ನನ್ನ ನೆಚ್ಚಿನ ಶಿಕ್ಷಕಿ... ನನ್ನಮ್ಮ!

Chandrashekhara Kulamarva
0



ನ್ನ ನೆಚ್ಚಿನ ಶಿಕ್ಷಕಿ - ನನ್ನ ಮೊದಲ ಗುರು - ನನ್ನ ತಾಯಿ! ನನ್ನಮ್ಮ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ನಾನು ಕೂಡ ಒಂದನೇ ತರಗತಿಯಲ್ಲಿ ಅವರ ವಿದ್ಯಾರ್ಥಿಯಾಗಿದ್ದೆ. ಆದರೆ ಪೋಕ್ರಿಯಾಗಿದ್ದ ನಾನು ತುಂಬಾ ತುಂಟಾಟ ಮಾಡುತ್ತಿದ್ದ ಕಾರಣ ನನ್ನನ್ನು ಬೇರೆ ಶಾಲೆಗೆ ವರ್ಗಾಯಿಸಿಬಿಟ್ಟರು. ಅಮ್ಮ ಪ್ರತೀ ಭಾನುವಾರ ದಿನಪತ್ರಿಕೆ ಓದುತ್ತಿದ್ದರು. ಅವರು ಓಡುತ್ತಿದ್ದ ದಿನಪತ್ರಿಕೆಯಲ್ಲಿ ಪ್ರತೀ ಭಾನುವಾರ 'ಸಾಪ್ತಾಹಿಕ ಸಂಪದ' ಎಂಬ ವಿಶೇಷ ಸಂಚಿಕೆ ಪ್ರಕಟವಾಗುತ್ತಿತ್ತು. ಆ ಸಂಚಿಕೆ ನನಗೆ ಅಚ್ಚು- ಮೆಚ್ಚು! ಅದಕ್ಕಾಗಿಯೇ ಭಾನುವಾರವಾದ ಬರೋಣವನ್ನು ಬಹಳ ಆಸಕ್ತಿಯಿಂದ ಎದುರು ನೋಡುತ್ತಿದ್ದವ ನಾನು. ಆಗಿನ್ನೂ ನಾನು 6 ಅಥವಾ 7ನೇ ತರಗತಿಯಲ್ಲಿದ್ದೆನಷ್ಟೇ. ಆ ಸಾಪ್ತಾಹಿಕ ಸಂಪದದಲ್ಲಿ ಮಕ್ಕಳಿಗಾಗಿಯೇ ಒಂದು ವಿಶೇಷ ಕಥಾ ಲೇಖನವಿರುತ್ತಿತ್ತು. ಬೇರೆ ಬೇರೆ ದೇಶಗಳ ಜಾನಪದ ಕಥೆಗಳನ್ನು ಅಲ್ಲಿ ಚಿತ್ರಸಹಿತ ಪ್ರಕಟಿಸಲಾಗುತ್ತಿತ್ತು. ಹೆಚ್ಚಾಗಿ ಗ್ರೀಕ್, ಜಪಾನೀ ಹಾಗೂ ಚೀನೀ ಕಥೆಗಳು ಅಲ್ಲಿರುತ್ತಿದ್ದವು.


ಮೊದಲೇ ಮಾರ್ಷಲ್ ಆರ್ಟ್ಸ್ , ಕುಂಗ್ ಫು, ಡ್ರ್ಯಾಗನ್, ಜಾದೂ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ನನಗೆ ಇಂಥ ಕಥೆಗಳು ಬಹಳ ಆಕರ್ಷಣೀಯವಾಗಿರುತ್ತಿದ್ದವು. ಆದರೆ ಆಗ ನನಗೆ ಕನ್ನಡವನ್ನು ಸ್ಪಷ್ಟವಾಗಿ ಓದಲು ಬರುತ್ತಿರಲಿಲ್ಲ. ಅದಲ್ಲದೇ ಅಲ್ಲಿ ಬಳಸಲಾಗುತ್ತಿದ್ದದ್ದು ಸಾಹಿತ್ಯಾತ್ಮಕ ಕನ್ನಡ. ಇನ್ನೂ "ಒತ್ತಕ್ಷರಗಳ ಬಳಕೆ ಯಾಕಾಗಿ ಮಾಡುತ್ತಾರಪ್ಪಾ.. ಸುಮ್ನೆ ಬರ್ಕೊಂಡ್ ಹೋಗ್ಬಾರದಾ?" ಎಂದು ಯೋಚಿಸುತ್ತಿದ್ದ ನಾನು ಅವುಗಳನ್ನು ಓದಿ ತಿಳಿದುಕೊಳ್ಳುವುದು ಕಷ್ಟಕರವಾಗಿತ್ತು. ಹಾಗಾಗಿ ಆ ಕಥೆಗಳನ್ನು ಓದಿ ಹೇಳಲು ಅಮ್ಮನಲ್ಲಿ ಕೇಳುತ್ತಿದ್ದೆ. ಆಗ ಅಮ್ಮ ಓದಿ ಹೇಳುತ್ತಿದ್ದ ಕಥೆಗಳನ್ನು ಕೇಳಿ ನನ್ನ ಕಲ್ಪನಾ ಲೋಕದಲ್ಲಿ ಕಥಾದೃಶ್ಯಗಳನ್ನು ರೂಪಿಸಿಕೊಂಡು ಸಂತೋಷ ಪಡುತ್ತಿದ್ದೆ. ಹೀಗೆಯೇ ಮುಂದುವರಿಯುತ್ತಿದಾಗ... ಒಂದು ಭಾನುವಾರ ಅಮ್ಮ ದಿನಪತ್ರಿಕೆಯ ಓದಿನಲ್ಲಿ ಮಗ್ನರಾಗಿದ್ದರು. ಆಗ ನಾನು ಎಂದಿನಂತೆಯೇ ಹೋಗಿ ಕಥೆ ಹೇಳಲು ಕೇಳಿಕೊಂಡೆ. ಆದರೆ ಎರಡು- ಮೂರು ಬಾರಿ ಕೇಳಿದರೂ ಓದಿನಲ್ಲೆ ಮಗ್ನರಾಗಿದ್ದ ನನ್ನಬ್ಬೆ ಕೊನೆಯ ಬಾರಿ ಕೇಳಿದಾಗ ಸಿಟ್ಟುಗೊಂಡು "ಬೇಕಾದರೆ ನೀನೇ ಓದಿಕೋ.. ಅಷ್ಟೂ ಮಾಡಲಾಗುವುದಿಲ್ವೆ!" ಎಂದು ಬೈದೇಬಿಟ್ಟರು. ಅದನ್ನು ಕೇಳಿದ್ದೇ ತಡ, ನನ್ನ ಆತ್ಮ ಗೌರವಕ್ಕೆ ಧಕ್ಕೆಯಾದಂತಾಯಿತು. 


ಮೊದಲಿಗೆ ಅಮ್ಮನ ಮೇಲೆ ಸಿಟ್ಟು ಬಂತು. ನಂತರ ನಾನು ಇವರ ಸಹಾಯ ಇಲ್ಲದೆಯೂ ಓದಿ ತೋರಿಸುತ್ತೇನೆ ಎಂಬ ಛಲ ಹುಟ್ಟಿತು . ಪತ್ರಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ದೂರ ಸರಿದು ಒಂದೊಂದೇ ಅಕ್ಷರದ ಮೇಲೆ ಬೆರಳಿಟ್ಟು ಕಷ್ಟಪಟ್ಟು ಓದಲಾರಂಭಿಸಿದೆ. ಮೊದಮೊದಲಿಗೆ ಕಷ್ಟ ಎನಿಸಿತು. ಓದಲು ಆಗದಿದ್ದಾಗ ಸಿಟ್ಟೂ ಬಂತು. ಆದರೆ ಅಮ್ಮ ಬೈದದ್ದು ನೆನಪಾಗಿ ಮತ್ತೆ ಛಲವುಕ್ಕಿ ಓದಿಯೇ ತೀರುವೇನೆಂಬ ಹಠ ಸ್ಫುರಿಸಿ ಮತ್ತೆ ಓದಲಾರಂಭಿಸುತ್ತಿದ್ದೆ. ಹೀಗೇ ಕೆಲ ವಾರಗಳೇ ಕಳೆಯಿತು. ಈಗ ಸಲೀಸಾಗಿ ಕಥೆಗಳನ್ನು ಓದಲು ಸಾಧ್ಯವಾಗುತ್ತಿತ್ತು. ಅದಕ್ಕಿಂತಲೂ ಮುಖ್ಯವಾಗಿ ಶಾಲೆಯಲ್ಲಿ ಕನ್ನಡದ ವ್ಯಾಕರಣ ವಿಷಯಗಳು ಬಹಳ ಸುಲಭವಾಗಿ ಅರ್ಥವಾಗತೊಡಗಿದವು... ಕಾರಣ - ಅದಕ್ಕಿಂತ ಹೆಚ್ಚಿನ ಮಟ್ಟದ ವ್ಯಾಕರಣಗಳನ್ನೊಳಗೊಂಡ ಸಾಹಿತ್ಯವನ್ನದಾಗಲೇ ದಿನಪತ್ರಿಕೆಯ ಕಥೆಗಳಲ್ಲಿ ನಾ ಓದಿಯಾಗಿರುತ್ತಿತ್ತು!


ಯಾವುದೇ ವಿಷಯಗಳನ್ನು ಬಾಯಿಪಾಠ ಮಾಡುವ ಅನಿವಾರ್ಯತೆ ಇರಲಿಲ್ಲ. ಪರೀಕ್ಷೆಯಲ್ಲಿ ನನ್ನದೇ ಸ್ವಂತ ಉತ್ತರಗಳನ್ನು ಬರೆಯಲು ಭಾಷೆಯ ಹಿಡಿತ ಸಹಕಾರಿಯಾಯಿತು. ಉನ್ನತ ತರಗತಿಗೆ ತೆರಳಿದಂತೆ ಕ್ರಮೇಣ ಮಕ್ಕಳ ಕಥೆಯಲ್ಲಿದ್ದ ಆಸಕ್ತಿ ಕಡಿಮೆಯಾಗಿ ವಿವಿಧ ವಿಷಯಗಳ ಬಗ್ಗೆ ಬರೆಯಲಾಗಿದ್ದ ಅಂಕಣಗಳತ್ತ ಹೊರಳಿತು. ಆ ಅಂಕಣಗಳಲ್ಲಿದ್ದ ತಾರ್ಕಿಕ ವಿಷಯಗಳು, ಪದ ಪ್ರಯೋಗಗಳು ನನ್ನ ಭಾಷಾಸಕ್ತಿಯನ್ನು  ಉಲ್ಬಣಗೊಳಿಸಿದವು. ನಾ ಬರೆಯುತ್ತಿದ್ದ ಉತ್ತರಗಳನ್ನು ಓದಿದ ನಮ್ಮ ಶಿಕ್ಷಕರು "ಈ ಉತ್ತರ ಯಾವುದೇ ಗೈಡ್ ಪುಸ್ತಕಗಳಲ್ಲಿ ಇಲ್ಲ.. ನೀ ಹೇಗೆ ಬರೆದೆ ಇಷ್ಟು ಚೆನ್ನಾಗಿ? ಯಾರು ಹೇಳಿಕೊಟ್ಟರು ಇಂಥ ಪದಪ್ರಯೋಗ?" ಎಂದು ಅನುಮಾನ ಪಟ್ಟದ್ದೂ ಉಂಟು.. ಸ್ವಯಂ ಅವರೆದುರೇ ಒಂದು ವಿಷಯದ ಕುರಿತು ಬರೆದು ತೋರಿಸಿದಾಗ ಶ್ಲಾಘಿಸಿದ್ದೂ ಉಂಟು. 


ಹೀಗೇ ಭಾಷಾವಿಷಯದಲ್ಲಿ ಆಸಕ್ತಿ ಹಾಗೂ ತಕ್ಕ ಮಟ್ಟಿನ ಹಿಡಿತ ಸಿಕ್ಕಿದ್ದರ ಪ್ರಭಾವ- ಕಲೆಯಲ್ಲಿ ಆಸಕ್ತಿ ಬೆಳೆದು "ಯಕ್ಷಗಾನದ ಹುಚ್ಚು" ಹತ್ತಿಕೊಂಡು, ಮೇಳದ ಆಟಗಳ ಗೀಳು ಬೆಳೆದು, ಅದಕ್ಕಾಗಿ ಗೊತ್ತು- ಗುರಿ ಇಲ್ಲದ ಊರು- ಕೇರಿಗಳಲ್ಲಿ ಸುತ್ತಿ ಪಡೆದ ಲೋಕಾನುನಭವ, ನಂತರ ಕಥೆ- ಕವನ ಬರವಣಿಗೆ, ನಾಟಕ ರಚನೆ- ನಿರ್ದೇಶನ- ಹಾಸ್ಯ- ಪ್ರಹಸನ- ತಾಳಮದ್ದಳೆ- ವಿವಿಧ ಕಾರ್ಯಕ್ರಮ ನಿರೂಪಣೆ ಮಾಡುವಲ್ಲಿಯವರೆಗೆ ನನ್ನನ್ನು ಎಳೆತಂದಿತು. ಇಂದು ಯಾವುದೇ ಕಾರ್ಯಕ್ರಮದ/ ಪ್ರದರ್ಶನದ ನಂತರ ಪ್ರೇಕ್ಷಕರು ಚಪ್ಪಾಳೆ ತಟ್ಟಿದಾಗ/ಶ್ಲಾಘಿಸಿದಾಗ ನನಗೆ ನೆನಪಾಗುವುದು ಅಂದು ಅಮ್ಮ ಬೈದದ್ದು.. ಮತ್ತು ಅದರಿಂದಾಗಿ ನಾ ಬೆಳೆದದ್ದು.


ಈಗಲೂ ನನಗೇನೂ ಅಷ್ಟಾಗಿ ಭಾಷೆಯ ಆಳವಾದ ಜ್ಞಾನ ಇಲ್ಲವಾದರೂ ಕಲಿಯುವ ಆಸಕ್ತಿ ಬಹಳವಾಗಿದೆ. ಈ ಆಸಕ್ತಿಗೆ ಮೂಲ ಕಾರಣವೇ ಅಂದಿನ ಅಮ್ಮನ ಬೈಗಳು.


ಗುರುಗಳ ಬೈಗಳು ಕೆಲವೊಮ್ಮೆ ನಮ್ಮ ಒಳಿತಿಗೂ ನಾಂದಿಯಾಗಬಹುದು ಎಂಬುದು ಸತ್ಯವೆಂದು ಸಾಬೀತಾಯಿತು. ನಾವದನ್ನು ಸ್ವೀಕರಿಸುವ ರೀತಿಯಲ್ಲೇ ಇರುವುದು ವ್ಯತ್ಯಾಸ! ಇಂಥ ಪಾಠ ಕಲಿಸಿ, ನನ್ನ ವ್ಯಕ್ತಿತವದ ರೂಪಿಸುವಲ್ಲಿ ಬಹುದೊಡ್ಡ  ಕೊಡುಗೆ ಇತ್ತ ನನ್ನವ್ವೆಯೇ ನನ್ನ ಮೊದಲ ನೆಚ್ಚಿನ ಶಿಕ್ಷಕಿ!


ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು ಅಮ್ಮ!


- ಶ್ರೇಯಸ್. ಕೆ. ಬಿ. ಮಂಗಳೂರು

M.Sc - ಜೈವಿಕ ತಂತ್ರಜ್ಞಾನ ವಿಭಾಗ,

ಮಂಗಳೂರು ವಿಶ್ವವಿದ್ಯಾನಿಲಯ.




Post a Comment

0 Comments
Post a Comment (0)
To Top