ಮೂಡುಬಿದಿರೆ: ಸ್ಕೌಟಿಂಗ್ ವಿದ್ಯಾರ್ಥಿಗಳಿಗೆ ನೈಜ ಜೀವನ ಅನುಭವ ನೀಡುತ್ತದೆ. ಸಹೋದರತ್ವ, ಸಮಾನತೆ ಹಾಗೂ ವಿಶಾಲ ಮನೋಭಾವ ಬೆಳೆಸುತ್ತದೆ. ಇಂದಿನ ಯುವಪೀಳಿಗೆ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸ್ಕೌಟಿಂಗ್ ಚಟುವಟಿಕೆಗಳು ಸಮಯಪಾಲನೆ, ಶೈಕ್ಷಣಿಕ ಯಶಸ್ಸು ಮತ್ತು ಸಮಾಜಮುಖಿ ಬದುಕನ್ನು ರೂಪಿಸುವ ಮನೋಬಲವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ ಎಂದು ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕ ದಿನಕರ ಕೆ. ತಿಳಿಸಿದರು.
ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ 2025-26ನೇ ಸಾಲಿನ ರೋವರ್ಸ್ ಹಾಗೂ ರೇಂಜರ್ಸ್ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಸ್ವಯಂಹಾನಿ ಹಾಗೂ ಆತ್ಮಹತ್ಯೆಯ ಪ್ರವೃತ್ತಿಗಳು ದಿನೇದಿನೇ ಹೆಚ್ಚುತ್ತಿವೆ. ವಿಶೇಷವಾಗಿ ವಿದ್ಯಾವಂತರೇ ಜೀವನದ ನಿಜವಾದ ಮೌಲ್ಯ ಅರಿಯದೆ ಆತ್ಮಹತ್ಯೆಯಂತಹ ದುರಂತ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೋವರ್ಸ್–ರೇಂಜರ್ಸ್ ಘಟಕದಲ್ಲಿ ತೊಡಗಿಸಿಕೊಳ್ಳುವಿಕೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ಧೈರ್ಯ ಬೆಳೆಸುವ ಮೂಲಕ ಸವಾಲುಗಳನ್ನು ಎದುರಿಸಲು ಪ್ರೇರೇಪಿಸುತ್ತದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಸದಕತ್, “ರೋವರ್ಸ್–ರೇಂಜರ್ಸ್ ಕೇವಲ ಪಠ್ಯೇತರ ಚಟುವಟಿಕೆ ಅಲ್ಲ. ಅದು ಬದುಕು ಸಾಗಿಸುವ ಒಂದು ವಿಧಾನ. ಆ ಮೂಲಕ ವಿದ್ಯಾರ್ಥಿಗಳು ಸೇವಾಭಾವವನ್ನು ಅರಿತುಕೊಳ್ಳುತ್ತಾರೆ. ಸಮಾಜದ ಕಡೆ ಹೊಣೆಗಾರಿಕೆಯನ್ನು ಬೆಳೆಸುತ್ತಾರೆ. ತಂಡದಲ್ಲಿ ಕೆಲಸ ಮಾಡುವ ಗುಣ, ನಾಯಕತ್ವ, ಶಿಸ್ತು, ಸಮಯಪಾಲನೆ ಇವುಗಳು ಅವರ ವ್ಯಕ್ತಿತ್ವವನ್ನು ಬಲಪಡಿಸುತ್ತವೆ. ಇವು ಅವರನ್ನು ಕೇವಲ ಉತ್ತಮ ವಿದ್ಯಾರ್ಥಿಗಳನ್ನಾಗಿಸದೇ, ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರೋವರ್ಸ್–ರೇಂಜರ್ಸ್ನ ಕುರಿತ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪ.ಪೂ ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂಡಿ, ರೋವರ್ ಸ್ಕೌಟ್ ಲೀಡರ್ ಸುನಿಲ್, ರೇಂಜರ್ ಲೀಡರ್ ವೀಣಾ ಆಗ್ನೇಸ್ ಡಿಸೋಜಾ ಇದ್ದರು. ವಿದ್ಯಾರ್ಥಿನಿ ಕಿರಣ್ ಸ್ವಾಗತಿಸಿ, ಪೌರವಿ ಅತಿಥಿಗಳನ್ನು ಪರಿಚಯಿಸಿ, ಶ್ರೇಯ ವಂದಿಸಿ, ಸಿದ್ದೇಶ್ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ