ಕು|| ಪ್ರಿಯಾಂಕಾ ಶ್ರೀನಿವಾಸ್ ಭರತನಾಟ್ಯ ರಂಗಪ್ರವೇಶ

Upayuktha
0



ಬೆಂಗಳೂರು : ರಂಗಪ್ರವೇಶ ಎನ್ನುವುದು ಭರತನಾಟ್ಯದ ಉದಯೋನ್ಮುಖ ಕಲಾವಿದರಿಗೆ ಅತ್ಯಂತ ಮಹತ್ವದ ಕ್ಷಣ. ಅಲ್ಲಿಯವರೆಗೆ ಸಹ ನೃತ್ಯಾಭಿಗಳೊಂದಿಗೆ ಸಮೂಹದಲ್ಲಿ ಸೇರಿ ರಂಗದಲ್ಲಿ ನಾಟ್ಯ ಪ್ರದರ್ಶನ ನೀಡಿರಬಹುದು. ಆದರೆ ರಂಗಪ್ರವೇಶದ ವೇದಿಕೆಯಲ್ಲಿ ಒಬ್ಬನೇ/ಒಬ್ಬಳೇ ರಂಗವನ್ನೇರಿ ತನ್ನ ನಾಟ್ಯ ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಒರೆಗೆ ಹಚ್ಚುವಂತ ಸನ್ನಿವೇಶ. ಇಂಥ ಸಂದರ್ಭದಲ್ಲಿ ರಂಗದಲ್ಲಿ ಸೊಗಸಾಗಿ ನಾಟ್ಯಾಭಿನಯಗೈದು ಕಲಾವಿದೆಯಾಗಿ ಬೆಳೆಯುವ ಭರವಸೆ ಮೂಡಿಸಿದಾಕೆ ನಗರದ ಪ್ರತಿಷ್ಠಿತ ನೃತ್ಯ ದಿಶಾ ಟ್ರಸ್ಟ್ ನ ಗುರು ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ಪ್ರಿಯಾಂಕಾ ಶ್ರೀನಿವಾಸ್. 


ಈ ಉದಯೋನ್ಮುಖಿ ಕಲಾವಿದೆಯ ರಂಗಪ್ರವೇಶಕ್ಕೆ ಸೆಪ್ಟೆಂಬರ್ 28 ರಂದು ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದ ವೇದಿಕೆ ಸಿದ್ಧಗೊಂಡಿತ್ತು. ಪಕ್ಕದಲ್ಲಿ ಹಿಮ್ಮೇಳದ ಹೆಸರಾಂತ ಕಲಾವಿದರು ಹಾಗೂ ಎದುರಿನಲ್ಲಿ ಸಭಾಂಗಣದ ತುಂಬಾ ಗಣ್ಯರನ್ನು ಒಳಗೊಂಡು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ದೊಡ್ಡ ಸಮೂಹವೇ ಪ್ರತಿಭಾನ್ವಿತೆಯೊಬ್ಬಳ ನಾಟ್ಯ ಕಲಾ ಪ್ರದರ್ಶನ ವೀಕ್ಷಿಸುವುದಕ್ಕೆ ಕಾತರದಿಂದ ಸೇರಿತ್ತು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ. ಎಚ್. ನಿಶ್ಚಲ್ (ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಇಲಾಖೆ), ನಂಜುಂಡರಾವ್ (ಖ್ಯಾತ ವಿಮರ್ಶಕರು ಮತ್ತು ಅಂಕಣಕಾರರು), ಶ್ರೀನಿವಾಸಮೂರ್ತಿ (ಚಲನಚಿತ್ರ ನಿರ್ಮಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರು), ಗಣೇಶ ಆರ್, (ಅರ್ಚಕರು), ಶಿವಕುಮಾರ್, (ಮಾಜಿ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು) ಆಗಮಿಸಿದ್ದರು.


ಕು|| ಪ್ರಿಯಾಂಕಾ ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ವಲಚಿ ರಾಗದ ಪುಷ್ಪಾಂಜಲಿ ಹಾಗೂ ಗಣೇಶನ ಕೃತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದರು. ಈ ನೃತ್ಯ ಸಂಯೋಜನೆ ವಿಶೇಷವಾಗಿದ್ದು  ಅದ್ಭುತವಾಗಿ ಮೂಡಿಬಂದಿತು. ತದನಂತರ ಗಣೇಶ ಕೃತಿಯನ್ನು ಅಮೋಘವಾಗಿ ಅಭಿನಯಿಸಿದರು.


ವಿದುಷಿ ಭಾರತಿ ವೇಣುಗೋಪಾಲ್  ರಚನಾ ವಿಶೇಷತೆಯನ್ನು ಮತ್ತು ನೃತ್ಯ ಸಂಯೋಜನೆ ವಿಶೇಷವು ಮೆಚ್ಚುಗೆ ಪಡೆಯಿತು. ಮುಂದಿನ ಆಯ್ಕೆ ಚೂರ್ಣಿಕೆ ಕೂಡ ವಿಶೇಷವಾಗಿತ್ತು. ಇದು ತ್ಯಾಗರಾಜರ ರಚನೆಯಾಗಿದ್ದು ಅದ್ಭುತವಾಗಿ ಸಂಯೋಜಿಸಲಾಗಿತ್ತು.


ಶಿವ ಶಬ್ದಂ ನಲ್ಲಿ ಪ್ರಿಯಾಂಕಾ  ತಮ್ಮ ಅದ್ಭುತ ಅಭಿನಯದಿಂದ ನೋಡುಗರ ಪ್ರಶಂಸೆಗೆ ಪಾತ್ರರಾದರು. ಶ್ರೀ ಮುತ್ತಯ್ಯ ಭಾಗವತರ ಸನ್ನುತಾಂಗಿದರೂ ವರ್ಣ ಮುಂದಿನ ಪ್ರಸ್ತುತಿಯಲ್ಲಿ, ರುದ್ರ ಸ್ವರೂಪಿ ದೇವಿ ಚಾಮುಂಡೇಶ್ವರಿ ಕಥಾ ಪ್ರಸಂಗ ವರ್ಣನೆಯನ್ನು ಲೀಲಾಜಾಲವಾಗಿ ನರ್ತಿಸಿದರು ಪ್ರಿಯಾಂಕಾ. ಕ್ಲಿಷ್ಟಕರ ಲಯ ವಿನ್ಯಾಸದ ಜತಿಗಳನ್ನು ಮನೋಹರವಾಗಿ ನರ್ತಿಸಿದರು.


ಎರಡನೆಯ ಬಿತ್ತಿಯಲ್ಲಿ ತುಂಬಾ ವಿಶೇಷವಾದದ್ದು ನಾಟ್ಯಶಾಸ್ತ್ರದ ಅಷ್ಟನಾಯಿಕಾ ಶ್ಲೋಕ, ಎಂಟು ನಾಯಿಕೆಯರ ಸೂಕ್ಷ್ಮ ಅಂತರವನ್ನು ಮನಮುಟ್ಟುವಂತೆ ಅಭಿನಯಿಸಿದ ಕಲಾವಿದೆ ಶ್ರೀಪಾದರಾಜರ ದೇವರನಾಮ "ರಂಗನಾಥನ ನೋಡುವ ಬನ್ನಿ"ಯಲ್ಲಿ  ಪ್ರಿಯಾಂಕಾ ಅಭಿನಯ ಕುಶಲತೆಯ ಗಮನ ಸೆಳೆಯಿತು. 


ಪ್ರಿಯಾಂಕಾ ಅವರ ಕಾರ್ಯಕ್ರಮದಲ್ಲಿ ತುಂಬಾ ಮೆಚ್ಚುಗೆ ಪಡೆದ ನೃತ್ಯ ಶ್ರೀ ಪುರಂದರದಾಸರ "ಗುಮ್ಮನ ಕರೆಯದಿರೆ ಅಮ್ಮ ನೀನು" ಪ್ರಿಯಾಂಕಾ ತನ್ಮಯತೆಯಿಂದ ವಾತ್ಸಲ್ಯ ರಸಪೂರಿತವಾಗಿ ಕೃಷ್ಣನನ್ನು ಅಭಿನಯಿಸಿದಳು. ಫರಸ್ ರಾಗದ ತಿಲ್ಲಾನ ಹಾಗು ಮೈಸೂರು ರಾಜ್ಯದ ಗೀತೆಯೊಂದಿಗೆ ಅಂದಿನ ಕಾರ್ಯಕ್ರಮ ಮಂಗಳ ಮಾಡಿದಳು.


ನವರಾತ್ರಿಯ ಈ ಶುಭಸಮಯದಲ್ಲಿ ನಮ್ಮ ರಾಜ್ಯದ ಹಬ್ಬ ದಸರಾ , ಮೈಸೂರು ಈ ಎಲ್ಲಾ ಸಂದರ್ಭಕ್ಕೆ ತಕ್ಕನಾಗಿ ಸಂಪೂರ್ಣಗೊಂಡಿತು ಪ್ರಿಯಾಂಕಾ ಶ್ರೀನಿವಾಸ್ ಅವರ ರಂಗಪ್ರವೇಶ. ಗುರು ಡಾ|| ದರ್ಶಿನಿ ಮಂಜುನಾಥ್ ರವರ ಸುಂದರ ಸಂಯೋಜನೆಗೆ ಅದ್ಬುತವಾಗಿ ನೃತ್ತ ಹಾಗೂ ಅಭಿನಯಗಳಿಂದ ರಸಿಕರ ಮನ ಗೆದ್ದರು ಪ್ರಿಯಾಂಕಾ.


ಈ ರಂಗ ಪ್ರವೇಶ ಪ್ರಸ್ತುತಿಗೆ ಗುರು ಡಾ|| ದರ್ಶಿನಿ ಮಂಜುನಾಥ್ (ನಟ್ಟುವಾಂಗ), ವಿದುಷಿ ಶ್ರೀಮತಿ ಭಾರತಿ ವೇಣುಗೋಪಾಲ್ (ಗಾಯನ ), ವಿದ್ವಾನ್ ಎಸ್ ವಿ ಗಿರಿಧರ್ (ಮೃದಂಗ}, ವಿದ್ವಾನ್ ಪ್ರಮುಖ್ (ಕೊಳಲು), ವಿದ್ವಾನ್ ಕಾರ್ತಿಕ್ ವೈದಾತ್ರಿ (ರಿದಂ ಪ್ಯಾಡ್), ಮಾ|| ಅಚ್ಯುತ ಜಗದೀಶ್ {ವೀಣೆ} ಸಹಕರಿಸಿದರು.


ಒಟ್ಟಾರೆ ನೃತ್ಯ ದಿಶಾ ಟ್ರಸ್ಟ್ ನ 17ನೇ ರಂಗಪ್ರವೇಶ ಯಶಸ್ವಿಯಾಗಿ ಮೂಡಿಬಂತು. ಗುರು ಡಾ|| ದರ್ಶಿನಿ ಮಂಜುನಾಥ್ ಅವರ ಸಂಯೋಜನೆ  ಹಾಗೂ ಪ್ರಿಯಾಂಕಾ ಅಭಿನಯಕ್ಕೆ ರಸಿಕರು ಪ್ರಶಂಸೆ ವ್ಯಕ್ತಪಡಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top