವವಿದು. ಇವರೇ ನಮ್ಮ ಪ್ರೀತಿಯ ಕಾರ್ತಿಕ್ ಸರ್.  ಉಮೇಶ್ ಕುಳಾಯಿ ಹಾಗೂ ಯಶೋಧ ದಂಪತಿಗಳ ಸುಪುತ್ರನಾಗಿ ಹುಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುಳಾಯಿ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸುರತ್ಕಲ್ ವಿದ್ಯಾದಾಯಿನಿ ಶಾಲೆಯಲ್ಲಿ ಪೂರೈಸುತ್ತಾರೆ. ಮುಂದಕ್ಕೆ ಗೋವಿಂದದಾಸ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಕೊಣಾಜೆ ಪಿ.ಎ. ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗುತ್ತಾರೆ.


"ನನಗೆ ಕಲಿಯಲು ಮನಸ್ಸಿತ್ತು, ಆದರೆ ಮನೆಯ ಪರಿಸ್ಥಿತಿ ಸರಿಯಿರಲಿಲ್ಲ. ಹಾಗಾಗಿ ಕಲಿಯಲು ಸಾಧ್ಯವಾಗಲಿಲ್ಲ" ಅನ್ನುವವರು ಇವರನ್ನೊಮ್ಮೆ  ನೋಡಬೇಕು. ಏಕೆಂದರೆ ಇವರ ಶೈಕ್ಷಣಿಕ ಸಾಧನೆಯ ಹಿಂದೆ ಅಚಲವಾದ ಪ್ರಯತ್ನವಿತ್ತು, ಶ್ರದ್ದೆಯಿತ್ತು ಮನೆಯ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟ ಕಾಲದಲ್ಲಿ ಈ ಪುಟ್ಟ ಪೋರ ಸ್ವಾವಲಂಬಿಯಾಗಲು ಮನ ಮಾಡಿದ್ದರು. 


ತನ್ನ 10ನೇ ವಯಸ್ಸಿಗೆ ರಾಜ್ಯ ಪ್ರಶಸ್ತಿ ವಿಜೇತ ಹೆಮ್ಮೆಯ ತಂಡ ಕುಳಾಯಿಯ ಕಲಾಕುಂಭದಲ್ಲಿ ಬಾಲ ಕಲಾವಿದರಾಗಿ ಸೇರಿದ ಇವರು ನಂತರದಲ್ಲಿ ನೃತ್ಯಪಟುವಾಗಿ, ಪ್ರಬುದ್ಧ ಕಲಾವಿದರಾಗಿ, ನಿರೂಪಕರಾಗಿ, ನಿರ್ದೇಶಕರಾಗಿ ತಮ್ಮನ್ನು ಉನ್ನತ ಮಟ್ಟಕ್ಕೆ ಏರಿಸಿಕೊಂಡ ರೀತಿ ಯುವ ಜನರಿಗೆ ಪ್ರೇರಣದಾಯಿ. ತನ್ನ ಶಿಕ್ಷಣಕ್ಕೆ ತಾನೇ ಹಣ ಹೊಂದಿಸಿ ಕೊಳ್ಳುವ ಜವಾಬ್ದಾರಿ ಹೊತ್ತು ಸಂಜೆಯ ಹೊತ್ತು ನೃತ್ಯ ನಿರ್ದೇಶನ ನೀಡಲು ತೊಡಗುತ್ತಾರೆ. ಮುಂಜಾನೆಯಿಂದ ಹಿಡಿದು ನಡು ಇರುಳಿನ ಶ್ರಮ ಅದರೊಂದಿಗೆ ಓದು.... ಕಲಾ ಮಾತೆ ನಂಬಿದವರನ್ನು ಅವಳು ಕೈ  ಬಿಟ್ಟ ನಿದರ್ಶನವಿದೆಯೇ....? ಅದರ ಫಲಶ್ರುತಿಯಾಗಿ ತನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ಗೋಲ್ಡ್ ಮೆಡಲ್‌ನೊಂದಿಗೆ ರ್‍ಯಾಂಕ್ ವಿಜೇತರಾಗಿ ಹೊರಹೊಮ್ಮುತ್ತಾರೆ. ಮುಂದಕ್ಕೆ ಸುರತ್ಕಲ್ ಎನ್.ಐ.ಟಿ.ಕೆ ಕಾಲೇಜಿನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.


ಕಾರ್ತಿಕ್ ಸರ್ ನನಗೆ ಪರಿಚಯವಾದದ್ದು ಒಬ್ಬ ಕೊರಿಯೋಗ್ರಾಫರ್ ಆಗಿ. ಚೇಳಾೖರು ಬಂಟರ ಸಂಘದ  ನೃತ್ಯ ಕಾರ್ಯಕ್ರಮಗಳಿಗೆ ನೃತ್ಯ ನಿರ್ದೇಶಕರಾಗಿ, ನೃತ್ಯ ಗುರುಗಳಾಗಿ ಇರುವವರು ಇವರು. ಅದ್ಭುತ ನೃತ್ಯಪಟು ಅಷ್ಟೇ ಗಂಭೀರ ಶಿಕ್ಷಕ. ನೃತ್ಯ ತರಬೇತಿಗೆ ನಿಂತರೆಂದರೆ 5 ವರ್ಷದಿಂದ ಹಿಡಿದು 50 ವರ್ಷದವರು ಕೂಡ ಒಂದೇ. ಕಲಿಸಿ ಕೊಟ್ಟದ್ದನ್ನು ಎತವತ್ತಾಗಿ ಮಾಡಲೇಬೇಕು ಇಲ್ಲವಾದಲ್ಲಿ ಬಾಯಿಯಿಂದ ಪುಂಖಾನುಪುಂಖವಾಗಿ ಹೊರಡುವ ಅಗ್ನಿ ಮಳೆಗೆ ಎಲ್ಲರೂ ಮೈಯೊಡ್ಡಲೇ ಬೇಕು. ನಮಗಿಂತ ಸಣ್ಣವನಾದರೂ ಅವರೆದುರಿದ್ದರೆ ತಣ್ಣಗೆ ಎದೆಯಲ್ಲಿ ನಡುಕ. ಆದರೆ ತರಬೇತಿಯ ನಂತರ ಕಾರ್ತಿಕ್ ಸರ್‌ನ ಬೇರೆಯೇ ವ್ಯಕ್ತಿತ್ವ ಕಣ್ಣಿಗೆ ಬೀಳುತ್ತದೆ. ಸ್ನಿಗ್ಧ ಕೋಮಲ ನಗು, ನಿಷ್ಕಲ್ಮಶ ಹೊಳೆವ ಕಂಗಳ ಮಿತಭಾಷಿ, ಎಲ್ಲರೂ ತಮ್ಮವರೆಂಬ ಗೌರವ ಪ್ರೀತ್ಯಾದರ ಅವರನ್ನು ಇನ್ನಷ್ಟು ಆಪ್ತರನ್ನಾಗಿಸುತ್ತದೆ.


ಸಾಧಕನಿಗೆ ಬಾಧಕವಿರುವುದಿಲ್ಲ ಎಂಬಂತೆ ವೃತ್ತಿ ಪ್ರವೃತ್ತಿ ಶ್ರದ್ದೆ ಎಲ್ಲವನ್ನೂ ಮಿಳಿತವಾಗಿಸಿ ಇತ್ತೀಚೆಗಷ್ಟೇ ಸ್ಟ್ರಕ್ಚರಲ್ ಇಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ವೃತ್ತಿ ನಡೆಸುತ್ತಿದ್ದಾರೆ. ಇದರೊಂದಿಗೆ ಪೆರ್ಮೆದ ಕಲಾವಿದೆರ್ ಚೇಳಾೖರು ಹಾಗೂ ಬಂಟರ ಸಂಘ ಚೇಳಾೖರು ಇದರ ನೃತ್ಯ ಹಾಗೂ ನಾಟಕ ನಿರ್ದೇಶಕರಾಗಿ, ಪಣಂಬೂರು- ಕುಳಾಯಿ ಯುವವಾಹಿನಿ ಘಟಕದ ನೃತ್ಯ, ಪ್ರಹಸನ ನಿರ್ದೇಶಕರಾಗಿ, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಪಡುಬಿದ್ರೆಯ ನೃತ್ಯ ನಿರ್ದೇಶಕರಾಗಿ ಅಲ್ಲದೆ ಪರಿಸರದ ಹಲವು ಸಂಘ ಸಂಸ್ಥೆಗಳಿಗೆ ನೃತ್ಯ ಹಾಗೂ ನಾಟಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಸಂಘ ಸಂಸ್ಥೆಗಳಿಗೆ ಬಹುಮಾನ ದೊರಕಿಸಿಕೊಟ್ಟ ಜನ ಮೆಚ್ಚುಗೆಯ ಯಶಸ್ವಿ ಯುವ ನಿರ್ದೇಶಕರಿವರು. ಇತ್ತೀಚೆಗೆ ರಂಗದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಲಾಕುಂಭ ತಂಡದ 'ಪರಮಾತ್ಮೆ ಪಂಜುರ್ಲಿ' ನಾಟಕದ ನಿರ್ದೇಶಕ ಹಾಗೂ ಪಂಜುರ್ಲಿ ಪಾತ್ರಧಾರಿ ಇವರು. ವೃತ್ತಿಯೊಂದಿಗೆ ತಾನು ಆರಾಧಿಸಿಕೊಂಡು ಬಂದಿರುವ ಕಲೆಗೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಾ ನಿರಂತರವಾಗಿ ರಂಗದಲ್ಲಿ ಸಕ್ರಿಯರಾಗಿದ್ದಾರೆ.


"ಈಗಿನ ಯುವ ಜನತೆಗೆ ಜವಾಬ್ದಾರಿ ಅನ್ನುದೇ ಇಲ್ಲ" ಎಂದು ಅಂದುಕೊಂಡಾಗಲೆಲ್ಲಾ ಕಾರ್ತಿಕ್ ಸರ್‌ ಹಾಗೆಯೇ ಕಣ್ಣೆದುರು ಗೋಚರಿಸಿ ಬಿಡುತ್ತಾರೆ. ಅವರ ನಗು ಹೌದೇ...? ಎಂಬಂತೆ ಪ್ರಶ್ನಿಸಿದಂತೆ ಭಾಸವಾಗುತ್ತದೆ. ತನ್ನ ಸುತ್ತ ಆರ್ಥಿಕ, ಮಾನಸಿಕ ಸ್ವಾಸ್ಥ್ಯ ಕದಡುವ ಪರಿಸ್ಥಿತಿ ವಾತಾವರಣ ಇದ್ದಾಗಲೂ ತಾನು ಗೆಲ್ಲಲೇ ಬೇಕು ಎಂಬ ಹಠ ಇಂದು ನಾವೆಲ್ಲಾ ಅವರನ್ನು ಹೆಮ್ಮೆಯಿಂದ ತಲೆಯೆತ್ತಿ ನೋಡುವಂತೆ ಮಾಡಿದೆ. ಅದಲ್ಲದೆ ಕಾರ್ತಿಕ್ ಸರ್ ಗುರುವಾಗಿ ಒಂದಷ್ಟು ಮಂದಿಗೆ ಸ್ಫೂರ್ತಿ ಪ್ರೇರಣೆಯನ್ನು ನೀಡುತ್ತಾ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ತನ್ನನ್ನು ತಾನು ರೂಪಿಸಿ ಕೊಂಡಿದ್ದಾರೆ. ನಮ್ಮ ಯುವ ಜನತೆ ಒಂದು ಆರೋಗ್ಯ ಪೂರ್ಣ ಸಮಾಜ ಕಟ್ಟುತ್ತಿದ್ದಾರೆ ಅನ್ನುವಾಗ ಪ್ರೋತ್ಸಾಹ ನಮ್ಮಿಂದ ಖಂಡಿತ ಆಗಲೇ ಬೇಕು. ಹಾಗಾಗಿ ಇಂದಿನ ಈ ಗುರು ನಮನ ನಾನು ಬಹುವಾಗಿ ಮೆಚ್ಚಿದ ನನ್ನ ಗುರುವಿಗೆ. ತಮ್ಮತನವನ್ನು ಕಳೆದುಕೊಳ್ಳದೆ ಇನ್ನೂ ಎತ್ತರಕ್ಕೆ ಬೆಳೆಯಿರಿ. ನೀವು ಕಂಡ ಕನಸುಗಳೆಲ್ಲಾ ನನಸಾಗಲಿ. ನೀವು ಆಸ್ಥೆಯಿಂದ ಮೈಗೂಡಿಸಿಕೊಂಡ ಕಲೆ, ಶಿಕ್ಷಣ ನಿಮ್ಮನ್ನು ಮೇರುಸ್ಥಾಯಿಯಾಗಿಸಲಿ ಎಂಬ ಹಾರೈಕೆ ನನ್ನದು.



-ಗೀತಾ ಲಕ್ಷ್ಮೀಶ್, ಮಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top