ಹಲೋ ಹೇಗಿದ್ದೀರಾ?
ನಮ್ಮ ಬದುಕು ನಮ್ಮ ಬದುಕು ಮತ್ತು ನಮ್ಮ ಸುತ್ತ ಮುತ್ತ ಇದ್ದವರ ಸುತ್ತ ಗಿರಕಿ ಹೊಡೆಯುತ್ತಿರುತ್ತದೆ. ನಮ್ಮ ಬದುಕಿನಲ್ಲಿ ನಮ್ಮ ಬದುಕು ಎಷ್ಟು ಮುಖ್ಯವೋ, ಹಾಗೆ ನಮ್ಮವರು ಅನಿಸಿಕೊಂಡ ವ್ಯಕ್ತಿಗಳು ಕೂಡ ಅಷ್ಟೇ ಮುಖ್ಯ.
ನಾವು ಹುಟ್ಟಿದ ಕೂಡಲೇ ನಮಗೆ ಗೊತ್ತಿಲ್ಲದಂತೆ ನಮ್ಮ ಬದುಕಿನಲ್ಲಿ ಎಷ್ಟೋ ಜನರ ಪ್ರವೇಶ ಆಗಿ ಬಿಟ್ಟಿರುತ್ತದೆ. ನಮ್ಮ ಬದುಕಿನಲ್ಲಿ ಅವರ ಪ್ರಭಾವ ಕೂಡ ಬಹಳಷ್ಟಿದೆ.
ನಾವು ಎಷ್ಟೋ ಸಾರಿ ನಮ್ಮ ಬದುಕಿನಲ್ಲಿ ನಮಗಿಂತ ಜಾಸ್ತಿ ನಮ್ಮ ಸುತ್ತಮುತ್ತ ಇದ್ದವರಿಗೆ ಪ್ರಾಮುಖ್ಯತೆ ಕೊಟ್ಟಿರುತ್ತೇವೆ. ನಮ್ಮ ಬದುಕಿನಲ್ಲಿ ಕಷ್ಟ ಬಂದಾಗ ಅವರು ಸಮಸ್ಯೆ ಬಗೆ ಹರಿಸುತ್ತಾರೆ ಎಂದು ತಿಳಿದಿರುತ್ತೇವೆ. ಆದರೆ ಕೆಲವೊಂದು ಸಾರಿ ಉಲ್ಟಾ ಹೊಡೆಯುತ್ತದೆ. "ಯಾರಿಗೆ ಯಾರು ಪುರಂದರ ವಿಠಲ""ಎಂಬ ದಾಸರ ವಾಣಿ ಕಿವಿಯಲ್ಲಿ ಕೇಳಿಸಿದಂತೆ ಆಗುತ್ತದೆ.
ಹಾಗಂತ ನಮ್ಮವರು ಬಿಟ್ಟು ಬದುಕಲಿಕ್ಕೆ ಆಗುವುದಿಲ್ಲ; ಎಲ್ಲರನ್ನೂ ಬಿಟ್ಟು ಬದುಕುತ್ತೇವೆಂದು ಎಲ್ಲರನ್ನು ಬಿಟ್ಟು ನಡೆದರೆ ಒಂಟಿ ಪಿಶಾಚಿ ಎಂಬ ಹಣೆಪಟ್ಟಿ ನಮ್ಮ ಸಲುವಾಗಿ ಕಾಯುತ್ತ ಇರುತ್ತದೆ.
ನಮ್ಮ ಬದುಕಿನಲ್ಲಿ ನಮ್ಮವರು ಎನಿಸಿಕೊಳ್ಳುವರು ಒಂದೊಂದು ದಾರಿ ಬೆನ್ನು ತಿರುಗಿಸಿ ನಡೆದರೆ ಬದುಕಿನ ಕಹಿ ಸತ್ಯದ ಅನಾವರಣ ಆಗುತ್ತದೆ.
"ಅರ್ಥವಾರಿಗೆ ಪುತ್ರರಾರಿಗೆ
ಮಿತ್ರ ಬಾಂಧವರಾರಿಗೆ
ಕರ್ತ ಯಮನರು ಎಳೆದು ಒಯ್ಯುವಾಗ ಅರ್ಥಪುತ್ರರು ಕಾಯ್ಯುವರೆ"
ಎಂಬ ದಾಸರ ವಾಣಿ ನಮಗೆ ಜೀವನದ ಕಹಿ ಸತ್ಯದ ಪರಿಚಯ ಮಾಡಿಸುತ್ತದೆ. ಊರೆಲ್ಲ ನೆಂಟರು ಹಣದ ಗಂಟಿದ್ದರೆ, ಆರು ಸಂಗದ ಬಾಹರಯ್ಯ ಎಂಬ ದಾಸವಾಣಿ ನಮ್ಮನ್ನು ವಾಸ್ತವ ಜಗತ್ತಿನ ಚಿತ್ರಣ ಮಾಡುತ್ತದೆ.
ನಮ್ಮ ಬದುಕಿನಲ್ಲಿ ನಮ್ಮವರನ್ನು ಎಷ್ಟರ ಮಟ್ಟಿಗೆ ನಮ್ಮ ಬದುಕಿನಲ್ಲಿ ಬಿಟ್ಟುಕೊಳ್ಳಬೇಕು ಅನ್ನುವುದನ್ನು ನಾವೇ ನಿರ್ಧರಿಸಬೇಕು. You are CEO of your life. Who you want to hire, fire, and promote, DO it accordingly ಎಂಬ ಇಂಗ್ಲಿಷ್ ವಾಕ್ಯ ನಮ್ಮ ಜೀವನದ ಬಗ್ಗೆ ನಾವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಎಚ್ಚರಿಕೆ ಕೊಡುತ್ತದೆ.
ನಾವು ಇತರರು ಮಾಡುವ ಚಿಕ್ಕ ಪುಟ್ಟ ತಪ್ಪುಗಳಿಗೂ ಬೇರೆಯವರ ಮೇಲೆ ಹಟ ಸಾಧಿಸಿ ನಡೆದರೆ ನಮ್ಮ ಜೀವನ. ಏನು ಬೆಳೆಯದ ಮರುಭೂಮಿಯಂತೆ ಆಗುತ್ತದೆ.
ಹುಟ್ಟಿದಾಗ ನಮಗೆ ಯಾರು ಎತ್ತಿಕೊಂಡರು, ಸ್ನಾನ ಮಾಡಿಸಿದರು ನೆನಪಿಲ್ಲ. ಸತ್ತ ಮೇಲೆ ಯಾರು ಸ್ನಾನ ಮಾಡಿಸುತ್ತಾರೆ ಅನ್ನುವುದು ಅನ್ನುವುದು ಗೊತ್ತಿಲ್ಲ. ಸತ್ತ ಮೇಲೆ ನಾಲ್ಕು ಜನ ಬಂದು ಗೌರವದಿಂದ ಭುಜ ಕೊಡುವಂತಾದರೆ ನಮ್ಮ ಜೀವನ ಸಾರ್ಥಕ ಅಲ್ಲವೇ? ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ