ಸಾಕ್ಷರ ಭಾರತ– ಡಿಜಿಟಲ್ ಯುಗದ ಕನಸು

Upayuktha
0



ಪ್ರತಿ ವರ್ಷದಂತೆ ಈ ಬಾರಿಯೂ ಸೆಪ್ಟೆಂಬರ್ 8ರಂದು ವಿಶ್ವದಾದ್ಯಂತ ವಿಶ್ವ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತಿದೆ. ಯುನೆಸ್ಕೋ 1966ರಲ್ಲಿ ಅಧಿಕೃತವಾಗಿ ಘೋಷಿಸಿ 1967ರಿಂದ ಪ್ರಾರಂಭವಾದ ಈ ಆಚರಣೆ, ಇಂದು ಜಾಗತಿಕ ಮಟ್ಟದಲ್ಲಿ ಸಾಕ್ಷರತೆಯ ಮಹತ್ವವನ್ನು ಬೆಳಗಿಸುವ ಅತಿ ಮುಖ್ಯ ದಿನವಾಗಿದೆ. ಮಾನವೀಯ ಅಭಿವೃದ್ಧಿಯ ಪ್ರಗತಿ ಪಥದಲ್ಲಿ ಸಾಕ್ಷರತೆ ಒಂದು ಮೂಲಭೂತ ಹಕ್ಕು ಮಾತ್ರವಲ್ಲ, ಬದುಕಿನ ಪ್ರತಿಯೊಂದು ಆಯಾಮವನ್ನೂ ಸ್ಪರ್ಶಿಸುವ ಶಕ್ತಿಯಾಗಿದೆ. 21ನೇ ಶತಮಾನದಲ್ಲಿ ಸಾಕ್ಷರತೆ ಎಂದರೆ ಕೇವಲ ಓದು-ಬರಹ ತಿಳಿದುಕೊಳ್ಳುವುದು ಮಾತ್ರವಲ್ಲ, ಜ್ಞಾನ, ಮಾಹಿತಿ, ತಂತ್ರಜ್ಞಾನ, ಆರ್ಥಿಕ ಅರಿವು, ಮತ್ತು ಸಮಾನ ಹಕ್ಕುಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಎಂಬುದು ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿ “ಡಿಜಿಟಲ್ ಯುಗದಲ್ಲಿ ಸಾಕ್ಷರತೆ” (Promoting Literacy in the Digital Era) ಎಂಬ 2025ರ ಧ್ಯೇಯವಾಕ್ಯವು ಅತ್ಯಂತ ಸೂಕ್ತವಾಗಿದೆ.


ಜಾಗತಿಕ ಸಾಕ್ಷರತೆ:

ಜಾಗತಿಕ ಮಟ್ಟದಲ್ಲಿ.ನೋಡುವುದಾದರೆ ಕಳೆದ ಶತಮಾನದ ಮಧ್ಯಭಾಗದಿಂದಲೂ ಸಾಕ್ಷರತೆಯ ಬೆಳವಣಿಗೆಯಲ್ಲಿ ದೊಡ್ಡ ಪ್ರಗತಿ ಕಂಡುಬಂದಿದೆ. ವಿಶ್ವದ ವಯಸ್ಕ ಸಾಕ್ಷರತಾ ಪ್ರಮಾಣ ಇಂದು ಶೇಕಡಾ 86ರಷ್ಟಿದೆ. ಆದರೆ ಇನ್ನೂ ಸುಮಾರು 75 ಕೋಟಿ ಮಂದಿ ಅನಕ್ಷರಸ್ಥರಾಗಿದ್ದು, ಇವರಲ್ಲಿ ಬಹುಪಾಲು ಮಹಿಳೆಯರು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಜನರಾಗಿದ್ದಾರೆ. 2000ರಿಂದ 2020ರವರೆಗೆ ಯುವಜನರ ಸಾಕ್ಷರತೆ 87%ರಿಂದ 92%ರವರೆಗೆ ಏರಿದರೂ, ಅಸಮಾನತೆಗಳ ಚಿತ್ರಣ ಸ್ಪಷ್ಟವಾಗಿಯೇ ಗೋಚರಿಸುತ್ತದೆ. ನಾರ್ವೆ, ಫಿನ್ಲ್ಯಾಂಡ್, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳು ಬಹುತೇಕ ಶೇಕಡಾ 100ರ  ಸಾಕ್ಷರತೆಯನ್ನು ಸಾಧಿಸಿರುವಾಗ, ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಇದು ಇಂದಿಗೂ 70%ಗಿಂತ ಕಡಿಮೆ ಇದೆ. ಅಂದರೆ ಸಾಕ್ಷರತೆ ಕೇವಲ ಶಿಕ್ಷಣದ ಸಾಧನೆ ಅಲ್ಲ, ಅದು ಸಮಾಜದ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳ ಪ್ರತಿಬಿಂಬವಾಗಿದೆ ಎಂಬುದನ್ನು ಗಮನಿಸಬಹುದು. ಯುನೆಸ್ಕೋ ಸಾಕ್ಷರತೆಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ ಮೂಲಾಧಾರವೆಂದು ಪರಿಗಣಿಸಿದ್ದು, ಬಡತನ ನಿವಾರಣೆ, ಲಿಂಗ ಸಮಾನತೆ, ಆರ್ಥಿಕ ಬೆಳವಣಿಗೆ ಮತ್ತು ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ನೇರ ಸಂಬಂಧ ಹೊಂದಿದೆ.


ಭಾರತದ ಸಾಕ್ಷರತಾ ಪಯಣ:

ಭಾರತದ ಸಾಕ್ಷರತೆಯ ಹಾದಿಯನ್ನು ಗಮನಿಸಿದರೆ ಒಂದು ಅದ್ಭುತ ಪವಾಡವನ್ನು ಸೃಷ್ಟಿಸಿದೆ ಎನ್ನಬಹುದು. 1951ರಲ್ಲಿ ಸ್ವಾತಂತ್ರ್ಯಾನಂತರ ನಡೆದ ಮೊದಲ ಜನಗಣತಿಯ ಪ್ರಕಾರ ಭಾರತದ ಸಾಕ್ಷರತೆ ಕೇವಲ ಶೇಕಡಾ 18.3 ರಷ್ಟಿತ್ತು. ಆ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯರಲ್ಲಿ ಬಹುಪಾಲು ಓದು-ಬರಹದ ಹಕ್ಕಿನಿಂದ ವಂಚಿತರಾಗಿದ್ದರು. ಆದರೆ ಅಂದು ದೇಶದ ರಾಜಕೀಯ ನಾಯಕರು, ಸಮಾಜ ಸುಧಾರಕರು ಹಾಗೂ ಶಿಕ್ಷಣ ತಜ್ಞರು ಸಾಕ್ಷರತೆಯನ್ನು ರಾಷ್ಟ್ರೋತ್ಥಾನದ ಮೂಲಶಕ್ತಿಯೆಂದು ಪರಿಗಣಿಸಿದರು. ಹೀಗಾಗಿ ನಿಧಾನವಾದರೂ ಸ್ಥಿರವಾದ ಪಯಣ ಆರಂಭವಾಯಿತು. 2011ರ ಜನಗಣತಿ ವೇಳೆಗೆ ಸಾಕ್ಷರತಾ ಪ್ರಮಾಣವು ಶೇಕಡಾ 74ಕ್ಕೆ ತಲುಪಿತು. ಇತ್ತೀಚಿನ 2023–24ರ ಅಂಕಿಅಂಶಗಳ ಪ್ರಕಾರ ಇದು 80.9%ರ ಮಟ್ಟ ತಲುಪಿದೆ. ಅಂದರೆ ಇಂದು ಪ್ರತಿಯೊಂದು ಐದು ಭಾರತೀಯರಲ್ಲಿ ನಾಲ್ವರು ಸಾಕ್ಷರರಾಗಿದ್ದಾರೆ. ಈ ಪ್ರಗತಿ ನಿಜಕ್ಕೂ ಶ್ಲಾಘನೀಯ, ಆದರೆ ,ಲಿಂಗ ಅಂತರ, ನಗರ-ಗ್ರಾಮ ವ್ಯತ್ಯಾಸ ಮತ್ತು ರಾಜ್ಯಮಟ್ಟದ ಅಸಮಾನತೆ ಇನ್ನೂ ಗಂಭೀರ ಸವಾಲಾಗಿದೆ.


ಮಹಿಳಾ ಸಾಕ್ಷರತಾ ಪ್ರಮಾಣವನ್ನು ಪುರುಷರೊಂದಿಗೆ ಹೋಲಿಸಿದರೆ ಸ್ಪಷ್ಟ ಚಿತ್ರಣ  ದೊರೆಯುತ್ತದೆ. ಭಾರತದಲ್ಲಿ ಪುರುಷರ ಸಾಕ್ಷರತೆ 87.2% ಇದ್ದರೆ ಮಹಿಳೆಯರಲ್ಲಿ ಇದು ಕೇವಲ 74.6%. ಅಂದರೆ, ಸಮಾಜದಲ್ಲಿ ಮಹಿಳೆಯರು ಸಾಕ್ಷರತೆಯಲ್ಲಿ ಇನ್ನೂ ಹಿಂದುಳಿದಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನವ್ಯತ್ಯಾಸವೂ ಗಮನಾರ್ಹ. ನಗರಗಳಲ್ಲಿ ಸಾಕ್ಷರತೆ 88.9% ಇದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದು 77.5% ರಷ್ಟಿದೆ. ರಾಜ್ಯವಾರು ಅಸಮಾನತೆಗಳನ್ನೂ ಕೂಡ ಇಲ್ಲಿ ಕಾಣಬಹುದು. ಮಿಜೋರಾಂ (98.2%) ಮತ್ತು ಕೇರಳ (96.2%) ರಾಜ್ಯಗಳು ಮುಂಚೂಣಿಯಲ್ಲಿದ್ದು ಅವರದ್ದೇ ಸಾಕ್ಷರತಾ ಮಾದರಿಗಳನ್ನು ನಿರ್ಮಿಸಿವೆ, ಬಿಹಾರ (74.3%) ಮತ್ತು ಆಂಧ್ರಪ್ರದೇಶ (72.6%) ರಾಜ್ಯಗಳು ಈ ದಿಕ್ಕಿನಲ್ಲಿ ಬಹಳಷ್ಟು ಹಿಂದುಳಿದಿವೆ.


ಮಿಜೋರಾಂನ ಸಂಪೂರ್ಣ ಸಾಕ್ಷರತಾ ಸಾಧನೆ:

ಇಲ್ಲಿ ಮಿಜೋರಾಂನ ಸಾಧನೆ ವಿಶೇಷವಾಗಿ ಉಲ್ಲೇಖನೀಯ. 2025ರ ಮೇ ತಿಂಗಳಲ್ಲಿ ಮಿಜೋರಾಂ ಶೇಕಡಾ 98ರಷ್ಟು ಸಾಕ್ಷರತೆಯನ್ನು ಸಾಧಿಸಿ ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯವೆಂದು ಘೋಷಿಸಲ್ಪಟ್ಟಿತು. ಇದರ ಹಿಂದಿನ ಯಶಸ್ಸಿಗೆ ಕಾರಣ ಅಲ್ಲಿಯ ಸಮುದಾಯದ ಒಗ್ಗಟ್ಟಿನ ಚಳುವಳಿ, ಸ್ವಯಂಸೇವಕರ ಸೇವಾಭಾವನೆ, ಸಮಗ್ರ ಶಿಕ್ಷಣ ಯೋಜನೆಗಳ ನಿರಂತರ ಅನುಷ್ಠಾನ ಹಾಗೂ ಅಲ್ಲಿಯ ಸರ್ಕಾರವು ಮಹಿಳಾ ಶಿಕ್ಷಣಕ್ಕೆ ನೀಡಿದ ಆದ್ಯತೆ. ಮಿಜೋರಾಂನ ಈ ರೀತಿಯ ಪ್ರಗತಿಯಿಂದ ತಿಳಿಯುವುದೇನೆಂದರೆ, ಸಾಕ್ಷರತೆ ಸರ್ಕಾರದ ಯೋಜನೆಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ, ಬದಲಾಗಿ ಸಮಾಜದ ಪ್ರತಿಯೊಬ್ಬ ಸದಸ್ಯನೂ ತೊಡಗಿಸಿಕೊಂಡಾಗ ಮಾತ್ರ ಈ ರೀತಿಯ ಸಾಧನೆ ಸಾಧ್ಯ.


ಸಾಕ್ಷರತೆಯ ಮಹತ್ವ ಮತ್ತು ಸವಾಲುಗಳು:

ಸಾಕ್ಷರತೆಯ ಮಹತ್ವವನ್ನು ಕೇವಲ ಓದು-ಬರಹದ ಕೌಶಲ್ಯಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಇದು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತದೆ, ಆರೋಗ್ಯ ಜಾಗೃತಿಗೆ ದಾರಿ ತೋರಿಸುತ್ತದೆ, ಬಡತನ ನಿವಾರಣೆಗೆ ಪೂರಕವಾಗುತ್ತದೆ, ಮಹಿಳೆಯರ ಸಬಲೀಕರಣಕ್ಕೆ ಬುನಾದಿಯಾಗುತ್ತದೆ ಮತ್ತು ಪ್ರಜಾಪ್ರಭುತ್ವದಲ್ಲಿ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾಕ್ಷರತೆ ಅಂದರೆ ಇ-ಮೇಲ್ ಓದುವುದು, ಆನ್ಲೈನ್ ಸೇವೆಗಳನ್ನು ಬಳಸುವುದು, ಬ್ಯಾಂಕಿಂಗ್ ವ್ಯವಹಾರಗಳನ್ನು ನಿರ್ವಹಿಸುವುದು, ಸುದ್ದಿಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವುದು– ಇವುಗಳೆಲ್ಲವೂ ಒಳಗೊಂಡಿರುವ ಕೌಶಲ್ಯ. ಅಂದರೆ ಸಾಕ್ಷರತೆ ಅಜ್ಞಾನದಿಂದ ಜ್ಞಾನಕ್ಕೆ ಸಾಗುವ ಸೇತುವೆಯಾಗಿದ್ದು, ಸಮಾನ ಹಕ್ಕುಗಳ ಸಮಾಜ ನಿರ್ಮಾಣದ ಆಧಾರವಾಗಿದೆ.


ಸಾಕ್ಷರತೆ ಬೆಳೆಯುತ್ತಿರುವ ಈಗಿನ ಕಾಲಘಟ್ಟದಲ್ಲೂ ಭಾರತವು ಕೆಲವೊಂದು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಶಿಕ್ಷಕರ ಕೊರತೆ, ಬಡತನ ಮತ್ತು ಬಾಲಕಾರ್ಮಿಕತೆ, ಮೂಲಸೌಕರ್ಯ ದೌರ್ಬಲ್ಯ ಮತ್ತು ಕೊರತೆ, ಸಾಂಸ್ಕೃತಿಕ ಅಡೆತಡೆಗಳು ಹಾಗೂ ಭಾಷಾ ವೈವಿಧ್ಯತೆ ಮುಂತಾದವು ಸಾಕ್ಷರತಾ ಹೋರಾಟಕ್ಕೆ ಅಡ್ಡಿಯಾಗುತ್ತಿವೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗೆ ತಲುಪಲು ಮಕ್ಕಳಿಗೆ ಕಿಲೋಮೀಟರ್ ಗಟ್ಟಲೆ ದೂರ ನಡೆದು ಹೋಗಬೇಕಾಗುತ್ತದೆ. ಅನೇಕ ಗ್ರಾಮಗಳಲ್ಲಿ ಸೂಕ್ತ ತರಗತಿ ಕೊಠಡಿ, ಪಠ್ಯಸಾಮಗ್ರಿ ಮತ್ತು ಶೌಚಾಲಯಗಳ ಕೊರತೆ ಇದೆ. ವಿಶೇಷವಾಗಿ ಹುಡುಗಿಯರ ಶಿಕ್ಷಣಕ್ಕೆ ಕುಟುಂಬದ ಆರ್ಥಿಕ-ಸಾಮಾಜಿಕ ಪರಿಸ್ಥಿತಿಗಳು ಅಡೆತಡೆ ಆಗುತ್ತವೆ.


ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಭಾರತವು ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳಲ್ಲಿ ಬಹುತೇಕ ಯೋಜನೆಗಳು ಫಲಪ್ರದವಾಗಿವೆ. ಈ ಸವಾಲುಗಳನ್ನು ಎದುರಿಸಲು ಭಾರತ ಕೈಗೊಂಡ ಹಲವು ನೀತಿ ಕ್ರಮಗಳಲ್ಲಿ, ರಾಷ್ಟ್ರೀಯ ಸಾಕ್ಷರತಾ ಮಿಷನ್, ಸಾಕ್ಷರ ಭಾರತ್, ಇತ್ತೀಚಿನ ನವ ಭಾರತ ಸಾಕ್ಷರತಾ ಕಾರ್ಯಕ್ರಮ (2022) ಮುಂತಾದ ಯೋಜನೆಗಳು ಸಾಕ್ಷರತೆಯನ್ನು ಸಮಾಜದ ಪ್ರತಿಯೊಂದು ಹಂತಕ್ಕೆ ತಲುಪಿಸಲು ಪ್ರಯತ್ನಿಸುತ್ತಿವೆ. 2020ರ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) 2030ರೊಳಗೆ ಶೇಕಡಾ 100ರಷ್ಟು ಸಾಕ್ಷರತೆಯನ್ನು ಗುರಿಯಾಗಿಸಿಕೊಂಡಿದೆ. “ಬೇಟಿ ಬಚಾವೋ, ಬೇಟಿ ಪಡಾವೋ”, “ಸಮಗ್ರ ಶಿಕ್ಷಾ ಅಭಿಯಾನ” ಮುಂತಾದ ಕಾರ್ಯಕ್ರಮಗಳು ಮಹಿಳಾ ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ಕೇರಳ, ಹಿಮಾಚಲ ಪ್ರದೇಶ, ತ್ರಿಪುರ ರಾಜ್ಯಗಳು ತೋರಿಸಿರುವ ಯಶಸ್ಸು ನಿರಂತರ ಹೂಡಿಕೆ, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಸಾಮಾಜಿಕ ಜಾಗೃತಿ ಇರುವಲ್ಲಿ ಸಾಕ್ಷರತೆ ಸಾಧನೀಯ ಎಂಬುದಕ್ಕೆ ನಿದರ್ಶನವಾಗಿದೆ.


ಭವಿಷ್ಯದ ದಾರಿ:

ಜಾಗತಿಕ ದೃಷ್ಟಿಯಿಂದ ನೋಡಿದರೆ ಸಾಕ್ಷರತೆಯ ಸುಸ್ಥಿರ ಅಭಿವೃದ್ಧಿ ಗುರಿಗಳ (Sustainable Development Goals) ಜೊತೆ ಸೇರಿಕೊಂಡಿದೆ. ಬಡತನ ನಿರ್ಮೂಲನೆ, ಲಿಂಗ ಸಮಾನತೆ, ಉತ್ತಮ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆ, ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲಪಡಿಕೆ ಎಂಬ ಪ್ರಮುಖ ಅಭಿವೃದ್ಧಿ ಗುರಿಗಳು ಸಾಕ್ಷರತೆಯೊಂದಿಗೆ ನೇರ ಸಂಬಂಧ ಹೊಂದಿವೆ. ಅಂದರೆ ಸಾಕ್ಷರತೆ ಕೇವಲ ವ್ಯಕ್ತಿಗತ ಸಾಧನೆಯಲ್ಲ, ಅದು ಜಾಗತಿಕ ಮಟ್ಟದಲ್ಲಿ ಮಾನವೀಯ ಸಮಾಜ ನಿರ್ಮಾಣದ ಮೂಲ ಶಕ್ತಿ ಎಂದು ಈ ಗುರುಗಳಿಂದ ಮನದಟ್ಟಾಗುತ್ತದೆ.


ಭಾರತವು ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಅನುಷ್ಠಾನಕ್ಕೆ ತಂದು ಅನುಸರಿಸುವುದು ಅನಿವಾರ್ಯವಾಗಿದೆ. ಶಿಕ್ಷಕರ ನೇಮಕಾತಿ ಮತ್ತು ತರಬೇತಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಮಿಜೋರಾಂ ಮಾದರಿಯಂತೆ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ದೇಶಾದ್ಯಂತ ವಿಸ್ತರಿಸಬೇಕಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಡಿಜಿಟಲ್ ಸಾಕ್ಷರತೆಯನ್ನು ಪಠ್ಯಕ್ರಮದ ಭಾಗವನ್ನಾಗಿಸಬೇಕು. ಅಲ್ಪಸಂಖ್ಯಾತರು, ಬುಡಕಟ್ಟು ಜನರು, ಗ್ರಾಮೀಣ ಮಹಿಳೆಯರು ಮುಂತಾದ ಅಸಮರ್ಥ ಗುಂಪುಗಳ ಶಿಕ್ಷಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು. ತಂತ್ರಜ್ಞಾನವನ್ನು ಬಳಸಿಕೊಂಡು (ಇ-ಲರ್ನಿಂಗ್, ಮೊಬೈಲ್ ಆ್ಯಪ್ಗಳು, ಕೃತಕ ಬುದ್ಧಿಮತ್ತೆ -AI-ಆಧಾರಿತ ಸಾಧನಗಳು) ಶಿಕ್ಷಣವನ್ನು ಹೆಚ್ಚು ಸುಲಭ, ಕಡಿಮೆ ವೆಚ್ಚದ ಮತ್ತು ಇದು ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಜೊತೆಗೆ, ರಾಜ್ಯ ಮಟ್ಟದಲ್ಲಿ ಜವಾಬ್ದಾರಿಯುತ  ನೀತಿಯ ಜಾರಿಗೆ ಕಟ್ಟುನಿಟ್ಟಾದ ಕ್ರಮದ ಅನಿವಾರ್ಯತೆ ಇದೆ.


ಸಾಕ್ಷರತೆ ಒಂದು ಮೂಲಭೂತ ಹಕ್ಕು– ಪ್ರತಿಯೊಬ್ಬ ಮಗು, ಮಹಿಳೆ ಮತ್ತು ನಾಗರಿಕರಿಗೆ ತಲುಪಬೇಕಾದ ಅಗತ್ಯ. ಮಿಜೋರಾಂನ ಸಾಧನೆ, ಕೇರಳದ ದಿಟ್ಟತೆ ಹಾಗೂ ಹೊಸ ಶಿಕ್ಷಣ ನೀತಿಯ ಭರವಸೆ ಭಾರತವು ಸಾರ್ವತ್ರಿಕ ಸಾಕ್ಷರತೆಯನ್ನು ಸಾಧಿಸಬಹುದು ಎಂಬ ವಿಶ್ವಾಸವನ್ನು ನೀಡುತ್ತದೆ. ಈ ಸೆಪ್ಟೆಂಬರ್ 8 ರಂದು ನಾವು ಎಲ್ಲರೂ ಪ್ರತಿಜ್ಞೆ ಮಾಡೋಣ– ಸಾಕ್ಷರತೆ ಕೇವಲ ಶಿಕ್ಷಣವಲ್ಲ, ಅದು ಸಬಲೀಕರಣ, ಸಮಾನತೆ ಮತ್ತು ಭರವಸೆಯ ದಾರಿ. 




- ಡಾ. ಭುವನಹಳ್ಳಿ ಭಾನುಪ್ರಕಾಶ್

ಉಪನ್ಯಾಸಕರು, 

ಎಸ್ ಡಿ ಎಂ ಕಾಲೇಜು, ಉಜಿರೆ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top