ತೀರ್ಥಹಳ್ಳಿ: ಮಗ ಕೃಷ್ಣ ಆಗಬೇಕು ಅನ್ನುವಾಗ ತಾಯಿ ಯಶೋದಾ ಆಗಬೇಕು, ಕೌಸಲ್ಯ ಆಗಬೇಕು. ಬಿಸಿ ಗಂಜಿಯನ್ನು ತುದಿಯಿಂದ ಕತ್ತರಿಸಿ ಉಣ್ಣುವುದನ್ನು ಮಕ್ಕಳಿಗೆ ಕಲಿಸಬೇಕು. ಬದುಕು, ಸಮಾಜ ಮತ್ತು ಸಂಸಾರಗಳೂ ಬಿಸಿ ಕಾವಿರುವ ಗಂಜಿಂತಹ ರಣರಂಗ. ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ ಎಂಬಂತೆ ತಾಯಿಯನ್ನು ನೋಡುತ್ತಲೇ ಮಕ್ಕಳು ಕಲಿಯುತ್ತಾರೆ, ಬೆಳೆಯುತ್ತಾರೆ. ನಾವು ಯಶೋದೆಯಾಗುತ್ತ ಮಕ್ಕಳನ್ನು ಬೆಳಸಬೇಕು ಎಂದು ಭಗವದ್ಗೀತೆ ಅಧ್ಯಯನದ ಸಂದೇಶವನ್ನು ನೀಡುತ್ತಿರುವ ಗೀತಜ್ಞಾನ ಯಜ್ಞದ ತೀರ್ಥಹಳ್ಳಿಯಲ್ಲಿ ನೆಡೆದ ಒಂಬತ್ತನೇ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಕೃಷ್ಣಪ್ರಸಾದ್‌ರವರು ಕರೆ ನೀಡಿದರು.
ಕಾಸರಗೋಡಿನ ಸ್ವರ್ಗ ಎಂಬ ಊರಿನವರಾದ ಕೃಷ್ಣಪ್ರಸಾದರು 27 ವರ್ಷಗಳಿಂದ RSS ಪ್ರಚಾರಕರಾಗಿದ್ದು, ಪ್ರಸ್ತುತ ಕರ್ನಾಟಕ ಬೌದ್ಧಿಕ ಶಿಕ್ಷಣದ ಪ್ರಮುಖರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೃಷ್ಣನಿಗೆ ಬೇಕಾದ ಸ್ವರ, ಸಂಗೀತ ಕೇಳಿಸಿ. ವಿಷ್ಣು ಸಹಸ್ರನಾಮ ಕೇಳಿಸಿ. ಮಗ ಕೃಷ್ಣ ಆಗಬೇಕು ಅನ್ನುವಾಗ ತಾಯಿ ಯಶೋದಾ ಆಗಬೇಕು, ಕೌಸಲ್ಯ ಆಗಬೇಕು. ಯಶೋದೆಯ ಸದ್ಗುಣಗಳನ್ನು ತಾಯಿ ಬೆಳಸಿಕೊಳ್ಳಬೇಕು. ಮನೆಯೇ ಮೊದಲ ಪಾಟ ಶಾಲೆ. ಜನನಿ ಮೊದಲ ಗುರು. ಹಿಂದೆಲ್ಲ ಬಾಯಿ ಪಾಠ ಇತ್ತು, ಭಜನೆ ಇತ್ತು. ಈಗ ಮನೆಯೊಂದು ಮೂರು ಬಾಗಿಲು ಆಗಿದೆ. ಭಗವದ್ಗೀತೆ ಅನ್ನುವುದು ಕನ್ನಡಿ. ಭಗವದ್ಗೀತೆ ಅಭ್ಯಾಸ ನಮ್ಮ ಮುಖವನ್ನು ನಾವು ನೋಡಿಕೊಳ್ಳುವುದಕ್ಕೆ. ಗೀತೆ ಜ್ಞಾನವಾಗಿ ಉಳಿಯಬೇಕೋ, ಅದು ಕರ್ಮಕ್ಕೆ ಇಳಿಯಬೇಕೋ? ಗೀತೆ ಧ್ಯಾನಕ್ಕೆ ಮಾತ್ರ ಉಳಿಯಬೇಕೋ, ಅಧ್ಯಯನಕ್ಕೆ ಇಳಿಯಬೇಕೋ? ಗೀತೆ ಜೀವನ ಧರ್ಮ ಆಗಬೇಕೋ ಬೇಡವೋ? ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು. ಉದ್ಧರೇದಾತ್ಮನಾತ್ಮಾನಂ, ನನ್ನನ್ನು ನಾನು ಎತ್ತರಿಸಿಕೊಳ್ಳಬೇಕು. ಎತ್ತರಿಸಿಕೊಂಡು ಭಗವದ್ಗೀತೆಯಲ್ಲಿ ನನ್ನನ್ನು ನೋಡಿಕೊಳ್ಳಬೇಕು. ಮಗ ಕೃಷ್ಣ ಆಗುವ ಮೊದಲು ನಾನು ಯಶೋದೆ ಆಗಿರಬೇಕು. ಮಗ ನನ್ನ ಮಾತು ಕೇಳೊಲ್ಲ, ಮಗ ಮೊಬೈಲ್ ಇಲ್ಲದೇ ಊಟ ಮಾಡುವುದೇ ಇಲ್ಲ ಅಂತ ಹೇಳುವ ನಾವು ಮೊದಲು ಮೊಬೈಲ್‌ನ್ನು ಕೊಟ್ಟಿದ್ಯಾರು? ಟಿವಿ ಮುಂದುಗಡೆ ಮೊದಲು ಕೂರಿಸಿದ್ಯಾರು? ಪ್ರಾರ್ಥನೆ, ಭಜನೆ ಮಾಡಬೇಕಾಗಿದ್ದ ಸಮಯದಲ್ಲಿ ಟಿವಿ ಎದುರು ಮೊದಲು ಕುಳಿತವರ್ಯಾರು? ಎಂದು ಕೃಷ್ಣಪ್ರಸಾದರು ಸಭೆಗೇ ಪ್ರಶ್ನಿಸಿ ಕೇಳಿದರು.
ಹಿಂದೆ ಮೊಸರು ಕಡೆಯುವಾಗ, ಬಾಯಿಗೆ ಬೆಣ್ಣೆಯನ್ನು ತಿನ್ನಿಸಿ, ಬೆಣ್ಣೆಯಂತ ಮಾತು, ಶ್ಲೋಕಗಳನ್ನು ಕಿವಿಗೆ ತುಂಬಿಸುತ್ತಿದ್ದರು. ಮೊದಲು ಬೆಣ್ಣಯ ರುಚಿಯನ್ನು ಮಕ್ಕಳಿಗೆ ಕೊಡಬೇಕು. ನನ್ನ ಮಗುವಿನ ಕಿವಿಗೆ ಏನು ಬೀಳ್ತಾ ಇದೆ ಎನ್ನುವುದು ನಮ್ಮ ಗಮನಕ್ಕೆ ಬರ್ತಾ ಇಲ್ಲ. ಏನನ್ನು ಕೇಳುತ್ತೋ, ನೋಡುತ್ತೋ ಅದನ್ನು ಕಲಿಯುತ್ತೆ. ಕೃಷ್ಣ ಆಗಬೇಕಾದ ಮಗುವಿಗೆ ನಾವು ಯಾವ ವಾತಾವರಣ ಕೊಟ್ಟಿದ್ದೇವೆ. ಪ್ರತೀ ಯಶೋಧೆಯೂ ಚಿಂತಿಸಬೇಕಿದೆ. ಗೀತಾ ಪಾಠ ನಡೆಯುವಲ್ಲಿ ಇಷ್ಟವಾದ ಸೀರಿಯಲ್ ಬಂದು ನಿಂತಿದೆ. ಪರಿಣಾಮ ಮಕ್ಕಳು, ಕುಟುಂಬ, ಸಂಸಾರದ ಕತೆ ಮನೆಯೊಂದು ಮೂರು ಬಾಗಿಲಾಗಿದೆ ಎಂದು ಕೃಷ್ಣಪ್ರಸಾದರು ಮಾರ್ಮಿಕವಾಗಿ ನುಡಿದರು.
ಇವತ್ತು ಕೆಟ್ಟದ್ದು ವಿಜ್ರಂಭಿಸುತ್ತಿದೆ. ಆದರೆ, ಒಳಗೆ ಅದಕ್ಕಿಂತ ಹೆಚ್ಚಾಗಿರುವ ಒಳ್ಳೆಯದಿದೆ. ಗುರುತಿಸಬೇಕು. ಹುಡುಕುವ ಪ್ರಯತ್ನ ಆಗಬೇಕು. ಸಮ್ಮೋಹಾತ್ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ. ಮಾಡಬಾರದ್ದನ್ನು ಮಾಡುವ ಬಯಕೆ ಹೊಂದಿದ್ದೇವೆ. ಅಂಥ ಬಯಕೆಗಳಿಂದ ವಿಧಿ-ನಿಷೇಧಗಳ ಮರೆತಿದ್ದೇವೆ. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ. ಇದು ಸ್ಥಿತಿ. ಯಶೋದೆ- ನಂದಗೋಪರು ಯೋಚಿಸಬೇಕು. ಮನೆ ಒಂದಾಗಬೇಕು, ಆ ಪ್ರಕ್ರಿಯೆ ನನ್ನಿಂದ ಮೊದಲಾಗಬೇಕು. ರಾಮ ಹುಟ್ಟಿದ, ಗೀತೆ ಹುಟ್ಟಿದ, ಕೃಷ್ಣ ಹುಟ್ಡಿದ ಭೂಮಿ ಇದು. ಸ್ವಚ್ಛ ಇರಬೇಕೋ ಬೇಡವೊ? ನನ್ನ ಮಗ ಕೃಷ್ಣ ಆಗಬೇಕೋ, ಮನೆಯಲ್ಲಿ ಧನಾತ್ನಕ ವಾತಾವರಣ, ಕಸವಿಲ್ಲದ, ಪ್ರೀತಿ ತುಂಬಿದ ಮನೆ ಆಗಬೇಕು. ಇದು ತಾಯಿ ಯಶೋಧೆಯರು ಮಾಡಬೇಕಾದುದು ಎಂದು ಕ್ರಷ್ಣಪ್ರಸಾದರು ತಾಯಂದಿರಿಗೆ ನೆಡೆಯಬೇಕಾದ ದಿಕ್ಕನ್ನು ದಿಕ್ಸೂಚಿ ಮಾತಿನ ಮೂಲಕ ತಿಳಿಸಿದರು.
***
ತೀರ್ಥಹಳ್ಳಿ ಗಾಯತ್ರಿ ಮಂದಿರದಲ್ಲಿ ಇಡೀ ದಿನ ಗೀತಾಜ್ಞಾನ ಯಜ್ಞ, ಭಗವದ್ಗೀತಾ ಅಧ್ಯಯನ ಮತ್ತು ಸಂದೇಶ ಒಂಬತ್ತನೇ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಗವದ್ಗೀತೆಯನ್ನು ಕಲಿತವರು, ಕಲಿಸುತ್ತಿರುವವರು, ಕಲಿಯುತ್ತಿರುವವರು, ಕಲಿಯಲಿರುವವರು ಸೇರಿದ ಒಂದು ಸ್ನೇಹ ಕೂಟವೂ ಆಗಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನೆಡೆಯುತ್ತಿದ್ದ ಭಗವದ್ಗೀತೆಯ ಕಲಿಕೆಯನ್ನು ಕಲಿಸಿದವರು ಮತ್ತು ಕಲಿಯುತ್ತಿರುವವರ ನೇರ ಮುಖಾಮುಖಿ ಪರಿಚಯದ ಗುರುಶಿಷ್ಯ ಭೇಟಿಯ ಕಾರ್ಯಕ್ರಮದಲ್ಲಿ ಸೇರಿದವರ ಸಂಖ್ಯೆ ಸುಮಾರು 850ಕ್ಕೂ ಹೆಚ್ಚು.
ಕರ್ನಾಟಕದ ಗಂಗೆ ತುಂಗಾನದಿಯ ತಟದ ತೀರ್ಥಹಳ್ಳಿಯ ಪ್ರಸಿದ್ದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ನಡೆದ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಬೆಳಗ್ಗೆ 6.15 ರಿಂದ ಗೋವಿಂದ ತನ್ನ ಭಕ್ತನಾದ ಗುಡಾಕೇಶ ನಿಗೆ ಬೋಧಿಸಿದ 18 ಅಧ್ಯಾಗಳ ಗೀತಾ ಪಾರಾಯಣವಾದರೆ, ನಂತರ ನೆಡೆದ ಭಗವದ್ಗೀತೆಯ ಮಹತ್ವದ ಸಂದೇಶ ಉಪನ್ಯಾಸ ಕೇಳುಗರನ್ನು ಮಂತ್ರಮುಗ್ದರನ್ನಾಗಿಸಿತ್ತು.
ಭಗವದ್ಗೀತೆ ಕಲಿಯುತ್ತಿರುವ ನೂರಾರು ಮಕ್ಕಳಿಗೆ ವಿವಿಧ ಆಟ, ಸ್ಪರ್ಧೆ, ಬಹುಮಾನ, ಸಂಭ್ರಮಗಳು ಕಾರ್ಯಕ್ರಮದಲ್ಲಿದ್ದವು.
ವೈವಿಧ್ಯಮಯ ರಂಜನೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ್ದ ಗೀತಾಸಕ್ತರ ಮನ ಸೆಳೆದವು.
ಪ್ಲಾಸ್ಟಿಕ್ ಬಳಸದೆ, ಸೊಗಸಾದ ಆರೋಗ್ಯಕರ ಸಾತ್ವಿಕ ಊಟ, ಉಪಹಾರ, ಸ್ವಾಧಿಷ್ಟ ಪಾನಿಯಗಳು ಸಾತ್ವಿಕ ವಿಚಾರಗಳೊಂದಿಗೆ ಸಮ್ಮಿಲನಗೊಂಡಿತ್ತು.
ಸಭೆಯಲ್ಲಿ ಸೇರಿದ್ದು 850 ಕ್ಕೂ ಹೆಚ್ಚು ಗೀತಾ ಭಕ್ತರಿದ್ದರೆ, ಮನೆಯಲ್ಲೇ ಕುಳಿತು ಯೂಟೂಬ್ ಲೈವ್‌ನಲ್ಲಿ ನೋಡುತ್ತಿದ್ದವರು ಸಾವಿರಾರು ಭಕ್ತರು. ಅಷ್ಟೇ ಸಂಖ್ಯೆಯಲ್ಲಿ ಎಲ್ಲರ ಜೊತೆ ಕೃಷ್ಣನೂ ಇದ್ದ!! ಇಡೀ ದಿನ ಕಾರ್ಯಕ್ರಮದಲ್ಲಿ ಒಂದು ಧನಾತ್ಮಕ ವೈಬ್ರೇಷನ್ ಇತ್ತು. ಎಲ್ಲರ ಮುಖದಲ್ಲೂ ಅದು ಪ್ರತಿಬಿಂಬಿಸುತ್ತಿತ್ತು.
ದೊಡ್ಡ ಹಾಲ್, ತುಂಬಿದ ಸಭೆ. ಅಚ್ಚುಕಟ್ಟಾದ ಅಲಂಕಾರದ ಅರೇಂಜ್‌ಮೆಂಟ್ ಎಲ್ಲವೂ ಗಮನ ಸೆಳೆಯುವಂತಿತ್ತು.
ಗೀತಾ ಜ್ಞಾನ ಯಜ್ಞ ಟ್ರಸ್ಟ್ ಕಾಸರಗೋಡು ಇದರ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಗೀತಾ ಸತ್ಸಂಗ ಬಳಗ ತೀರ್ಥಹಳ್ಳಿಯ ಗೀತಾ ಬಂಧುಗಳ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ದಿನಾಂಕ 14.09.2025ರ ಭಾನುವಾರದಂದು ಆಯೋಜಿಸಲಾಗಿತ್ತು. ಬೆಳಿಗ್ಗೆ ಆರು ಗಂಟೆಗೆ ಕೃತಿಕಾ ಆರ್ ಉಡುಪ ಇವರಿಂದ ಗೀತಾ ಜ್ಞಾನ ಯಜ್ಞದ ಭದ್ರಂಕರಣೆ ಎಂಬ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಟಿ. ಚಂದ್ರಪ್ಪ ಗೌಡ ದಂಪತಿಗಳು ದೀಪ ಬೆಳಗಿಸಿ ನೆರವೇರಿಸಿದರು. ಗೀತಾ ಸತ್ಸಂಗ ಬಳಗದ ಸಂಚಾಲಕರಾದ ರೇಣುಕಾ ಹೆಗಡೆ ಸರ್ವರನ್ನು ಸ್ವಾಗತಿಸಿದರು. ಶ್ರೀ ರವಿಶಂಕರ್ ಉಡುಪ ಮತ್ತು ಚಾಂದಿನಿ ಭಟ್ ಇಡೀ ದಿನದ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಜೆ ಶ್ರೀ ಸುಬ್ರಹ್ಮಣ್ಯ ಹೊರಣೆ ಬೈಲು ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


