ವಿದ್ಯಾರ್ಥಿಗಳು ವಿಶ್ವಜ್ಯೋತಿಗಳಾಗಲಿ: ಡಾ. ಜೋಗಿಲ ಸಿದ್ಧರಾಜು

Upayuktha
0




ಬೆಂಗಳೂರು: ಜಾನಪದ ಪರಂಪರೆಯಲ್ಲಿ ನಮ್ಮ ತಾಯಂದಿರು ಹೇಳಿರುವ ‘ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯೇ ಆಗು’ ಎಂಬ ಮಾತಿನಂತೆ "ವಿದ್ಯಾರ್ಥಿಗಳು ವಿಶ್ವಜ್ಯೋತಿಗಳಾಗಬೇಕು" ಎಂದು ಅಂತಾರಾಷ್ಟ್ರೀಯ ಜಾನಪದ ಗಾಯಕರಾದ ಡಾ. ಜೋಗಿಲ ಸಿದ್ಧರಾಜು ಅಭಿಪ್ರಾಯಪಟ್ಟರು.


ಬೆಂಗಳೂರಿನ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ 'ಕನ್ನಡ ಹಬ್ಬ-2025' ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಭಿತ್ತಿಚಿತ್ರ ಪ್ರದರ್ಶನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.


ಜಾನಪದವು ಅಜ್ಞಾತ ಸೃಜನಶೀಲ ಮನಸ್ಸುಗಳ ಆನುಭಾವಿಕ ನಿರ್ಮಾಣವಾಗಿದೆ. ಅದು ಹುಟ್ಟಿದ್ದು ಜನರ ಪಾದಗಳಿಂದ ಹಾಗೂ ಪದಗಳಿಂದ. ಜಗತ್ತಿಗೆ ಕೇಡಾಗದಂತೆ ತಮ್ಮ ಜೀವನವನ್ನು ಅತ್ಯಂತ ಆರೋಗ್ಯಕರವಾಗಿ ಧ್ಯಾನಶೀಲ, ಜ್ಞಾನಶೀಲ ಹಾಗೂ ಸೃಜನಶೀಲವಾಗಿಸಿಕೊಂಡವರು ಜಾನಪದರು. ಇದನ್ನು ಇಂದಿನ ಆಧುನಿಕರು ಅರಿತುಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಿ ವಿಶ್ವಮಾನವ ರಾಗಬೇಕು. ಕುಗ್ರಾಮವೊಂದರಿಂದ ಬಡತನ ಉಂಡು ಬೆಳೆದ ನನ್ನ ಬದುಕು ಹಾಗೂ ಕಲಾಜ್ಞಾನವನ್ನು ವಿಶ್ವಮಟ್ಟಕ್ಕೇರಿಸಿ ಶ್ರೀಮಂತಗೊಳಿಸಿದ್ದೇ ಜಾನಪದ ಎಂದು ತಿಳಿಸಿದರು.


ಪ್ರಪಂಚದಾದ್ಯಂತ ಇಂದು ವೇಗಗತಿಯಲ್ಲಿ ಬೆಳೆಯುತ್ತಿರುವ ನಾಗರಿಕತೆಯು ತಾಯಿಬೇರನ್ನು ಕತ್ತರಿಸಿಕೊಂಡು ತಬ್ಬಲಿಯೂ ಆಗಬಾರದು ಮತ್ತು ವಿವೇಕಹೀನವೂ ಆಗಬಾರದು. ಜೀವಪರವಾದ ಮೌಲ್ಯಗಳನ್ನು ತಮ್ಮೊಳಗೆ ಅಂತಸ್ತು ಮಾಡಿಕೊಂಡು ಸರ್ವಜನರೊಂದಿಗೆ ಸಾಮರಸ್ಯದಿಂದ ಬಾಳಬೇಕು. 


ಇಂದು ಎಲ್ಲರೂ ಓದುತ್ತಾ ಜ್ಞಾನ ಸಂಪಾದನೆ ಮಾಡುತ್ತಿದ್ದಾರಾದರೂ ಎಷ್ಟು ಜನರು ಮಾನವೀಯತೆಯಿಂದ ವರ್ತಿಸುತ್ತಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ನಮ್ಮ ಬಾಳಿಗೆ ಬೇಕಾದ ಅಪರಿಮಿತ ಅರಿವು ಜಾನಪದರಾದಿಯಾಗಿ ನಮ್ಮ ಕನ್ನಡ ಸಾಹಿತ್ಯ ಪರಂಪರೆಯಿಂದ  ದೊರೆಯುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಯ ಮಾನವಿಕ ಹಾಗೂ ಸಮಾಜ ವಿಜ್ಞಾನ ನಿಕಾಯದ ನಿರ್ದೇಶಕರಾದ ರೆ. ಫಾ. ಡಾ. ಜೋಶಿ ಮ್ಯಾಥ್ಯೂ ಅವರು ವಹಿಸಿದ್ದರು. ಮಾನವಿಕನಿಕಾಯದ ಧೀನರಾದ ಡಾ. ಗೋಪಕುಮಾರ್ ಎ.ವಿ ಹಾಗೂ ಸಮಾಜ ವಿಜ್ಞಾನ ಹಾಗೂ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ.ಕಾವೇರಿ ಸ್ವಾಮಿ ಅವರು ಅತಿಥಿಗಳಾಗಿದ್ದರು. 


ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಸ್ವಾಗತಿಸಿದರು. ಕನ್ನಡ ಹಬ್ಬ-2025ರ ಸಂಯೋಜಕರಾದ ಡಾ. ಎಂ. ಭೈರಪ್ಪ ಸಾಂಸ್ಕೃತಿಕ ಸ್ಪರ್ಧಾ ವಿಜೇತರ ವಿವರ ಪ್ರಸ್ತುತಪಡಿಸಿದರು. 


ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಎನ್. ಚಂದ್ರಶೇಖರ್ ಅವರು ವಂದಿಸಿದರು. ಕನ್ನಡ ಅಧ್ಯಾಪಕರಾದ ಡಾ. ಸೈಯದ್ ಮುಯಿನ್, ಡಾ. ರವಿಶಂಕರ್ ಎ. ಕೆ., ಡಾ. ಕಿರಣಕುಮಾರ್ ಹೆಚ್.ಜಿ ಉಪಸ್ಥಿತರಿದ್ದರು. ಕನ್ನಡ ಹಬ್ಬ ನಿಮಿತ್ತವಾಗಿ ಆಯೋಜಿಸಲಾಗಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಸಾಹಿತ್ಯ ವೇದಿಕೆಯ ವಿದ್ಯಾರ್ಥಿ ಸಂಚಾಲಕರಾದ ಕು|| ಧೃತಿ ಹಾಗೂ ಚಿ|| ನಿತಿನ್ ಗೌಡ ನಿರ್ವಹಿಸಿದರು.





Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top