ಪೀಳಿಗೆಯ ಅಂತರದ ನಡುವಿನ ಕೊಂಡಿ- 'ಮಿಲೆನಿಯಲ್‌ ಶಿಕ್ಷಕರುʼ

Chandrashekhara Kulamarva
0



ನ್ನತ ಶಿಕ್ಷಣ ಸಂಸ್ಥೆಗಳೆಂದರೆ ಕನಿಷ್ಠ ಎರಡರಿಂದ ಮೂರು ತಲೆಮಾರುಗಳು ಪರಸ್ಪರ ಭೇಟಿಯಾಗುವ ಅಥವಾ ಚರ್ಚಿಸುವ ಜಾಗ. ಇಲ್ಲಿ ಒಂದು ತಲೆಮಾರು ಇನ್ನೊಂದು ತಲೆಮಾರಿಗೆ ತನ್ನ ಜ್ಞಾನ, ಅನುಭವ, ಸ್ವ ಶೋಧಿಸಿದ ಕೌಶಲ್ಯದ ಹೊಳವನ್ನು ತಲುಪಿಸುವ ಅನನ್ಯ ಕೆಲಸವನ್ನು ಮಾಡುತ್ತದೆ. ಶಿಕ್ಷಕರ ದಿನಾಚರಣೆಯ ಈ ಹೊತ್ತಿನಲ್ಲಿ ತಮ್ಮ ಜ್ಞಾನ, ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಪ್ರಕ್ರಿಯೆಯಲ್ಲಿ ತೊಡಗಿರುವ ಹಾಗೂ ನವಯುಗದ ಪೀಳಿಗೆಯ ಜೊತೆಗೆ 'ಕಲಿಯುವಿಕೆಯʼ ಕೊಡು-ಕೊಳ್ಳುವಲ್ಲಿ ನಿರತರಾಗಿರುವ ಶಿಕ್ಷಕರ ಬಗೆಗೆ ಬೆಳಕು ಚೆಲ್ಲುವುದು ತುಂಬಾ ಅಗತ್ಯ.


ಡಿಜಿಟಲ್‌ ಕ್ರಾಂತಿ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಆದ ಸುಧಾರಣೆಗಳು ಪೀಳಿಗೆಯ ನಡುವಿನ ವಯಸ್ಸಿನ ಅಂತರವನ್ನು ಅತೀವವಾಗಿ ತಗ್ಗಿಸಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಲ್ಕೈದು ವರುಷದ ಅಂತರವೇ  ಜೀವನವನ್ನು ನೋಡುವ ದೃಷ್ಟಿಕೋನವನ್ನು ಅನೂಹ್ಯವಾಗಿ ಬದಲಿಸುವ ಕಾಲ ಇದು. ಹಾಗಾಗಿ ಈಗ ಉನ್ನತ ಶಿಕ್ಷಣ ಸಂಸ್ಥೆಗಳೆಂದರೆ ಅದು ಕನಿಷ್ಠ ಮೂರು ತಲೆಮಾರುಗಳು ಸೇರುವ ಜಾಗ, ಆಡಳಿತ ಹಂತದಲ್ಲಿ ಇರುವ ಬೇಬಿ ಬೂಮರ್‌ ತಲೆಮಾರು ಅಥವಾ ಜನರೇಷನ್‌ ಎಕ್ಟ್‌ (1965ರಿಂದ 1980ರ ಒಳಗೆ ಜನಿಸಿದವರು) ವಿದ್ಯಾರ್ಥಿಗಳ ಜೊತೆಗೆ ಹೆಚ್ಚು ಒಡನಾಟದಲ್ಲಿರುವ ಮಿಲೆನಿಯಲ್‌ ಶಿಕ್ಷಕರು (1981 ರಿಂದ 1996 ನಡುವೆ ಜನಿಸಿದವರು) ಹಾಗೂ ಜನರೇಷನ್‌ ಝಡ್‌ ವಿದ್ಯಾರ್ಥಿಗಳು (1997ರಿಂದ 2012 ರ ಒಳಗೆ ಜನಿಸಿದವರು). ಈ ಮೂರು ಪೀಳಿಗೆ ಒಂದೆಡೆ ಸೇರುವುದೆಂದರೆ ಅದು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಜ್ಞಾನದ ವರ್ಗಾವಣೆ ಮಾತ್ರ ಅಲ್ಲ, ಎರಡು ಭಿನ್ನ ವಯಸ್ಸನ್ನು ಮತ್ತು ಅನುಭವವನ್ನು ಪ್ರತಿಬಿಂಬಿಸುವ ಸಮೂಹಗಳ ಮಧ್ಯೆ ನಡೆಯುವ ಕೊಡುಕೊಳ್ಳುವಿಕೆ. ಆದರೆ ಅದು ಅನುಭವಗಳ ಸಮ್ಮಿಲನ ಮಾತ್ರ ಅಲ್ಲ, ನಿರೀಕ್ಷೆಗಳ ದ್ವಂದ್ವ ಕೂಡಾ. ಯಾಕೆಂದರೆ ಇಂದಿನ ಶಿಕ್ಷಕರು ಜ್ಞಾನ ಹಂಚುವುದು ಮಾತ್ರ ಅಲ್ಲ ತೆರೆದ ಮನಸ್ಸಿನಿಂದ ಇನ್ನೊಂದು ಪೀಳಿಗೆಯಿಂದಲೂ ಪಡೆದುಕೊಳ್ಳುವ ಮುಕ್ತತೆಯಿಂದಲೇ ಇರಬೇಕಾಗುತ್ತದೆ.



ಹಾಗಾಗಿ ಈ ಪೀಳಿಗೆಯ ಅಂತರ- 'ಜನರೇಷನ್‌ ಗ್ಯಾಪ್”‌ ಅನ್ನು ಕಾಯುತ್ತಾ ಎಲ್ಲರ ನಿರೀಕ್ಷೆಯನ್ನು ನಿಭಾಯಿಸುತ್ತಾ ಸಾಗುವ ಅತ್ಯಂತ ದೊಡ್ಡ ಸವಾಲು ಹಾಗೂ ಚಾಕಚಕ್ಯತೆಯನ್ನು ಪಳಗಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಮಿಲೆನಿಯಲ್‌ ಶಿಕ್ಷಕರದು. ಅವರದು ಒಂಥವಾ ‌'ಸ್ಯಾಂಡ್ವಿಚ್; ಪರಿಸ್ಥಿತಿ ಎಂದರೆ ತಪ್ಪಿಲ್ಲ. ಯಾಕೆಂದರೆ ಆಡಳಿತ ನಿರ್ವಹಣಾ ಹಂತದಲ್ಲಿವ ಬೇಬಿ ಬೂಮರ್‌ ಅಥವಾ ಜನರೇಷನ್‌ ಎಕ್ಸ್‌ ನ ನಿರೀಕ್ಷೆಗಳನ್ನೂ ಇವರು ನೆರವೇರಿಸಬೇಕಾಗುತ್ತದೆ. ಆಡಳಿತ ಹಂತದಲ್ಲಿರುವರು ಶಿಕ್ಷಣದ ಪ್ರಕ್ರಿಯೆಯನ್ನು ನೋಡುವುದಕ್ಕೂ  ಜನರೇಷನ್‌ ಝಡ್‌ ವಿದ್ಯಾರ್ಥಿಗಳು, ಶಿಕ್ಷಣವನ್ನು, ಬದುಕನ್ನು ನೋಡುವ ರೀತಿಗೆ ಅಜಗಜಾಂತರ ವ್ಯತ್ಯಾಸ ಇದೆ. ಇದೊಂಥರಾ 'ನಮ್ಮ ಕಾಲದಲ್ಲಿ ಹೀಗಿತ್ತುʼ ಮತ್ತು 'ನನ್ನ ಇನಸ್ಟಾಗ್ರಾಂ ರೀಲ್‌ ನೋಡಿದ್ಯಾ?ʼ ಎನ್ನುವ, ʼಭೂತಕಾಲʼ ಮತ್ತು 'ಈ ಕ್ಷಣ, ಈಗʼ ಎನ್ನುವ ಸಮಯದ ನಡುವೆ ಇರುವಷ್ಟೇ ಭಿನ್ನ.


ಈ ಎರಡು ಸಮಯದ ಅಂತರದ ಜೊತೆಗೆ ಇರುವ ಬದುಕಿನ ಬಗೆಗಿನ ಪರಿಕಲ್ಪನೆಯ ಭಿನ್ನತೆಯನ್ನೂ ಅರ್ಥಮಾಡಿಕೊಂಡು ಇಬ್ಬರ ನಿರೀಕ್ಷೆಗಳನ್ನು ಪೂರೈಸುವ ಸಂಕಷ್ಟ ಮಿಲೇನಿಯಲ್‌ ಶಿಕ್ಷಕರದು. ಆದರೂ ಬಹಳ ಚಾಕಚಕ್ಯತೆಯಿಂದ ಇದನ್ನು ನಿಭಾಯಿಸಲು ಬಲ್ಲವರು. ಆದರೆ ನಿಭಾಯಿಸುವ ಪ್ರಕ್ರಿಯೆಯಲ್ಲಿ, ಒಮ್ಮೆಮ್ಮೆ ಹೈರಾಣಾಗಿ, ಎಂಥಹಾ ಜನರೇಷನ್‌ ನಮ್ಮದು 'ಅತ್ತ ದರಿ ಇತ್ತ ಪುಲಿʼ ಎಂದು ತಮ್ಮನ್ನೇ ಗೇಲಿ ಮಾಡುತ್ತಾ ಮುಂದಕ್ಕೆ ಅಡಿ ಇಡುವವರು.


1980ರ ನಂತರ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಹರಿಯುವ ನೀರಿನಂತೆ. ಇವತ್ತಿದ್ದಿದು ನಾಳೆ ಇರುವುದಿಲ್ಲ, ಹಾಗೋ ಹೀಗೋ ಆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿರುವಾಗ, ಅವರಿಂದ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿ ಈಗ ತಾನೆ ಬಂದ ಹೊಸ ವಿಚಾರವನ್ನು ಲೀಲಾಜಾಲವಾಗಿ ತಮ್ಮದಾಗಿಸಿಕೊಂಡ ವಯಸ್ಸಿನ ಹುಡುಗರ ದಂಡು ಮುಂದೆ ಕೂತಿರುತ್ತದೆ. ಅಷ್ಟರಲ್ಲಿ ಅವರಿಂದಲೇ ಸ್ವಲ್ಪ ಹೇಳಿಸಿಕೊಂಡು, ತಾವೇ ಸ್ವಲ್ಪ ಕಲಿತು ಮುಂದಕ್ಕೆ ಅಡಿಯಿಡುವಾಗ, ಹೊಸ ವಿದಾನಗಳ ಮೂಲಕ ಶೈಕ್ಷಣಿಕ ಸಾಧ್ಯತೆಗಳನ್ನು ವಿಸ್ತರಿಸುತ್ತಾ ಇರುವಾಗ ಹಳೆಯ ಮಾದರಿಯಲ್ಲಿ ವರದಿಗಳನ್ನೋ, ಕಡತಗಳ ನಿರ್ವಹಣೆ ಮಾಡಿಕೊಡಿ ಅಂದಾಗ ಅಸಹನೆಯಿಂದಲೇ ಮಿಡುಕಾಡುತ್ತಾ 'ಪೊಲೈಟ್‌ ಬಟ್‌ ಫಾಲಿಷ್‌ಡʼ ಎನ್ನುವ ಈ ಶಿಕ್ಷಕರು ಎಲ್ಲವನ್ನೂ ನಿಭಾಯಿಸುತ್ತಾ ನಡೆಯುತ್ತಿರುತ್ತಾರೆ.


ಈ ಮಧ್ಯೆ ಬದಲಾದ ಬದುಕಿನ ಸಿದ್ದಾಂತಗಳಿಗೂ ಒಗ್ಗಿಕೊಳ್ಳಬೇಕಾಗಿದೆ. ಸ್ಮಾರ್ಟ್‌ ಫೋನ್‌ ಜೊತೆ ಬೆಳೆದುಬಂದ ವಿದ್ಯಾರ್ಥಿ ಗಡಣಕ್ಕೆ ಎಲ್ಲವೂ  ಇನ್‌ ಸ್ಟಂಟ್‌  ಆಗಬೇಕು, ಹೇಳುವುದನ್ನೂ ನೇರವಾಗಿ, ಸ್ಪಷ್ಟವಾಗಿಯೇ ಹೇಳಬೇಕು. ಒಂದು ತಾಸು ಒಬ್ಬರೇ ಮಾತನಾಡಿದರೆ ಇಡೀ ತರಗತಿಯನ್ನೇ ಲೀಲಾಜಾಲವಾಗಿ ನಿದ್ದೆಗೆ ದೂಡಬಲ್ಲದು. ನಾವು ತುಂಬಾ ಅವ್ಟ್‌ ಸ್ಪೋಕನ್‌ ಎನ್ನುವ ಈ ವಿದ್ಯಾರ್ಥಿಗಳಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಕೊಟ್ಟರೆ ಮಾತ್ರ ತರಗತಿಯಲ್ಲಿ ಶಿಕ್ಷಕರ ಜೊತೆಗೆ ಇರಬಲ್ಲರು !. ಕೈಯಲ್ಲಿ ಕಾಸಿಗೆ ಯಾವ ಕೊರತೆಯೂ ಇಲ್ಲದ ಈ ಜನರೇಷನ್‌ ಗೆ ʼಕೈ ಕೆಸರಾದರೆ ಬಾಯಿ ಮೊಸರುʼ ಎಂಬ ಗಾದೆ ಸ್ವಲ್ಪ ದೂರವೇ ಎಂದೆನಿಸುತ್ತದೆ. ಏನಿದ್ದರೂ ಸ್ಮಾರ್ಟ್‌ ಆಗಿ ಗುಣಮಟ್ಟವನ್ನು ಹೇಗೆ ಸುಧಾರಿಸಿಕೊಳ್ಳಬೇಕು, ಓಡುತ್ತಿರುವ ಜಗತ್ತಿನಲ್ಲಿ ನಮ್ಮ ಗುರಿ ಹೇಗಿರಬೇಕು?, ಏಕಾಗ್ರತೆಯಿಂದ ಮಾಡುವ ಕೆಲಸಗಳು ಎಷ್ಟು ಪರಿಣಾಮಕಾರಿ ಎನ್ನುವುದನ್ನು ಸರಳವಾಗಿ, ನೇರವಾಗಿ, ಅಲ್ಲಲ್ಲಿ ಸಾಮಾಜಿಕ ಜಾಲತಾಣದ ಕಥನದ ಶೈಲಿಯಲ್ಲಿ ಹೇಳಿದರೆ ಕೇಳಿಸಿಕೊಂಡಾರು!.


ಹಾಗಾಗಿ ಮಿಲೆನಿಯಲ್‌ ಶಿಕ್ಷಕರಿಗೆ ಹೊಸಕಲ್ಲಿನಲ್ಲಿ ಹಳೆಯ ರಾಗಿಯನ್ನು ಅರೆದು ಸಮರ್ಪಿಸುವ ಕೆಲಸ. ತಮಗೆ ಬದುಕಿನ ಮೌಲ್ಯಗಳನ್ನು ಕಲಿಸಿದ ಶಿಕ್ಷಕರ ಜೊತೆಗೆ ಹೊಸ ಕೌಶಲ್ಯವನ್ನು ಕಲಿಸಿದ ತಂತ್ರಜ್ಞಾನ ಎಂಬ ಶಿಕ್ಷಕರಿಗೂ ಧನ್ಯವಾದ ಸಮರ್ಪಿಸುತ್ತಾ ಶಿಕ್ಷಣ  ದಿನಾಚರಣೆ ಆಚರಿಸಿಕೊಳ್ಳುವ ಸಂದರ್ಭ ಇದು.


ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.


- ಡಾ. ಗೀತಾ ಎ.ಜೆ.

ಸಹಾಯಕ ಪ್ರಾಧ್ಯಾಪಕಿ

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ

ಎಸ್‌ಡಿಎಂ ಕಾಲೇಜು ಉಜಿರೆ

 96635 91284



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top