ಬೆಂಗಳೂರು: ದೆಹಲಿಯ ಪ್ರತಿಷ್ಠಿತ ಡಿಕೆ ಪೆಜೆನ್ಟ್ ಸಂಸ್ಥೆಯವರು ಆಯೋಜಿಸುವ "ಪ್ರೈಡ್ ಆಫ್ ಇಂಡಿಯಾ- ಮಿಸ್ ಇಂಡಿಯಾ 2025" ಕಿರೀಟವು ಕುಂದಾಪುರದ ನಿಶಾಲಿ ಅವರ ಮುಡಿಗೇರಿದೆ.
ದೆಹಲಿಯ ರ್‍ಯಾಡಿಸನ್ ಬ್ಲೂ ಹೋಟೆಲಿನಲ್ಲಿ ಸೋಮವಾರ ನಡೆದ ಮಿಸ್ ಇಂಡಿಯಾ- ಪ್ರೈಡ್ ಆಫ್ ಇಂಡಿಯಾ 2025 ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಂದಿದ್ದ 44 ಸ್ಪರ್ಧಿಗಳನ್ನು ಎದುರಿಸಿ ನಿಶಾಲಿ ಈ ಪ್ರತಿಷ್ಠಿತ ಟೈಟಲ್‌ಗೆ ಕೊರಳೊಡ್ಡುವುದರ ಮೂಲಕ ರಾಜ್ಯಕ್ಕೆ ಹೆಮ್ಮೆ- ಸಂಭ್ರಮ ತಂದಿದ್ದಾರೆ.
ನಿಶಾಲಿ ಕಳೆದ 6 ತಿಂಗಳಿನಿಂದ ಈ ಸ್ಪರ್ಧೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಟ್ಯಾಲೆಂಟ್ ಸುತ್ತಿನಲ್ಲಿ ಈ ನೆಲದ ಹೆಮ್ಮೆಯ ಯಕ್ಷಗಾನ ಪ್ರದರ್ಶನ ನೀಡಿ ಅವರು ಎಲ್ಲರ ಮೆಚ್ಚುಗೆ ಗಳಿಸಿದರು.
ನಜ್ಮೀ ಸಯೀದ್ ಹಾಗೂ ಡಾ. ಜಿಮ್ಮಿ ಗರಿಮಾ ಕುಮಾರಿ ಅವರು ನಿಶಾಲಿಗೆ ಪ್ರೈಡ್ ಆಫ್ ಇಂಡಿಯಾ– ಮಿಸ್ ಇಂಡಿಯಾ 2025ರ ಕಿರೀಟವನ್ನು ತೊಡಿಸಿದರು.
ಡಾ. ಜಿಮ್ಮಿ ಗರಿಮಾ ಕಲ್ಪನೆಯ ಈ ಸ್ಪರ್ಧೆಯ ಗ್ರಾಂಡ್ ಜ್ಯೂರಿಗಳಾಗಿ ಮಾರ್ಗರೆಟ್ ಚೊರೆಯಿ, ನಜ್ಮೀ ಸಯೀದ್, ಸೋನಲ್ ಗೋಸಾಲಿಯಾ, ಹಾಗು ಮನೀಷಾ ಸುಬ್ಬಾ ವೇದಿಕೆಯಲ್ಲಿದ್ದು ನಿಶಾಲಿ ಪ್ರತಿಭೆಯನ್ನು ಕೊಂಡಾಡಿದರು.
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಎಂ.ಎ ಜರ್ನಲಿಸಮ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಲಿ, ಬೆಂಗಳೂರಿನ ಶ್ರೀನಿಧಿ ಕಾರ್ಪೋರೇಷನ್ ಸಂಸ್ಥೆಯ ಆಡಳಿತ ನಿರ್ದೇಶಕರು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಉಮೇಶ್ ಕುಂದರ್ ಮತ್ತು ಶ್ರೀಮತಿ ಜಾನಕಿ ಅವರ ಪುತ್ರಿ. ಕುಂದಾಪುರದ ಬರೆಕಟ್ಟುನಿಂದ ದೆಹಲಿಯ ವರೆಗಿನ ಈ ಪಯಣವು ನನ್ನ ಜೀವಮಾನದ ಕನಸನ್ನು ನನಸಾಗಿಸಿದೆ ಎಂದು ನಿಶಾಲಿ ಸಂತಸವನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ