ಹಲೋ, ಹೇಗಿದ್ದೀರಾ?
ಈಗಿನ ಸಂಕೀರ್ಣ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ. ಗುರುತಿಸುವಿಕೆಯನ್ನು ಇಷ್ಟ ಆಡುತ್ತಾರೆ. ಅದನ್ನು identity crisis ಎಂದು ಹೇಳಬಹುದು. ಪ್ರತಿಯೊಬ್ಬರೂ ತಮ್ಮದೇ ಆದ ಅಭಿರುಚಿಯನ್ನು ಹೊಂದಿರುತ್ತಾರೆ ಮತ್ತು ಅದರಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಬಯಸುತ್ತಾರೆ.
ಆದರೆ ಪ್ರಸಿದ್ಧಿ ಪಡೆಯಲು ಸಿದ್ಧಿ ತುಂಬ ಮುಖ್ಯ ಆಗುತ್ತದೆ. ಸಿದ್ಧಿ ಆಗುವುದು, ನಿರಂತರ ಶ್ರದ್ಧೆ ಮತ್ತು ತನ್ಮಯತೆಯಿಂದ ಅದು ನಮ್ಮ ಯಶಸ್ಸಿನ ಭಾಗವಾಗಿ ರೂಪುಗೊಳ್ಳುತ್ತದೆ. ಇದನ್ನು ಜೀವನದ ಬಹುತೇಕ ಮಜಲುಗಳಲ್ಲಿ ಕಾಣಬಹುದು.
ದಿನವಿಡೀ ಪಿಚ್ ಮೇಲೆ ಬಿಸಿಲಿನಲ್ಲಿ ಬೆವರು ಇಳಿಸುವ ಬ್ಯಾಟ್ಸ್‌ಮನ್‌ಗಳು, ಗಂಟೆಗಟ್ಟಲೇ ರಿಯಾಜ್ ಮಾಡುವ ಸಂಗೀತಗಾರರು, ಹೋಂವರ್ಕ್ ಮಾಡಿ ಕೊಂಡು ಬಂದು ಕ್ಯಾಮರಾದ ಮುಂದೆ ರಿಟೇಕ್ ಮಾಡುವ ನಟರು, ರಾತ್ರಿಯಿಡೀ ನಿದ್ದೆಗೆಟ್ಟು ಪರೀಕ್ಷೆಗೆ ತಯಾರಿ ಮಾಡುವ ಅಭ್ಯರ್ಥಿಗಳು, ಎಲ್ಲರೂ ಸಿದ್ಧಿಗಾಗಿ ಹಂಬಲಿಸುವವರೆ.
ಸಿದ್ಧಿಯಾಗಿ ಪ್ರಸಿದ್ಧಿ ಹೊಂದುವುದು ಅಂದರೆ ಅಕ್ಕಿ ಅನ್ನವಾಗಿ ಮಾರ್ಪಾಡು ಹೊಂದುವ ತನಕ ಕಾಯುವ ತಾಳ್ಮೆ. ಆದರೆ ಕೆಲವೊಂದು ಸಾರಿ ನಮ್ಮಲ್ಲಿ ಜನರು ಫಾಸ್ಟ್ ಫುಡ್ ಆರ್ಡರ್ ಮಾಡಿದ ಹಾಗೆ ಜೀವಿಸಲು ಬಯಸುತ್ತಾರೆ. ಒಂದೆರಡು ರಿಯಾಲಿಟಿ ಶೋ ಗೆ ಹೋಗಿ ಬಂದರೆ ಸಾಕು, ಯಾರಾದರೂ ಸೆಲ್ಫಿ ತೆಗೆದು ಕೊಂಡರೆ ಸೆಲೆಬ್ರಿಟಿ ಆದ ಹಾಗೆ ಸಂತೋಷ ಪಡುತ್ತಾರೆ. ಮುಂದಿನ ದಾರಿ ಕಾಣದ ಹಾಗೆ ಬದುಕುತ್ತಾರೆ. ಇತ್ತ ಕಾಮನ್ ಮ್ಯಾನ್ ಆಗಿ ಬದುಕಲು ಆಗದೆ, ಅತ್ತ ಸೆಲೆಬ್ರಿಟಿ ಆಗದೆ ತ್ರಿಶಂಕು ಸ್ಥಿತಿಯಲ್ಲಿ ಇರುತ್ತಾರೆ.
ಜೀವನದಲ್ಲಿ ಸಿದ್ಧಿ ಆಗಿ ಪ್ರಸಿದ್ಧಿವಾದರೆ ನಮ್ಮ ವ್ಯಕ್ತಿತ್ವಕ್ಕೆ ತನ್ನದೇ ಆದ ತೂಕ ಬರುತ್ತದೆ. ನಮ್ಮ ಕಷ್ಟಗಳ ಅರಿವು ಇರುತ್ತದೆ. ನಮ್ಮ ಪರಿಶ್ರಮ ನಮಗೆ ಯಾವಾಗಲೂ. Down to earth ಆಗೆಂದು ಎಚ್ಚರಿಕೆ ಕೊಡುತ್ತದೆ. ಎಲ್ಲೋ ಓದಿದ ನೆನಪು. "ನಮ್ಮ ಸಾಧನವೇ ಮಾತನಾಡಬೇಕು. ಮಾತನಾಡುವುದೇ ಸಾಧನ ಆಗಬಾರದು". ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋದಾಗ ಮಾತ್ರ, ನಮ್ಮ ಸಿದ್ಧಿ ಪ್ರಸಿದ್ಧಿಯ ಮೆಟ್ಟಿಲಾಗಿ ಪರಿಣಮಿಸುತ್ತದೆ.
ಅನ್ನ ಇಳಿಯದ ಗಂಟಲಲ್ಲಿ ಕಡುಬು ತುರುಕಿದ ಹಾಗೆ ನಾವು ಸರಿಯಾಗಿ ಸಾಧನೆ ಮಾಡದೆ ಪ್ರಸಿದ್ಧಿಗೆ ಆಸೆ ಪಟ್ಟರೆ ಅರಗಿಸಿಕೊಳ್ಳದೆ ಫಜೀತಿ ಪಡ ಬೇಕಾಗುತ್ತದೆ.
ಅದೃಷ್ಟ ಎಂಬ ಲಿಫ್ಟ್ ಗೆ ಆಸೆ ಪಡದೆ ಸಿದ್ಧಿ ಎಂಬ ಮೆಟ್ಟಿಲು ಏರುತ್ತ ಪ್ರಸಿದ್ಧಿ ಎಂಬ ಶಿಖರ ಮೆಟ್ಟಿ ನಿಲ್ಲೋಣ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


