ರಂಗಭೂಮಿ ನಟ, ನಿರ್ದೇಶಕ ಯಶವಂತ ಸರದೇಶಪಾಂಡೆ ನಿಧನ

Upayuktha
0


ಬೆಂಗಳೂರು: ಕನ್ನಡ ರಂಗಭೂಮಿ ನಟ ಯಶವಂತ ಸರದೇಶಪಾಂಡೆ (60) ಅವರು ಹೃದಯಾಘಾತ ದಿಂದ ಸೋಮವಾರ ನಿಧನರಾದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಿಸಿದೆ ಕೊನೆಯುಸಿರೆಳೆದರು. ಅವರು ನಟ, ನಿರ್ದೇಶಕ, ನಾಟಕಕಾರರಾಗಿ ಹಾಸ್ಯ ನಾಟಕಗಳ ಮುಖಾಂತರ ರಾಜ್ಯಾದ್ಯಂತ ಖ್ಯಾತಿ ಪಡೆದಿದ್ದರು.


ಅವರು ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬಲ್ಲಿ 1965ರಲ್ಲಿ. ಚಿಕ್ಕಂದಿನಿಂದಲೂ ನಾಟಕದಲ್ಲಿ ಆಸಕ್ತಿ ಹೊಂದಿದ್ದ ಇವರು ಹೆಗ್ಗೋಡಿನ ನಿನಾಸಂ ನಾಟಕ ಸಂಸ್ಥೆಯಿಂದ ಡಿಪ್ಲೊಮ ಪಡೆದು ನ್ಯೂಯಾರ್ಕ್‌ ವಿಶ್ವವಿದ್ಯಾಲಯದಿಂದ ನಾಟಕ ರಚನೆ, ಚಲನ ಚಿತ್ರ ಸಂಭಾಷಣೆಯ ವಿಶೇಷ ತರಬೇತಿ ಪಡೆದಿದ್ದರು.


ರಾಜ್ಯಾದ್ಯಂತ ಹಲವಾರು ನಾಟಕಗಳ ನಿರ್ದೇಶನ ಮಾಡಿದ್ದರು. ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ ಮುಂತಾದ ಅರವತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದರು. ರಂಗವರ್ತುಲ, ಬೇಂದ್ರೆ ರಂಗಾವಳಿಯ ಮೂಲಕ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಇವರದ್ದು.


ಬಾನುಲಿ, ದೂರದರ್ಶನಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಗುರು ಸಂಸ್ಥೆಯ ಮುಖಾಂತರ ಲಕ್ಷಾಂತರ ಪ್ರೇಕ್ಷಕರನ್ನು ನಗಿಸಿದ ನಾಟಕಗಳ ನಿರ್ದೇಶಕ, ನಟ, ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ - ನಗೆ ನಾಟಕಗಳನ್ನು ತಿಳಿ ಹಾಸ್ಯದ ಜೊತೆಗೆ ರುಚಿಕರ ಸವಿಯಾದ ಊಟವನ್ನೂ ಎಂ.ಟಿ.ಆರ್‌. ಸಹಯೋಗದೊಡನೆ ಯೋಚಿಸಿ ರಂಗ ಸಂಭ್ರಮದಡಿ ನೀಡಿದ ಕಾರ್ಯಕ್ರಮಗಳು, ರಾಜ್ಯದೆಲ್ಲೆಡೆ ಪಡೆದ ಪ್ರಶಂಸೆ ಪಡೆದಿವೆ.


’ರಾಶಿ ಚಕ್ರ’ ನಗೆ ನಾಟಕದಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸುವ ಏಕವ್ಯಕ್ತಿ ಅಭಿನಯ, ದೃಶ್ಯರೂಪದಲ್ಲಿ ವಿಡಿಯೋ ಪ್ರದರ್ಶನಗಳ ಮೂಲಕ ಮಾಡಿದ ರಂಗ ಕ್ರಾಂತಿ ಇವರದಾಗಿತ್ತು.


ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳ ನಟ, ಕೆಲವು ಧಾರಾವಾಹಿಗಳ ಸಂಭಾಷಣಾಕಾರ, ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ, ರಾಮಶಾಮಭಾಮ ಚಲನಚಿತ್ರಗಳಲ್ಲೂ ಅಭಿನಯಸಿ ಹೆಚ್ಚು ಜನಪ್ರಿಯರಾಗಿದ್ದರು. ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕವು ರಾಜ್ಯದೆಲ್ಲೆಡೆ ಅಭೂತಪೂರ್ವ ಯಶಸ್ಸು ಕಂಡಿತ್ತು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top