ಅಜ್ಞಾನ ವೆಂಬ ಕುರುಡುತನವನ್ನು ಜ್ಞಾನ ಮಯವಾದ ಶಲಾಕೆಯಿಂದ ಹೋಗಲಾಡಿಸುವ ಭಗವಾನ್ ಸ್ವರೂಪಿ, ಬ್ರಹ್ಮ ಸದೃಶನಾದವನೇ ಗುರು. ಯಾವುದೇ ಕ್ಷೇತ್ರವಿರಲಿ ಅಲ್ಲಿರುವ ಮಂದಿ ತಮ್ಮ ಜೊತೆಗಿರುವವರ ಏಳ್ಗೆಯನ್ನು ಎಂದೂ ಬಯಸದವರು. ಕಂಪನಿ, ಬ್ಯಾಂಕ್, ಕ್ರೀಡಾಕ್ಷೇತ್ರ, ರಾಜಕೀಯ- ಯಾವುದೇ ಇರಲಿ ಸಹವರ್ತಿಗಳ ಏಳ್ಗೆಯನ್ನು ಬಯಸದವರೇ ಎಲ್ಲಾ. ಆದರೆ ಗುರು ಹಾಗಲ್ಲ. ತನಗಿಂತಲೂ ತನ್ನ ಶಿಷ್ಯ ಬೆಳಿಯಬೇಕು ಎಂದು ಬಯಸುವವನು.
ಅಂಥ ಶಿಷ್ಯನನ್ನು ಕಂಡಾಗ ಆತನಿಗಾಗುವ ಸಂತೋಷ ಅಪಾರ. ಹೀಗಿರುವ ಹಲವಾರು ಶಿಕ್ಷಕರು ನಮ್ಮ ಮುಂದೆ ಕಾಣಸಿಗುತ್ತಾರೆ. ಹೀಗಿದ್ದರೂ ಇತರ ಆಭರಣಗಳೆಡೆಯಲ್ಲಿರುವ ಸ್ಫಟಿಕ ಮಣಿಯಂತೆ ಇರುವವರು ನನ್ನ ಗುರು ಶ್ರೀ ಬನಾರಿ ನಾರಾಯಣ ಭಟ್‌ರವರು. ಪೆರ್ಲ ಶ್ರೀ ಸತ್ಯ ನಾರಾಯಣ ಶಾಲೆಯ ವಿದ್ಯಾರ್ಥಿಯಾಗಿದ್ದಾಗ (1972-77) ವಿಜ್ಞಾನವನ್ನು ಬೋಧಿಸಿದ ಗುರುಗಳು. ಬೋಧನಾ ರೀತಿ, ವಿಷಯ ಪ್ರಸ್ತುತಿ, ಸರಳ ಭಾಷಾ ಪ್ರಯೋಗ, ಸದಾ ಲವಲವಿಕೆಯಿಂದಿರುವ ಅವರು ಒಬ್ಬ "ಮಾಂತ್ರಿಕ ಶಿಕ್ಷಕ" ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ.
ವಿದ್ಯಾರ್ಥಿಗಳೊಂದಿಗೆ ಆತ್ಮೀಯರಾಗಿದ್ದು ಅವರನ್ನು ಪ್ರೋತ್ಸಾಹಿಸಿ, ಅವರ ಪಠ್ಯೇತರ ಚಟುವಟಿಕೆಗಳಿಗೂ ನೀರು ಗೊಬ್ಬರ ಉಣಿಸಿದವರು. ಗುರು ಶ್ರೀ ಬನಾರಿಯವರು ಒಬ್ಬ ಅಪಾರ ಅನುಭವದ ಅಧ್ಯಾಪಕ. ಸುಮಾರು ಮೂರೂವರೆ ದಶಕಗಳಿಂದ ಕೇಂದ್ರೀಯ ವಿದ್ಯಾಲಯಗಳಲ್ಲಿ ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸಿ ನಿವೃತ್ತನಾದ ನನಗೆ ಅವರಿನ್ನೂ ಒಬ್ಬ ಮಾಂತ್ರಿಕ ಬೋಧಕ. ಬೋಧನೆಯನ್ನ ಕೇವಲ ಪುಸ್ತಕಗಳಿಗೆ ಸೀಮಿತ ಗೊಳಿಸದ ಅವರ ವೃತ್ತಿ -ವ್ಯಾಪ್ತಿ ಅಪಾರ. ತಣ್ಣನೆಯ ಮಾತುಗಳಲ್ಲಿ ಅಡಗಿರುವ ಮೌಲ್ಯಯುತ ಉಪದೇಶ ಸಾರ್ವಕಾಲಿಕ ಸಂದೇಶದಂತೆ. ಸದಾ ಮಕ್ಕಳ ಬೆನ್ನು ತಟ್ಟಿ ಅವರನ್ನು ಸಾಧನಾ ಪಥದಲ್ಲಿ ತೊಡಗಿಸಿಕೊಂಡ ಅವರ ವೃತ್ತಿ ಶೈಲಿ ಅನನ್ಯ.
ಇತ್ತೀಚೆಗಷ್ಟೇ ಅವರನ್ನು ಭೇಟಿಯಾಗಿ ಅಭಿನಂದಿಸಿ ಗುರುವಂದನೆ ಮಾಡಿದಾಗ ನಾನು ಸಣ್ಣವಿದ್ಯಾರ್ಥಿಯಾದೆ. ಅಚ್ಚರಿಯೋ ಎಂಬಂತೆ ಆತ್ಮೀಯರಾದ ಅವರು ನನ್ನನ್ನು ಬಳಿ ಕೂರಿಸಿ ಶಾಲು ಹೊದಿಸಿ ಅಭಿನಂದಿಸಿದಾಗ ಹೃದಯ ತುಂಬಿ ಬಂದ ನಾನು ಮೂಕವಿಸ್ಮಿತನಾದೆ. ಗುರುವಂದನೆಯು ಶಿಷ್ಯಾಭಿನಂದನೆಯಾಯಿತು. ಸರ್ ಯು ಆರ್ ರಿಯಲಿ ಗ್ರೇಟ್. ನಿಮಗೆ ನನ್ನ ಹೃನ್ಮನದ ಭಾವಾಂಜಲಿ.
-ಎಸ್. ಎನ್. ಭಟ್, ಸೈಪಂಗಲ್ಲು
(ನಿವೃತ್ತ ಮುಖ್ಯೋಪಾಧ್ಯಾಯ, ಕೇಂದ್ರೀಯ ವಿದ್ಯಾಲಯ),
Address:
S. N BHAT, SAIPANGALLU
HOSAMANE HOUSE,
P O PADRE, KASARAGOD-671552 (Mob: 8075982978
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ