ಧರ್ಮತ್ತಡ್ಕ: ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಎಸ್‌ಪಿಸಿ ವಿದ್ಯಾರ್ಥಿಗಳ ಓಣಂ ತ್ರಿದಿನ ಶಿಬಿರದ ಔಪಚಾರಿಕ ಉದ್ಘಾಟನಾ ಸಮಾರಂಭ ಜರಗಿತು.
ಪ್ರಸ್ತುತ ಸಭೆಯ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತು ಅಧ್ಯಕ್ಷ ಸುಬ್ಬಣ್ಣ ಆಳ್ವ ನೆರವೇರಿಸಿ ಮಾತನಾಡುತ್ತಾ ಯೂನಿಟ್ ನಲ್ಲಿರುವ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಶಿಸ್ತಿನಿಂದ ಇತರರಿಗೆ ಮಾದರಿಯಾಗಬೇಕು ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬದಿಯಡ್ಕ ಆರಕ್ಷಕ ಠಾಣೆಯ ಎಸ್.ಐ ಅಖಿಲ್ ಟಿ ದೀಪ ಬೆಳಗಿಸಿ ಉದ್ಘಾಟಿಸಿ ಎಸ್‌ಪಿಸಿ ವಿದ್ಯಾರ್ಥಿಗಳ ಧ್ಯೇಯ ಉದ್ದೇಶಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಕಲಿಕೆಯ ಪೂರಕ ಚಟುವಟಿಕೆಯ ಜೊತೆಗೆ ದೈಹಿಕ ಮನೋಧಾರ್ಢ್ಯ ವೃದ್ಧಿಸುವಲ್ಲಿ ಎಸ್‌ಪಿಸಿ ಅಂತಹ ಯೂನಿಟ್ ಗಳು ಸಹಕಾರಿಯಾಗುತ್ತದೆ ಎಂದರು. ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢ ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶಶಿಕುಮಾರ್ ಪಿ, ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಅಶೋಕ್ ಭಂಡಾರಿ, ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯಾ ಭಾರತಿ ಶುಭಹಾರೈಸಿ ಮಾತನಾಡಿದರು.
ಬದಿಯಡ್ಕ ಠಾಣೆಯ ಆರಕ್ಷಕರಾದ ರಜೀಶ್, ಶ್ರೀಮತಿ ಪ್ರಸೀತಾ ಕ್ಯಾಂಪಿನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ಇತ್ತು ಮಾತನಾಡಿದರು.
ಪ್ರಾರಂಭದ ಸೆಶನ್ ತರಗತಿಯಾದ ಜೀವನ ಮೌಲ್ಯಗಳ ಕುರಿತು ಶಿಕ್ಷಕ ಅಭಿಲಾಷ್ ಪೆರ್ಲ ಮತ್ತು ಪ್ರಶಾಂತ ಹೊಳ್ಳ ತರಗತಿ ನಡೆಸಿಕೊಟ್ಟರು.
ಮಧ್ಯಾಹ್ನ ನಂತರ ಸಾಮಾಜಿಕ ನೈತಿಕ ಮೌಲ್ಯಗಳ ಕುರಿತ ತರಗತಿಯನ್ನು ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ ಎಕನಾಮಿಕ್ಸ್ ಅಧ್ಯಾಪಕ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ನೆರವೇರಿಸಿದರು.
ಬಳಿಕ ಅಧ್ಯಾಪಕರಾದ ಸದಾಶಿವ ಬಾಲಮಿತ್ರ ಮತ್ತು ಗೋಪಾಲ ಕಾಟುಕುಕ್ಕೆಯವರು ವಿವಿಧ ಆಟೋಟಗಳ ಮನೋರಂಜನಾತ್ಮಕ ತರಗತಿಯನ್ನು ನಡೆಸಿ ಕೊಟ್ಟರು.
ಶಿಬಿರದ ಪ್ರಾರಂಭದ ದಿನದ ಕೊನೆಗೆ ಆರಕ್ಷಕ ರಜೀಶ್ ಮತ್ತು ಶ್ರೀಮತಿ ಪ್ರಸೀತಾ ಅವರು ಡ್ರಿಲ್ ತರಗತಿಯನ್ನು ನಡೆಸಿಕೊಟ್ಟರು.
ಎರಡನೇ ದಿನದಂದು ಬೆಳಿಗ್ಗೆ SPC ವಿದ್ಯಾರ್ಥಿಗಳಿಂದ ಪೆರಡ್ ಅಭ್ಯಾಸದ ಬಳಿಕ ಯೋಗ ತರಗತಿಯನ್ನು ನಡೆಸಲಾಯಿತು. ಹರೀಶ್ ಕುಮಾರ್ (HSST ಕನ್ನಡ SVHSS ಮೀಯಪದವು) ಅವರಿಂದ ಸೈಬರ್ ಸುರಕ್ಷೆ ತಂತ್ರಜ್ಞಾನ ಸಾಕ್ಷರತೆ ತರಗತಿ ನಡೆಯಿತು.
ಮಧ್ಯಾಹ್ನ ವಿರಾಮದ ನಂತರ ಅಧ್ಯಾಪಿಕೆ ಉಮಾದೇವಿ ಎಂ ಎಲ್ ಅವರು Ethical sub dimension social values ಎಂಬ ವಿಚಾರದ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತರಗತಿಯನ್ನು ನೀಡಿದರು.
ಪಡ್ರೆ ಶಾಲೆಯ ಅಧ್ಯಾಪಕ ಗೋಪಾಲ ಕಾಟುಕುಕ್ಕೆ ಹಾಗೂ ಸದಾಶಿವ ಬಾಲಮಿತ್ರ ಅವರು Major and minor ಆಟಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು.
ದಿನದ ಕೊನೆಗೆ ಪರೇಡ್ ನಡೆಸಿ, ಡ್ರಿಲ್ ಇನ್ಸ್ರಕ್ಟರ್ ರಜೀಶ್ ಹಾಗೂ ಪ್ರಸೀತ ಅವರ ನೇತೃತ್ವದಲ್ಲಿ ಪೆರ್ಮುದೆ ಪೇಟೆಯ ವರೆಗೆ Road walk ನಡೆಸಲಾಯಿತು. ಬಳಿಕ ಶಾಲಾ ಆವರಣವನ್ನು ಶುಚಿಗೊಳಿಸಿದರು.
ಕ್ಯಾಂಪ್ ನ ಕೊನೆಯ ದಿನ ಅತ್ಯಂತ ಅವಿಸ್ಮರಣೀಯವಾಗಿ ನೆರವೇರಿತು. ದಿನದ ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಹಾಗೂ ಪ್ರಾಣಾಯಾಮಗಳ ಬಗ್ಗೆ ಅಡೂರು ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ ಶಶಿಧರ ಕೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಿದರು.
ಬೆಳಗಿನ ಉಪಹಾರದ ಬಳಿಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದವು ದೈಗೋಳಿ ಶ್ರೀ ಸಾಯಿನಿಕೇತನ ಆಶ್ರಮಕ್ಕೆ ತೆರಳಿ ಆಶ್ರಮದ ಆಶ್ರಿತರೊಂದಿಗೆ ಅತ್ಯಂತ ಆತ್ಮೀಯವಾಗಿ ಅವರ ಜೊತೆಯಲ್ಲಿ ಹಾಡುತ್ತಾ ಕುಣಿಯುತ್ತ ಮಾತನಾಡುತ್ತಾ ತಮ್ಮ ಅಮೂಲ್ಯ ಸಮಯ ವಿನಿಯೋಗಿಸುತ್ತಾ ಓಣಂ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಆಶ್ರಮದ ರೂವಾರಿ ಉದಯಕುಮಾರ್ ನೂಜಿ ಅವರನ್ನು ಸನ್ಮಾನಿಸಲಾಯಿತು.
ಸಂಗ್ರಹಿಸಿದ ಕಿರು ಮೊತ್ತವನ್ನು ಆಶ್ರಮದ ಕಾರ್ಯ ಕೈಂಕರ್ಯಗಳಿಗಾಗಿ ಹಸ್ತಾಂತರಿಸಲಾಯಿತು. ಶಿಬಿರದ ಅತಿಥಿಯಾಗಿ ಸೇವಾಶ್ರಮಕ್ಕೆ ಆಗಮಿಸಿದ ವಾಣಿವಿಜಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೃಷ್ಣವೇಣಿ ಅವರು ವಿದ್ಯಾರ್ಥಿಗಳ ಕುರಿತು ಮಾತಾಡುತ್ತಾ ಪ್ರತಿಯೊಬ್ಬರ ಜೀವನದಲ್ಲಿ ಹೆತ್ತವರ ತ್ಯಾಗ ಮತ್ತು ಸಮರ್ಪಣ ಭಾವದ ಬಗ್ಗೆ ವಿವರಿಸಿದರು.
ಮಧ್ಯಾಹ್ನದ ಭೋಜನದ ಬಳಿಕ ಮೂರು ದಿನದ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಬಂಧಕರಾದ ಎನ್ ಶಂಕರನಾರಾಯಣ ಭಟ್ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಮನೋಧೈರ್ಯ ಇತ್ಯಾದಿಗಳು ಈ ಶಿಬಿರದಿಂದ ಇಮ್ಮಡಿಯಾಗಿದೆ ಎಂದರು.
ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯ ರಿಜಿಸ್ಟರ್ಡ್ ಧರ್ಮತ್ತಡ್ಕ. ಇದರ ಅಧ್ಯಕ್ಷ ಅಧ್ಯಾಪಕ ರಾಮಮೋಹನ ಚಕ್ಕೆ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭನುಡಿಗಳನ್ನಾಡಿದರು. ಕ್ಯಾಂಪಿನ ಊಟೋಪಚಾರಗಳ ವ್ಯವಸ್ಥೆಗಾಗಿ ಕ್ಲಬ್ ನ ಪರವಾಗಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಎ. ಯು. ಪಿ ಶಾಲೆ ಧರ್ಮತ್ತಡ್ಕ ಮುಖ್ಯೋಪಾಧ್ಯಾಯರಾದ ಎನ್. ಮಹಾಲಿಂಗ ಭಟ್ ಶಿಬಿರದ ಯಶಸ್ಸಿಗೆ ಕಾರಣರಾದ ಎಲ್ಲರನ್ನು ಅಭಿನಂದಿಸುತ್ತಾ ಮಾತನಾಡಿದರು.
ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಬಳಿಕ ವಿದ್ಯಾರ್ಥಿಗಳು ಮೂರುದಿನಗಳ ಶಿಬಿರದ ಅನುಭವದ ಬಗ್ಗೆ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಎಸಿಪಿಒ ಶಿವಪ್ರಸಾದ್ ಸಿ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ನಿರೂಪಿಸಿ, ಸಿಪಿಒ ಶ್ರೀಮತಿ ಈಶ್ವರಿ ಡಿ ವಂದಿಸಿದರು. ಅಭಿಲಾಷ್ ಪೆರ್ಲ, ಕೇಶವ ಪ್ರಸಾದ್ ಎಡಕ್ಕಾನ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ