ಉಡುಪಿ: ಮಂಗಳವಾರ ಸಂಜೆ ಉಡುಪಿಯ ಯಕ್ಷಗಾನಕಲಾರಂಗ ಇನ್ಫೊಸಿಸ್ ಸಭಾಂಗಣದಲ್ಲಿ ನಡೆದ ಕರ್ಣಾಟಕ ಸಂಗೀತದ ಶ್ರೇಷ್ಠ ವಾಗ್ಗೇಯಕಾರ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರೆನಿಸಿದ ಮುತ್ತುಸ್ವಾಮಿ ದೀಕ್ಷಿತರ 250 ನೇ ಜನ್ಮವರ್ಷದ ಹಿನ್ನೆಲೆಯಲ್ಲಿ ನಡೆದ ಸಂಸ್ಮರಣೋಪನ್ಯಾಸ ನೆರೆದಿದ್ದ ಸಂಗೀತಾಸಕ್ತರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿತು. ಈ ಮೂಲಕ ಉಡುಪಿ ಕಂಡ ಶಾಸ್ತ್ರೀಯ ಸಂಗೀತ ಧ್ರುವತಾರೆ ಶ್ರೀಮತಿ ರಂಜನಿ ಸಂಸ್ಮರಣಾ ಸಂಗೀತೋತ್ಸವಕ್ಕೆ ಮುಕುಟತೊಡಿಸಿದ ಕಾರ್ಯಕ್ರಮವೆನಿಸಿತು.
ಉಪನ್ಯಾಸ ನಡೆಸಿಕೊಟ್ಟವರು ಪ್ರಸಿದ್ದ ಯುವ ಅಧ್ಯಾತ್ಮಿಕ ಚಿಂತಕ ಹರಿಕಥಾ ಪ್ರವೀಣ, ಪ್ರವಚನಕಾರರೂ ಆಗಿರುವ ಬೆಂಗಳೂರಿನ ದುಶ್ಶಂತ್ ಶ್ರೀಧರ್. ನಡೆಸಿಕೊಟ್ಟವರು ರಂಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ, ಸಹಯೋಗವಿತ್ತವರು ಸುಘೋಷ ಉಡುಪಿ.
ಹನ್ನೊಂದು ದಿನಗಳ ರಂಜನಿ ಸಂಗೀತೋತ್ಸವ- 2025 ಈ ಉಪನ್ಯಾಸದೊಂದಿಗೆ ಸಮಾಪನಗೊಂಡಿತು. ಸುಮಾರು ಎರಡು ಘಂಟೆಗೂ ಮೀರಿದ ಅವಧಿಯಲ್ಲಿ ದುಶ್ಶಂತ್ ಅವರು ಸಂಸ್ಕೃತ, ಇಂಗ್ಲೀಷ್ ಕನ್ನಡ ತಮಿಳು ತೆಲುಗು ಅಲ್ಲಲ್ಲಿ ಸ್ವಲ್ಪ ಹಿಂದಿ ಹೀಗೆ ತಮ್ಮ ಬಹುಭಾಷಾ ಪ್ರಗಲ್ಭತೆ, ತಿಳಿಹಾಸ್ಯಮಿಶ್ರಿತ ಹಾಗೂ ಅಷ್ಟೇ ಗಂಭೀರ ವಿಚಾರಗಳಿಂದ ಮುತ್ತುಸ್ವಾಮಿ ದೀಕ್ಷಿತರ ಭೌಮ ವ್ಯಕ್ತಿತ್ವ, ಸಂಗೀತ ತಪಸ್ಸು, ದೇಶ ಪರ್ಯಟನ, ನೂರಾರು ತೀರ್ಥಕ್ಷೇತ್ರ ದರ್ಶನ ಮತ್ತು ಆ ಎಲ್ಲಾ ಕಡೆಗಳಲ್ಲಿ ಅಲ್ಲಿನ ಆರಾಧ್ಯಮೂರ್ತಿಗಳ ಬಗೆಗೆ ಅತ್ಯಂತ ಅರ್ಥಗರ್ಭಿತ, ರಾಗಭಾವಪೂರ್ಣ ಕೃತಿ ರಚನ, ಪ್ರತೀ ಕೃತಿಗಳ ರಾಗ ಹಾಗೂ ಶಬ್ದಗಳ ಬಳಕೆಯಲ್ಲಿ ಅವರು ವಹಿಸಿದ ಆಸ್ಥೆ, ಪ್ರಸಂಗಾವಧಾನತೆ, ಛಂದೋಬದ್ಧತೆ, ಪದಲಾಲಿತ್ಯ, ತೋರಿದ ಭಕ್ತಿ ತಾದಾತ್ಮ್ಯಗಳು, ಅವರ ಲೋಕಾನುಭವಗಳು, ದೇಶದ ಭೌಗೋಳಿಕ ಅರಿವು, ಸಾರ್ಥಕ ಬದುಕಿನ ಒಳನೋಟಗಳು ಹೀಗೆ ಪ್ರತಿಯೊಂದನ್ನೂ ವರ್ತಮಾನದ ಅನೇಕ ಸನ್ನಿವೇಶ ಹಾಗೂ ಜನರ ಮನಸ್ಥಿತಿಗಳಿಗೆ ಅನುಗುಣವಾಗಿ ರಸಹೂರಣಗಳ ಸಹಿತ ಪ್ರಸ್ತುತಪಡಿಸಿ ಸಭಿಕರ ಪ್ರತೀಕ್ಷಣವನ್ನು ಸಾರ್ಥಕಪಡಿಸಿದರು.
ದೀಕ್ಷಿತರ ಹುಟ್ಟಿನಿಂದ ಮೊದಲ್ಗೊಂಡು ಅವರ ಸಂಗೀತ ಜೀವನ ಯಾತ್ರೆಯ ಕೊನೆಯ ಕ್ಷಣಗಳ ವರೆಗಿನ ಕಥಾನಕವನ್ನೂ ಅವರ ಅನೇಕ ಕೃತಿಗಳನ್ನೂ ಸುಶ್ರಾವ್ಯ ಗಾಯನದ ಸಹಿತ ಮನೋಜ್ಞವಾಗಿ ವಿವರಿಸಿದ ದುಶ್ಶಂತ್ ಅವರ ವಾಗ್ವೈಖರಿಯ ಪರಿ ಬಹುಕಾಲ ಸ್ಮರಣೀಯವೆನಿಸಿತು. ದೀಕ್ಷಿತರ ಘನತೆ ಗಾಂಭೀರ್ಯಕ್ಕೆ ಬಾನೆತ್ತರದ ಗೌರವ ತಂದ ಅವರ ಮಾತುಗಳಿಗೆ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಎದ್ದುನಿಂತು ಕರತಾಡನದೊಂದಿಗೆ ಪ್ರಶಂಸೆ ಸಲ್ಲಿಸಿದರು.
ಯುವ ಪ್ರತಿಭೆ ಗಾರ್ಗಿ ಸುದೀಪ್ ಸ್ವಾಗತಿಸಿದರು. ರಂಜನಿ ಮೆಮೋರಿಯಲ್ ಟ್ರಸ್ಟ್ ಮುಖ್ಯಸ್ಥರಾದ ಪ್ರೊ ಅರವಿಂದ ಹೆಬ್ಬಾರ್ ದುಶ್ಶಂತ್ ಅವರಿಗೆ ಅಭಿನಂದನಾ ನುಡಿ ಸಹಿತ ಸಂಮಾನಿಸಿ ಧನ್ಯವಾದ ಅರ್ಪಿಸಿದರು. ಸುಘೋಷ ಉಡುಪಿ ಇದರ ಪ್ರಮುಖರಾದ ಜ್ಯೋತಿಷ್ಯ ವಿದ್ವಾನ್ ಮುರಳೀಧರ ತಂತ್ರಿ ಕೊರಂಗ್ರಪಾಡಿ ಹಾಗೂ ವಿದ್ವಾನ್ ಮಧೂರು ಕೃಷ್ಣಪ್ರಸಾದ ರಂಗಭಟ್ಟರು ಉಪಸ್ಥಿತರಿದ್ದರು.
ಅಪ್ಪ ಮಗ ಇಬ್ಬರೂ ಮೇಳರಾಗಕರ್ತರು, ಸಹೋದರ ವಯಲಿನ್ ಶೋಧಕ!!
ನೂರಾರು ಮೌಲಿಕ ಸಂಗೀತ ಕೃತಿ ಕುಸುಮಗಳನ್ನು ರಚಿಸಿದ ಮುತ್ತುಸ್ವಾಮಿ ದೀಕ್ಷಿತರು ಅಮೃತವರ್ಷಿಣಿ ರಾಗದ ಸೃಷ್ಟಿಕರ್ತರು ಮಾತ್ರವಲ್ಲ ಆ ರಾಗದಲ್ಲಿ ಕೃತಿ ರಚಿಸಿ ಹಾಡಿ ದುರ್ಭಿಕ್ಷೆ ಆವರಿಸಿದ್ದ ಒಂದು ಊರಿನಲ್ಲಿ ಮಳೆಯನ್ನೂ ಬರಿಸಿ ಅಲ್ಲಿನ ರಾಜನಿಂದ ಸುವರ್ಣಾಭಿಷಿಕ್ತರಾಗಿದ್ದರು. ಅವರ ತಂದೆ ರಾಮಸ್ವಾಮಿ ದೀಕ್ಷಿತರೂ ಹಂಸಧ್ವನಿ ರಾಗದ ಸೃಷ್ಟಿಕರ್ತರಾಗಿದ್ದರು. ಅಲ್ಲದೇ ಅವರ ಸಹೋದರ ಬಾಲುಸ್ವಾಮಿ ದೀಕ್ಷಿತರ್ ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ವಯಲಿನ್ ಬಳಕೆಯನ್ನು ಪ್ರಥಮತಃ ಶೋಧಿಸಿದ ಮಹನೀಯರು ಎಂಬ ಕುತೂಹಲಕಾರಿ ಅಂಶಗಳನ್ನೂ ದುಶ್ಶಂತ್ ವಿವರಿಸಿದರು.
- ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ