ಮಂಗಳೂರು: ಮಂಗಳೂರು ನಗರದೊಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸುರತ್ಕಲ್ ವರೆಗಿನ ಬಂದರು ಸಂಪರ್ಕ ರಸ್ತೆಯನ್ನು ಸಮರ್ಪಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ಸಂಜೆ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು.
ಶಾಸಕರುಗಳಾದ ಡಿ. ವೇದವ್ಯಾಸ್ ಕಾಮತ್ (ಮಂಗಳೂರು ದಕ್ಷಿಣ), ಡಾ. ಭರತ್ ಶೆಟ್ಟಿ (ಮಂಗಳೂರು ಉತ್ತರ), ಸಂಚಾರ ವಿಭಾಗದ ಎಸಿಪಿ ಶ್ರೀಮತಿ ನಜ್ಮಾ ಫಾರೂಕಿ, ಯೋಜನಾ ನಿರ್ದೇಶಕ (ಎನ್‌ಎಚ್‌ಎ) ಜಾವೇದ್, ಸೂಪರಿಂಟೆಂಡೆಂಟ್ ಎಂಜಿನಿಯರ್ (ಎಂಸಿಸಿ) ನರೇಶ್ ಶೆಣೈ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಭಾರೀ ಮಳೆ ಹಾಗೂ ಕಳಪೆ ಕಾಮಗಾರಿಗಳಿಂದಾಗಿ ನಗರದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ನಗರದೊಳಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳೂ ಶೋಚನೀಯ ಸ್ಥಿತಿಯಲ್ಲಿವೆ. ಮೊನ್ನೆಯಷ್ಟೇ ದ್ವಿಚಕ್ರ ವಾಹನ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಈ ಹಿನ್ನೆಲೆಯಲ್ಲಿ ಕ್ಷಿಪ್ರ ಸ್ಪಂದನೆಗಾಗಿ ಸಂಸದರು ಅಧಿಕಾರಿಗಳ ಸಭೆ ಕರೆದಿದ್ದರು.
ನಂತೂರು, ಕೆಪಿಟಿ, ಕೂಳೂರು, ಪಣಂಬೂರು, ಸುರತ್ಕಲ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಜಂಕ್ಷನ್‌ಗಳಲ್ಲಿ ತೀವ್ರ ಸಂಚಾರದಟ್ಟಣೆ ಅಗುತ್ತಿದ್ದು, ಇದರ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿಗಳು ನಗರದೊಳಕ್ಕೆ ಬಾರದೆ ಹೊರಗಿನಿಂದಲೇ ಹಾದುಹೋಗುವಂತೆ ಬೈಪಾಸ್ ರಸ್ತೆಗಳನ್ನು ನಿರ್ಮಿಸಲು ಕೇಂದ್ರ ಸರಕಾರದ ಹೆದ್ದಾರಿ ಸಚಿವಾಲಯದ ಜತೆ ಚರ್ಚಿಸಲಾಗಿದೆ. ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ್ದು, ವಿಸ್ತೃತ ಯೋಜನಾ ವರದಿ ತಯಾರಿಸಲು ಅನುಮತಿಯೂ ದೊರೆತಿದೆ. ಆದರೆ ಇದು ಪೂರ್ಣಗೊಳ್ಳಲು ಕನಿಷ್ಠ 6 ತಿಂಗಳ ಕಾಲಾವಕಾಶ ಬೇಕಾಗಿದೆ ಎಂದು ಸಂಸದರು ಸಭೆಯಲ್ಲಿ ತಿಳಿಸಿದರು.
ಅಲ್ಲಿಯವರೆಗೆ ಸಮರ್ಪಕವಾಗಿ ಸಂಚಾರ ನಿರ್ವಹಣೆ ಮತ್ತು ರಸ್ತೆಗಳ ದುರಸ್ತಿ ಕಾರ್ಯ ನಿರ್ವಹಿಸಲು ಅಗತ್ಯ ಕ್ರಮಗಳನ್ನು ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ನಡೆಸುವಂತೆ ಸಂಸದ ಕ್ಯಾಪ್ಟನ್ ಚೌಟ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ವೇದವ್ಯಾಸ ಕಾಮತ್ ಅವರೂ ಕೆಲವು ಪ್ರಮುಖ ಸಲಹೆಗಳನ್ನು ನೀಡಿ, ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುವಂತೆ ಸೂಚಿಸಿದರು.
ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಪ್ರತ್ಯೇಕವಾಗಿ ಮಾತನಾಡಿದ ಸಂಸದರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.
ಸ್ಥಳೀಯ ಶಾಸಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳನ್ನು ಜತೆಗೂಡಿಸಿಕೊಂಡು ಈ ಸಭೆ ನಡೆಸಲಾಗಿದೆ. ಈಗಾಗಲೇ ಈ ರಸ್ತೆಗೆ ಒಟ್ಟು 28 ಕೋಟಿ ರೂ.ಗಳ ನಿರ್ವಹಣಾ ಟೆಂಡರ್ ಕರೆಯಲಾಗಿದೆ.
ಆ ಟೆಂಡರ್ ಕೆಲಸಗಳು ಮಳೆಗಾಲದ ಕಾರಣಕ್ಕೆ ಆಗಿಲ್ಲ. ಈಗ ಒಂದು ವಾರದಿಂದ ಮಳೆ ಕಡಿಮೆಯಾಗಿದ್ದು, ಹೆದ್ದಾರಿಗಳ ಮತ್ತು ನಗರದೊಳಗಿನ ಸಂಪರ್ಕ ರಸ್ತೆಗಳ ದುರಸ್ತಿಗೆ ಸೂಚನೆ ನೀಡಲಾಗಿದೆ.
ಇದರ ಜತೆ ಜತೆಗೆ ಸುರತ್ಕಲ್‌ನಿಂದ ಬಿ.ಸಿ ರೋಡ್ ವರೆಗೆ ಒಟ್ಟು 33 ಕಿ.ಮೀ ಉದ್ದದ ರಸ್ತೆಯನ್ನು ಸಂಪೂರ್ಣ ಮೇಲ್ದರ್ಜೆಗೇರಿಸುವ ಯೋಜನೆಗೆ ಈಗಾಗಲೇ ಕೇಂದ್ರ ಹೆದ್ದಾರಿ ಸಚಿವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಅನುಮೋದನೆಯೂ ಸಿಕ್ಕಿದೆ.
ಡಿಪಿಆರ್ ತಯಾರಿಸುವ ಸಂದರ್ಭದಲ್ಲೂ ಎನ್‌ಎಚ್‌ಎಐ, ಮಹಾನಗರಪಾಲಿಕೆ ಮತ್ತು ಸಂಚಾರ ಪೊಲೀಸರ ಸಮನ್ವಯದೊಂದಿಗೆ ಕೆಲಸ ಮಾಡಲು ಸೂಚಿಸಲಾಗಿದೆ.
ಮಂಗಳೂರು ನಗರದಲ್ಲಿ ಭಾರೀ ಸಂಚಾರ ದಟ್ಟಣೆ ಇರುವುದರಿಂದ ಅದನ್ನು ಕಡಿಮೆ ಮಾಡಲು ಹೆದ್ದಾರಿ ಬೈಪಾಸ್ ರಸ್ತೆಗಳ ಪ್ರಸ್ತಾಪ ಮಾಡಲಾಗಿದೆ. ಇದರ ಬಗ್ಗೆಯೂ ಡಿಪಿಆರ್ ಮಾಡಲು ಅನುಮೋದನೆ ಸಿಕ್ಕಿದೆ.
ಈ ವಿಷಯದ ಬಗ್ಗೆ ಸಮಗ್ರ ಚರ್ಚೆ ಮಾಡಲು ಮಂಗಳೂರು ಉತ್ತರ ಮತ್ತ ಮಂಗಳೂರು ದಕ್ಷಿಣದ ಶಾಸಕರು, ಎನ್‌ಎಚ್‌ಎಐ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಮಹಾನಗರಪಾಲಿಕೆ ಅಧಿಕಾರಿಗಳನ್ನು ಸಭೆಗೆ ಕರೆಯಲಾಗಿದೆ.
ರಸ್ತೆ ಗುಂಡಿಯ ಕಾರಣದಿಂದ ಅಪಘಾತ ಸಂಭವಿಸಿ ದ್ವಿಚಕ್ರ ಸವಾರ ಮಹಿಳೆಯೊಬ್ಬರು ನಗರದ ಕೂಳೂರಿನಲ್ಲಿ ಮೃತಪಟ್ಟಿರುವುದು ಅತ್ಯಂತ ದುಃಖದ ವಿಚಾರ. ಸಹಜವಾಗಿಯೇ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಈ ಬಾರಿ ಅವದಿಗೆ ಮೊದಲೇ ಮಳೆ ಅರಂಭವಾದ ಕಾರಣ ಮತ್ತು ಬಿಟುಮಿನ್ ರಸ್ತೆಯ ಕಾರಣಕ್ಕೆ ದುರಸ್ತಿ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ. ಕೆಲವೆಡೆ ದುರಸ್ತಿ , ಕೆಲವೆಡೆ ಸಂಪೂರ್ಣ ಡಾಮರೀಕರಣ, ಅಗತ್ಯವಿರುವ ಕಡೆಗಳಲ್ಲಿ ಕಾಂಕ್ರೀಟಿಕರಣವೂ ಸೇರಿದಂತೆ ನಿರ್ವಹಣೆ ಮಾಡಲಾಗುತ್ತದೆ.
ಜನಪ್ರತಿನಿಧಿಗಳಾಗಿ ಜನರ ಆಕ್ರೋಶಕ್ಕೆ ಸ್ಪಂದನೆ ಕೊಡಬೇಕಾಗಿರುವುದು ನಮ್ಮ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳ ಬೆನ್ನುಬಿದ್ದು ಕೆಲಸ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಕಾರ್ಯೋನ್ಮುಖನಾಗಿದ್ದೇನೆ ಎಂದು ಸಂಸದರು ತಿಳಿಸಿದರು.
ಈಗಾಗಲೇ ಡಿಪಿಆರ್‍ಗೆ ಏಜೆನ್ಸಿ ನಿಗದಿಪಡಿಸಲಾಗಿದೆ. ಐದಾರು ತಿಂಗಳೊಳಗೆ ವರದಿ ಸಿದ್ಧವಾಗಲಿ. ಕೇಂದ್ರ ಸರಕಾರದಿಂದ 28 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಸಹ ತರಲಾಗಿದೆ. ಎಲ್ಲೆಲ್ಲಿ ಬ್ಲಾಕ್‌ಸ್ಪಾಟ್ಸ್ ಇವೆ, ಅವುಗಳನ್ನು ಸರಿಪಡಿಸುವುದು, ಅಗತ್ಯವಿದ್ದಲ್ಲಿ ಎಲಿವೇಟೆಡ್ (ಎತ್ತರಿಸಿದ) ರಸ್ತೆಯ ಮತ್ತು ಅಂಡರ್‍ಪಾಸ್ ನಿರ್ಮಾಣದ ಬಗ್ಗೆಯೂ ಸೂಚಿಸಲಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ