ದ.ಕ.-ಉಡುಪಿ ರಸ್ತೆಗಳ ದುಸ್ಥಿತಿ: ತಕ್ಷಣ ದುರಸ್ತಿಗೆ ಶಾಸಕ ಮಂಜುನಾಥ ಭಂಡಾರಿ ಮನವಿ

Upayuktha
0

ಒಂದು ವರ್ಷದಲ್ಲಿ 702 ಅಪಘಾತ, 122 ಮಂದಿ ಸಾವು





ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರಂತರ ಮಳೆಯ ಪರಿಣಾಮ ಹಾಗೂ ವಾಹನ ಸಂಚಾರದ ದಟ್ಟಣೆಯಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಹುತೇಕ ರಸ್ತೆಗಳಿಗೆ ಗಂಭೀರ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಸರ್ವಿಸ್ ರಸ್ತೆಗಳ ದುಸ್ಥಿತಿಯಿಂದ ರಸ್ತೆ ಅಪಘಾತಗಳು ಗಣನೀಯವಾಗಿ ಏರಿಕೆಯಾಗಿದ್ದು, ಸಾರ್ವಜನಿಕರ ಜೀವ ಭದ್ರತೆಗೆ ದೊಡ್ಡ ಸವಾಲುಂಟಾಗಿದೆ. ಈಗಾಗಲೇ ನೂರಾರು ಮಂದಿ ಸಾವನ್ನಪ್ಪಿರುವುದು ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸುತ್ತದೆ. ಅಪಘಾತ, ಸಾವು-ನೋವುಗಳ ಸಂಖ್ಯೆ ಗಣನೀಯ ಏರಿಕೆಯಾಗಿದ್ದು 2025ರಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 702 ರಸ್ತೆ ಅಪಘಾತಗಳು ದಾಖಲಾಗಿದ್ದು, ಇದರಲ್ಲಿ 122 ಮಂದಿ ಮೃತಪಟ್ಟರೆ 815 ಮಂದಿ ಗಾಯಗೊಂಡಿದ್ದಾರೆ. ಆದ್ದರಿಂದ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 


ವರದಿಯಾದ ಒಟ್ಟು ಅಪಘಾತಗಳು: 702, ಮಾರಣಾಂತಿಕ ಪ್ರಕರಣಗಳು: 119, 

ಮಾರಣಾಂತಿಕವಲ್ಲದ ಅಪಘಾತಗಳು: 583, ಒಟ್ಟು ಸಾವುಗಳು: 122, ಒಟ್ಟು ಗಾಯಾಳುಗಳು: 815,ಪಾದಚಾರಿ ಸಾವುಗಳು: 44, ಪಾದಚಾರಿಗಳು ಗಾಯಗೊಂಡವರು: 149, ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರ ಸಾವುಗಳು: 63, ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರ ಗಾಯಾಳುಗಳು: 416

ಈ ಅಂಕಿಅಂಶಗಳು ರಸ್ತೆ ಸುರಕ್ಷತೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. 


ಅತ್ಯಂತ ದುಸ್ಥಿತಿಯಲ್ಲಿದೆ ರಾಜ್ಯ ಹೆದ್ದಾರಿ- 52!

ಕುಂದಾಪುರ–ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52, 93 ಕಿ.ಮೀ ಉದ್ದವಿದ್ದು, ಕುಂದಾಪುರ, ಬಸ್ರೂರ್, ಸಿದ್ದಾಪುರ, ಹೊಸಂಗಡಿ, ಬಾಳೆಬರೆ ಘಾಟ್, ಮಾಸ್ತಿಕಟ್ಟೆ, ಕೈಮರ, ತೀರ್ಥಹಳ್ಳಿ ಮುಂತಾದ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಈ ರಸ್ತೆ ಕಳೆದ 40 ವರ್ಷಗಳಿಂದ ಅಗಲವಾಗದ ಕಾರಣ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಕಂಡ್ಲೂರು ಸೇತುವೆ, 1960ರಲ್ಲಿ ವಾರಾಹಿ ನದಿಗೆ ನಿರ್ಮಿಸಲ್ಪಟ್ಟಿದ್ದು, ಈಗ ಕುಸಿಯುವ ಅಂಚಿನಲ್ಲಿದೆ.

ಹಾಗಾಗಿ ಇದರ ಪುನರ್‌ ನಿರ್ಮಾಣ ಅಗತ್ಯವಿದೆ. ಅನುಪಾತದ ಪ್ರಕಾರ ರಸ್ತೆಯ ಅಗಲವಿಲ್ಲದ ಹಾಗೂ ರಸ್ತೆ ಬದಿ ಸ್ಥಳಾವಕಾಶ ಇಲ್ಲದ ಕಾರಣ ಅಪಘಾತಗಳ ಪ್ರಮಾಣ ಹೆಚ್ಚಾಗಿದೆ. ಈ ಹೆದ್ದಾರಿಯನ್ನು 4 ಲೇನ್ ಮಾಡುವುದು ಅಥವಾ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವುದು ಅವಶ್ಯಕವಾಗಿದೆ.


ಘಾಟ್ ಪ್ರದೇಶಗಳ ಸಮಸ್ಯೆಗಳು: 

ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗಳ ಪ್ರಮುಖ ಘಾಟ್‌ ರಸ್ತೆಗಳನ್ನು (ಅಗುಂಬೆ, ಶಿರಾಡಿ, ಚಾರ್ಮಾಡಿ, ಬಾಳೆಬರೆ, ಸಂಪೇಕಟ್ಟೆ, ನಾಗೋಡಿ) ಸಂಚಾರಕ್ಕೆ ಬಳಸಲಾಗುತ್ತಿದ್ದು, ಇವು ಅತ್ಯಂತ ಕಿರಿದಾಗಿವೆ. ಇವುಗಳಲ್ಲಿ ವರ್ಷಪೂರ್ತಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ಗಳಿಗೂ ಅಡೆತಡೆ ಉಂಟಾಗುತ್ತಿದೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರಕ್ಕೆ ತೀವ್ರ ಹಾನಿಯುಂಟು ಮಾಡುತ್ತದೆ. 

ಈ ರಸ್ತೆ ಬೆಂಗಳೂರು, ಮಂತ್ರಾಲಯ, ಬಳ್ಳಾರಿ, ರಾಯಚೂರು, ಹೈದರಾಬಾದ್‌ನಂತಹ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ದಕ್ಷಿಣ ಪ್ರದೇಶಕ್ಕೆ ಪ್ರವಾಸೋದ್ಯಮವು ಉತ್ತೇಜನ ನೀಡುವ ಅವಕಾಶ ಹೊಂದಿದೆ. ಹಾಗಾಗಿ ಈ ರಸ್ತೆಗಳನ್ನು ಸುಧಾರಿಸಿದಲ್ಲಿ ದಕ್ಷಿಣ ಕನ್ನಡ ಅದರಲ್ಲೂ ವಿಶೇಷವಾಗಿ ಕುಂದಾಪುರ ಮತ್ತು ಬೈಂದೂರು ಕಡಲತೀರ ಪ್ರದೇಶ ಮತ್ತು ದೇವಾಲಯಗಳಿರುವ ಈ ಪ್ರದೇಶದಲ್ಲಿ ಪ್ರವಾಸೋದ್ಯಮವು ಉತ್ತೇಜನ ಪಡೆಯಲಿದೆ.


ಅಭಿವೃದ್ಧಿ ಯೋಜನೆಗಳಲ್ಲಿ ನಿರ್ಲಕ್ಷ್ಯ!

ಕರ್ಣಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ ಅಡಿಯಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB) ನೆರವಿನಿಂದ ಅನೇಕ ಹೆದ್ದಾರಿಗಳನ್ನು 4 ಲೇನ್ ಮಾಡಲಾಗಿದೆಯಾದರೂ, ರಾಜ್ಯ ಹೆದ್ದಾರಿ- 52 ಮಾತ್ರ ಇದರಿಂದ ಹೊರಗಿಟ್ಟಿರುವುದು ತಾರತಮ್ಯ ಧೋರಣೆಯಾಗಿದ್ದು, ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಏಷಿಯನ್ ಅಭಿವೃದ್ಧಿ ಬ್ಯಾಂಕ್, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ರಾಜ್ಯ ಹೆದ್ದಾರಿ 52 ಅನ್ನು ಸುಧಾರಿಸಲು BOT (Annuity) road projet ವಿಧಾನದ ಮೂಲಕ ಹಣಕಾಸು ಒದಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.


ಪರಿಹಾರ ಕ್ರಮಗಳಿಗೆ ಸಾರ್ವಜನಿಕರ ಆಗ್ರಹ!

ಸ್ಥಳೀಯರು ಹಾಗೂ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಂಡ್ಲೂರು ಸೇತುವೆಯನ್ನು ಪುನರ್‌ ನಿರ್ಮಿಸಬೇಕು. ರಾಜ್ಯ ಹೆದ್ದಾರಿ 52 ಅನ್ನು 4 ಲೇನ್ ಮಾಡಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು. ಘಾಟ್ ಪ್ರದೇಶಗಳಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಏಷ್ಯನ್ ಅಭಿವೃದ್ಧಿ ಬ್ಯಾಂಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ BOT (Annuity) ಮಾದರಿಯ ಮೂಲಕ ಹಣಕಾಸು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.


ರಸ್ತೆಗಳ ದುಸ್ಥಿತಿ ಸಾರ್ವಜನಿಕರ ಜೀವಿತಕ್ಕೂ ಆರ್ಥಿಕತೆಗೆ ದೊಡ್ಡ ಹಾನಿ ಉಂಟುಮಾಡುತ್ತಿದೆ. 2025ರಲ್ಲಿ ದಕ್ಷಿಣ ಕನ್ನಡದಲ್ಲಿ ಮಾತ್ರವೇ 122 ಸಾವುಗಳು ಸಂಭವಿಸಿರುವುದು ಗಂಭೀರ ಎಚ್ಚರಿಕೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಂಡು ರಸ್ತೆಗಳನ್ನು ಸುಧಾರಿಸುವುದು ಅವಶ್ಯಕ. ಜನರ ಸುರಕ್ಷತೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗಾಗಿ ಇದು ತುರ್ತು ಅವಶ್ಯಕತೆಯಾಗಿದೆ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top